ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂನ್‌ 25, 1983 | ಕಪಿಲ್‌ ದೇವ್‌ ವಿಶ್ವಕಪ್‌ ಎತ್ತಿಹಿಡಿದ ಆ ದಿನದ ಕ್ಷಣಗಳು...

Last Updated 25 ಜೂನ್ 2019, 2:35 IST
ಅಕ್ಷರ ಗಾತ್ರ

ಬೆಂಗಳೂರು:1983ರ ಜೂನ್‌ 25 ಭಾರತದ ಕ್ರಿಕೆಟ್‌ನ ಪಾಲಿಗೆ ಎಂದೂ ಮರೆಯಲಾಗದ, ಇತಿಹಾಸದ ಪುಟಗಳಲ್ಲಿ ದಾಖಲಾದ ದಿನ. ಕಪಿಲ್‌ ದೇವ್‌ ನೇತೃತ್ವದ ಭಾರತ ತಂಡ ಅಂದು ವಿಶ್ವಕಪ್‌ ಟ್ರೋಫಿ ಎತ್ತಿಹಿಡಿದು ಸಂಭ್ರಮಿಸಿತ್ತು. ಅಂತಹ ಅಭೂತಪೂರ್ವ ಕ್ಷಣಗಳಿಗೆ ಇಂದಿಗೆ ಬರೋಬ್ಬರಿ 36 ವರ್ಷ. ಇನ್ನು ಅದೇ ಟೂರ್ನಿಯಲ್ಲಿ ಕಪಿಲ್ ದೇವ್‌ನ ಅವಿಸ್ಮರಣೀಯ ಇನ್ನಿಂಗ್ಸ್‌ಗೆ ಜೂನ್‌ 18ಕ್ಕೆ 36 ವರ್ಷ! 17 ರನ್ ಗಳಿಸಿ 5 ವಿಕೆಟ್ ಕಳೆದುಕೊಂಡು ಭಾರತ ತಂಡ ಒದ್ದಾಡುತ್ತಿದ್ದ ಸಮಯದಲ್ಲಿ ರಕ್ಷಕನಾಗಿ ಬಂದಿದ್ದರು ಕಪಿಲ್ ದೇವ್.

ಮೂರನೇ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ಪ್ರಶಸ್ತಿ ಜಯಿಸಬಹುದು ಎಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಆದರೆ, ಕಪಿಲ್‌ ಬಳಗ ಟ್ರೋಫಿ ಜಯಿಸಿ ಕ್ರಿಕೆಟ್‌ ಜಗತ್ತನ್ನು ನಿಬ್ಬೆರಗಾಗಿಸಿತ್ತು. ಈ ಜಯ ಭಾರತದಲ್ಲಿ ಕ್ರಿಕೆಟ್‌ ಕ್ರೀಡೆಯ ದಿಕ್ಕು–ದೆಸೆಯನ್ನೇ ಬದಲಿಸಿತು ಎದರೆ ತಪ್ಪಾಗಲಾರದು. ಮೇಲಾಗಿ ಕಪಿಲ್‌ ದೇವ್ ಅವರ ವಿವೇಕಯುತ ಆಟ ಭಾರತೀಯ ಕ್ರಿಕೆಟ್‌ಗೆ ‘ಬರ್ಥ್‌ ಸರ್ಟಿಫಿಕೆಟ್‌’ಅನ್ನೂ ನೀಡಿತು. ಈ ಮೂಲಕ ಮೊದಲ ವಿಶ್ವಕಪ್‌ಹೆಜ್ಜೆ ಗುರುತು ಮೂಡಿಸಿತು.

ಸತತ ಮೂರನೇ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದ ವಿಂಡೀಸ್‌ ತಂಡದ ಕನಸನ್ನು ಭಾರತ ತಂಡ ನುಚ್ಚುನೂರು ಮಾಡಿದ ಆ ಕ್ಷಣಕ್ಕೆ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ ಪಂದ್ಯ ಸಾಕ್ಷಿಯಾಯಿತು. ಭಾರತ ತಂಡ ವೆಸ್ಟ್‌ ಇಂಡೀಸ್‌ ತಂಡವನ್ನು 43 ರನ್‌ಗಳಿಂದ ಮಣಿಸಿ ಟ್ರೋಫಿಗೆ ಮುತ್ತಿಕ್ಕಿತ್ತು.

ಫೈನಲ್‌ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಭಾರತ 54.4 ಓವರ್‌ಗಳಲ್ಲಿ 183 ರನ್‌ಗಳಿಗೆ ಅಲೌಟಾಗಿತ್ತು. ನಂತರ, ಚುರುಕಿನ ಬೌಲಿಂಗ್‌ ಮೂಲಕ ವಿಂಡೀಸ್‌ ತಂಡವನ್ನು 52 ಓವರ್‌ಗಳಲ್ಲಿ 140 ರನ್‌ಗಳಿಗೆ ಆಲೌಟ್‌ ಮಾಡಿತ್ತು.

ಆಲ್‌ರೌಂಡ್‌ ಪ್ರದರ್ಶನ ನೀಡಿದ್ದ ಮೊಹಿಂದರ್‌ ಅಮರ್‌ನಾಥ್‌ (26 ರನ್‌ ಹಾಗೂ 12ಕ್ಕೆ3) ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಕಪಿಲ್‌ದೇವ್‌ನ ಅವಿಸ್ಮರಣೀಯ ಇನ್ನಿಂಗ್ಸ್‌ಗೆ 36 ವರ್ಷ!

ಟರ್ನ್‌ಬ್ರಿಡ್ಜ್ ವೆಲ್ಸ್‌ನಲ್ಲಿ ಕಪಿಲ್ ದೇವ್‌ನ ಅವಿಸ್ಮರಣೀಯ ಇನ್ನಿಂಗ್ಸ್‌ಗೆ 36 ವರ್ಷ!. 1983 ಜೂನ್ 18ರಂದು ವಿಶ್ವಕಪ್ ಪಂದ್ಯದಲ್ಲಿ ಜಿಂಬಾಬ್ವೆ ತಂಡದ ವಿರುದ್ಧದ ಪಂದ್ಯದಲ್ಲಿ 17 ರನ್ ಗಳಿಸಿ 5 ವಿಕೆಟ್ ಕಳೆದುಕೊಂಡು ಭಾರತ ತಂಡ ಒದ್ದಾಡುತ್ತಿದ್ದ ಸಮಯದಲ್ಲಿ ರಕ್ಷಕನಾಗಿ ಬಂದಿದ್ದರು ಕಪಿಲ್ ದೇವ್.

138 ಎಸೆತ ಎದುರಿಸಿ ಅಜೇಯ 175 ರನ್‌ಗಳಿಸಿ ಕಪಿಲ್ ದೇವ್ ಭಾರತ ತಂಡದ ರಕ್ಷಕನಾಗಿ ನಿಂತದ್ದನ್ನು ಕ್ರಿಕೆಟ್ ಪ್ರೇಮಿಗಳು ಮರೆತಿಲ್ಲ. ವಿಶ್ವಕಪ್ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ರನ್ ದಾಖಲಿಸಿದ್ದೂ ಕಪಿಲ್ ದೇವ್. 16 ಬೌಂಡರಿ ಮತ್ತು 6 ಸಿಕ್ಸರ್‌ಗಳಿಂದ ಕಪಿಲ್ ಮಿಂಚಿದರು. ಈ ಸಿಕ್ಸರ್‌ಗಳಲ್ಲಿ ಒಂದು ಸಿಕ್ಸರ್ ನೆವಿಲ್ ಕ್ರಿಕೆಟ್ ಕ್ರೀಡಾಂಗಣದ ಮೇಲ್ಛಾವಣಿ ಮೇಲೆ ಬಿದ್ದಿತ್ತು. ಆ ಪಂದ್ಯದಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಕಪಿಲ್ ಆಗಿದ್ದರು.

1983ರ ವಿಶ್ವಕಪ್‌ನ ಪ್ರಮುಖ ಮಾಹಿತಿ

* ಜಿಂಬಾಬ್ವೆ ತಂಡ ಈ ಟೂರ್ನಿಯ ಮೂಲಕ ಮೊದಲ ವಿಶ್ವಕಪ್‌ ಆಡಿತು. ಆಸ್ಟ್ರೇಲಿಯಾ ವಿರುದ್ಧ ನಾಟಿಂಗ್‌ಹ್ಯಾಂನಲ್ಲಿ ನಡೆದ ಪಂದ್ಯದಲ್ಲಿ ಈ ತಂಡ 13 ರನ್‌ಗಳ ಜಯ ಸಾಧಿಸಿತ್ತು.

* ವೆಸ್ಟ್‌ ಇಂಡೀಸ್‌ ತಂಡದ ವಿನ್‌ಸ್ಟನ್‌ ಡೇವಿಸ್‌ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 51 ರನ್‌ಗಳಿಗೆ 7 ವಿಕೆಟ್‌ ಪಡೆದಿದ್ದರು. ಈ ಮೂಲಕ ವಿಶ್ವಕಪ್‌ ಟೂರ್ನಿಯ ಪಂದ್ಯವೊಂದರಲ್ಲಿ ಏಳು ವಿಕೆಟ್‌ ಪಡೆದ ಮೊದಲ ಬೌಲರ್‌ ಎನಿಸಿಕೊಂಡಿದ್ದರು.

* ಜೂನ್‌ 18 ರಂದು ನಡೆದ ಭಾರತ– ಜಿಂಬಾಬ್ವೆ ನಡುವಿನ ಪಂದ್ಯವನ್ನು ಮರೆಯಲು ಸಾಧ್ಯವಿಲ್ಲ. ಮೊದಲು ಬ್ಯಾಟ್‌ ಮಾಡಿದ ಭಾರತ 17 ರನ್‌ ಗಳಿಸುವಷ್ಟರಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆದರೆ ಕಪಿಲ್‌ ದೇವ್‌ ಅಮೋಘ 175 ರನ್‌ ಗಳಿಸಿ ತಂಡವನ್ನು ಸಂಕಷ್ಟದಿಂದ ಪಾರುಮಾಡಿದ್ದರು. ಕಪಿಲ್‌ ಮತ್ತು ಸೈಯದ್‌ ಕಿರ್ಮಾನಿ 9ನೇ ವಿಕೆಟ್‌ಗೆ 126 ರನ್‌ಗಳ ಜತೆಯಾಟ ನೀಡಿದ್ದರು.

* ಪಾಕಿಸ್ತಾನ– ಶ್ರೀಲಂಕಾ ನಡುವೆ ಲೀಡ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಇಮ್ರಾನ್‌ ಖಾನ್‌ 102 ರನ್‌ ಗಳಿಸಿದ್ದರು. ಈ ಮೂಲಕ ವಿಶ್ವಕಪ್‌ನಲ್ಲಿ ಶತಕ ಗಳಿಸಿದ ಪಾಕಿಸ್ತಾನದ ಮೊದಲ ಬ್ಯಾಟ್ಸ್‌ಮನ್‌ ಎಂಬ ಗೌರವ ಒಲಿಸಿಕೊಂಡಿದ್ದರು.

* ಅಂಪೈರ್‌ಗಳಾದ ಡಿಕಿ ಬರ್ಡ್‌ ಮತ್ತು ಬಿ.ಜೆ. ಮೇಯರ್‌ ಅವರು ಫೈನಲ್‌ ಪಂದ್ಯವನ್ನು ನಿಯಂತ್ರಿಸಿದ್ದರು. ಈ ಮೂಲಕ ಡಿಕಿ ಬರ್ಡ್‌ ಸತತ ಮೂರು ವಿಶ್ವಕಪ್‌ ಫೈನಲ್‌ಗಳಲ್ಲಿ ಕಾರ್ಯನಿರ್ವಹಿಸಿದ ಶ್ರೇಯ ಪಡೆದಿದ್ದರು. ಅವರು 1975ರ ವಿಶ್ವಕಪ್‌ನಲ್ಲಿ ಟಿ.ಡಬ್ಲ್ಯು ಸ್ಪೆನ್ಸರ್‌ ಜತೆ ಹಾಗೂ 1979ರ ವಿಶ್ವಕಪ್‌ನಲ್ಲಿ ಬಿ.ಜೆ. ಮೇಯರ್‌ ಅವರೊಂದಿಗೆ ಕಾರ್ಯನಿರ್ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT