ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ಸವದ ರಂಗು ಹೆಚ್ಚಿಸಿದ ಮಕ್ಕಳು

ಪೈಪೋಟಿಯಲ್ಲಿ ಪುಸ್ತಕಗಳನ್ನು ಖರೀದಿಸಿದ ಸಾಹಿತ್ಯಾಸಕ್ತರು
Last Updated 28 ಅಕ್ಟೋಬರ್ 2018, 20:22 IST
ಅಕ್ಷರ ಗಾತ್ರ

ಬೆಂಗಳೂರು: ಪಂಚತಾರಾ ಲಲಿತ್‌ ಅಶೋಕ್‌ ಹೊಟೇಲ್‌ ಆವರಣದಲ್ಲಿ ನಡೆದ ಎರಡು ದಿನಗಳ ಬೆಂಗಳೂರು ಸಾಹಿತ್ಯೋತ್ಸವಕ್ಕೆ ಮಕ್ಕಳು ರಂಗು ಹೆಚ್ಚಿಸಿದರು. ಅವರಿಗಾಗಿಯೇ ವಿಶೇಷವಾಗಿ ಆಯೋಜಿಸಿದ್ದ ಗೋಷ್ಠಿಗಳಲ್ಲಿ ಉತ್ಸಾಹದಿಂದ ಭಾಗವಹಿಸಿದರು.

ಪತ್ರಕರ್ತರಾದ ಬರ್ಖಾ ದತ್‌, ನಾಗೇಶ್ ಹೆಗಡೆ ಸೇರಿದಂತೆ ಸಾಹಿತಿಗಳು, ತಜ್ಞರೊಂದಿಗೆ ಬೆರೆತ ಮಕ್ಕಳು ತಮಗೆ ತೋಚಿದಂತೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದರು.

‘ಇದು ಯಾಕೆ ಹೀಗೆ, ಇದು ಎಲ್ಲಿಂದ ಬಂದಿದೆ. ನಾವು ಈಗ ಏನು ಮಾಡಬೇಕು’ ಹೀಗೆ ಪೂರ್ತಿ ವಿಷಯ ಅರ್ಥವಾಗುವವರೆಗೂ ಪಟ್ಟು ಬಿಡದೆ ಹಿರಿಯರನ್ನು ಕಾಡಿದರು. ಉತ್ತರ ಹೇಳಿ ಸಮಾಧಾನಪಡಿಸುವಲ್ಲಿ ತಜ್ಞರು ತಿಣುಕಾಡಬೇಕಾಯಿತು.

ಜನಜಂಗುಳಿ: ಭಾನುವಾರ ಸಾಹಿತ್ಯಾಸಕ್ತರ ಸಂಖ್ಯೆ ತುಸು ಹೆಚ್ಚಿತ್ತು. ಬೇರೆ ಬೇರೆ ರಾಜ್ಯಗಳಿಂದ ಬಂದವರು ಸಾಕಷ್ಟಿದ್ದರು. ಪ್ರತಿಯೊಂದು ಗೋಷ್ಠಿಯಲ್ಲಿಯೂ ಕೂತಿರುವವರಿಗಿಂತ ನಿಂತುಕೊಂಡು ಮಾತುಗಳನ್ನು ಕೇಳುವವರು ಹೆಚ್ಚಿದ್ದರು. ಬಿರು ಬಿಸಿಲಿನಲ್ಲಿ ತಂಪನೆ ಬಿಯರ್ ಹೀರುತ್ತಾ, ಚಿಕನ್‌ ತಿನ್ನುತ್ತಾ ಗೋಷ್ಠಿಗಳಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ಪ್ರತಿ ಗೋಷ್ಠಿ ಮುಗಿದ ಮೇಲೂ ಸಂಪನ್ಮೂಲ ವ್ಯಕ್ತಿಗಳು ತಮ್ಮ ಪುಸ್ತಕಕ್ಕೆ ಸಹಿ ಹಾಕಿ ಕೊಡುತ್ತಿದ್ದರು. ಪುಸ್ತಕ ಪ್ರಿಯರು ಸಹಿಗಾಗಿ ಅಲ್ಲಿ ಜಮಾಯಿಸುತ್ತಿದ್ದರು. ಪುಸ್ತಕ ಮಳಿಗೆ ಕೂಡ ಯಾವಾಗಲೂ ತುಂಬಿಕೊಂಡಿತ್ತು. ಮಕ್ಕಳೂ ಪೈಪೋಟಿಯಲ್ಲಿ ಪುಸ್ತಕಗಳನ್ನು ಖರೀದಿಸಿದರು.

ಗೋಷ್ಠಿಗಳು ನಡೆಯುವ ಐದು ಪ್ರಮುಖ ವೇದಿಕೆಗಳಿಗೆ ಈ ಬಾರಿ ಭಿನ್ನವಾದ ಹೆಸರುಗಳನ್ನಿಡಲಾಗಿತ್ತು. ‘ಅಡ್ಜಸ್ಟ್ ಮಾಡಿ, ನಾಳೆ ಬಾ, ರೆಡ್‌ ಕೌಚ್‌, ಮಾಲ್ಗುಡಿ, ನರ್ನಿಯಾ’ ಎನ್ನುವ ಹೆಸರುಗಳು ಜನರ ಬಾಯಿಯಲ್ಲಿ ವಿಭಿನ್ನವಾಗಿ ಕೇಳಿಸುತ್ತಿತ್ತು. ‘ಅಡ್ಜಸ್ಟ್ ಮಾಡಿಕೊಂಡು ಹೋಗೋಣ ಬಾ’ ಎಂದು ವ್ಯಕ್ತಿಯೊಬ್ಬರು ತಮ್ಮ ಪತ್ನಿಯನ್ನು ಕೈ ಹಿಡಿದುಕೊಂಡು ಹೋದರು.

ರೇಖಾ ಚಿತ್ರಗಳು: ಪ್ರಮುಖ ಎಲ್ಲ ವೇದಿಕೆಗಳಲ್ಲಿ ನಗರದ ವಿವಿಧ ಪ್ರದೇಶಗಳ ಕಟ್ಟಡಗಳನ್ನು ಬಿಂಬಿಸುವ ರೇಖಾಚಿತ್ರಗಳ ಡಿಜಿಟಲ್‌ ಪರದೆ ಅಳವಡಿಸಲಾಗಿತ್ತು. ಈ ಹಿಂದಿನ ವರ್ಷಗಳಲ್ಲಿ ವಿವಿಧ ಕಾರ್ಪೊರೇಟ್‌ ಕಂಪನಿಗಳ ಹೋರ್ಡಿಂಗ್‌ ಅಳವಡಿಸುತ್ತಿದುದು ಟೀಕೆಗೆ ಕಾರಣವಾಗಿತ್ತು. ಒಟ್ಟು 97 ಸಂವಾದ ಮತ್ತು ಇತರ ಚಟುವಟಿಕೆಗಳು ಈ ಎರಡು ದಿನಗಳಲ್ಲಿ ನಡೆದವು.

ಗೋಷ್ಠಿಯಲ್ಲಿ ಪರಿಸರದ ಜಾಗೃತಿ

ಕಟ್ಟಡಗಳನ್ನು ಕಟ್ಟುತ್ತಾ ನಾಗರೀಕತೆಯ ಕಡೆಗೆ ಜಾರುವ ಮನುಷ್ಯ ಕೊನೆಗೆ ತಾನು ಸೃಷ್ಟಿಸಿದ ಕಸದ ರಾಶಿಯಿಂದಲೇ ಹೊರಬರಲು ಒದ್ದಾಡುತ್ತಾನೆ..

ಇಂತಹ ಅನೇಕ ಕಥೆಗಳನ್ನು ಪತ್ರಕರ್ತ ನಾಗೇಶ್ ಹೆಗಡೆ ಅವರು ಮಕ್ಕಳಿಗಾಗಿ ಹೇಳಿದರು.

ನಲ್ಲಿಯನ್ನು ನಿಲ್ಲಿಸದೆ ಹೋಗುವ ತಂದೆ ತಾಯಿಗೆ ಚಿಕ್ಕಮಗು ಪಾಠ ಹೇಳುತ್ತದೆ. ತಾನೇ ಹೋಗಿ ನೀರನ್ನು ನಿಲ್ಲಿಸುತ್ತದೆ. ಈ ಚಿತ್ರವನ್ನು ನೋಡಿದ ಮಕ್ಕಳು ‘ಇದರ ಅರ್ಥ ನಾವು ನೀರನ್ನು ಉಳಿಸಬೇಕು’ ಎಂದು ಹೇಳುತ್ತಾರೆ.

‘ಇಂದಿನ ಕಾಲದ ಮಕ್ಕಳೇ ಪೋಷಕರಿಗೆ ಪಾಠ ಕಲಿಸುತ್ತಾರೆ. ನನ್ನ ಮೊಮ್ಮಗ ನನಗೇ ಮೊಬೈಲ್‌ ಫೋನ್‌ ಬಳಸುವುದನ್ನು ಹೇಳಿ ಕೊಡುತ್ತಾನೆ. ಅವರಿಗೆ ಈಗಿನಿಂದಲೇಪರಿಸರದಕಾಳಜಿ ಹಾಗೂ ಜಾಗೃತಿಯನ್ನು ಮೂಡಿಸುವ ಅಗತ್ಯವಿದೆ’ ಎಂದು ನಾಗೇಶ್ ಹೆಗಡೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT