ಭಾನುವಾರ, ಜನವರಿ 19, 2020
25 °C
ಕುಷ್ಟಗಿ ತಾಲ್ಲೂಕಿಗೆ ಪ್ರಾತಿನಿಧ್ಯಕ್ಕೆ ಒಲವು: ಶಾಸಕ, ಸಂಸದರ ಅಭಿಪ್ರಾಯ ಸಂಗ್ರಹ

ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಹೆಚ್ಚಿದ ಪೈಪೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಗೆದ್ದು ಬೀಗಿದ ಬಿಜೆಪಿ ಮುಖಂಡರಲ್ಲಿ ಇದೀಗ ಜಿಲ್ಲಾ ಬಿಜೆಪಿ ಘಟಕದ ನೂತನ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆದಿದೆ. 

ಅಧ್ಯಕ್ಷ ಸ್ಥಾನಕ್ಕೆ ಒಮ್ಮತ ಅಭ್ಯರ್ಥಿ ಆಯ್ಕೆಗೆ ಈಚೆಗೆ ವಿಧಾನಪರಿಷತ್ ಮಾಜಿ ಸದಸ್ಯ ಅಶ್ವತ್ಥ ನಾರಾಯಣ ಜಿಲ್ಲೆಗೆ ಭೇಟಿ ನೀಡಿ ಖಾಸಗಿ ಹೊಟೇಲ್‌ನಲ್ಲಿ ಮುಖಂಡರ ಸಭೆ ನಡೆಸಿ ಅಭಿಪ್ರಾಯ ಪಡೆದಿದ್ದಾರೆ. ಆಕಾಂಕ್ಷಿಗಳ ಹೆಸರನ್ನು ಪಟ್ಟಿಮಾಡಿಕೊಂಡು ತೆರಳಿರುವ ಅವರು ರಾಜ್ಯ ಮುಖಂಡರ ಸಭೆಯಲ್ಲಿ ಹೆಸರು ಅಂತಿಮಗೊಳಿಸಿ ಘೋಷಣೆ ಮಾಡಲಾಗುವುದು ಎಂದು ತಿಳಿದು ಬಂದಿದೆ.

ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಮೂರು, ಲೋಕಸಭೆಯ ಒಂದು ಸ್ಥಾನವನ್ನು ಸಂಘಟಿತ ಹೋರಾಟದ ಮೂಲಕ ಗೆಲುವು ಸಾಧಿಸಿ ಪಕ್ಷದ ನಾಯಕರ ಗಮನ ಸೆಳೆದ ವಿರೂಪಾಕ್ಷಪ್ಪ ಶಿಂಗನಾಳ ಅವಧಿ ಮುಗಿದಿದ್ದು, ನೂತನ ಸಾರಥಿಗೆ ಅಧಿಕಾರ ವಹಿಸಿಕೊಡಲಿದ್ದಾರೆ. ಗಂಗಾವತಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರಿಂದ ಆ ಭಾಗದವರೇ ಹೆಚ್ಚು ಸಾರಿ ಅಧ್ಯಕ್ಷ ಸ್ಥಾನ ಪಡೆದುಕೊಂಡಿದ್ದಾರೆ.

ಹಳೆಯ ನಾಲ್ಕು ತಾಲ್ಲೂಕಿನ ಪೈಕಿ ಕುಷ್ಟಗಿ ಭಾಗದವರಿಗೆ ಅವಕಾಶ ದೊರೆತಿಲ್ಲ. ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಅವರ ಹೆಸರು ಅಧ್ಯಕ್ಷ ಸ್ಥಾನಕ್ಕೆ ಪ್ರಬಲವಾಗಿ ಕೇಳಿ ಬಂದಿದೆ. ಹಿಂದುಳಿದ ವರ್ಗಕ್ಕೆ ಅವಕಾಶ ನೀಡಬೇಕು ಎಂಬ ಭಾವನೆ ಪಕ್ಷದ ಮುಖಂಡರಲ್ಲಿ ಇದ್ದು, ಕುರುಬ ಸಮುದಾಯಕ್ಕೆ ಸೇರಿದ ಗೌಡರಿಗೆ ಅವಕಾಶ ನೀಡಿದರೆ ಜಿಲ್ಲೆಯ ರಾಜಕಾರಣದಲ್ಲಿ ಪ್ರಬಲ ಪೈಪೋಟಿ ನೀಡಬಹುದು ಎಂಬ ಸಂದೇಶವನ್ನು ಪ್ರಮುಖ ಮುಖಂಡರು ವೀಕ್ಷಕರಿಗೆ ನೀಡಿದ್ದಾರೆ ಎನ್ನಲಾಗುತ್ತಿದೆ.

ಈ ಕುರಿತು ಸಂಸದ, ಶಾಸಕರು, ಎಲ್ಲ ತಾಲ್ಲೂಕು, ನಗರ ಘಟಕ ಮತ್ತು ವಿವಿಧ ಮೋರ್ಚಾಗಳ ಅಧ್ಯಕ್ಷರ ಅಭಿಪ್ರಾಯ ಪಡೆಯಲಾಗಿದೆ. ಜಿಲ್ಲಾ ಮುಖಂಡರು ಸೂಚಿಸಿದ ಹೆಸರುಗಳೊಂದಿಗೆ ಅಶ್ವತ್ಥ ನಾರಾಯಣಗೌಡ ಅವರು ಪಟ್ಟಿ ಸಮೇತ ಬೆಂಗಳೂರಿಗೆ ತೆರಳಿದ್ದಾರೆ. ಜಿಲ್ಲೆಯ ನಾಯಕರ ಸಲಹೆ, ಸಂಘಟನಾತ್ಮಕ ದೃಷ್ಟಿಯಿಂದ ಎಲ್ಲವನ್ನೂ ಯೋಚಿಸಿ ರಾಜ್ಯ ಅಧ್ಯಕ್ಷರ ನೇತೃತ್ವದಲ್ಲಿ ಆಯ್ಕೆ ಮಾಡಿ ಡಿ. 20ರ ನಂತರ ಘೋಷಣೆ ಮಾಡುವ ನಿರೀಕ್ಷೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ

ಆಕಾಂಕ್ಷಿಗಳು:  ಪಕ್ಷದ ಚುಕ್ಕಾಣಿ ಹಿಡಿಯುವಲ್ಲಿ ಪ್ರಭಾವಿಗಳಾಗಿರುವ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ.ಚಂದ್ರಶೇಖರ್‌ ಮತ್ತು ಬಸಲಿಂಗಪ್ಪ ಭೂತೆ, ಅಮರೇಶ್ ಕುಳಗಿ, ನಾಗರಾಜ ಬಿಲ್ಗಾರ್, ಚಂದ್ರಶೇಖರ್ ಪಾಟೀಲ ಹಲಗೇರಿ, ಎಂ.ವಿ.ಪಾಟೀಲ, ಚಂದ್ರಶೇಖರ ಕವಲೂರು ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ.

'ಉತ್ತರ ಕರ್ನಾಟಕ ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ದೊಡ್ಡನಗೌಡ ಒಬ್ಬರೇ ಕುರುಬ ಸಮುದಾಯಕ್ಕೆ ಸೇರಿದ ನಾಯಕರಾಗಿದ್ದು, ಪಕ್ಷ, ಸಂಘಟನೆ ದೃಷ್ಟಿಯಿಂದ ಇವರ ಆಯ್ಕೆಯತ್ತ ಒಲವು ಇದೆ' ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)