ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ತಿತ್ವದಲ್ಲಿಲ್ಲ ಪಾಲಿಕೆ ಸ್ಥಾಯಿಸಮಿತಿ!

ಅವಧಿ ಮುಗಿದರೂ ಪ್ರಕಟವಾಗಿಲ್ಲ ಚುನಾವಣಾ ವೇಳಾಪಟ್ಟಿ
Last Updated 9 ನವೆಂಬರ್ 2018, 20:40 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿಯ 12 ಸ್ಥಾಯಿ ಸಮಿತಿಗಳ ಅಧಿಕಾರಾವಧಿ ಶುಕ್ರವಾರ ಕೊನೆಗೊಂಡಿದೆ. ಹಾಗಾಗಿ ಪಾಲಿಕೆಯಲ್ಲಿ ಈಗ ಸ್ಥಾಯಿ ಸಮಿತಿಗಳೇ ಅಸ್ತಿತ್ವದಲ್ಲಿಲ್ಲ.

ಸ್ಥಾಯಿ ಸಮಿತಿಯ ಸದಸ್ಯರ ಆಯ್ಕೆಗೆ 2017ರ ನವೆಂಬರ್‌ 10ರಂದು ಚುನಾವಣೆ ನಡೆದಿತ್ತು. ಇವುಗಳ ಅವಧಿ ಪೂರ್ಣಗೊಳ್ಳುವ ಮುನ್ನವೇ ಹೊಸ ಸಮಿತಿಗಳ ಸದಸ್ಯರ ಆಯ್ಕೆಗಾಗಿ ಚುನಾವಣೆ ನಡೆಯಬೇಕಿತ್ತು. ಆದರೆ, ಚುನಾವಣಾಧಿಕಾರಿ (ಪ್ರಾದೇಶಿಕ ಆಯುಕ್ತರು) ಇನ್ನೂ ಈ ಕುರಿತು ವೇಳಾಪಟ್ಟಿಯನ್ನೇ ಪ್ರಕಟಿಸಿಲ್ಲ.

ಮತದಾನದ ದಿನಾಂಕ ನಿಗದಿಪಡಿಸುವುದಕ್ಕೆ ಕನಿಷ್ಠ ಏಳು ದಿನಗಳು ಮುಂಚಿತವಾಗಿ ಸದಸ್ಯರಿಗೆ ನೋಟಿಸ್‌ ನೀಡಬೇಕು. ಇದೇ 10ರಂದು (ಎರಡನೇ ಶನಿವಾರ) ಹಾಗೂ 11ರಂದು (ಭಾನುವಾರ) ಪಾಲಿಕೆ ಕಚೇರಿಗೆ ರಜೆ. 12ರಂದು ವೇಳಾಪಟ್ಟಿಯನ್ನು ಪ್ರಕಟಿಸಿದರೂ 19ರ ಒಳಗೆ ಮತದಾನ ನಡೆಸಲು ಸಾಧ್ಯವಾಗುವುದಿಲ್ಲ. ಅಲ್ಲಿಯವರೆಗೂ ಸ್ಥಾಯಿ ಸಮಿತಿಗಳಿಲ್ಲದೆಯೇ ಪಾಲಿಕೆ ಕಾರ್ಯ ನಿರ್ವಹಿಸಬೇಕಾಗುತ್ತದೆ.

23ಕ್ಕೆ ಮತದಾನ?:ಉಪಮೇಯರ್‌ ರಮೀಳಾ ಉಮಾಶಂಕರ್‌ ಅವರು ಅಕಾಲಿಕ ನಿಧನ ಹೊಂದಿದ್ದರಿಂದ, ಈ ಸ್ಥಾನಕ್ಕೂ ಚುನಾವಣೆ ನಡೆಯಬೇಕಿದೆ. ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆಗೆ ಹಾಗೂ ಉಪಮೇಯರ್‌ ಆಯ್ಕೆಗೆ ಒಂದೇ ದಿನ ಮತದಾನ ನಡೆಸಲಾಗುತ್ತದೆ. ಇದೇ 23ರಂದು ಮತದಾನ ನಡೆಸಲು ಸಿದ್ಧತೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

‘ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಗೆ ಹಾಗೂ ಉಪ ಮೇಯರ್ ಸ್ಥಾನಗಳಿಗೆ ಚುನಾವಣೆ ನಡೆಸುವ ಸಂಬಂಧ ಈಗಾಗಲೇ ಚುನಾವಣಾಧಿಕಾರಿ ಕಚೇರಿಗೆ ಪತ್ರ ಬರೆದಿದ್ದೇವೆ. ಆದರೆ, ಯಾವುದೇ ಉತ್ತರ ಬಂದಿಲ್ಲ’ ಎಂದು ಆಯುಕ್ತ ಮಂಜುನಾಥ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಮತದಾನದ ಹಕ್ಕನ್ನು ಹೊಂದಿರುವ ಲೋಕಸಭೆ, ರಾಜ್ಯಸಭೆ, ವಿಧಾನಸಭೆ ಮತ್ತು ವಿಧಾನ ಪರಿಷತ್‌ ಸದಸ್ಯರು ಮತದಾನಕ್ಕೆ ಹಾಜರಾಗಲು ಅನುಕೂಲಕರ ದಿನಾಂಕ ನಿಗದಿಪಡಿಸುವ ಸಲುವಾಗಿಯೇ ಚುನಾವಣೆ ಮುಂದೂಡಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.

ಪಕ್ಷೇತರರಿಗೆ ಎಷ್ಟು ಸ್ಥಾನ?: ಮೇಯರ್‌ ಚುನಾವಣೆ ವೇಳೆ ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿ ಗಂಗಾಂಬಿಕೆ ಅವರಿಗೆ ಎಸ್‌ಡಿಪಿಐ ಸದಸ್ಯ ಎ.ಮುಜಾಹಿದ್‌ ಪಾಷಾ, ಪಕ್ಷೇತರ ಸದಸ್ಯರಾದ ಸಿ.ಆರ್‌.ಲಕ್ಷ್ಮೀನಾರಾಯಣ, ಎಂ.ಚಂದ್ರಪ್ಪ ರೆಡ್ಡಿ, ವಿ.ಏಳುಮಲೈ ಹಾಗೂ ಎಂ.ಗಾಯತ್ರಿ ಅವರು ಬೆಂಬಲ ಸೂಚಿಸಿದ್ದರು. ಬಿಜೆಪಿ ಜೊತೆಯಲ್ಲಿದ್ದ ಆನಂದ ಕುಮಾರ್‌ ಅವರು ಮತದಾನಕ್ಕೆ ಇನ್ನೇನು ಕೆಲವೇ ಕ್ಷಣಗಳಿವೆ ಎನ್ನುವಾಗ ಕಾಂಗ್ರೆಸ್‌ ಜೊತೆ ಗುರುತಿಸಿಕೊಂಡಿದ್ದರು.

ಮೇಯರ್‌ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವ ಪಕ್ಷೇತರ ಸದಸ್ಯರೆಲ್ಲರಿಗೂ ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನ ನೀಡುವುದಾಗಿ ಮತದಾನದ ಮುನ್ನಾ ದಿನ ನಡೆದಿದ್ದ ಸಭೆಯಲ್ಲಿ ಕಾಂಗ್ರೆಸ್‌ ಮುಖಂಡರು ಭರವಸೆ ನೀಡಿದ್ದರು. ಆದರೆ, ಈಗ ನಾಲ್ವರು ಪಕ್ಷೇತರ ಸದಸ್ಯರಿಗೆ ಮಾತ್ರ ಈ ಬಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡಲಾಗುತ್ತದೆ ಎಂದುಕಾಂಗ್ರೆಸ್‌ನವರು ಹೇಳುತ್ತಿದ್ದಾರೆ.

‘12 ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನಗಳಿಗೆ ನಾಲ್ವರು ಪಕ್ಷೇತರರು ಹಾಗೂ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಿಂದ ತಲಾ ನಾಲ್ವರನ್ನು ಆಯ್ಕೆ ಮಾಡುವ ಬಗ್ಗೆ ಚರ್ಚೆ ನಡೆದಿದೆ. ಪಕ್ಷೇತರರೆಲ್ಲರೂ ಅಧ್ಯಕ್ಷ ಸ್ಥಾನಗಳಿಗೆ ಬಿಗಿ ಪಟ್ಟು ಹಿಡಿದರೆ, ಐವರು ಪಕ್ಷೇತರರು, ಜೆಡಿಎಸ್‌ನ ಮೂವರು ಹಾಗೂ ಕಾಂಗ್ರೆಸ್‌ನ ನಾಲ್ವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಕಾಂಗ್ರೆಸ್‌ ಮುಖಂಡಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಕೊನೆ ಕ್ಷಣದಲ್ಲಿ ಮೈತ್ರಿಕೂಟದ ಅಭ್ಯರ್ಥಿಗೆ ಬೆಂಬಲ ಸೂಚಿಸಿದ ಆನಂದ್‌ ಅವರಿಗೆ ಈ ಬಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡುವ ಸಾಧ್ಯತೆ ಕಡಿಮೆ. ಮೈತ್ರಿಕೂಟ ಜೊತೆ ಗುರುತಿಸಿಕೊಂಡಿರುವ ಪಕ್ಷೇತರ ಸದಸ್ಯರಲ್ಲಿ ಬಹುತೇಕರು ಕಳೆದ ಮೂರು ವರ್ಷಗಳ ಅವಧಿಯಲ್ಲಿ ತಲಾ ಎರಡು ಬಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ.

**

ಸ್ಪರ್ಧೆ: ಬಿಜೆಪಿ ನಡೆ ನಿಗೂಢ

ಸ್ಥಾಯಿಸಮಿತಿಗಳಿಗೆ ಇತ್ತೀಚಿನ ವರ್ಷಗಳಲ್ಲಿ ಅವಿರೋಧ ಆಯ್ಕೆ ನಡೆದಿತ್ತು. ಈ ಬಾರಿ ಸ್ಥಾಯಿ ಸಮಿತಿ ಸದಸ್ಯರ ಚುನಾವಣೆ ಜೊತೆಯಲ್ಲೇ ಉಪಮೇಯರ್‌ ಸ್ಥಾನಕ್ಕೂ ಚುನಾವಣೆ ನಡೆಯುತ್ತಿರುವುದರಿಂದ ವಿರೋಧ ಪಕ್ಷ ಬಿಜೆಪಿ ಯಾವ ತೀರ್ಮಾನ ತೆಗೆದುಕೊಳ್ಳುತ್ತದೆ ಎಂಬುದು ಕುತೂಹಲ ಕೆರಳಿಸಿದೆ.

‘ಒಂದು ವೇಳೆ ಉಪಮೇಯರ್‌ ಆಗಿ ಪಕ್ಷದ ಅಭ್ಯರ್ಥಿ ಆಯ್ಕೆಯಾದರೆ, ವಿರೋಧ ಪಕ್ಷದಲ್ಲಿ ಕುಳಿತು ಪಾಲಿಕೆಯ ಕಾರ್ಯವೈಖರಿಯನ್ನು ಪ್ರಶ್ನಿಸಲು ಸಾಧ್ಯವಾಗುವುದಿಲ್ಲ. ಅದಕ್ಕಿಂತ ಚುನಾವಣೆಯನ್ನು ಬಹಿಷ್ಕರಿಸುವುದೇ ಲೇಸು. ಸಮರ್ಥ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸುವುದರಿಂದಲೇ ಪಕ್ಷಕ್ಕೆ ಹೆಚ್ಚು ಪ್ರಯೋಜನವಾಗಲಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಬಿಜೆಪಿ ನಾಯಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

’ಇನ್ನೂ ಚುನಾವಣೆಗೆ ವೇಳಾಪಟ್ಟಿಯೇ ಪ್ರಕಟವಾಗಿಲ್ಲ. ಹಾಗಾಗಿ ನಾನು ಏನೂ ಹೇಳಲಾರೆ. ವೇಳಾಪಟ್ಟಿ ಪ್ರಕಟವಾದ ಬಳಿಕ ಪಕ್ಷದ ವರಿಷ್ಠರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ಪದ್ಮನಾಭ ರೆಡ್ಡಿ ತಿಳಿಸಿದರು.

ಒಂದು ವೇಳೆ, ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ ಅದಕ್ಕೆ ಅನುಗುಣವಾಗಿಯೇ ಕಾರ್ಯತಂತ್ರ ರಚಿಸಲು ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿಕೂಟ ಸಿದ್ಧತೆ ನಡೆಸಿದೆ.

**

ನಡೆಯದ ಚುನಾವಣೆ: ಬಿಜೆಪಿ ಆಕ್ಷೇಪ

ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆಗೆ ನಿಗದಿತ ಅವಧಿಯೊಳಗೆ ಚುನಾವಣೆ ನಡೆಸದಿರುವುದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. ಪಾಲಿಕೆ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಅವರು ಪ್ರಾದೇಶಿಕ ಆಯುಕ್ತರಿಗೆ ಶುಕ್ರವಾರ ಪತ್ರ ಬರೆದಿದ್ದಾರೆ.

‘ಕರ್ನಾಟಕ ಪೌರಾಡಳಿತ ಕಾಯ್ದೆ 1976ರ ಪ್ರಕಾರ ಮೇಯರ್‌, ಉಪಮೇಯರ್‌ ಹಾಗೂ ಸ್ಥಾಯಿಸಮಿತಿಗಳಿಗೆ ಒಟ್ಟಿಗೆ ಚುನಾವಣೆ ನಡೆಸಬೇಕು. 1998ರಲ್ಲಿ ರಾಜ್ಯ ಹೈಕೋರ್ಟ್‌ ಇದನ್ನು ಸ್ಪಷ್ಟಪಡಿಸಿದ್ದು, ಈ ಆದೇಶವನ್ನು ಉಲ್ಲಂಘಿಸಲಾಗಿದೆ. ಅದಲ್ಲದೇ, ಸ್ಥಾಯಿ ಸಮಿತಿಗಳ ಅಧಿಕಾರದ ಅವಧಿ ಮುಗಿದರೂ ಚುನಾವಣೆಯ ವೇಳಾಪಟ್ಟಿ ಪ್ರಕಟಿಸಿಲ್ಲ. ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕು’ ಎಂದು ರೆಡ್ಡಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.

**

ಮೇಯರ್‌ ಚುನಾವಣೆಗೂ ಮುನ್ನ ಪಕ್ಷೇತರ ಸದಸ್ಯರಿಗೆ ನೀಡಿದ್ದ ಭರವಸೆಯನ್ನು ಕಾಂಗ್ರೆಸ್‌ ಮುಖಂಡರು ಈಡೇರಿಸುತ್ತಾರೆ ಎಂಬ ವಿಶ್ವಾಸ ಇದೆ.

–ಸಿ.ಆರ್‌.ಲಕ್ಷ್ಮೀನಾರಾಯಣ, ದೊಮ್ಮಲೂರು ವಾರ್ಡ್‌ನ ಪಕ್ಷೇತರ ಸದಸ್ಯ

**

ಸ್ಥಾಯಿ ಸಮಿತಿಗಳ ಅಧಿಕಾರದ ಅವಧಿ ಮುಗಿದಿರುವುದರಿಂದ ಪಾಲಿಕೆ ಆಡಳಿತ ವ್ಯವಸ್ಥೆಯಲ್ಲಿ ನಿರ್ವಾತ ಸೃಷ್ಟಿಯಾಗಿದೆ. ಇಂತಹ ಬಿಕ್ಕಟ್ಟಿಗೆ ಅವಕಾಶ ಮಾಡಿರುವುದು ಅಕ್ಷಮ್ಯ.

–ಪದ್ಮನಾಭ ರೆಡ್ಡಿ, ಪಾಲಿಕೆ ವಿರೋಧ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT