ತಪಾಸಣೆ: ₹95 ಸಾವಿರ ದಂಡ, 13 ಅಂಗಡಿ ಮುಚ್ಚಿಸಿದ ಬಿಬಿಎಂಪಿ ಅಧಿಕಾರಿಗಳು

7

ತಪಾಸಣೆ: ₹95 ಸಾವಿರ ದಂಡ, 13 ಅಂಗಡಿ ಮುಚ್ಚಿಸಿದ ಬಿಬಿಎಂಪಿ ಅಧಿಕಾರಿಗಳು

Published:
Updated:

ಬೆಂಗಳೂರು: ಬಿಬಿಎಂಪಿ ಅಧಿಕಾರಿಗಳು ಗುರುವಾರವೂ ವಾಣಿಜ್ಯ ಮಳಿಗೆಗಳ ಮೇಲೆ ದಾಳಿ ಮುಂದುವರಿಸಿದ್ದಾರೆ. ರಾಜಾಜಿನಗರದ ಡಾ.ರಾಜ್‌ಕುಮಾರ್‌ ರಸ್ತೆ ಬಳಿಯಲ್ಲಿ ನಾಲ್ಕು ಹೋಟೆಲ್‌ಗಳು ಹಾಗೂ 13 ಮಳಿಗೆಗಳನ್ನು ಮುಚ್ಚಿಸಲು ಕ್ರಮ ಕೈಗೊಂಡಿದ್ದಲ್ಲದೇ ಒಟ್ಟು ₹ 95 ಸಾವಿರ ದಂಡ ವಿಧಿಸಿದ್ದಾರೆ.

ಉದ್ದಿಮೆ ಪರವಾನಗಿ ಪಡೆಯದೆಯೇ ಕಾರ್ಯನಿರ್ವಹಿಸುತ್ತಿರುವ ಹಾಗೂ ವಸತಿ ಪ್ರದೇಶದಲ್ಲಿರುವ ವಾಣಿಜ್ಯ ಮಳಿಗೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೆಂಗಳೂರು ಅಭಿವೃದ್ಧಿ ಸಚಿವ ಜಿ.ಪರಮೇಶ್ವರ ಅವರು ಮಂಗಳವಾರ ಸೂಚನೆ ನೀಡಿದ್ದರು. ಆ ಬಳಿಕ ಪಾಲಿಕೆ ವಾಣಿಜ್ಯ ಮಳಿಗೆಗಳ ಮೇಲೆ ದಾಳಿ ಆರಂಭಿಸಿತ್ತು. ಪಾಲಿಕೆಯ ಪಶ್ಚಿಮ ವಲಯದ ಆರೋಗ್ಯ ವಿಭಾಗದ ಅಧಿಕಾರಿಗಳು ಡಾ.ರಾಜ್‌ಕುಮಾರ್ ರಸ್ತೆ ಆಸುಪಾಸಿನ ವಾಣಿಜ್ಯ ಮಳಿಗೆಗಳಿಗೆ ದಿಢೀರ್‌ ಭೇಟಿ ನೀಡಿ ತಪಾಸಣೆ ನಡೆಸಿದರು.

‘ಮೂರು ಹೋಟೆಲ್‌ಗಳು ನಿಯಮ ಉಲ್ಲಂಘಿಸಿದ್ದು ಕಂಡು ಬಂತು. ‘ಕೆಫೆ ಕಾಫಿ’ ಹಾಗೂ ಸುಖ್‌ಸಾಗರ್‌ ಹೋಟೆಲ್‌ನಲ್ಲಿ ನಿಷೇಧಿತ ಪ್ಲಾಸ್ಟಿಕ್‌ ಬಳಸುತ್ತಿದ್ದರು. ಅವರಿಗೆ ತಲಾ ₹ 25 ಸಾವಿರ ದಂಡ ವಿಧಿಸಿದ್ದೇವೆ. ಆನ್‌ಲೈನ್‌ ಮೂಲಕ ಆಹಾರದ ವಹಿವಾಟು ನಡೆಸುವ ‘ಫ್ರೆಷ್‌ ಮೆನು’ ಎಂಬ ಸಂಸ್ಥೆಯು ಅಡುಗೆ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಂಡಿರಲಿಲ್ಲ. ಅವರಿಗೆ ₹ 10 ಸಾವಿರ ದಂಡ ವಿಧಿಸಿದ್ದೇವೆ’ ಎಂದು ಪಶ್ಚಿಮ ವಲಯದ ಆರೋಗ್ಯಾಧಿಕಾರಿ ಬಾಲಚಂದರ್‌ ಎ.ಎಸ್‌. ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿದ್ದ ಹ್ಯುಂಡೈ ಶೋರೂಮ್‌ಗೆ ₹ 10 ಸಾವಿರ ದಂಡ ವಿಧಿಸಿದ್ದೇವೆ. ಸೂಪರ್‌ ಫಾಸ್ಟ್‌ ಫುಡ್‌ ಹೋಟೆಲ್‌ ನಿಷೇಧಿತ ಪ್ಲಾಸ್ಟಿಕ್‌ ಬಳಸಿದ್ದಲ್ಲದೇ ಪಾದಚಾರಿ ಮಾರ್ಗವನ್ನೂ ಅತಿಕ್ರಮಣ ಮಾಡಿಕೊಂಡಿತ್ತು. ಅವರಿಗೂ ₹ 25 ಸಾವಿರ ದಂಡ ಹಾಕಿದ್ದೇವೆ’ ಎಂದರು.

**

ತಳಮಹಡಿಯಲ್ಲಿದ್ದ 3 ಮಳಿಗೆ ವಿರುದ್ಧ ಕ್ರಮ
ನೆಲಮಹಡಿಯಲ್ಲಿ (ಸೆಲ್ಲಾರ್‌) ಕಾರ್ಯನಿರ್ವಹಿಸುತ್ತಿದ್ದ ಮೂರು ಮಳಿಗೆಗಳನ್ನೂ ಪಾಲಿಕೆ ಅಧಿಕಾರಿಗಳು ಮುಚ್ಚಿಸಿದ್ದಾರೆ.

‘ಇಂಡಿಗೊ ಡಿಜಿಟಲ್ಸ್‌, ರಾಯಲ್‌ ಎನ್‌ಫೀಲ್ಡ್‌ ಬೈಕ್ ಶೋರೂಂ, ಪೈ ಸೇಲ್ಸ್‌ ಪೀಠೋಪಕರಣ ಮಳಿಗೆಗಳು ತಳಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ರಾಯಲ್‌ ಎನ್‌ಫೀಲ್ಡ್‌ ಶೋರೂಂನವರು ಉದ್ದಿಮೆ ಪರವಾನಗಿಯನ್ನೂ ನಮಗೆ ತೋರಿಸಿಲ್ಲ’ ಎಂದು ಬಾಲಚಂದರ್‌ ತಿಳಿಸಿದರು.

**

ಪರವಾನಗಿ ಇರಲಿಲ್ಲ
13 ಮಳಿಗೆಗಳು ಉದ್ದಿಮೆ ಪರವಾನಗಿಯನ್ನೇ ಹೊಂದಿಲ್ಲದಿರುವುದು ದಿಢೀರ್‌ ತಪಾಸಣೆಯ ವೇಳೆ ಕಂಡು ಬಂತು. ಅವುಗಳ ವಿವರ ಹೀಗಿದೆ: ಮಹದೇವನ್‌ ಎಂಟರ್‌ಪ್ರೈಸಸ್‌, ಜಿ.ಕೆ. ಗ್ಲಾಸ್‌ ಆ್ಯಂಡ್‌ ಪ್ಲೈವುಡ್‌, ಪಾನಿ ವೆಡ್ಸ್‌ ಪೂರಿ ಚಾಟ್ಸ್‌, ಹಿಂದೂಸ್ತಾನ್‌ ಕಾರ್‌ ಎ.ಸಿ, ಆರ್ಕಿಡ್ ಎಂಟರ್‌ಪ್ರೈಸಸ್‌, ಪಾಪ್ಯುಲರ್‌ ಟಯರ್ಸ್‌, ಡೆಕೊರೆನಾ, ಉಷಾ ಡಿಜಿಟಲ್‌ ಪ್ರಿಂಟ್ಸ್‌, ಎಕ್ಸೈಡ್‌, ಆಟೊಮೊಬೈಲ್‌ ಶಾಪ್‌, ಗ್ಯಾಸ್‌ವೆಲ್ಡಿಂಗ್‌ ಶಾಪ್‌, ಶಬಾನಿ ಆಯಿಲ್‌ ಸ್ಟೋರ್‌.

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !