ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲಿನ ಸರಪಳಿ ತುಂಡರಿಸಿದ ದೋನಿ

Last Updated 15 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ: ಹೈದರಾಬಾದಿನ ಉಪ್ಪಳದ ರಾಜೀವಗಾಂಧಿ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಶುಕ್ರವಾರ ಸಂಜೆ ಮಹೇಂದ್ರ ಸಿಂಗ್ ದೋನಿಯ ಬ್ಯಾಟು ಎರಡು ಸೋಲಿನ ಸರಪಳಿಗಳನ್ನು ತುಂಡರಿಸಿತು.

ಸೆಪ್ಟೆಂಬರ್‌ನಲ್ಲಿ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಸತತ ಸೋಲು ಮತ್ತು ಉಪ್ಪಳದ ಮೈದಾನದಲ್ಲಿ ಕಳೆದ ಮೂರು ಪಂದ್ಯಗಳ ಸೋಲುಗಳನ್ನು ಮರೆಸುವಂತಹ ಆಟವನ್ನು ದೋನಿ ತೋರಿಸಿದರು. ಆ ಮೂಲಕ ಇಂಗ್ಲೆಂಡ್ ವಿರುದ್ಧದ ಐದು ಏಕದಿನ ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆಯಲು ಕಾರಣರಾದರು.

`ಉಪ್ಪಳದಲ್ಲಿ ನಾವು ಒಂದೂ ಪಂದ್ಯ ಗೆದ್ದಿಲ್ಲ ಎನ್ನುವುದನ್ನು ನೆನಪು ಮಾಡಿಕೊಟ್ಟಿದ್ದಕ್ಕೆ ಧನ್ಯವಾದ..~ ಎಂದು ಗುರುವಾರ ಮಧ್ಯಾಹ್ನ ಮಾಧ್ಯಮ ಪ್ರತಿನಿಧಿಗೆ ಉತ್ತರಿಸುವಾಗ, ಅವರ ಮುಖದ `ಮೇಲೆ ಇತಿಹಾಸ ಬದಲಿಸುತ್ತೇವೆ ನೋಡಿ~ ಎಂಬ ಭಾವ ತೇಲುತ್ತಿತ್ತು. ಅದು ಶುಕ್ರವಾರ ರಾತ್ರಿ ಸತ್ಯವಾಯಿತು.

ವಿಶ್ವಕಪ್ ಟೂರ್ನಿ ಫೈನಲ್ ಪಂದ್ಯದಲ್ಲಿ ಅಜೇಯ 91 ರನ್ ಗಳಿಸಿ ಭಾರತಕ್ಕೆ ಗೆಲುವಿನ ಕಾಣಿಕೆ ನೀಡಿದ್ದ ದೋನಿ, ಭಾರತಕ್ಕೆ 28 ವರ್ಷಗಳ ನಂತರ ವಿಶ್ವಚಾಂಪಿಯನ್ ಪಟ್ಟ ಗಳಿಸಿಕೊಟ್ಟಿದ್ದರು. ಉಪ್ಪಳದಲ್ಲಿಯೂ ಅದೇ ರೀತಿಯ ಛಲದ ಆಟವಾಡಿದರು.

ಟ್ವೆಂಟಿ-20 ಚಾಂಪಿಯನ್ಸ್ ಲೀಗ್‌ನಲ್ಲಿಯೂ ಅವರ ತಂಡ ಚೆನ್ನೈ ಸೂಪರ್   ಕಿಂಗ್ಸ್ ಸೋಲನುಭವಿಸಿತ್ತು. ಈ ಎಲ್ಲ ನಿರಾಸೆಗಳನ್ನೂ ಶುಕ್ರವಾರ ಸಂಜೆ ಅವರು ಬೌಂಡರಿಯಿಂದ ಹೊರಗಟ್ಟಿಬಿಟ್ಟರು. ಬಹಳ ದಿನಗಳ ನಂತರ ಅವರ ವಿಶೇಷ ಶೈಲಿಯ `ಹೆಲಿಕಾಪ್ಟರ್ ಶಾಟ್~ಗಳು ಭರಪೂರ ಮನರಂಜನೆ ನೀಡಿದವು. ಆಫ್‌ಸೈಡ್‌ನಲ್ಲಿಯೇ ಹತ್ತು ಬೌಂಡರಿಗಳನ್ನು ಗಳಿಸಿದ್ದು ವಿಶೇಷ.

ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಯುವರಾಜ್‌ಸಿಂಗ್, ವಿವಿಎಸ್ ಲಕ್ಷ್ಮಣ, ವೀರೇಂದ್ರ ಸೆಹ್ವಾಗ್ ಅವರಂತಹ ತಾರಾಮಣಿಗಳು ಇರುವ ಟೆಸ್ಟ್ ಮತ್ತು ಏಕದಿನ ತಂಡಗಳ ನಾಯಕತ್ವವನ್ನು ಸಮರ್ಥವಾಗಿ ನಿಭಾಯಿಸಿದ್ದ ದೋನಿ ಅನನುಭವಿ ಹುಡುಗರೊಂದಿಗೆ ಪಂದ್ಯವನ್ನು ಹೇಗೆ ಗೆಲ್ಲಬೇಕು ಎಂದು ತೋರಿಸಿಬಿಟ್ಟರು.

ಇಂಗ್ಲೆಂಡ್ ಟೆಸ್ಟ್, ಏಕದಿನ ಸರಣಿಗಳು, ಚಾಂಪಿಯನ್ಸ್ ಲೀಗ್ ಟೂರ್ನಿಯಲ್ಲಿ ಸತತವಾಗಿ ವಿಕೆಟ್ ಕೀಪಿಂಗ್ ಮತ್ತು ಬ್ಯಾಟಿಂಗ್ ಜೊತೆಗೆ ನಾಯಕತ್ವವನ್ನು ನಿಭಾಯಿಸಿಯೂ ದೋನಿ ದಣಿದಿಲ್ಲ. ಉತ್ಕೃಷ್ಟ ಮಟ್ಟದ ದೈಹಿಕ ಸಾಮರ್ಥ್ಯವನ್ನು ಜಾರ್ಖಂಡ್‌ನ ದೋನಿ ಉಳಿಸಿಕೊಂಡಿದ್ದಾರೆ.
 
ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗಿಗೆ ಬಂದು 124ರ ಸ್ಟ್ರೈಕ್‌ರೇಟ್‌ನಲ್ಲಿ ಅಜೇಯ 87 ರನ್ ಗಳಿಸಿ ಮತ್ತೆ ಇಡೀ ಇನಿಂಗ್ಸ್ ವಿಕೆಟ್ ಕೀಪಿಂಗ್ ಮಾಡುತ್ತ, ಹೊಸ ಹುಡುಗರಿಗೆ ಆತ್ಮವಿಶ್ವಾಸ ತುಂಬುತ್ತ `ಕೂಲ್~ ಆಗಿ ಇರುವುದು ಸಾಮರ್ಥ್ಯ ಎಲ್ಲರಿಗೂ ಬರುವುದಿಲ್ಲ.

ಹರಿದು ಬಂದ ಪ್ರೇಕ್ಷಕರು: ಒಂದು ಕಡೆ ತೆಲಂಗಾಣ ಹೋರಾಟದ ಕಾವು ಮತ್ತು ಪ್ರಮುಖ ಆಟಗಾರರಿಲ್ಲದ ಪಂದ್ಯಕ್ಕೆ ಪ್ರೇಕ್ಷಕರ ಕೊರತೆ ಕಾಡುವುದು ಖಚಿತವಿತ್ತು. ಪಂದ್ಯದ ಆರಂಭದಲ್ಲಿ 40 ಸಾವಿರ ಪ್ರೇಕ್ಷಕರ ಗ್ಯಾಲರಿಯಲ್ಲಿ 20 ಸಾವಿರ ಜನರೂ ಇರಲಿಲ್ಲ. ಭಾರತದ ಆರಂಭಿಕ ಬ್ಯಾಟ್ಸ್‌ಮನ್‌ಗಳು ಅಲ್ಪಮೊತ್ತಕ್ಕೆ ಕುಸಿಯುತ್ತಿದ್ದಂತೆ ಹೋರಹೋಗುವವರ ಸಂಖ್ಯೆ ಹೆಚ್ಚಿತ್ತು.

ಯಾವಾಗ ಸುರೇಶ್ ರೈನಾ ಮತ್ತು ದೋನಿ ಸೇರಿಕೊಂಡರೋ ಮನೆಯಲ್ಲಿ ಕುಳಿತವರೂ ಬಂದು ಮೈದಾನ ತುಂಬಿದರು. ಸಂಘಟಕರೇ ಘೋಷಿಸಿದಂತೆ ಪ್ರೇಕ್ಷಕರ ಸಂಖ್ಯೆಯು 29 ಸಾವಿರಕ್ಕೆ ತಲುಪಿತ್ತು. ದೋನಿ ಅಜೇಯ 87 ರನ್ನುಗಳ ಭರ್ಜರಿ ಬ್ಯಾಟಿಂಗ್‌ನಿಂದ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 300 ರನ್ ಗಳಿಸಿದ್ದ ಭಾರತ  ಗೆಲ್ಲುತ್ತದೆ ಎಂಬ ವಿಶ್ವಾಸದಿಂದ ಬಂದಿದ್ದ ಯಾರಿಗೂ ಮೋಸವಾಗಲಿಲ್ಲ.

ಸ್ಪಿನ್ ಸುಳಿ: ರವೀಂದ್ರ ಜಡೇಜಾ ಮತ್ತು ಆರ್. ಅಶ್ವಿನ್ ತಮ್ಮ ಸ್ಪಿನ್ ಸುಳಿಯಲ್ಲಿ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ಮುಳುಗುವಂತೆ ಮಾಡಿದರು. ಜಡೇಜಾ ಬ್ಯಾಟಿಂಗ್‌ನಲ್ಲಿ ನಾಯಕ ದೋನಿಗೆ ಸಾಥ್ ನೀಡಿದ್ದರು. ಜೊತೆಗೆ ಬೌಲಿಂಗ್‌ನಲ್ಲಿ ವಿಶ್ವಾಸ ಉಳಿಸಿಕೊಂಡರು.
 
ಅಪಾಯಕಾರಿಯಾಗಿ ಬೆಳೆಯುತ್ತಿದ್ದ ಇಂಗ್ಲೆಂಡ್ ನಾಯಕ ಅಲಿಸ್ಟರ್ ಕುಕ್ (60; 63ಎಸೆತ, 7ಬೌಂಡರಿ) ಮತ್ತು ಜೋನಾಥನ್ ಟ್ರಾಟ್ (26; 42ಎಸೆತ) ನಡುವಿನ ಮೂರನೇ ವಿಕೆಟ್ ಪಾಲುದಾರಿಕೆಯನ್ನು ಮುರಿದರು. ಇಂಗ್ಲೆಂಡ್‌ನಲ್ಲಿ ಭಾರತವನ್ನು ಸರಣಿಯುದ್ದಕ್ಕೂ ಕಾಡಿದ್ದ ಇಬ್ಬರ ವಿಕೆಟ್ ಅನ್ನು ತಮ್ಮ ಬುಟ್ಟಿಗೆ ಹಾಕಿಕೊಂಡ ಜಡೇಜಾ ಪಂದ್ಯದ ಚಿತ್ರಣವನ್ನೇ ಬದಲಿಸಿದರು.
 
ಕುಕ್ ವಿಕೆಟ್ ಹೋದ ನಂತರ ಉಳಿದ ವಿಕೆಟ್‌ಗಳು ನಾಟಕೀಯ ರೀತಿಯಲ್ಲಿ ಬಿದ್ದವು. ಜಡೇಜಾ ಬೌಲಿಂಗ್‌ನಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿದ ಕುಕ್ ಕ್ಯಾಚ್ ಅನ್ನು ಹಿಡಿಯುವಲ್ಲಿ ಕನ್ನಡದ ಹುಡುಗ ಆರ್. ವಿನಯಕುಮಾರ್ ಒಂಚೂರು ತಪ್ಪು ಮಾಡಲಿಲ್ಲ. ವಿಕೆಟ್ ಪಡೆಯದಿದ್ದರೂ ಶಿಸ್ತಿನ ಬೌಲಿಂಗ್ ಪ್ರದರ್ಶಿಸಿದ ವಿನಯಕುಮಾರ್ (5-0-24-0) ಫೀಲ್ಡಿಂಗ್‌ನಲ್ಲಿಯೂ ಮಿಂಚಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT