ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾದಚಾರಿಗಳಿಗೂ ಚೂರು ಜಾಗ ಬಿಡಿ...

Last Updated 14 ಏಪ್ರಿಲ್ 2019, 11:31 IST
ಅಕ್ಷರ ಗಾತ್ರ

ಬೆಂಗಳೂರು: ಹೇಳಿಕೊಳ್ಳುವುದಕ್ಕೆ ನಮ್ಮ ನಗರವು ದೇಶದ ಮಾಹಿತಿ ತಂತ್ರಜ್ಞಾನದ ಕ್ಷೇತ್ರದ ರಾಜಧಾನಿ. ನೀವು ಇಲ್ಲಿ ಯಾವ ಮೂಲೆಗೆ ಹೋಗಬೇಕೆಂದರೂ, ಮೊಬೈಲ್‌ನಲ್ಲಿ ಜಾಲಾಡಿದರೆ ಮಾಹಿತಿ ಬೆರಳ ತುದಿಯಲ್ಲೇ ಲಭ್ಯ. ಆದರೆ, ಅಡಿ ಇಡಲು ಮುಂದಾದರೆ ಹೆಜ್ಜೆ ಹೆಜ್ಜೆಗೂ ಸಮಸ್ಯೆ!

ನಗರದ ಪಾದಚಾರಿ ಮಾರ್ಗಗಳಲ್ಲಿ ನಡೆಯುವುದೆಂದರೆ ಸುಲಭವೇ? ಫುಟ್‌ಪಾತ್‌ನ ಕಲ್ಲುಹಾಸು ಕಿತ್ತು ಹೋಗಿರುವ ಕಡೆ ಲಾಂಗ್‌ಜಂಪ್‌ ಮಾಡಬೇಕು. ದಾರಿಗೆ ಅಡ್ಡವಾಗಿ ಸರಕುಗಳನ್ನಿಟ್ಟಿರುವ ಕಡೆ ಹೈಜಂಪ್‌ ಮಾಡಬೇಕು. ಹೊಸ ಕಟ್ಟಡ ಕಟ್ಟುವಲ್ಲಿ ಸುತ್ತುಬಳಸಿ ಹೋಗಬೇಕು. ಇದೂ ಒಂದು ರೀತಿ ಹಗ್ಗದ ಮೇಲಿನ ನಡಿಗೆಯಂತೆಯೇ. ಎಡವದೆಯೇ ನಡೆಯುವ ಕಸರತ್ತುಗಳನ್ನು ಕರಗತ ಮಾಡಿಕೊಂಡರಷ್ಟೇ ನಡಿಗೆ ಸಲೀಸು ಎಂಬ ಪರಿಸ್ಥಿತಿ ಪಾದಚಾರಿಗಳದು.

ಕಿತ್ತುಹೋದ ಕಲ್ಲು ಹಾಸು: ಮುಖ್ಯ ರಸ್ತೆ, ಹಾಗೂ ಉಪ ಮುಖ್ಯ ರಸ್ತೆಗಳ ಬಳಿ ಪಾದಚಾರಿ ಮಾರ್ಗಗಳೇನೋ ಇವೆ. ಆದರೆ, ಸ್ಥಿತಿ ದೇವರಿಗೇ ಪ್ರೀತಿ. ಅಡಿಗಡಿಗೆ ಕಲ್ಲು ಹಾಸುಗಳು ಕಿತ್ತು ಹೋಗಿರುವ ಈ ಮಾರ್ಗಗಳಲ್ಲಿ ಪ್ರತಿಯೊಂದು ಹೆಜ್ಜೆಯನ್ನೂ ಅಳೆದು ತೂಗಿ ಇಡಬೇಕಾದ ಸ್ಥಿತಿ ಇದೆ. ಸ್ವಲ್ಪ ಎಚ್ಚರ ತಪ್ಪಿದರೂ ದೇಹ ಚರಂಡಿಯೊಳಗಿರುತ್ತದೆ. ನಗರದ ಬಹುತೇಕ ಎಲ್ಲ ವಾರ್ಡ್‌ಗಳ ರಸ್ತೆಗಳಲ್ಲೂ ಈ ಪರಿಸ್ಥಿತಿ ಸರ್ವೇಸಾಮಾನ್ಯ. ಚರಂಡಿಗೆ ಬಿದ್ದು ಪಾದಚಾರಿಗಳು ಗಾಯಗೊಂಡ ಘಟನೆಗಳು ನಡೆದಿವೆ. ವೃದ್ಧರು ಹಾಗೂ ಮಕ್ಕಳ ಪಾಲಿಗಂತೂ ಇಂತಹ ದಾರಿಗಳು ಅಪಾಯಕ್ಕೆ ರಹದಾರಿ ಇದ್ದಂತೆ.

ಫುಟ್‌ಪಾತ್‌ ಮಳಿಗೆಗಳು: ವಾಣಿಜ್ಯ ಪ್ರದೇಶಗಳಲ್ಲಿ ಫುಟ್‌ಪಾತ್‌ಗಳನ್ನು ಅಂಗಡಿ ಮಳಿಗೆಗಳು ಆಕ್ರಮಿಸಿಕೊಳ್ಳುವುದಂತೂ ಮಾಮೂಲಿ ವಿದ್ಯಮಾನ. ಪಾದಚಾರಿ ಮಾರ್ಗದ ಮುಕ್ಕಾಲು ಪಾಲನ್ನು ಅಂಗಡಿಗಳ ಮುಂಗಟ್ಟುಗಳು, ಚೌಕಟ್ಟುಗಳೇ ಒತ್ತುವರಿ ಮಾಡಿಕೊಂಡಿರುತ್ತವೆ. ಅಂಗಡಿಯ ಜಾಹೀರಾತು ಫಲಕವನ್ನು ಪಾದಚಾರಿ ಮಾರ್ಗಕ್ಕೆ ಅಡ್ಡಲಾಗಿ ಇಡುವುದು ನಡೆಯುವವರು ಎದುರಿಸುವ ಇನ್ನೊಂದು ತೊಡಕು.

ವಾರ್ಡ್‌ನ ಒಳ ರಸ್ತೆಗಳಲ್ಲಿರುವ ಸಣ್ಣ ಪುಟ್ಟ ಹೋಟೆಲ್‌ಗಳ ಟೇಬಲ್‌ ಇಡುವುದಕ್ಕೆ ಜಾಗ ಒದಗಿಸುವುದು ಈ ಪಾದಚಾರಿ ಮಾರ್ಗಗಳೇ. ರಾಜಾರೋಷವಾಗಿ ಫುಟ್‌ಪಾತ್‌ಗಳ ಆಕ್ರಮಣ ನಡೆದಿದ್ದರೂ ಪಾಲಿಕೆ ಸದಸ್ಯರಿಗಾಗಲೀ, ಬಿಬಿಎಂಪಿ ಅಧಿಕಾರಿಗಳಿಗಾಗಲೀ ಕಾಣಿಸುವುದೇ ಇಲ್ಲ!

ಗ್ಯಾರೇಜ್‌ ಹಾವಳಿ: ನಗರದ ಬಹುತೇಕ ಗ್ಯಾರೇಜ್‌ಗಳಿರುವುದು ಫುಟ್‌ಪಾತ್‌ಗಳಲ್ಲಿ. ಆಟೊ ರಿಕ್ಷಾ, ಬೈಕ್‌ ರಿಪೇರಿ ನಡೆಯುವುದೇ ನಡೆವವರಿಗೆ ಮೀಸಲಿಟ್ಟ ಜಾಗದಲ್ಲಿ. ಈ ಗ್ಯಾರೇಜ್‌ಗಳ ಬಳಿ ಚೆಲ್ಲಿರುವ ಗ್ರೀಸ್‌, ಆಯಿಲ್‌ಗಳ ನಡುವೆ ಹೆಜ್ಜೆ ಇಡುವಾಗ ಜಾರಿ ಬೀಳದಿದ್ದರೆ ಪುಣ್ಯ. ಜೆ.ಸಿ.ರಸ್ತೆಯಿಂದ ಡಬಲ್‌ ರಸ್ತೆಗೆ ಸಂಪರ್ಕ ಕಲ್ಪಿಸುವ ಸಿದ್ದಯ್ಯ ರಸ್ತೆಯಲ್ಲೊಮ್ಮೆ ಸಾಗಿದರೆ ಈ ಸಮಸ್ಯೆಯ ವಿಶ್ವದರ್ಶನವಾಗುತ್ತದೆ. ಇಲ್ಲಿ ಪಾದಚಾರಿ ಮಾರ್ಗ ಮಾತ್ರವಲ್ಲ ಗ್ಯಾರೇಜ್‌ಗಳ ನಡುವೆ ರಸ್ತೆಯನ್ನೂ ಹುಡುಕಬೇಕಾದ ಸ್ಥಿತಿ ಇದೆ. ಇಂತಹ ಒತ್ತುವರಿಗಳ ಬಗ್ಗೆ ಜನಸ್ಪಂದನ ಸಭೆಗಳಲ್ಲಿ ತಕರಾರು ಎತ್ತಿದರೂ ಸಮಸ್ಯೆ ಬಗೆಹರಿಯುವುದೇ ಇಲ್ಲ.

ಬಯಲು ಶೌಚಾಲಯ: ಅನೇಕ ಕಡೆ ಪಾದಚಾರಿ ಮಾರ್ಗಗಳೇ ಬಯಲು ಶೌಚಾಲಯಗಳಾಗಿ ಬಿಟ್ಟಿವೆ. ಮಾಗಡಿ ರಸ್ತೆಯ ಕೆಎಚ್‌ಬಿ ಕಾಲೊನಿಯಲ್ಲಿ ಬಸವೇಶ್ವರ ನಗರ ಸಂಚಾರಿ ಪೊಲೀಸ್‌ ಠಾಣೆಯ ಅನತಿ ದೂರದಲ್ಲಿ ಸಿನಿಮಾ ತಂಡದ ವಾಹನಗಳನ್ನು ರಸ್ತೆ ಪಕ್ಕದಲ್ಲೇ ನಿಲ್ಲಿಸಲಾಗುತ್ತದೆ. ಅನೇಕರು ಇಲ್ಲಿನ ಪಾದಚಾರಿ ಮಾರ್ಗವನ್ನೇ ಶೌಚಾಲಯದಂತೆ ಉಪಯೋಗಿಸುತ್ತಾರೆ. ಇಲ್ಲಂತೂ ಮೂಗು ಮುಚ್ಚಿಕೊಂಡೂ ನಡೆಯಲೂ ಸಾಧ್ಯವಾಗದು.

ಪರಿಸ್ಥಿತಿ ಇಲ್ಲಿಗಷ್ಟೇ ಸೀಮಿತವಲ್ಲ. ತಿಂಗಳಾನುಗಟ್ಟಲೆ ವಾಹನಗಳನ್ನು ನಿಲ್ಲಿಸುವ ಕಡೆಗಳಲ್ಲಿ ಪಾದಚಾರಿ ಮಾರ್ಗಗಳು ಶೌಚಾಲಯಗಳಂತೆ ಬಳಕೆಯಾಗುವ ನೂರಾರು ಉದಾಹರಣೆಗಳು ನಗರದಲ್ಲಿ ಸಿಗುತ್ತವೆ. ‘ಇಲ್ಲಿ ಮೂತ್ರ ವಿಸರ್ಜನೆ ಮಾಡಬಾರದು’ ಎಂಬ ಗೋಡೆಬರಹಗಳು ಇದ್ದರೂ ಅದರ ಮೇಲೆಯೇ ಮೂತ್ರ ಸಿಂಚನ ಮಾಡುವ ಮಹಾನುಭಾವರೂ ಇದ್ದಾರೆ. ಇಂತಹ ಕಡೆ ಮಹಿಳೆಯರು ಪಾದಚಾರಿ ಮಾರ್ಗ ಬಳಸುವುದಾದರೂ ಹೇಗೆ?

ಬೀದಿ ವ್ಯಾಪಾರಿಗಳ ಹಾವಳಿ: ಮಳಿಗೆಗಳು ಪಾದಚಾರಿ ಮಾರ್ಗವನ್ನು ಆಕ್ರಮಿಸಿ ಕೊಳ್ಳುವುದು ಒಂದೆಡೆಯಾದರೆ, ಬೀದಿ ವ್ಯಾಪಾರಿಗಳ ಹಾವಳಿ ಇನ್ನೊಂದೆಡೆ. ಕೆ.ಆರ್‌. ಮಾರುಕಟ್ಟೆಯೂ ಸೇರಿದಂತೆ ನಗರದ ಬಹುತೇಕ ಮಾರುಕಟ್ಟೆಗಳ ಬಳಿ ಈ ಸಮಸ್ಯೆ ತೀವ್ರವಾಗಿದೆ. ಫುಟ್‌ಪಾತ್‌ನಲ್ಲೇ ಪ್ಲಾಸ್ಟಿಕ್‌ ಶೀಟ್‌ ಬಿಡಿಸಿಟ್ಟು, ಅದರಲ್ಲಿ ಬಟ್ಟೆ, ಚಪ್ಪಲಿ, ಸೊಪ್ಪು–ತರಕಾರಿ, ಹಣ್ಣು– ಹಂಪಲು, ಬಾಚಣಿಗೆ, ಕನ್ನಡಿ ಮುಂತಾದ ಸರಕುಗಳನ್ನು ಹರವಿ ವ್ಯಾಪಾರ ಶುರು ಹಚ್ಚಿಕೊಳ್ಳುತ್ತಾರೆ. ಬೀದಿಬದಿ ವ್ಯಾಪಾರಿಗಳು ಜೋರು ಧ್ವನಿಯಲ್ಲಿ ಗಿರಾಕಿಗಳನ್ನು ಕರೆಯುವ ಅಬ್ಬರದ ನಡುವೆ, ಹೆಜ್ಜೆ ಇಡಲು ಜಾಗವಿಲ್ಲವೇ ಪರದಾಡುವ ಪಾದಚಾರಿಗಳ ಗೊಣಗಾಟ ಯಾರಿಗೂ ಕೇಳಿಸುತ್ತಿಲ್ಲ.

ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿ ಸಂಪಿಗೆ ಹೂಗಳ ಕಂಪು ಆಘ್ರಾಣಿಸುತ್ತಾ ಸಾಗಲು ಗುಣಮಟ್ಟದ ಪಾದಚಾರಿ ಮಾರ್ಗವೇನೋ ಇದೆ. ಆದರೆ, ಅಲ್ಲಲ್ಲಿ ಸರಕು ಸಾಮಗ್ರಿಗಳನ್ನು ಗುಡ್ಡೆ ಹಾಕಿಕೊಂಡಿರುವ ಬೀದಿ ವ್ಯಾಪಾರಿಗಳೇ ಇಲ್ಲಿ ತುಂಬಿಕೊಂಡಿದ್ದಾರೆ. ಸಂಜೆ ವೇಳೆ ಇಲ್ಲಿ ವ್ಯಾಪಾರದ ಭರಾಟೆಯೂ ಜೋರಾಗಿರುತ್ತದೆ. ಈ ಹೊತ್ತಿನಲ್ಲಿ ಇಲ್ಲಿ ನಡೆಯುವವರು ಪಡುವ ಬವಣೆ ಅಷ್ಟಿಷ್ಟಲ್ಲ.

ಪಾದಚಾರಿ ಮಾರ್ಗವೇ ಗೋದಾಮು: ಒಳ ರಸ್ತೆ ಪಕ್ಕದ ಅನೇಕ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳೇ ಗೋದಾಮುಗಳಾಗಿ ಬಳಕೆ ಯಾಗುತ್ತಿವೆ. ಪಾದಚಾರಿ ಮಾರ್ಗದಲ್ಲಿಡುವ ಗೋಣಿಚೀಲಗಳು ತಿಂಗಳುಗಟ್ಟಲೇ ಹಾಗೇ ಇರುತ್ತವೆ. ಬೇಕಿದ್ದರೆ ಪಾದಚಾರಿಗಳು ಬೇರೆ ‘ದಾರಿ’ ಹಿಡಿಯಬೇಕು.

ದಿಢೀರ್‌ ತಲೆ ಎತ್ತುವ ಶೆಡ್‌ಗಳು: ನಗರದಲ್ಲಿ ಯಾರೇ ಹೊಸ ಕಟ್ಟಡ ನಿರ್ಮಿಸಲಿ, ಅದರ ಸರಕು ಸರಂಜಾಮುಗಳನ್ನು ಸಂಗ್ರಹಿಸಲು ಮೊದಲು ಬಳಕೆ ಆಗುವುದು ಪಾದಚಾರಿ ಮಾರ್ಗಗಳು. ಜಲ್ಲಿಕಲ್ಲು, ಕಬ್ಬಿಣದ ಕಂಬಿ, ಇಟ್ಟಿಗೆ ಪೇರಿಸುವಲ್ಲಿ ಪಾದಚಾರಿಗಳು ಬೇರೆ ದಾರಿ ಕಂಡುಕೊಳ್ಳಬೇಕಾಗುತ್ತದೆ. ಇದು ಇಷ್ಟಕ್ಕೇ ಸೀಮಿತವಲ್ಲ. ಸಿಮೆಂಟ್‌, ಕಬ್ಬಿಣ ಸಂಗ್ರಹದ ಶೆಡ್‌ಗಳನ್ನೂ ಫುಟ್‌ಪಾತ್‌ನಲ್ಲೇ ನಿರ್ಮಿಸಲಾಗುತ್ತದೆ. ರಾತ್ರಿ ಬೆಳಗಾಗುವುದರೊಳಗೆ ನಿರ್ಮಾಣವಾಗುವ ಇಂತಹ ಶೆಡ್‌ಗಳಿಗೆ ಯಾವ ದೊಣ್ಣೆ ನಾಯಕನ ಅಪ್ಪಣೆಯೂ ಬೇಕಿಲ್ಲ. ಕಟ್ಟಡ ನಿರ್ಮಾಣ ಮುಗಿಯುವವರೆಗೆ ಇವು ಹಾಗೆಯೇ ಇರುತ್ತವೆ.

ಅನೇಕ ಕಡೆ ಫುಟ್‌ಪಾತ್‌ನಲ್ಲೇ ಕಸ ರಾಶಿ ಹಾಕಲಾಗುತ್ತದೆ. ಕೆಲವೊಮ್ಮೆ ತ್ಯಾಜ್ಯದ ರಾಶಿ ತಿಂಗಳಾದರೂ ತೆರವಾಗುವುದೇ ಇಲ್ಲ. ಇಲ್ಲಂತೂ ನಡೆಯುವವರ ಗೋಳು ಹೇಳತೀರದು.

ಪಾದಚಾರಿ ಮಾರ್ಗದಲ್ಲೇ ಬೈಕ್ ಸವಾರಿ

ಪಾದಚಾರಿ ಮಾರ್ಗದಲ್ಲಿ ಬೈಕ್‌ಗಳನ್ನು ಚಲಾಯಿಸುವ ಹಾವಳಿ ಇತ್ತೀಚೆಗೆ ಹೆಚ್ಚುತ್ತಿದೆ. ಸಂಚಾರ ದಟ್ಟನೆಯಲ್ಲಿ ಸಿಲುಕಿ ನಲುಗುವ ಬೈಕ್‌ ಸವಾರರರಿಗೆ ಇದರಿಂದ ಬಿಡುಗಡೆ ಪಡೆಯುವ ಸುಲಭ ದಾರಿಯಾಗಿ ಗೋಚರಿಸುವುದು ಪಾದಚಾರಿ ಮಾರ್ಗಗಳು. ಯಾವುದೇ ಅಳುಕಿಲ್ಲದೇ ಶರವೇಗದಲ್ಲಿ ಫುಟ್‌ಪಾತ್‌ನಲ್ಲಿ ಸಾಗಿಬರುವ ಬೈಕ್‌ಸವಾರರಿಗೆ ಪಾದಚಾರಿಗಳು ಗಾಬರಿ ಬಿದ್ದು ಜಾಗ ಬಿಟ್ಟುಕೊಡಬೇಕಾಗುತ್ತದೆ.

ಇಂತಹ ಅಪರಾಧ ಎಸಗುವ ಬೈಕ್‌ ಸವಾರರನ್ನು ಪತ್ತೆಹಚ್ಚಿ ಶಿಕ್ಷಿಸಲು ಪಾದಚಾರಿ ಮಾರ್ಗಗಳ ಬಳಿ ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ.

ವಾಹನ ನಿಲುಗಡೆಗೂ ಇದೇ ಜಾಗ

ನಗರದ ಬಹುತೇಕ ಕಡೆ ಫುಟ್‌ಪಾತ್‌ಗಳೇ ವಾಹನ ನಿಲುಗಡೆ ತಾಣಗಳಾಗಿ ಬಳಕೆಯಾಗುತ್ತಿವೆ. ಮೆಟ್ರೊ ನಿಲ್ದಾಣಗಳ ಬಳಿಯಂತೂ ಈ ಹಾವಳಿ ವಿಪರೀತ. ಮೆಟ್ರೊದಿಂದ ಇಳಿಯುವ ಪ್ರಯಾಣಿಕರು ನಡೆದು ಹೋಗುವುದಕ್ಕೆ ಹರಸಾಹಸಪಡಬೇಕಾದ ಪರಿಸ್ಥಿತಿ ಇದೆ.

ವಾಣಿಜ್ಯ ಪ್ರದೇಶಗಳಲ್ಲಿ ‘ವಾಹನ ನಿಲುಗಡೆ ನಿಷೇಧಿಸಲಾಗಿದೆ’ ಎಂಬ ಫಲಕಗಳನ್ನು ಹಾಕಿರುವ ಕಡೆಗಳಲ್ಲೂ ಪಾದಚಾರಿ ಮಾರ್ಗದಲ್ಲೇ ವಾಹನಗಳನ್ನು ನಿಲ್ಲಿಸುತ್ತಾರೆ. ಕಾರು ಹಾಗೂ ಬೈಕ್‌ಗಳನ್ನು ಮಾತ್ರ ನಿಲ್ಲಿಸುವುದಲ್ಲ. ಅನೇಕ ಕಡೆ ಗೂಡ್ಸ್‌ ರಿಕ್ಷಾಗಳು, ಟೆಂಪೊಗಳನ್ನು ಪಾದಚಾರಿ ಮಾರ್ಗದಲ್ಲೇ ನಿಲ್ಲಿರುತ್ತಾರೆ. ವಾಹನದ ತೂಕವನ್ನು ತಾಳಿಕೊಳ್ಳುವ ಸಾಮರ್ಥ್ಯವಿಲ್ಲದೇ ಅನೇಕ ಕಡೆ ಪಾದಚಾರಿ ಮಾರ್ಗದ ಕಲ್ಲು ಹಾಸು, ಟೈಲ್ಸ್‌ಗಳು ಕಿತ್ತುಹೋದ ಉದಾಹರಣೆಗಳೂ ಇವೆ.

ನಿರ್ವಹಣೆ ಕಡೆಗಣನೆ

ಸುಸಜ್ಜಿತ ಪಾದಚಾರಿ ಮಾರ್ಗಗಳನ್ನು ನಿರ್ಮಿಸಲು ಕೋಟಿಗಟ್ಟಲೆ ವೆಚ್ಚ ಮಾಡುವ ಬಿಬಿಎಂಪಿ ಅವುಗಳ ನಿರ್ವಹಣೆ ಬಗ್ಗೆ ಎಳ್ಳಿನಿತೂ ಕಾಳಜಿ ವಹಿಸುತ್ತಿಲ್ಲ. ಟೆಂಡರ್‌ಶ್ಯೂರ್‌ ಮಾದರಿಯಲ್ಲಿ ನಿರ್ಮಿಸಿರುವ ಪಾದಚಾರಿ ಮಾರ್ಗಗಳ ಟೈಲ್ಸ್‌ಗಳು ಕೆಲವೇ ತಿಂಗಳುಗಳಲ್ಲಿ ಕಿತ್ತುಹೋಗಿವೆ. ಎಂ.ಜಿ ರಸ್ತೆಯಲ್ಲಿ ವರ್ಷದ ಹಿಂದೆ ಗುಣಮಟ್ಟದ ಪಾದಚಾರಿ ಮಾರ್ಗವನ್ನು ನಿರ್ಮಿಸಲಾಗಿತ್ತು. ಅದರಲ್ಲಿ ಅನೇಕ ಕಡೆ ಟೈಲ್ಸ್‌ಗಳು ಕುಸಿದಿವೆ. ಸೇಂಟ್‌ ಮಾರ್ಕ್ಸ್ ರಸ್ತೆಯಲ್ಲಿ ನಿರ್ಮಿಸಿದ್ದ ಅಂತರರಾಷ್ಟ್ರೀಯ ಗುಣಮಟ್ಟದ ಪಾದಚಾರಿಮಾರ್ಗ ಅನೇಕ ಕಡೆದ ತಗ್ಗುಗಳು ಉಂಟಾಗಿವೆ.

ಪಾದಚಾರಿಗಳಿಗೆ ‘ರಾಜ ಮಾರ್ಗ’

ನಗರದಲ್ಲಿ ‘ಟೆಂಡರ್‌ ಶ್ಯೂರ್‌’ ಯೋಜನೆಯಡಿ ನಿರ್ಮಿಸಿರುವ ರಸ್ತೆಗಳ ಪಾದಚಾರಿ ಮಾರ್ಗಗಳು ಸುಸಜ್ಜಿತ ವ್ಯವಸ್ಥೆಯನ್ನು ಹೊಂದಿವೆ. ಇವು ಒಂದು ರೀತಿ ಪಾದಚಾರಿಗಳ ಪಾಲಿಗೆ ರಾಜ ಮಾರ್ಗಗಳಿದ್ದಂತೆ.

‘111.5 ಕಿ.ಮೀ ಉದ್ದದ ಪಾದಚಾರಿ ಮಾರ್ಗವನ್ನು ಟೆಂಡರ್‌ಶ್ಯೂರ್‌ ಯೋಜನೆ ಅಡಿ ಅಭಿವೃದ್ಧಿಪಡಿಸಲಾಗಿದೆ. ಸ್ಮಾರ್ಟ್‌ ಸಿಟಿ ಯೋಜನೆಯಡಿ ಮತ್ತೆ 34 ಕಿ.ಮೀ ಉದ್ದದ ಫುಟ್‌ಪಾತ್‌ ಅಭಿವೃದ್ಧಿಗೊಳ್ಳಲಿವೆ. ಅಲ್ಲದೇ, ವೈಟ್‌ಟಾಪಿಂಗ್‌ ನಡೆಸುವ ರಸ್ತೆಗಳ ಪಾದಚಾರಿ ಮಾರ್ಗಗಳನ್ನೂ ಟೆಂಡರ್‌ಶ್ಯೂರ್‌ ಮಾದರಿಯಲ್ಲೇ ಅಭಿವೃದ್ಧಿಪಡಿಸಲಾಗುತ್ತದೆ. ಒಟ್ಟು 312 ಕಿ.ಮೀ ಉದ್ದದ ಪಾದಚಾರಿ ಮಾರ್ಗಗಲು ಮೇಲ್ದರ್ಜೆಗೇರಲಿವೆ’ ಎಂದು ಪಾಲಿಕೆಯ ಯೋಜನಾ ವಿಭಾಗ ಮುಖ್ಯ ಎಂಜಿನಿಯರ್‌ ಕೆ.ಟಿ.ನಾಗರಾಜ್‌ ಮಾಹಿತಿ ನೀಡಿದರು.

ಮೆಟ್ರೊ ಸಂಪರ್ಕಕ್ಕೆ ಉತ್ತಮ ಪಾದಚಾರಿ ಮಾರ್ಗ

ಮೆಟ್ರೊ ನಿಲ್ದಾಣವನ್ನು ಸಂಪರ್ಕಿಸುವ ರಸ್ತೆಗಳ ಇಕ್ಕೆಲಗಳಲ್ಲಿನ ಪಾದಚಾರಿ ಮಾರ್ಗಗಳನ್ನು ಅಭಿವೃದ್ಧಿಪಡಿಸಲು ಬಿಬಿಎಂಪಿ ಮುಂದಾಗಿದೆ.

‘ಒಟ್ಟು 13 ಮೆಟ್ರೊ ನಿಲ್ದಾಣಗಳ ಬಳಿಯ ಪಾದಚಾರಿ ಮಾರ್ಗಗಳನ್ನು ನಾವು ಅಭಿವೃದ್ಧಿಪಡಿಸಲಿದ್ದೇವೆ. ಮೊದಲ ಹಂತದಲ್ಲಿ 20.98 ಕಿ.ಮೀ ಉದ್ದದ ಪಾದಚಾರಿ ಮಾರ್ಗ ಹಾಗೂ ಎರಡನೇ ಹಂತದಲ್ಲಿ 25.78 ಕಿ.ಮೀ ಉದ್ದದ ಪಾದಚಾರಿ ಮಾರ್ಗಗಳ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಿದ್ದೇವೆ. ಸೈಕಲ್‌ ಸವಾರರಿಗಾಗಿ ಒಟ್ಟು 46.9 ಕಿ.ಮೀ ಉದ್ದದ ಪಥವನ್ನೂ ನಿರ್ಮಿಸಲಿದ್ದೇವೆ. ಈ ಮೊದಲ ಹಂತದ ಯೋಜನೆಗೆ ₹ 55 ಕೋಟಿ ಹಾಗೂ ಎರಡನೇ ಹಂತಕ್ಕೆ ₹ 29 ಕೋಟಿ ಮಂಜೂರಾಗಿದೆ’ ಎಂದು ಬಿಬಿಎಂಪಿಯ ಕಾರ್ಯಪಾಲಕ ಎಂಜಿನಿಯರ್‌ ಶ್ರೀನಿವಾಸ್‌ ತಿಳಿಸಿದರು.

***

‘ಜನಸ್ನೇಹಿಯಾಗಿಲ್ಲ ವಿನ್ಯಾಸ’

ಪಾದಚಾರಿಗಳ ಬಗ್ಗೆ ಜನರಲ್ಲಿ ತಪ್ಪು ಕಲ್ಪನೆ ಇದೆ. ಕಾರಿನಲ್ಲಿ ಸಂಚರಿಸುವವರು, ಮೆಟ್ರೊ ಪ್ರಯಾಣಿಕರು, ಸೈಕಲ್‌ ಸವಾರರು, ಬಸ್‌, ಟ್ಯಾಕ್ಸಿ, ರಿಕ್ಷಾಗಳಂತಹ ಸಾರ್ವಜನಿಕ ವಾಹನಗಳಲ್ಲಿ ಓಡಾಡುವವರೆಲ್ಲರೂ ತಮ್ಮ ಪ್ರಯಾಣದ ಆರಂಭಿಕ ಅಥವಾ ಅಂತಿಮ ಹಂತದಲ್ಲಿ ಪಾದಚಾರಿ ಮಾರ್ಗವನ್ನು ಬಳಸುತ್ತಾರೆ. ಹಾಗಾಗಿ ನಗರದ ಅಷ್ಟೂ ಜನರೂ ಒಂದಲ್ಲ ಒಂದು ರೀತಿ ಫುಟ್‌ಪಾತ್‌ ಬಳಕೆದಾರರೇ.

ನಗರದ ಅಷ್ಟೂ ನಿವಾಸಿಗಳು ಬಳಸುವ ಪಾದಚಾರಿ ಮಾರ್ಗದ ಬಗ್ಗೆ ಸರ್ಕಾರ ಆದ್ಯತೆ ನೀಡಿದೆಯೇ? ಖಂಡಿತಾ ಇಲ್ಲ. ನಗರದ ಫುಟ್‌ಪಾತ್‌ಗಳನ್ನು ಭಾರತೀಯ ರಸ್ತೆ ಕಾಂಗ್ರೆಸ್‌ (ಐಆರ್‌ಸಿ) ಮಾನದಂಡಗಳಂತೆಯೇ ವಿನ್ಯಾಸಗೊಳಿಸಲಾಗುತ್ತಿದೆ ಎಂದು ಬಿಬಿಎಂಪಿ ಹೇಳಿಕೊಳ್ಳುತ್ತದೆ. ಆದರೆ, ವಾಸ್ತವವೇ ಬೇರೆ. ನಗರದ ಪಾದಚಾರಿ ಮಾರ್ಗಗಳ ವಿನ್ಯಾಸ ನಡೆಯುವವರಿಗೆ ಅನುಕೂಲಕರವಾಗಿಯೇ ಇಲ್ಲ. ಅವು ಒಂದೇ ಮಟ್ಟದಲ್ಲೂ ಇಲ್ಲ. ನೂರಿನ್ನೂರು ಮೀಟರ್‌ ನಡೆಯುವಷ್ಟರಲ್ಲಿ ಹತ್ತಾರು ಬಾರಿ ಹತ್ತಿಳಿಯಬೇಕಾದ ಸ್ಥಿತಿ ಇದೆ.

ಸಧೃಡರು ಹಾಗೂ ಆರೋಗ್ಯವಂತರನ್ನು ಗಮನದಲ್ಲಿಟ್ಟುಕೊಂಡು ಪಾದಚಾರಿ ಮಾರ್ಗದ ವಿನ್ಯಾಸ ಮಾಡಲಾಗುತ್ತಿದೆ. ಮಕ್ಕಳು, ವೃದ್ಧರು, ಅಂಗವಿಕಲರು, ಆರೋಗ್ಯ ಸಮಸ್ಯೆ ಇರುವವರೆಲ್ಲರೂ ಅನಾಯಾಸವಾಗಿ ಬಳಸುವಂತೆ ಪಾದಚಾರಿ ಮಾರ್ಗಗಳನ್ನು ವಿನ್ಯಾಸಗೊಳಿಸಿಲ್ಲ. ಮಲ್ಲೇಶ್ವರದಂತಹ ಅಭಿವೃದ್ಧಿ ಹೊಂದಿದ ಪ್ರದೇಶದಲ್ಲೇ ಅರ್ಧ ಕಿ.ಮೀ. ನಡೆಯುವಷ್ಟರಲ್ಲಿ ಮೇಲೆ ಕೆಳಗೆ ಹತ್ತಿ ಇಳಿದು ಕಾಲುನೋವು ಬರುವಂತಹ ಪರಿಸ್ಥಿತಿ ಇದೆ.

***

ನಮ್ಮ ಅಧಿಕಾರಿಗಳು ರಸ್ತೆ ಮತ್ತಿತರ ದೊಡ್ಡ ಕಾಮಗಾರಿಗಳ ಗುಣಮಟ್ಟದ ಬಗ್ಗೆ ನೀಡುವಷ್ಟು ಮಹತ್ವವನ್ನು ಫುಟ್‌ಪಾತ್‌ ನಿರ್ಮಾಣದ ಬಗ್ಗೆ ತೋರಿಸುತ್ತಿಲ್ಲ. ಪಾದಚಾರಿ ಮಾರ್ಗದ ವೈಜ್ಞಾನಿಕ ವಿನ್ಯಾಸ ಹೇಗಿರಬೇಕು ಎಂಬ ಬಗ್ಗೆ ಇವುಗಳನ್ನು ನಿರ್ಮಿಸುವ ಮೇಸ್ತ್ರಿಗಳು ಹಾಗೂ ಗುತ್ತಿಗೆದಾರರಲ್ಲಿ ಅರಿವು ಮೂಡಿಸಬೇಕಾದ ಅಗತ್ಯ ಇದೆ.

- ಎಚ್‌.ಎಸ್‌.ಸುಧೀರ, ನಿರ್ದೇಶಕರು, ಗುಬ್ಬಿಲ್ಯಾಬ್ಸ್‌

ನಗರದಲ್ಲಿ ವಾಹನ ಸವಾರರಿಗೆ ಸರ್ಕಾರ ಮಟ್ಟಸವಾದ ರಸ್ತೆಯನ್ನು ನಿರ್ಮಿಸಿಕೊಡುವ ಸರ್ಕಾರ ಈಗಲೂ ಅತಿ ಹೆಚ್ಚು ಸಂಖ್ಯೆಯ ಬಳಕೆದಾರರನ್ನು ಹೊಂದಿರುವ ಪಾದಚಾರಿ ಮಾರ್ಗಗಳ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯವಹಿಸಿದೆ. ಪಾದಚಾರಿಗಳು ರಸ್ತೆ ದಾಟುವುದಕ್ಕೆ ನೆರವಾಗಲು ಪೆಲಿಕಾನ್‌ ದೀಪಗಳನ್ನು ಅಳವಡಿಸುವುದೇ ವೈಜ್ಞಾನಿಕ ಮಾರ್ಗ. ಆದರೆ ಅನೇಕ ಕಡೆ ಇವು ಕಾರ್ಯನಿರ್ವಹಿಸುತ್ತಲೇ ಇಲ್ಲ. ಬೀದಿ ವ್ಯಾಪಾರಿಗಳು ಹಾಗೂ ಪಾದಚಾರಿಗಳ ನಡುವೆ ಉತ್ತಮ ನಂಟಿದೆ. ಅವರು ಇರುವ ಕಡೆ ಸುರಕ್ಷತೆ ಹೆಚ್ಚು. ಅವರಿಗೂ ಅನುಕೂಲವಾಗುವಂತೆ ಪಾದಚಾರಿ ಮಾರ್ಗವನ್ನು ರೂಪಿಸಬೇಕು.

-ಶಹೀನ್‌, ಸಾಮಾಜಿಕ ಕಾರ್ಯಕರ್ತೆ

ನಗರದ ಬಹುತೇಕ ಕಡೆ ಫುಟ್‌ಪಾತ್‌ಗಳು ಹದಗೆಟ್ಟಿವೆ. ಅವುಗಳಲ್ಲಿ ನಿರಂತರತೆ ಇಲ್ಲ. ಪಾದಚಾರಿಗಳು ರಸ್ತೆ ದಾಟಲು ಹರಸಾಹಸಪಡಬೇಕಾದ ಪರಿಸ್ಥಿತಿ ಇದೆ. ಶರವೇಗದಲ್ಲಿ ಸಾಗಿ ಬರುವ ವಾಹನಗಳು ಭೀತಿ ಹುಟ್ಟುವಂತೆ ಮಾಡುತ್ತವೆ. ನಮ್ಮಂತಹ ವೃದ್ಧರ ಪರಿಸ್ಥಿತಿ ಹೇಳಿ ಪ್ರಯೋಜನ ಇಲ್ಲ. ಪಾದಚಾರಿಗಳು ನಿರಾತಂಕವಾಗಿ ರಸ್ತೆ ದಾಟುವುದಕ್ಕೆ ಜಾಗ ಗೊತ್ತುಪಡಿಸಬೇಕು. ಅಲ್ಲಿ ಸಂಚಾರ ದೀಪಗಳನ್ನು ಆದ್ಯತೆ ಮೇರೆಗೆ ಅಳವಡಿಸಬೇಕು.

-ಆನಂದ ಶಿರೂರು, ಮಲ್ಲೇಶ್ವರ ನಿವಾಸಿ

ಅನೇಕ ಕಡೆ ಸ್ಕೈವಾಕ್‌ಗಳು ಪಾದಚಾರಿ ಮಾರ್ಗವನ್ನೇ ಆಕ್ರಮಿಸಿವೆ. ಜನ ನಡೆದು ಹೋಗುವುದಕ್ಕೆ ಅವು ತೊಡಕು ಉಂಟು ಮಾಡುತ್ತಿವೆ. ಇದಕ್ಕೆ ಉದಾಹರಣೆ ಬಸವೇಶ್ವರ ವೃತ್ತದ ಬಳಿಯ ಸುರಂಗ ಮಾರ್ಗ. ಬಹುತೇಖ ಸ್ಕೈವಾಕ್‌ಗಳನ್ನು ಜನ ಬಳಸುವುದೇ ಇಲ್ಲ. ಆದರೂ ಇವುಗಳನ್ನೇಕೆ ನಿರ್ಮಿಸುತ್ತಾರೆ ಗೊತ್ತಿಲ್ಲ.

–ಮಹಾಲಕ್ಷ್ಮಿ ಪಾರ್ಥಸಾರಥಿ, ಪರಿಸರ ಕಾರ್ಯಕರ್ತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT