ಮಂಗಳವಾರ, ಆಗಸ್ಟ್ 3, 2021
20 °C
ಅತಿ ಹೆಚ್ಚು ಪ್ರಕರಣಗಳು ಬೆಂಗಳೂರಿನಲ್ಲಿ ದಾಖಲು: ಸಾವಿನ ಸಂಖ್ಯೆಗೆ ಕಡಿವಾಣ ಹಾಕಿದ ಮಹಾನಗರ ಪಾಲಿಕೆ

ಎಚ್‌1ಎನ್‌1 ನಿಯಂತ್ರಣಕ್ಕೆ ಪಿಎಚ್‌ಇಸಿ ಮದ್ದು

ಮಾನಸ ಬಿ.ಆರ್. Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಅತಿಹೆಚ್ಚು ಎಚ್‌1ಎನ್‌1 ಪ್ರಕರಣಗಳು ನಗರದಲ್ಲೇ ದಾಖಲಾಗಿದ್ದರೂ ಇಂತಹ ಪ್ರಕರಣಗಳಲ್ಲಿ ಸಾವಿಗೆ ಕಡಿವಾಣ ಹಾಕುವಲ್ಲಿ ಬಿಬಿಎಂಪಿ ಅಗ್ರಸ್ಥಾನದಲ್ಲಿದೆ. ಇದು ಹೇಗೆ ಸಾಧ್ಯವಾಯ್ತು ಎನ್ನುವ ಪ್ರಶ್ನೆಯೇ? ಪಾಲಿಕೆಯ ಪಿಎಚ್‌ಇಸಿ ವ್ಯವಸ್ಥೆ ಇದಕ್ಕೆ ಪ್ರಮುಖ ಕಾರಣವಾಗಿದೆ.

ಈ ವರ್ಷ ಜನವರಿಯಿಂದ ನವೆಂಬರ್‌ 15ರವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ 241 ಮಂದಿ ಎಚ್‌1ಎನ್‌1ಗೆ ಗುರಿಯಾಗಿದ್ದಾರೆ. ಅದರಲ್ಲಿ ಒಂದು ಸಾವಷ್ಟೆ ಸಂಭವಿಸಿದೆ. ರಾಜ್ಯದ ಇತರ ಪ್ರದೇಶಗಳಲ್ಲಿ ರೋಗಿಗಳು ಕಡಿಮೆ ಇದ್ದರೂ ಸಾವಿನ ಸಂಖ್ಯೆ ಮಾತ್ರ ಹೆಚ್ಚುತ್ತಿದೆ. ಇದಕ್ಕೆ ಬಿಬಿಎಂಪಿಯ ಕಾರ್ಯವೈಖರಿ ಹಾಗೂ ಮುನ್ನೆಚ್ಚರಿಕೆ ಕ್ರಮಗಳೇ ಪ್ರಮುಖ ಕಾರಣ ಎನ್ನುತ್ತವೆ ಆರೋಗ್ಯ ಇಲಾಖೆಯ ದಾಖಲೆಗಳು.

ಏನಿದು ಪಿಎಚ್‌ಇಸಿ?: ಬಿಬಿಎಂಪಿ ವತಿಯಿಂದ 2016ರಲ್ಲಿ ಪಬ್ಲಿಕ್ ಹೆಲ್ತ್‌ ಇನ್‌ಫರ್ಮೇಶನ್‌ ಆ್ಯಂಡ್‌ ಎಪಿಡೆಮಿಯೋಲಜಿ ಸೆಲ್‌ (ಪಿಎಚ್‌ಇಸಿ) ಆರಂಭಿಸಲಾಯಿತು. ಈ ವ್ಯವಸ್ಥೆಯಲ್ಲಿ 500ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳು ಹಾಗೂ 118 ಸರ್ಕಾರಿ ಆಸ್ಪತ್ರೆಗಳು ಇದರ ವ್ಯಾಪ್ತಿಯಲ್ಲಿವೆ. ಈ ರೀತಿಯ ವ್ಯವಸ್ಥೆ ರಾಜ್ಯದ ಬೇರೆ ಯಾವುದೇ ಭಾಗಗಳಲ್ಲಿ ಇಲ್ಲ.

ಈ ವ್ಯವಸ್ಥೆ ಆನ್‌ಲೈನ್‌ ಮೂಲಕ ಕಾರ್ಯನಿರ್ವಹಿಸುತ್ತದೆ. ಆಸ್ಪತ್ರೆಗೆ ಬಂದ ರೋಗಿಗಳ ಸಂಪೂರ್ಣ ಮಾಹಿತಿಯನ್ನು ಆನ್‌ಲೈನ್‌ ಮೂಲಕ ದಾಖಲು ಮಾಡಬೇಕಾಗುತ್ತದೆ. ಇದಕ್ಕಾಗಿ ಎಲ್ಲಾ ಆಸ್ಪತ್ರೆಗಳಿಗೂ ಒಂದು ಗುರುತಿನ ಪತ್ರ ಹಾಗೂ ಸಂಖ್ಯೆಯನ್ನು ಕೊಡಲಾಗಿದೆ. ಇದರ ಮೂಲಕ ಆನ್‌ಲೈನ್‌ನಲ್ಲಿ ತೆರೆದುಕೊಳ್ಳುವ ಪಟ್ಟಿಯಲ್ಲಿ ಅವರು ಹೆಸರು, ವಿಳಾಸ, ವಯಸ್ಸು ಸೇರಿದಂತೆ ರೋಗಿಯ ಎಲ್ಲಾ ಮಾಹಿತಿಯನ್ನು ಕಡ್ಡಾಯವಾಗಿ ನಮೂದಿಸಬೇಕು.

ಪ್ರತಿದಿನ ಡೆಂಗಿ, ಚಿಕೂನ್‌ ಗುನ್ಯಾ ಸೇರಿದಂತೆ ಪ್ರಮುಖ ಸೋಂಕುಗಳಿಗೆ ಚಿಕಿತ್ಸೆ ಪಡೆದ ರೋಗಿಗಳ ಪಟ್ಟಿಯನ್ನು ಬಿಬಿಎಂಪಿ ಪಡೆದುಕೊಳ್ಳುತ್ತದೆ. ಎಚ್‌1 ಎನ್‌1 ರೋಗಿಗಳ ಮಾಹಿತಿ ಹಾಗೂ ವಿಳಾಸ ಸಹ ಸಿಗುವುದರಿಂದ ಆರೋಗ್ಯ ಕಾರ್ಯಕರ್ತರಿಗೆ ಕಾಯಿಲೆಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿದೆ. ರೋಗಿಯ ಮನೆಯ ಸುತ್ತಲಿನ ವ್ಯಾಪ್ತಿಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

 ಮೊದಲಿನ ಸ್ಥಿತಿ ಹೇಗಿತ್ತು?: ಪಿಎಚ್‌ಇಸಿ ಆರಂಭವಾಗುವ ಮೊದಲು ಯಾರೋ ಹೇಳಿದ ಪ್ರಕರಣಗಳು, ಅಥವಾ ಎಲ್ಲಿಂದಲೋ ಸಿಕ್ಕ ಮಾಹಿತಿಗಳ ಆಧಾರದ ಮೇಲೆ ರೋಗಿಗಳನ್ನು ಪತ್ತೆ ಹಚ್ಚಲಾಗುತ್ತಿತ್ತು. ಎಲ್ಲಾ ಆಸ್ಪತ್ರೆಗಳಿಗೆ ಹೋಗಿ ಆರೋಗ್ಯ ಕಾರ್ಯಕರ್ತರು ಮಾಹಿತಿ ಪಡೆಯಬೇಕಿತ್ತು. 2014ರಲ್ಲಿ ಕೇಂದ್ರ ಸರ್ಕಾರದ ಐಡಿಎಸ್‌ಪಿ (ಇಂಟಿಗ್ರೇಟೆಡ್‌ ಡಿಸೈನ್‌ ಸರ್ವೆಲೆನ್ಸ್‌ ಪ್ರಾಜೆಕ್ಟ್‌) ಮೂಲಕ ರೋಗಿಗಳನ್ನು ಪತ್ತೆ ಹಚ್ಚಲಾಗುತ್ತಿತ್ತು. ಇದನ್ನು ಕೈಯಲ್ಲಿ ಬರೆದು ಅಂಚೆ ಮೂಲಕ ಕಳಿಸಬೇಕಿತ್ತು.

ಪ್ರಕರಣ ದಾಖಲಾದ 5 ನಿಮಿಷಕ್ಕೆ ಸಂದೇಶ

‘ಪಿಎಚ್‌ಇಸಿಯಲ್ಲಿ ಹೊಸ ಪ್ರಕರಣ ದಾಖಲಾದ ಐದು ನಿಮಿಷಗಳಲ್ಲೇ ಸ್ಥಳೀಯ ಆರೋಗ್ಯ ಅಧಿಕಾರಿಗೆ ಸಂದೇಶ ಹೋಗುತ್ತದೆ. ಅವರು ತಕ್ಷಣವೇ ಕಾರ್ಯಪ್ರವೃತ್ತರಾಗುತ್ತಾರೆ. ಆಸ್ಪತ್ರೆಗೆ ಭೇಟಿ ನೀಡಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಾರೆ. ಇದರಿಂದ ಹೆಚ್ಚಿನ ಕಾಯಿಲೆಗಳು ಹಿಡಿತಕ್ಕೆ ಸಿಗಲು ಸಾಧ್ಯವಾಗಿದೆ’ ಬಿಬಿಎಂಪಿ ಮುಖ್ಯ ಆರೋಗ್ಯ ಅಧಿಕಾರಿ ಡಾ. ಮನೋರಂಜನ್ ಹೆಗ್ಡೆ ಹೇಳಿದರು.

‘ಪಿಎಚ್‌ಇಸಿ ವ್ಯವಸ್ಥೆಯೊಳಗೆ ಇನ್ನೂ ಹೆಚ್ಚಿನ ಆಸ್ಪತ್ರೆಗಳು ಕೆಲಸ ಮಾಡಬೇಕು. ಆದರೆ ಕೆಲವು ಖಾಸಗಿ ಆಸ್ಪತ್ರೆಗಳು ಆಸಕ್ತಿ ತೋರಿಸುತ್ತಿಲ್ಲ. ಸರಿಯಾಗಿ ಮಾಹಿತಿ ನೀಡುತ್ತಿಲ್ಲ. ಅಂತಹ ಆಸ್ಪತ್ರೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಬಿಬಿಎಂಪಿ ಮುಂದಾಗಿದೆ’ ಎಂದು ವಿವರಿಸಿದರು.

ಪಾಲಿಕೆ ತೆಗೆದುಕೊಂಡ ಕ್ರಮಗಳು

*ಹೊಸ ರೋಗಿಗಳ ವಿವರ ಸಿಕ್ಕ ಕೆಲವೇ ಗಂಟೆಗಳಲ್ಲಿ ಆಸ್ಪತ್ರೆಗೆ ಭೇಟಿ

*ರೋಗಿಯ ನಿವಾಸದ ಸುತ್ತ–ಮುತ್ತ 50 ಕಿ.ಮೀ ಸಮೀಕ್ಷೆ

*ಎರಡೂವರೆ ತಿಂಗಳಿಂದ ಸತತ ಕಣ್ಗಾವಲು

*ಖಾಸಗಿ ಆಸ್ಪತ್ರೆ ವೈದ್ಯರ ಸಭೆ ನಡೆಸಿ ಮಾಹಿತಿ

*ನಿರಂತರವಾಗಿ ಅಧಿಕಾರಿ ಸಭೆ

2017ರಲ್ಲಿ ಪ್ರಕರಣಗಳು

931: ಎಚ್‌1ಎನ್‌1 ರೋಗಿಗಳು

2: ಸಾವು

ಸ್ವಚ್ಛತೆ ಕೊರತೆ

‘ಪೂರ್ವ ಭಾಗದಲ್ಲಿ ಮನೆಗಳು ಇಕ್ಕಟ್ಟಾಗಿವೆ. ಲೇಔಟ್‌ಗಳು ಸಮಂಜಸವಾಗಿಲ್ಲ. ಸ್ವಚ್ಛತೆಯ ಪ್ರಮಾಣ ಕಡಿಮೆ ಇದೆ. ಅಲ್ಲದೇ ಇಲ್ಲಿ ನಾರಾಯಣ, ಮಣಿಪಾಲ್‌ ಆಸ್ಪತ್ರೆಗಳು ಇರುವುದರಿಂದ ಬೇರೆ ಭಾಗದ ರೋಗಿಗಳು ಇಲ್ಲಿಗೆ ಬಂದು ಚಿಕಿತ್ಸೆ ಪಡೆಯುತ್ತಾರೆ. ಈ ಕಾರಣದಿಂದ ಪ್ರಕರಣಗಳು ಹೆಚ್ಚಿವೆ’ ಎಂದು ಡಾ.ಮನೋರಂಜನ್ ಹೇಳಿದರು.

ಒಂದು ಸಾವು ಹೇಗೆ?

‘ಹಂಪಿನಗರದ ಆರ್‌.ಪಿ.ಸಿ ಲೇಔಟ್‌ನ 58 ವರ್ಷದ ಗುಂಡಯ್ಯ ಎಚ್‌1 ಎನ್‌1 ಕಾಯಿಲೆಪೀಡಿತರಾಗಿ ಅಕ್ಟೋಬರ್‌ 17ರಂದು ಸಾವನ್ನಪ್ಪಿದ್ದರು. ಆದರೆ ಅವರು ಮೊದಲಿಗೆ ಸೋಲೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿ ವಾಸಿಯಾಗದ ಸಂದರ್ಭದಲ್ಲಿ ಕೊನೆಯ ಹಂತದಲ್ಲಿ ನಗರದ ಆಸ್ಪತ್ರೆಗೆ ದಾಖಲಾದರು’ ಎಂದು ಮನೋರಂಜನ್ ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು