ಯುವ ವಕೀಲೆ ಧರಣಿ ಆತ್ಮಹತ್ಯೆ ಪ್ರಕರಣ: ಸಾವಿಗೂ ಮುನ್ನ ಆಯೋಗಕ್ಕೆ ಪತ್ರ!

ಸೋಮವಾರ, ಮೇ 20, 2019
30 °C
ಏಳು ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್‌

ಯುವ ವಕೀಲೆ ಧರಣಿ ಆತ್ಮಹತ್ಯೆ ಪ್ರಕರಣ: ಸಾವಿಗೂ ಮುನ್ನ ಆಯೋಗಕ್ಕೆ ಪತ್ರ!

Published:
Updated:
Prajavani

ಬೆಂಗಳೂರು: ‘ಪಾಲಿಕೆ ಸದಸ್ಯ ಹಾಗೂ ಸ್ಥಳೀಯರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎನ್ನಲಾದ ಯುವ ವಕೀಲೆ ಎಸ್‌. ಧರಣಿ, ಸಾವಿಗೂ ಮುನ್ನ ರಾಜ್ಯ ಮಾನವ ಹಕ್ಕು ಆಯೋಗಕ್ಕೆ ಪತ್ರ ಬರೆದಿದ್ದ ಸಂಗತಿ ಸಿಐಡಿ ತನಿಖೆಯಿಂದ ಗೊತ್ತಾಗಿದೆ.

ಧರಣಿ ಆತ್ಮಹತ್ಯೆ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಸಿಐಡಿ, ಎ. ನಾರಾಯಣಪುರ ವಾರ್ಡ್‌ನ ಪಾಲಿಕೆ ಸದಸ್ಯ ವಿ. ಸುರೇಶ್‌ ಸೇರಿದಂತೆ ಏಳು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ. ಆಯೋಗಕ್ಕೆ ಧರಣಿ ಬರೆದಿದ್ದ ಪತ್ರವನ್ನೇ ಪ್ರಮುಖ ಸಾಕ್ಷ್ಯ ಆಗಿ ಉಲ್ಲೇಖಿಸಿದೆ.

ಮಹದೇವಪುರ ಸಮೀಪದ ಉದಯನಗರದ ನಿವಾಸಿ ಆಗಿದ್ದ ಧರಣಿ, 2018ರ ಡಿ. 31ರಂದು ಮನೆಯ ಕೊಠಡಿಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ತಾಯಿ ದೇವಿ ನೀಡಿದ್ದ ದೂರಿನಡಿ ವಿ. ಸುರೇಶ್‌ ಸೇರಿದಂತೆ ಏಳು ಮಂದಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ (ಐಪಿಸಿ 306) ಆರೋಪದಡಿ ಎಫ್‌ಐಆರ್ ದಾಖಲಾಗಿತ್ತು.  ಧರಣಿ ಆತ್ಮಹತ್ಯೆ ಸೇರಿದಂತೆ ಒಟ್ಟು ಮೂರು ಪ್ರಕರಣಗಳಲ್ಲಿ ಸಿಐಡಿ ದೋಷಾರೋಪ ಪಟ್ಟಿ ಸಲ್ಲಿಸಿದೆ.

5 ಅಡಿ ಜಾಗಕ್ಕೆ ಗಲಾಟೆ: ‘ಧರಣಿ ಅವರ ನಿವೇಶನಕ್ಕೆ ಹೊಂದಿಕೊಂಡಿದ್ದ 5 ಅಡಿ ಜಾಗವನ್ನು ಸಾರ್ವಜನಿಕರ ಓಡಾಟಕ್ಕೆ ಬಿಡುವಂತೆ ಸ್ಥಳೀಯರು ಒತ್ತಾಯಿಸುತ್ತಿದ್ದರು. ಅದಕ್ಕೆ ಒಪ್ಪದಿದ್ದಾಗ ಧರಣಿ ಹಾಗೂ ಅವರ ತಾಯಿ ದೇವಿ ಜೊತೆ ಸ್ಥಳೀಯರು ಜಗಳ ಮಾಡಲಾರಂಭಿಸಿದ್ದರು. ಈ ಸಂಗತಿಯನ್ನು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ’ ಎಂದು ಸಿಐಡಿ ಅಧಿಕಾರಿಯೊಬ್ಬರು ತಿಳಿಸಿದರು.

‘ಸ್ಥಳೀಯರ ವರ್ತನೆ ಹಾಗೂ ಕಿರುಕುಳದಿಂದ ನೊಂದ ಧರಣಿ, ಮಹದೇವಪುರ ಠಾಣೆಗೆ ದೂರು ಕೊಟ್ಟಿದ್ದರು. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಮಧ್ಯಪ್ರವೇಶಿಸಿದ್ದ ಸುರೇಶ್, ಏಕಪಕ್ಷೀಯ ನಿರ್ಧಾರ ತೆಗೆದುಕೊಂಡು ಸ್ಥಳೀಯರಿಗೆ ಅನುಕೂಲ ಮಾಡಿಕೊಟ್ಟಿದ್ದರು. ಅದೇ ಕಾರಣಕ್ಕೆ ಸ್ಥಳೀಯರು ಪದೇ ಪದೇ ಗಲಾಟೆ ಮಾಡುತ್ತಿದ್ದರು. ಅದರಿಂದ ಧರಣಿ ಹಾಗೂ ಅವರ ತಾಯಿ ಸಾಕಷ್ಟು ನೊಂದಿದ್ದರು’ ಎಂದು ಹೇಳಿದರು.  

ಆಯೋಗದ ಸಿಬ್ಬಂದಿ ಹೇಳಿಕೆ: ‘ಧರಣಿ ಅವರಿಗೆ ಪಾಲಿಕೆ ಸದಸ್ಯ ಹಾಗೂ ಇತರರು ಕಿರುಕುಳ ನೀಡುತ್ತಿದ್ದರು. ಅದರಿಂದ ಬೇಸತ್ತಿದ್ದ ಧರಣಿ, ರಾಜ್ಯ ಮಾನವ ಹಕ್ಕು ಆಯೋಗಕ್ಕೆ ಪತ್ರ ಬರೆದು ಅಳಲು ತೋಡಿಕೊಂಡಿದ್ದರು. ಅದಾಗಿ ಕೆಲವೇ ದಿನಗಳಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಸಿಐಡಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ವಿನಾಕಾರಣ ನನಗೆ ಹಾಗೂ ನನ್ನ ತಾಯಿಗೆ ಕಿರುಕುಳ ನೀಡುತ್ತಿದ್ದಾರೆ. ಜೀವ ಬೆದರಿಕೆಯೊಡ್ಡಿ, ಸತ್ತು ಹೋಗು ಎಂದು ಹಿಂಸಿಸುತ್ತಿದ್ದಾರೆ. ನನಗೆ ಏನಾದರೂ ಆದರೆ ಈ ಪತ್ರದಲ್ಲಿ ಉಲ್ಲೇಖಿಸಿರುವ ಇವರೆಲ್ಲರೂ (ಪಾಲಿಕೆ ಸದಸ್ಯ ಹಾಗೂ ಇತರರು) ಕಾರಣ’ ಎಂಬುದಾಗಿ ಧರಣಿ ಪತ್ರದಲ್ಲಿ ಬರೆದಿದ್ದಾರೆ’ ಎಂದು ವಿವರಿಸಿದರು. 

‘ಪತ್ರವನ್ನು ಸ್ವೀಕರಿಸಿದ್ದ ಆಯೋಗದ ಸಿಬ್ಬಂದಿ, ಸಂಬಂಧಪಟ್ಟ ಅಧಿಕಾರಿಗಳಿಗೆ ರವಾನಿಸಿದ್ದರು. ಆ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಸಿಬ್ಬಂದಿಯನ್ನು ಸಂಪರ್ಕಿಸಿ ಹೇಳಿಕೆ ಪಡೆಯಲಾಗಿದ್ದು, ಪ್ರಕರಣದ ಸಾಕ್ಷಿಯನ್ನಾಗಿ ಮಾಡಿಕೊಳ್ಳಲಾಗಿದೆ. ಆಯೋಗವು ಸ್ವಾಯತ್ತ ಸಂಸ್ಥೆಯಾಗಿದ್ದು, ಅಲ್ಲಿಯ ಸಿಬ್ಬಂದಿಯ ಹೇಳಿಕೆ ಹೆಚ್ಚು ಪರಿಣಾಮಕಾರಿ’ ಎಂದರು. 

ನ್ಯಾಯಾಂಗ ಬಂಧನದಲ್ಲಿ ಸದಸ್ಯ: ಪ್ರಕರಣ ಸಂಬಂಧ ಪಾಲಿಕೆ ಸದಸ್ಯ ವಿ. ಸುರೇಶ್‌ ಅವರನ್ನು ಮಾರ್ಚ್ 22ರಂದು ಸಿಐಡಿ ಅಧಿಕಾರಿಗಳು ಬಂಧಿಸಿದ್ದರು. ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.  

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !