ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನ್ನೇರುಘಟ್ಟ ಉದ್ಯಾನಕ್ಕಾಗಿ ರ‍್ಯಾಲಿ

Last Updated 30 ಡಿಸೆಂಬರ್ 2018, 20:10 IST
ಅಕ್ಷರ ಗಾತ್ರ

ಬೆಂಗಳೂರು: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ (ಬಿಎನ್‌ಪಿ) ಸುತ್ತಲಿನ ‘ಪರಿಸರ ಸೂಕ್ಷ್ಮ ವಲಯ’ (ಇಎಸ್‌ಜೆಡ್‌) ವ್ಯಾಪ್ತಿ ಕಡಿಮೆ ಮಾಡುವುದನ್ನು ವಿರೋಧಿಸಿ ಪರಿಸರ ಹೋರಾಟಗಾರರು ನಗರದ ಪುರಭವನದಿಂದ ಬನ್ನೇರುಘಟ್ಟವರೆಗೆ 50 ಬೈಕ್‌ಗಳಲ್ಲಿ ಭಾನುವಾರ ರ‍್ಯಾಲಿ ನಡೆಸಿದರು.

ಬೆಳಿಗ್ಗೆ 6.30ಕ್ಕೆ ಆರಂಭವಾದ ರ‍್ಯಾಲಿ, 7.30ಕ್ಕೆ ಬನ್ನೇರುಘಟ್ಟ ತಲುಪಿತು. ‘ರೈಡೋಸ್‌ ಆಫ್‌ ದಿ ಬೆಂಗಳೂರು’, ‘ಬೆಂಗಳೂರು ಬುಲೆಟ್‌ ಕ್ಲಬ್‌’ ಮತ್ತು ‘ಯುನೈಟೆಡ್‌ ಬೆಂಗಳೂರು’ ಸಂಸ್ಥೆಗಳ ಸದಸ್ಯರು ಈ ರ‍್ಯಾಲಿಯಲ್ಲಿ ಭಾಗಿಯಾಗಿದ್ದರು. ‘ಬನ್ನೇರುಘಟ್ಟ ಉಳಿಸಿ’ ಎಂಬ ಘೋಷಣೆಗಳನ್ನು ಕೂಗಿದರು.

‘ಬಿಎನ್‌ಪಿ ಸುತ್ತಲಿನ ಪರಿಸರವನ್ನು ಉಳಿಸಲು ಆರಂಭಿಸಿರುವ ಅಭಿಯಾನಕ್ಕೆ ಈಗಾಗಲೇ 30 ಸಾವಿರಕ್ಕೂ ಹೆಚ್ಚು ಮಂದಿ ಸಹಿ ಹಾಕಿದ್ದಾರೆ. ಭಾನುವಾರ (ಡಿ.30) 5 ಸಾವಿರ ಸಾರ್ವಜನಿಕರು ಬೆಂಬಲ ವ್ಯಕ್ತಪಡಿಸಿದ್ದಾರೆ’ ಎಂದು ಪರಿಸರ ಕಾರ್ಯಕರ್ತ ವಿಜಯ್‌ ನಿಶಾಂತ್ ಹೇಳಿದರು.

‘ಶಾಲಾ–ಕಾಲೇಜಿನ ವಿದ್ಯಾರ್ಥಿಗಳು, ಪರಿಸರ ಪ್ರೇಮಿಗಳು, ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್.ದೊರೆಸ್ವಾಮಿ ಸೇರಿದಂತೆ ಹಲವರು ನಮ್ಮ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಅಕ್ರಮವಾಗಿ ಗಣಿಗಾರಿಕೆ ವಿರುದ್ಧವೂ ಹೋರಾಟ ಮಾಡಿದ್ದೇವೆ. ಇನ್ನೂ ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಿದ್ದೇವೆ. ಉದ್ಯಾನದ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ (ಡಿಸಿಎಫ್‌) ಮನವಿಯನ್ನೂ ಸಲ್ಲಿಸಲಿದ್ದೇವೆ’ ಎಂದರು.

‘ಇಲ್ಲಿ ಮೊದಲು ವಾಹನ ಸಂಚಾರದಿಂದ ಮತ್ತು ಅವುಗಳ ಶಬ್ದದಿಂದ ಪ್ರಾಣಿಗಳು ಕಾಡು ತೊರೆದಿದ್ದವು. ವಾಹನಗಳ ಸಂಚಾರ ನಿಷೇಧಿಸಿದ ಬಳಿಕ ಈ ವಲಯದಲ್ಲಿ ಕಾಡುಪ್ರಾಣಿಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. 85 ಆನೆಗಳು ಹಾಗೂ ಅವುಗಳ ಮರಿಗಳು ಕಂಡು ಬಂದಿವೆ. ಮಾತ್ರವಲ್ಲ, ಕಾಡುನಾಯಿಗಳು, ಜಿಂಕೆಗಳು ಸಹ ಬಂದಿವೆ. ಹಾಗಾಗಿ ಈ ವ್ಯಾಪ್ತಿಯಲ್ಲಿ ಒಂದು ಇಂಚು ಕಡಿತಕ್ಕೂ ಬಿಡುವುದಿಲ್ಲ’ ಎಂದು ಹೇಳಿದರು.

‘ಕಾಡಿನಲ್ಲಿ ವಾಸಿಸುವ ‍ಪ್ರಾಣಿಗಳ ಹಕ್ಕನ್ನು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಹಕ್ಕನ್ನು ಕಿತ್ತುಕೊಳ್ಳುವುದೇ ಉದ್ದೇಶವಾಗಿದ್ದರೆ, ಮುಂದಿನ ದಿನಗಳಲ್ಲಿ ನಾವು ನಡೆಸುವ ಉಗ್ರ ಹೋರಾಟವನ್ನು ಎದುರಿಸಲು ಸರ್ಕಾರ ಸಜ್ಜಾಗಬೇಕಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT