ಸೋಮವಾರ, ಏಪ್ರಿಲ್ 6, 2020
19 °C
ಸಾಮಾಜಿಕ ಅಂತರ ಕಾಯಲು ಗ್ರಾಮೀಣ ಟಾಸ್ಕ್‌ಫೋರ್ಸ್‌ನಿಂದ ವಿಶೇಷ ಪ್ರಯತ್ನ

ಗ್ರಾಮೀಣರ ಕಟ್ಟೆಗಳಿಗೆ ಕೀಲೆಣ್ಣೆ ಅಭಿಷೇಕ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ಜಿಲ್ಲೆಯಲ್ಲಿ ಗ್ರಾಮೀಣರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವಿರಾಮದ ಕಟ್ಟೆ, ಜಗುಲಿ, ದೇವಸ್ಥಾನದ ಹೊರಗಿನ ಕಟ್ಟೆಗಳಿಗೆ ಕೀಲೆಣ್ಣೆ (ಬಂಡಿ ಆಯಿಲ್) ಸುರಿಯುವ ಕಾರ್ಯ ನಡೆದಿದೆ.

ಹಿಂದೆಲ್ಲಾ ಈ ಕಟ್ಟೆಗಳು ನ್ಯಾಯ ಪಂಚಾಯ್ತಿಗಳಿಗೆ ವೇದಿಕೆಯಾಗಿದ್ದವು. ಈಗ ಗ್ರಾಮೀಣರು ಹೊಲ–ಮನೆಯ ಕೆಲಸ ಮುಗಿದ ನಂತರ ಬಹುತೇಕ ಈ ಕಟ್ಟೆಗಳ ಮೇಲೆ ದಿನ ಕಳೆಯುತ್ತಾರೆ. ಅಲ್ಲಿಯೇ ಕುಳಿತು ಕಷ್ಟ–ಸುಖ ಮಾತನಾಡುತ್ತಾರೆ. ಜೊತೆಗೆ ಊರ ಸಂಗತಿಗಳೂ ಅಲ್ಲಿಯೆ ಚರ್ಚೆಗೆ ಬರುತ್ತವೆ.

ಮಾತು ಸಾಕಾದರೆ ಹೊತ್ತು ಕಳೆಯಲು ಅಲ್ಲಿಯೇ ಕುಳಿತು ಚೌಕಾಬಾರ, ಹಾವು–ಏಣಿ, ಕವಡೆ ಆಡುತ್ತಾರೆ. ಇನ್ನೂ ಕೆಲವರಿಗೆ ಅವು ಇಸ್ಪೀಟ್ ಅಡ್ಡೆ. ಕೆಲವರು ಮಧ್ಯಾಹ್ನದ ಉರಿ ಬಿಸಿಲಿನ ನಡುವೆ ಸಣ್ಣದೊಂದು ನಿದ್ರೆ ತೆಗೆಯಲು ಇವೇ ಕಟ್ಟೆಗಳಲ್ಲಿ ಪವಡಿಸುತ್ತಾರೆ. ಊರಿನ ಎಲ್ಲ ಸಂಪರ್ಕ ರಸ್ತೆಗಳು ಈ ಕಟ್ಟೆಯ ಮೇಲೆ ಹಾಯ್ದು ಹೋಗುವುದರಿಂದ ಬಸ್ ನಿಲ್ದಾಣವಾಗಿಯೂ ಈ ಕಟ್ಟೆಗಳು ಬಳಕೆಯಾಗುತ್ತವೆ. 

ಗ್ರಾಮೀಣರ ಈ ಸಂಪರ್ಕ ಕೇಂದ್ರ ಕೊರೊನಾ ವೈರಸ್ ಹರಡಲು ವೇದಿಕೆ ಆಗಬಾರದು ಎಂಬ ಕಾರಣಕ್ಕೆ ಜಿಲ್ಲಾ ಪಂಚಾಯ್ತಿ ಆಡಳಿತ ಅದನ್ನು ತಪ್ಪಿಸಲು ಮುಂದಾಗಿದೆ. ಕೀಲೆಣ್ಣೆ ಸುರಿದರೆ ಯಾರೂ ಅಲ್ಲಿ ಕುಳಿತುಕೊಳ್ಳಲು ಆಗುವುದಿಲ್ಲ ಎಂಬುದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಂಗೂಬಾಯಿ ಮಾನಕರ ಅವರ ಲೆಕ್ಕಾಚಾರ.

ಟಾಸ್ಕ್‌ಫೋರ್ಸ್‌ಗೆ ಹೊಣೆ

ಆಯಾ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಪಿಡಿಒ ಒಳಗೊಂಡ ಟಾಸ್ಕ್‌ಫೋರ್ಸ್ ರಚಿಸಲಾಗಿದೆ. ಕಟ್ಟೆಗಳಿಗೆ ಕೀಲೆಣ್ಣೆ ಸುರಿಯುವ ಹೊಣೆ ಈ ಸಮಿತಿಗೆ ವಹಿಸಲಾಗಿದೆ. 

ಅಗತ್ಯ ವಸ್ತುಗಳನ್ನು ಖರೀದಿಸುವಾಗಲೂ ಪರಸ್ಪರ ಅಂತರ ಕಾಯ್ದುಕೊಳ್ಳುವಂತೆ ಈ ಟಾಸ್ಕ್‌ಫೋರ್ಸ್ ಗ್ರಾಮೀಣರಲ್ಲಿ ಜಾಗೃತಿ ಮೂಡಿಸುತ್ತಿದೆ. ಅದರೊಂದಿಗೆ ಊರಿನ ಪ್ರತಿ ದಿನಸಿ ಅಂಗಡಿಗಳ ಮುಂದೆ ತಲಾ ಮೂರು ಅಡಿ ಅಂತರದಲ್ಲಿ ಗುರುತು ಹಾಕುತ್ತಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು