ಮಂಗಳವಾರ, ಸೆಪ್ಟೆಂಬರ್ 28, 2021
20 °C
ಮೈಕೊ ಲೇಔಟ್ ಪೊಲೀಸರಿಂದ ನಾಲ್ವರು ಆರೋಪಿಗಳ ಬಂಧನ

ಗುರಾಯಿಸಿದ್ದಕ್ಕೆ ಗೋಡೆಗೆ ತಲೆ ಗುದ್ದಿಸಿ ಕೊಂದರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ತಮ್ಮನ್ನು ಗುರಾಯಿಸಿದ್ದ ಎಂಬ ಕಾರಣಕ್ಕೆ ಬಿಯರ್ ಬಾಟಲಿಗಳಿಂದ ಮುಖಕ್ಕೆ ಹೊಡೆದು, ಗೋಡೆಗೆ ತಲೆ ಗುದ್ದಿಸಿ ಮಂಜುನಾಥ್ (24) ಎಂಬಾತನನ್ನು ಕೊಲೆ ಮಾಡಿದ್ದ ನಾಲ್ವರು ಅರೋಪಿಗಳು ಮೈಕೊ ಲೇಔಟ್ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಬಿಳೇಕಹಳ್ಳಿಯ ಮಧು, ನಂದ, ಅರ್ಜುನ್ ಹಾಗೂ ಹೇಮಂತ್ ಬಂಧಿತರು. ಆರೋಪಿಗಳು ಏ.25 ರಂದು ಮಂಜುನಾಥ್‌ ಮೇಲೆ ಹಲ್ಲೆ ನಡೆಸಿದ್ದರು. ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಆತ, ಏ.27ರಂದು ಕೊನೆಯುಸಿರೆಳೆದಿದ್ದ.

ಮತ್ತು ತಂದ ಆಪತ್ತು: ಮೃತ ಮಂಜುನಾಥ್ ಕೂಡ ಅಪರಾಧ ಹಿನ್ನೆಲೆ ವುಳ್ಳವ. 2007ರಲ್ಲಿ ಖಾಸಗಿ ಕಂಪನಿ ಉದ್ಯೋಗಿಗೆ ಚಾಕುವಿನಿಂದ ಇರಿದು ಮೊಬೈಲ್ ದೋಚಿದ್ದ. ಮೈಕೊಲೇಔಟ್‌ ಠಾಣೆಯ ಎಂಒಬಿ ಪಟ್ಟಿಗೆ (ಕ್ರಿಮಿನಲ್) ಈತನ ಹೆಸರು ಸೇರಿಸಲಾಗಿತ್ತು.

ಏ.25ರ ಸಂಜೆ ಮಂಜುನಾಥ್ ತನ್ನ ಸ್ನೇಹಿತ ಜಗನ್ನಾಥ್‌ನ ಜತೆ ಮದ್ಯಪಾನ ಮಾಡಲು ಮನೆ ಸಮೀಪದ ಪಾಳು ಕಟ್ಟಡಕ್ಕೆ ಹೋಗಿದ್ದ. ಆಗ ಅಲ್ಲೇ ಇದ್ದ ಆರೋಪಿಗಳು, ‘15 ದಿನಗಳ ಹಿಂದೆ ಬಾರ್‌ನಲ್ಲಿ ನಮಗೆ ಗುರಾಯಿಸಿದ್ದು ನೀನೇ ಅಲ್ವಾ’ ಎಂದು ಗಲಾಟೆ ಶುರು ಮಾಡಿದ್ದರು. ಪರಸ್ಪರರ ನಡುವೆ ವಾಗ್ವಾದ ನಡೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಈ ಹಂತದಲ್ಲಿ ಮಂಜುನಾಥ್‌ಗೆ ಮನಸೋ ಇಚ್ಛೆ ಥಳಿಸಿದ್ದ ಅರೋಪಿಗಳು, ನಂತರ ತಲೆಯನ್ನು ಗೋಡೆಗೆ ಗುದ್ದಿಸಿದ್ದರು. ಅವರ ಆರ್ಭಟ ನೋಡಿ ಬೆಚ್ಚಿಬಿದ್ದ ಜಗನ್ನಾಥ್, ಕೂಡಲೇ ಪೊಲೀಸ್ ನಿಯಂತ್ರಣ ಕೊಠಡಿಗೆ ತಿಳಿಸಿದ್ದ.

ಹೊಯ್ಸಳ ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಆರೋಪಿಗಳು ಹೊರಟು ಹೋಗಿದ್ದರು. ಆ ಕಟ್ಟಡದಲ್ಲಿ ಮಂಜುನಾಥ್‌ ಹಾಗೂ ಜಗನ್ನಾಥ್ ಕೂಡ ಇರಲಿಲ್ಲ. ವಿಚಾರಿಸಲು ಪೊಲೀ ಸರು ಕರೆ ಮಾಡಿದಾಗ, ‘ನನಗೆ ಭಯವಾ ಯಿತು. ಹಾಗಾಗಿ, ಮನೆಗೆ ಹೊರಟು ಬಂದೆ’ ಎಂದು ಜಗನ್ನಾಥ್ ಪ್ರತಿಕ್ರಿಯಿಸಿದ್ದ. ಕುಡಿದ ಮತ್ತಿನಲ್ಲಿ ಕಿತ್ತಾಡಿಕೊಂಡಿರುತ್ತಾರೆ ಎಂದು ಪೊಲೀಸರೂ ಸುಮ್ಮನಾಗಿದ್ದರು.

ಕುಟುಂಬಕ್ಕೂ ಹೇಳಲಿಲ್ಲ: ‘ತಲೆ ಯಿಂದ ರಕ್ತ ಸೋರುತ್ತಿದ್ದ ಕಾರಣ ಮಂಜುನಾಥ್‌ನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದೆ. ಗಲಾಟೆ ವಿಚಾರ ಗೊತ್ತಾದರೆ ಆತನ ಪೋಷಕರು ಗಾಬರಿ ಬೀಳುತ್ತಾರೆಂದು ಅಸಲಿ ವಿಷಯ ಅವರಿಗೆ ತಿಳಿಸಿರಲಿಲ್ಲ. ಕುಡಿದು ರಸ್ತೆಯಲ್ಲಿ ಬಿದ್ದಿದ್ದ ಎಂದಷ್ಟೇ ಹೇಳಿ ಹೊರಟು ಹೋಗಿದ್ದೆ’ ಎಂದು ಜಗನ್ನಾಥ್ ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದಾನೆ. 

ಏ.27ರಂದು ಆತ ಮೃತಪಟ್ಟ ನಂತರ ಆಸ್ಪತ್ರೆಯಿಂದ ಮೈಕೊಲೇಔಟ್ ಠಾಣೆಗೆ ಮೆಮೊ ಹೋಗಿತ್ತು. ಪೊಲೀಸರು ಆಸ್ಪತ್ರೆಗೆ ಹೋಗಿ ಕುಟುಂಬ ಸದಸ್ಯರನ್ನು ವಿಚಾರಣೆ ನಡೆಸಿದಾಗಲೂ, ‘ಮಗ ಕುಡಿದು ರಸ್ತೆಯಲ್ಲಿ ಬಿದ್ದಿದ್ದನಂತೆ. ಕಲ್ಲು ತಲೆಗೆ ಬಡಿದು ಮೃತಪಟ್ಟಿದ್ದಾನೆ’ ಎಂದೇ ಹೇಳಿದ್ದರು. ಆದರೆ, 2 ದಿನಗಳ ಹಿಂದಷ್ಟೇ ಮಂಜುನಾಥ್ ಗಲಾಟೆ ಮಾಡಿಕೊಂಡಿದ್ದ ವಿಚಾರ ಗೊತ್ತಿದ್ದ ಪೊಲೀಸರು, ಸಂಶಯಾಸ್ಪದ ಸಾವು (ಐಪಿಸಿ 174ಸಿ) ಪ್ರಕರಣ ದಾಖಲಿಸಿ ತನಿಖೆ ಪ್ರಾರಂಭಿಸಿದ್ದರು.

ಜಗನ್ನಾಥ್ ಸತ್ಯ ಬಾಯ್ಬಿಟ್ಟ

ಸ್ನೇಹಿತನನ್ನು ಆಸ್ಪತ್ರೆಗೆ ದಾಖಲಿಸಿದ ನಂತರ ಜಗನ್ನಾಥ್‌ನ ಮೊಬೈಲ್ ಸ್ವಿಚ್ಡ್‌ಆಫ್ ಆಗಿತ್ತು. ‍ಪೊಲೀಸರು ಅನುಮಾನದ ಮೇಲೆ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆ ದಿನ ನಿರ್ಮಾಣ ಹಂತದ ಕಟ್ಟಡದಲ್ಲಿ ನಡೆದ ಘಟನೆಯನ್ನು ಎಳೆಎಳೆಯಾಗಿ ವಿವರಿಸಿದ್ದ. ಹಲ್ಲೆ ನಡೆಸಿದ್ದ ಎಲ್ಲರ ಹೆಸರುಗಳನ್ನೂ ಬಾಯ್ಬಿಟ್ಟಿದ್ದ. ನಂತರ ಪೊಲೀಸರು ಕರೆ ವಿವರದ (ಸಿಡಿಆರ್) ಸುಳಿವು ಆಧರಿಸಿ ಒಬ್ಬೊಬ್ಬರನ್ನೇ ಬಂಧಿಸಿದರು.

‘ಈ ಪ್ರಕರಣದಲ್ಲಿ ಜಗನ್ನಾಥ್‌ನ ಪಾತ್ರವಿಲ್ಲ. ತನಿಖೆಗೆ ಹೆದರಿ ಆತ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದ’ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು