ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಸಿ ಕಂಪನಿಗಳೊಂದಿಗೆ ₹1.27 ಲಕ್ಷ ಕೋಟಿ ಒಪ್ಪಂದ: ಸಚಿವೆ ನಿರ್ಮಲಾ ಸೀತಾರಾಮನ್‌

ಏರೋ ಸ್ಪೇಸ್‌: ₹2 ಲಕ್ಷ ಕೋಟಿ ಹೂಡಿಕೆ ಪ್ರಸ್ತಾವ
Last Updated 20 ಫೆಬ್ರುವರಿ 2019, 20:33 IST
ಅಕ್ಷರ ಗಾತ್ರ

ಬೆಂಗಳೂರು: ‘ರಕ್ಷಣಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ನಮ್ಮ ದೇಶದಲ್ಲಿ ಮಹತ್ತರ ಬದಲಾವಣೆಗಳಾಗಿವೆ. ಐದು ವರ್ಷಗಳಲ್ಲಿ ಭಾರತದ ಕಂಪನಿಗಳಿಂದ ₹ 1.27 ಲಕ್ಷ ಕೋಟಿ ಮೊತ್ತದ 150 ಖರೀದಿ ಒಪ್ಪಂದ ಮಾಡಿಕೊಳ್ಳಲಾಗಿದೆ’ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದರು.

ಐದು ದಿನಗಳ ಏರೋ ಇಂಡಿಯಾ 2019 ವೈಮಾನಿಕ ಪ್ರದರ್ಶನಕ್ಕೆ ಇಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು. ‘ಈಚಿನ ವರ್ಷಗಳಲ್ಲಿ ಒಟ್ಟು ₹ 2 ಲಕ್ಷ ಕೋಟಿ ಮೌಲ್ಯದ 164 ಬಂಡವಾಳ ಹೂಡಿಕೆ ಪ್ರಸ್ತಾವಗಳಿಗೆ ಕೇಂದ್ರ ಸರ್ಕಾರ ಮಂಜೂರಾತಿ ನೀಡಿದೆ. ಇವೆಲ್ಲವೂ ದೇಸಿ ಕಂಪನಿಗಳ ಜೊತೆಗಿನ ಒಪ್ಪಂದಗಳಿಗೆ ಸಂಬಂಧಿಸಿದವು’ ಎಂದರು.

‘ಏರೋಸ್ಪೇಸ್ ಮತ್ತು ರಕ್ಷಣಾ ಇಲಾಖೆಯಲ್ಲಿ ಹೂಡಿಕೆಗೆ ಪೂರಕವಾದ ಪರಿಸರವನ್ನು ನಿರ್ಮಾಣ ಮಾಡುತ್ತಿದ್ದೇವೆ. ಸ್ವಂತ ಆವಿಷ್ಕಾರ, ಸ್ವಂತ ಬಂಡವಾಳ ಹೂಡುವವರಿಗೆ ಉತ್ತೇಜನ ನೀಡಲುವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನೀತಿಗಳನ್ನು ಸಡಿಲಗೊಳಿಸಲಾಗಿದೆ. ಈಗ ರಕ್ಷಣಾ ವಲಯದ ಉದ್ದಿಮೆಗಳಲ್ಲಿ ಶೇ 100ರಷ್ಟು ಎಫ್‌ಡಿಐಗೆ ಅವಕಾಶವಿದೆ. ರಕ್ಷಣಾ ಸಾಮಗ್ರಿ ‌‌‌‌ತಯಾರಿಗೆ ಅನುಮತಿ ಪಡೆಯಬೇಕೆಂಬ ಷರತ್ತುಗಳನ್ನು ಸಡಿಲಗೊಳಿಸಲಾಗಿದೆ’ ಎಂದರು.

‘ಸ್ವಂತ ತಂತ್ರಜ್ಞಾನ ಬಳಸುವ ಅಥವಾ ವಿದೇಶಿ ಸಂಸ್ಥೆಗಳ ಜತೆ ಸಹಭಾಗಿತ್ವ ಹೊಂದಿರುವ ದೇಸಿ ಕಂಪನಿಗಳು ಇಲ್ಲೇ ಉತ್ಪನ್ನಗಳನ್ನು ತಯಾರಿಸಿದರೆ ಬಿಡಿಭಾಗಗಳನ್ನು ಅವರಿಂದಲೇ ಖರೀದಿಸಲಾಗುವುದು’ ಎಂದರು.

‘ರಕ್ಷಣಾ ಇಲಾಖೆಗೆ ಸಂಬಂಧಿಸಿದ ಸಾರ್ವಜನಿಕ ಉದ್ದಿಮೆಗಳ ವಹಿವಾಟು ಕಳೆದ ಐದು ವರ್ಷಗಳಲ್ಲಿ ₹ 43,746 ಕೋಟಿಯಿಂದ ₹ 58,163 ಕೋಟಿಗೆ ಹೆಚ್ಚಳವಾಗಿವೆ. ಅವುಗಳಲ್ಲಿ ಶೇ 30ರಷ್ಟು ಉತ್ಪಾದನೆಯನ್ನು ಹೊರಗುತ್ತಿಗೆ ನೀಡಲಾಗುತ್ತಿದೆ’.

‘ಮೇಕ್‌ ಇನ್‌ ಇಂಡಿಯಾ ಕಾರ್ಯಕ್ರಮದಿಂದಾಗಿ ಎಸ್ 92 ಹೆಲಿಕಾಪ್ಟರ್ ಕ್ಯಾಬಿನ್, ವಿಮಾನದ ಅತ್ಯಾಧುನಿಕ ಕಾಕ್‌ಪಿಟ್, ಡಾರ್ನಿಯರ್ ವಿಮಾನದ ಕಾಕ್‌ಪಿಟ್ ಹಾಗೂ ಸಿಎಚ್ 47, ‘ಬೋಯಿಂಗ್ ವಿಮಾನದ ಸ್ಪೈಡರ್‌ಗಳನ್ನು ದೇಶದಲ್ಲೇ ತಯಾರಿಸಿರುವುದು ನೀತಿ ಬದಲಾವಣೆಗಳಿಂದ ಆಗಿರುವ ಪ್ರಯೋಜನಗಳಿಗೆ ಸಾಕ್ಷಿ’ ಎಂದರು.

‘4 ಸಾವಿರ ವಿಮಾನ ತಯಾರಿ’

ಲಘು ಯುದ್ಧ ವಿಮಾನ, ಲಘು ಯುದ್ಧ ಹೆಲಿಕಾಪ್ಟರ್, ಎಎಲ್‌ಸಿಎಚ್ ಹಾಗೂ ಸಿ 295 ಸೇರಿದಂತೆ 4 ಸಾವಿರಕ್ಕೂ ಹೆಚ್ಚು ವಿಮಾನಗಳನ್ನು ದೇಶದಲ್ಲೇ ತಯಾರಿಸಲಾಗಿದೆ. ಇದೇ ಉತ್ಪಾದನಾ ದರ ಕಾಯ್ದುಕೊಂಡರೆ ವಿದೇಶಿ ಕಂಪನಿಗಳು (ಒಇಎಂ) ಜಂಟಿ ಸಹಭಾಗಿತ್ವ ವಹಿಸಲು ಮುಂದೆ ಬರಲಿವೆ ಎಂದು ನಿರ್ಮಲಾ ಸೀತಾರಾಮನ್‌ ತಿಳಿಸಿದರು.

ವಾಯುಪಡೆ ಸೇರಿದ ತೇಜಸ್

ಸ್ವದೇಶಿ ತಂತ್ರಜ್ಞಾನ ಬಳಸಿ ನಿರ್ಮಿಸಿರುವ ತೇಜಸ್ ಲಘು ಯುದ್ಧ ವಿಮಾನವು ಮಿಲಿಟರಿ ಏರ್‌ ವರ್ದಿನೆಸ್ ಆ್ಯಂಡ್ ಸರ್ಟಿಫಿಕೇಷನ್ ಸಂಸ್ಥೆಯ (ಸೆಮಿಲ್ಯಾಕ್) ರಕ್ಷಣಾ ವಿಮಾನಯಾನ ನಿಯಂತ್ರಕರಿಂದ ‘ಅಂತಿಮ ಕಾರ್ಯಾಚರಣೆ ಅನುಮತಿ’ (ಎಫ್‌ಒಸಿ) ಪಡೆದುಕೊಂಡಿದೆ.

ಇದರೊಂದಿಗೆ ಈ ವಿಮಾನವು ಶಸ್ತ್ರಸಜ್ಜಿತ ಜೆಟ್ ಯುದ್ಧ ವಿಮಾನವಾಗಿ ಭಾರತೀಯ ವಾಯುಪಡೆಗೆ (ಐಎಎಫ್) ಬುಧವಾರ ಸೇರ್ಪಡೆಯಾಯಿತು. ಸೆಮಿಲ್ಯಾಕ್‌ನ ಮುಖ್ಯ ಕಾರ್ಯ ನಿರ್ವಾಹಕ ಪಿ.ಜಯಪಾಲ್ ಅವರು ಈ ವಿಮಾನವನ್ನು ಸೇವೆಗೆ ಬಿಡುಗಡೆ ಮಾಡುವ ದಾಖಲೆಗಳನ್ನು ಏರ್‌ ಮಾರ್ಷಲ್ ಬಿ.ಎಸ್.ಧನೋವ ಅವರಿಗೆ ಹಸ್ತಾಂತರಿಸಿದರು.

‘ತೇಜಸ್ ವಿಮಾನವು ಶಸ್ತ್ರಾಸ್ತ್ರಗಳನ್ನು ಅತ್ಯಂತ ನಿಖರವಾಗಿ ಗುರಿಗೆ ತಲುಪಿಸಬಲ್ಲದು. ಇದು ವಾಯುಪಡೆ ಸೇರಿದ್ದು ನಮಗೆ ದೊಡ್ಡ ಮೈಲುಗಲ್ಲು’ ಎಂದು ಧನೋವಾ ಹೇಳಿದರು.

**

ನಾವು ಸ್ಪಷ್ಟ ಗುರಿ ಹೊಂದಿದ್ದೇವೆ. ಬೆಂಗಳೂರನ್ನು ಮುಂದಿನ ತಲೆಮಾರಿನ ತಂತ್ರಜ್ಞಾನ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲಿದ್ದೇವೆ
ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

**

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT