ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉರುಳಿದ ಬಸ್; 14 ಮಂದಿಗೆ ಗಾಯ

ವಿಭಜಕಕ್ಕೆ ಡಿಕ್ಕಿ: ರಾಜಾಜಿನಗರದ ಪಶ್ಚಿಮ ಕಾರ್ಡ್ ರಸ್ತೆಯಲ್ಲಿ ದುರ್ಘಟನೆ
Last Updated 27 ಮಾರ್ಚ್ 2019, 20:14 IST
ಅಕ್ಷರ ಗಾತ್ರ

ಬೆಂಗಳೂರು:‌ ರಾಜಾಜಿನಗರದ ಪಶ್ಚಿಮ ಕಾರ್ಡ್ ರಸ್ತೆಯಲ್ಲಿ ಬುಧವಾರ ಬೆಳಿಗ್ಗೆ ವಿಭಜಕಕ್ಕೆ ಡಿಕ್ಕಿಯಾಗಿ ಬಿಎಂಟಿಸಿ ಬಸ್ ರಸ್ತೆಗೆ ಉರುಳಿದ್ದರಿಂದ 14 ಮಂದಿ ಗಾಯಗೊಂಡಿದ್ದಾರೆ.

ಮಾಗಡಿ ರಸ್ತೆಯ ಕೆಎಚ್‌ಬಿ ಕಾಲೊನಿಯಿಂದ ಕಾವಲ್‌ಬೈರಸಂದ್ರಕ್ಕೆ ಹೊರಟಿದ್ದ ಬಸ್ (ಮಾರ್ಗ ಸಂಖ್ಯೆ 180), ಬೆಳಿಗ್ಗೆ 11 ಗಂಟೆ ಸುಮಾರಿಗೆ ರಾಜಾಜಿನಗರ 1ನೇ ಬ್ಲಾಕ್‌ಗೆ ಬಂದಿತ್ತು. ಅಲ್ಲಿ ಕೆಲ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೊರಟ ಚಾಲಕ, ಮೇಲ್ಸೇತುವೆಗೆ ಹೋಗುವಾಗ ನಿಯಂತ್ರಣ ಕಳೆದುಕೊಂಡಿದ್ದಾರೆ. ಆಗ ಬಸ್ ಅಡ್ಡಾದಿಡ್ಡಿಯಾಗಿ ಸಾಗಿ, ವಿಭಜಕಕ್ಕೆ ಡಿಕ್ಕಿ ಹೊಡೆದಿದೆ.

ರಸ್ತೆಗೆ ಬೀಳುತ್ತಿದ್ದಂತೆಯೇ ಇತರೆ ವಾಹನಗಳ ಸವಾರರು ಹಾಗೂ ಸ್ಥಳೀಯರು ಪ್ರಯಾಣಿಕರ ರಕ್ಷಣೆಗೆ ಧಾವಿಸಿದ್ದಾರೆ. ಎಲ್ಲರನ್ನೂ ಬಸ್‌ನಿಂದ ಹೊರತಂದು ಸಪ್ತಗಿರಿ ಹಾಗೂ ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಮೋಹನಾಂಬಿಕೆ (72) ಎಂಬುವರ ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಾಲಕ ನಿಂಗೇಗೌಡ, ಕಂಡಕ್ಟರ್ ವಿಜಯ್‌ಕುಮಾರ್ ಸೇರಿ 13 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.

‘ಬಸ್‌ನಲ್ಲಿ 18 ಪ್ರಯಾಣಿಕರಿದ್ದರು. ಅದು ದಟ್ಟಣೆ ಸಮಯವಲ್ಲದ ಕಾರಣ ರಸ್ತೆ ಖಾಲಿ ಇತ್ತು. ಒಂದು ವೇಳೆ ಬೆಳಿಗ್ಗೆ 9 ರಿಂದ 10ರ ನಡುವೆ ಸಂಭವಿಸಿದ್ದರೆ ಇತರೆ ವಾಹನಗಳ ಸವಾರರೂ ಅಪಾಯಕ್ಕೆ ಸಿಲುಕುತ್ತಿದ್ದರು. ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ’ ಎಂದು ಮಲ್ಲೇಶ್ವರ ಸಂಚಾರ ಪೊಲೀಸರು ತಿಳಿಸಿದರು.

ಬೈಕ್ ಅಡ್ಡಬಂತು: ‘ಮೇಲ್ಸೇತುವೆ ಏರುತ್ತಿದ್ದಾಗ ಬೈಕ್ ಸವಾರನೊಬ್ಬ ಎಡಬದಿಯಿಂದ ಬಸ್ಸನ್ನು ಹಿಂದಿಕ್ಕಿದ. ಆತನಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಯತ್ನದಲ್ಲಿ ಈ ಅನಾಹುತ ಸಂಭವಿಸಿತು’ ಎಂದು ಚಾಲಕ ಹೇಳಿಕೆ ಕೊಟ್ಟಿದ್ದಾಗಿ ಪೊಲೀಸರು ಹೇಳಿದ್ದಾರೆ.

ಅಪಘಾತದಿಂದ ಮೇಲ್ಸೇತುವೆಯಲ್ಲಿ ಸಂಚಾರ ಬಂದ್ ಆಗಿದ್ದರಿಂದ ರಾಜಾಜಿನಗರ ಸುತ್ತಮುತ್ತ ದಟ್ಟಣೆ ಉಂಟಾಯಿತು.

ಪೊಲೀಸರು ಕ್ರೇನ್ ತರಿಸಿ ಬಸ್ಸನ್ನು ತೆರವುಗೊಳಿಸಿದರು. ಇದಾದ ಒಂದೂವರೆ ತಾಸಿನ ಬಳಿಕ ಸಂಚಾರ ಸಹಜ ಸ್ಥಿತಿಗೆ ಮರಳಿತು.

ಗಾಯಾಳುಗಳ ವಿವರ

ಕಾವಲ್‌ಬೈರಸಂದ್ರದ ಮೋಹನಾಂಬಿಕೆ (72), ಯಲಹಂಕದ ಆರೋಗ್ಯ ಸ್ವಾಮಿ (56), ಆದರ್ಶ ನಗರದ ಎ.ದರ್ಶನ್ (19), ಆತನ ತಂದೆ ಎಂ.ಆರನ್ ಮೋಜಿ (62), ಕುರುಬರಹಳ್ಳಿಯ ಟಿ.ಎಸ್.ಪ್ರಭಾಕರ್ (25), ಚಿತ್ರದುರ್ಗಂ ಕೃಷ್ಣಮೂರ್ತಿ (50), ರಾಜಾಜಿನಗರದ ನಟರಾಜು (24).

ಎಚ್‌ಆರ್‌ಬಿಆರ್‌ ಲೇಔಟ್‌ನ ಸಿ.ಎನ್.ಅಂಬಿಕಾ (30), ಮಹಾಲಕ್ಷ್ಮಿಲೇಔಟ್‌ನ ಎಂ.ಚಿಕ್ಕೇಗೌಡ (45), ಶಂಕರಮಠದ ಕಮಲಾ (43), ದೊಡ್ಡಬಳ್ಳಾಪುರದ ಜೆ.ಜಯಕುಮಾರ್ (25), ಆರ್‌.ಟಿ.ನಗರದ ಎನ್‌.ನಂಜಪ್ಪ (68), ಕಂಡಕ್ಟರ್ ವಿಜಯ್‌ಕುಮಾರ್ (28) ಹಾಗೂ ಚಾಲಕ ನಿಂಗೇಗೌಡ (42).

‘ಜೀವವೇ ಹೋಯಿತು ಎಂದುಕೊಂಡೆ’

‘ಎಚ್‌ಆರ್‌ಬಿಆರ್ ಲೇಔಟ್ ನಿವಾಸಿಯಾದ ನಾನು, ಕೆಎಚ್‌ಬಿ ಕಾಲೊನಿಯ ಸಂಬಂಧಿಕರ ಮನೆಗೆ ಹೋಗಿದ್ದೆ. ಅಲ್ಲಿಂದ ಮನೆಗೆ ವಾಪಸ್ ಹೊರಟಿದ್ದೆ. ಕಿಟಕಿ ಪಕ್ಕದಲ್ಲೇ ಕುಳಿತಿದ್ದ ನಾನು, ಬಸ್ ವಿಭಜಕಕ್ಕೆ ಡಿಕ್ಕಿ ಹೊಡೆಯುತ್ತಿದ್ದಂತೆಯೇ ಗಾಬರಿಯಿಂದ ಎದ್ದು ನಿಂತೆ. ಐದಾರು ಸೆಕೆಂಡ್‌ಗಳಲ್ಲೇ ಬಸ್ ರಸ್ತೆಗೆ ಉರುಳಿತು. ಜೀವವೇ ಹೋಯಿತು ಎಂದುಕೊಂಡಿದ್ದೆ. ಅದೃಷ್ಟವಶಾತ್ ಏನೂ ಆಗಲಿಲ್ಲ. ಮೂಗಿಗೆ ಪೆಟ್ಟಾಗಿದೆ’ ಎಂದು ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಾಗಿರುವ ಅಂಬಿಕಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT