ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯೇಂದ್ರ ಪಟ್ಟಕ್ಕೆ ಬಿಎಸ್‌ವೈ ಪಣ

ವಂಶಾಡಳಿತ ವಿರೋಧಿಸಿದ್ದ ಬಿಜೆಪಿ ವರಿಷ್ಠರು ಇದಕ್ಕೆ ಮಣೆ ಹಾಕುವರೇ?
Last Updated 9 ಫೆಬ್ರುವರಿ 2020, 1:40 IST
ಅಕ್ಷರ ಗಾತ್ರ

ಬೆಂಗಳೂರು: ‘ಇನ್ನೂ ಮೂರುವರ್ಷ ನಾನೇ ಮುಖ್ಯಮಂತ್ರಿ’ ಎಂದು ದೃಢವಾಗಿ ಹೇಳಿಕೊಳ್ಳುತ್ತಿರುವ ಬಿ.ಎಸ್‌. ಯಡಿಯೂರಪ್ಪ ಅವರು, ತಮ್ಮ ಉತ್ತರಾಧಿಕಾರಿಯಾಗಿ ಬಿ.ವೈ. ವಿಜಯೇಂದ್ರ ಅವರನ್ನು ಮುಂಚೂಣಿಗೆ ತರುವ ದಿಕ್ಕಿನತ್ತ ಒಂದೊಂದೇ ಹೆಜ್ಜೆ ಇಡಲು ಆರಂಭಿಸಿದ್ದಾರೆ.

ಮೈತ್ರಿ ಸರ್ಕಾರ ಪತನಗೊಳಿಸಿದ ಕಾರ್ಯತಂತ್ರ, ಉಪಚುನಾವಣೆ ಗೆಲುವಿನ ಸವಾಲು, ಸಂಪುಟ ವಿಸ್ತರಣೆ ಇಕ್ಕಟ್ಟಿನ ಹೊತ್ತಿನಲ್ಲಿ ವಿಜಯೇಂದ್ರ ಅವರನ್ನು ಮುಂದಿಟ್ಟುಕೊಂಡೇ ಯಡಿಯೂರಪ್ಪ ಮುನ್ನಡೆದಿದ್ದಾರೆ. ಇದೇ 27ಕ್ಕೆ 77 ವಸಂತಗಳನ್ನು ಪೂರೈಸಲಿರುವ ಬಿಜೆಪಿಯ ಅಗ್ರ ನೇತಾರ, ಪಕ್ಷದ ಉಸ್ತುವಾರಿಯನ್ನು ಅನ್ಯರಿಗೆ ಬಿಡದೇ ಮಗನ ಹೆಗಲಿಗೆ ಕಟ್ಟುವತ್ತ ತಮ್ಮದೇ ಆದ ಲೆಕ್ಕಾಚಾರ ನಡೆಸಿರುವುದು ಬಿಜೆಪಿಯಲ್ಲಿ ಚರ್ಚೆಗೆ ಗ್ರಾಸ ಒದಗಿಸಿದೆ.

‘ಉತ್ತರಾಧಿಕಾರಕ್ಕಾಗಿ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಮತ್ತು ವಿಜಯೇಂದ್ರ ಮಧ್ಯೆ ಮೊದಲು ಪೈಪೋಟಿಯಿತ್ತು. ಯಡಿಯೂರಪ್ಪನವರಿಗೆ ಇರುವ ರಾಜಕೀಯ ಚಾಣಾಕ್ಷತೆ, ಎಲ್ಲರನ್ನೂ ಒಗ್ಗೂಡಿಸಿ ಕರೆದೊಯ್ಯುವ ಛಾತಿಯಲ್ಲಿ ಒಂದು ಕೈ ಬಲವಾಗಿರುವ ವಿಜಯೇಂದ್ರ ಅವರನ್ನು ಮುಂದಕ್ಕೆ ತಳ್ಳುವಲ್ಲಿ ಕುಟುಂಬದ ಪಾತ್ರವೂ ಇದೆ. ಮುಖ್ಯಮಂತ್ರಿ ಪುತ್ರಿಯರು ವಿಜಯೇಂದ್ರನ ಭವಿಷ್ಯ ರೂಪಿಸಬೇಕು ಎಂದು ಪಟ್ಟು ಹಿಡಿದಿದ್ದು, ಅಪ್ಪನ ಮೇಲೆ ಒತ್ತಡ ಹೇರಿದ್ದಾರೆ. ತಮ್ಮ ಕುಟುಂಬದ ಅಧಿಕಾರ ಶಕ್ತಿ, ‘ಹೊರ’ಗಿನವರ ಪಾಲಾಗದಂತೆ ನೋಡಿಕೊಳ್ಳಬೇಕಾದರೆ, ‘ಹೊರ’ಗಿನವರಿಗೆ ಅಚ್ಚುಮೆಚ್ಚಾಗಿರುವ ರಾಘವೇಂದ್ರನಿಗಿಂತ ವಿಜಯೇಂದ್ರನೇ ಸೂಕ್ತ ಎಂಬುದು ಪುತ್ರಿಯರ ವಾದ. ಇದೇ ಕಾರಣಕ್ಕೆ ‘ಕುಟುಂಬ’ದೊಳಗೆ ಶೀತಲ ಸಮರವೂ ನಡೆದಿತ್ತು. ಹೀಗಾಗಿ ಕೆಲ ದಿನಗಳ ಹಿಂದೆ ಯಡಿಯೂರಪ್ಪನವರು ಎಲ್ಲ ಅಧಿಕೃತ ಕಾರ್ಯಕ್ರಮಗಳನ್ನು ಬದಿಗೊತ್ತಿ, ಮನೆಯಲ್ಲೇ ಉಳಿದಿದ್ದರು’ ಎಂದು ಮೂಲ
ಗಳು ಹೇಳುತ್ತವೆ.

ಈ ಬೆಳವಣಿಗೆಯ ಬಳಿಕ ಯಡಿಯೂರಪ್ಪ ತಮ್ಮ ನಿಲುವಿನಲ್ಲಿ ಬದಲಾವಣೆ ಮಾಡಿಕೊಂಡಿದ್ದು, ಸಾಧ್ಯವಾದಷ್ಟರ ಮಟ್ಟಿಗೆ ವಿಜಯೇಂದ್ರ ಅವರನ್ನು ಮುನ್ನೆಲೆಗೆ ತರುವ ಯತ್ನ ನಡೆಸಿದ್ದಾರೆ.

ಮೈತ್ರಿ ಸರ್ಕಾರದ ಪತನದ ವೇಳೆ ‘ಆಪರೇಷನ್ ಕಮಲ’ದ ಸೂತ್ರಧಾರಿಯಾಗಿದ್ದವರು ವಿಜಯೇಂದ್ರ, ಸಿ.ಪಿ. ಯೋಗೇಶ್ವರ್, ಯಡಿಯೂರಪ್ಪ ಆಪ್ತ ಸಹಾಯಕ ಸಂತೋಷ್‌. ಈಗ ‘ಸಲಹೆಗಾರ’ರಾಗಿರುವವರೂ ಜತೆಗೇ ಇದ್ದವರು. ಅಧಿಕಾರ ಬರುತ್ತಿದ್ದಂತೆ, ಯೋಗೇಶ್ವರ್ ಮತ್ತು ಸಂತೋಷ್‌ ಅವರನ್ನು ಹೊರಗಿಟ್ಟು, ವಿಜಯೇಂದ್ರ ಕೈಯಲ್ಲೇ ಸಕಲ ಸೂತ್ರವೂ ಇರುವಂತೆ ನೋಡಿಕೊಂಡಿದ್ದು ಮೊದಲ ಬೆಳವಣಿಗೆ. ಇದರ ಬೆನ್ನಲ್ಲೇ, ಉಪಚುನಾವಣೆ ಎದುರಾಯಿತು. ಪುತ್ರನಿಗೆ ಕ್ಷೇತ್ರ ಕಾಯಂ ಮಾಡಬೇಕೆಂಬ ಲೆಕ್ಕಾಚಾರದಲ್ಲಿ ಕೆ.ಆರ್. ಪೇಟೆಯ ಉಸ್ತುವಾರಿಯನ್ನು ವಿಜಯೇಂದ್ರಗೆ ನೀಡಲಾಯಿತು. ಜೆಡಿಎಸ್ ಭದ್ರಕೋಟೆಯಲ್ಲಿ ಕಮಲ ಅರಳಿಸುವ ‘ಸಾಹಸ’ ನಡೆಸಿದ ವಿಜಯೇಂದ್ರ, ವರಿಷ್ಠರ ಎದುರು ‘ತಮ್ಮ ಶಕ್ತಿ’ ಪ್ರದರ್ಶನ ಮಾಡಿದರು. ಸರ್ಕಾರದಲ್ಲಿ ಹೆಚ್ಚಿನ ಅನುದಾನ ಸಿಗಬೇಕೆಂದರೆ ವಿಜಯೇಂದ್ರ ಮೂಲಕ ಹೋದರೆ ದಾರಿ ಸಲೀಸು ಎಂಬಂತಹ ವಾತಾವರಣ ಸೃಷ್ಟಿಸಿದ್ದು ಮತ್ತೊಂದು ಹಂತದ ಕಾರ್ಯಾಚರಣೆಯ ಭಾಗವಾಗಿತ್ತು.

ವರಿಷ್ಠರ ಜತೆ ಚರ್ಚೆಗೆ ದೆಹಲಿಗೆ ಹೋಗುವಾಗ ಪಕ್ಷದ ಹಿರೀಕರನ್ನು ಕರೆದುಕೊಂಡು ಹೋಗುತ್ತಿದ್ದುದು ರೂಢಿ. ಇದೇ ಮೊದಲ ಬಾರಿಗೆ ಪುತ್ರರಿಬ್ಬರನ್ನು ಕಟ್ಟಿಕೊಂಡ ಯಡಿಯೂರಪ್ಪ, ಅಮಿತ್ ಶಾ ಭೇಟಿ ಮಾಡಿದ್ದರು. ಸಂಪುಟ ವಿಸ್ತರಣೆಯ ದಿನವೂ ವಿಜಯೇಂದ್ರ ಅವರೇ ಮುಂಚೂಣಿಯಲ್ಲಿ ನಿಂತು ಎಲ್ಲವನ್ನೂ ನೋಡಿಕೊಂಡಿದ್ದು, ಪುತ್ರ ನಾಯಕತ್ವಕ್ಕೆ ಯಡಿಯೂರಪ್ಪ ಕೊಡುತ್ತಿರುವ ಆದ್ಯತೆಯ ಸೂಚಕದಂತಿದೆ ಎಂಬುದು ಬಿಜೆಪಿಯಲ್ಲಿ ಕೇಳಿಬರುತ್ತಿರುವ ಮಾತು.

ವಂಶ ಪಾರಂಪರ್ಯ ರಾಜಕಾರಣ ವಿರೋಧಿಸಿಕೊಂಡು ಬಂದ ವರಿಷ್ಠರು ಇದನ್ನು ಹೇಗೆ ನಿಭಾಯಿಸಲಿದ್ದಾರೆ ಎಂಬುದು ಸದ್ಯದ ಕುತೂಹಲ ಎನ್ನುತ್ತಾರೆ ಬಿಜೆಪಿ ನಾಯಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT