ಭ್ರಷ್ಟ ಅಧಿಕಾರಿಗಳು ನರಕಕ್ಕೆ...

ಶನಿವಾರ, ಏಪ್ರಿಲ್ 20, 2019
32 °C
ಬಿಬಿಎಂಪಿ ಕಾರ್ಯವೈಖರಿ ಬಗ್ಗೆ ಹೈಕೋರ್ಟ್‌ ಕಿಡಿ

ಭ್ರಷ್ಟ ಅಧಿಕಾರಿಗಳು ನರಕಕ್ಕೆ...

Published:
Updated:
Prajavani

ಬೆಂಗಳೂರು: ‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ (ಬಿಬಿಎಂಪಿ) ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಇಲ್ಲಿನ ಭ್ರಷ್ಟಾತಿಭ್ರಷ್ಟ ಅಧಿಕಾರಿಗಳು ಮನುಷ್ಯರೇ ಅಲ್ಲ. ಇವರಿಗೆ ಒಳ್ಳೆಯ ಸಾವೂ ಬರುವುದಿಲ್ಲ. ನರಕಕ್ಕೆ ಹೋಗುತ್ತಾರೆ’ ಎಂದು ಹೈಕೋರ್ಟ್‌ ಹಿಡಿಶಾಪ ಹಾಕಿದೆ.

‘ವಾಲ್‌ಮಾರ್ಕ್ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಸ್ವಾಧೀನ ಪ್ರಮಾಣ ಪತ್ರ (ಆಕ್ಯುಪೆನ್ಸಿ ಸರ್ಟಿಫಿಕೇಟ್‌–ಒ.ಸಿ) ನೀಡಿಲ್ಲ’ ಎಂದು ಆಕ್ಷೇಪಿಸಿ ನಾಕೋಡ ಕನ್ಸ್‌ಟ್ರಕ್ಷನ್ ಲಿಮಿಟೆಡ್‌ ಕಂಪನಿಯ ನಿರ್ದೇಶಕ ಮಹಾವೀರ ಗುಲೇಚಾ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಎನ್.ಸತ್ಯನಾರಾಯಣ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಬೇಕಿದ್ದ ಬಿಬಿಎಂಪಿ ಆಯಕ್ತರು ಬೆಳಗಿನ ಕಲಾಪದಲ್ಲಿ ಗೈರು ಹಾಜರಾಗಿದ್ದರು. ಇದಕ್ಕೆ ವ್ಯಗ್ರರಾದ ನ್ಯಾಯಮೂರ್ತಿಗಳು ಆಯುಕ್ತರನ್ನು ಕೋರ್ಟ್‌ಗೆ ಹಾಜರುಪಡಿಸುವಂತೆ ಬೆಂಗಳೂರು ನಗರ ಪೊಲೀಸ್‌ ಕಮಿಷನರ್‌ ಅವರಿಗೆ ನಿರ್ದೇಶಿಸಿದರು. ಬಿಬಿಎಂಪಿ ಆಯುಕ್ತರ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿ ವಿಚಾರಣೆ ಮುಂದೂಡಿದರು.

ಇದರಿಂದ ಎಚ್ಚೆತ್ತುಕೊಂಡ ಆಯುಕ್ತರು ಮಧ್ಯಾಹ್ನವೇ ಕೋರ್ಟ್‌ಗೆ ಹಾಜರಾದರು.

ವಿಚಾರಣೆ ವೇಳೆ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿಗಳು, ‘ಬಿಬಿಎಂಪಿಯಲ್ಲಿ ದುಡ್ಡು ಕೊಟ್ಟರೆ ಮಾತ್ರವೇ ಕೆಲಸವಾಗೋದು. ಅಧಿಕಾರಿಗಳು ಖಾತೆ ಬದಲಾವಣೆಗೆ ನನ್ನ ಬಳಿಯೇ ₹ 2 ಲಕ್ಷ ಲಂಚ ಕೇಳಿದ್ದರು. ಸತ್ತವರ ಸಮಾಧಿ ಮಾಡುವುದಕ್ಕೂ ಜನರನ್ನು ಅಲೆಸುವವರು ನೀವು’ ಎಂದು ವಾಗ್ದಾಳಿ ನಡೆಸಿದರು.

‘ಬಿಬಿಎಂಪಿಯ 198 ವಾರ್ಡ್‌ಗಳಲ್ಲಿ ಒ.ಸಿ ನೀಡುವಂತೆ ಕೋರಿದ ಅರ್ಜಿಗಳ ವಿವರ ಕೊಡಿ, ಎಷ್ಟು ಇತ್ಯರ್ಥವಾಗಿವೆ, ಎಷ್ಟು ಬಾಕಿ ಇವೆ ಎಂಬ ವಿವರವನ್ನು ಇದೇ 8ರೊಳಗೆ ನೀಡಿ. ಒಂದು ವೇಳೆ ತಪ್ಪು ಮಾಹಿತಿ ನೀಡಿದರೆ ಕ್ರಿಮಿನಲ್ ಕೇಸು ದಾಖಲಿಸುತ್ತೇನೆ’ ಎಂದು ಎಚ್ಚರಿಸಿ ವಾರಂಟ್‌ ಹಿಂಪಡೆದರು.

ಒ.ಸಿ. ಅರ್ಜಿ ಇಟ್ಕೊಂಡು ಏನ್‌ ಕಾವು ಕೊಡ್ತಿರಾ...?

‘ಅಪಾರ್ಟ್‌ಮೆಂಟ್‌ಗಳಿಗೆ ಸ್ವಾಧೀನ ಪ್ರಮಾಣ ಪತ್ರ ನೀಡುವಂತೆ ಕೋರುವ ಅರ್ಜಿಗಳನ್ನು ಆರು ತಿಂಗಳು ಕಳೆದರೂ ವಿಲೇವಾರಿ ಮಾಡುವುದಿಲ್ಲ. ಅಷ್ಟೊಂದು ದಿನ ಇಟ್ಟುಕೊಂಡು ಅವುಗಳಿಗೆಲ್ಲಾ ಏನು ಕಾವು ಕೊಡ್ತೀರಾ’ ಎಂದು ನ್ಯಾಯಮೂರ್ತಿಗಳು ಬಿಬಿಎಂಪಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

‘ಅಧಿಕಾರಿಗಳು ವ್ಯವಸ್ಥಿತ ದಂಧೆ ನಡೆಸುತ್ತಿದ್ದಾರೆ’ ಎಂದು ಬೆಂಕಿ ಉಗುಳಿದರು.

ಇದೇ ಪ್ರಕರಣದಲ್ಲಿ ಹಾಜರಾಗಿದ್ದ ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿ ಎಲ್‌.ಸಿ.ನಾಗರಾಜ್ ಮತ್ತು ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಹೆಚ್ಚುವರಿ ಭೂಸ್ವಾಧೀನ ಅಧಿಕಾರಿ ಮಮತಾ ಅವರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಪೀಠ, ‘ಈ ಪ್ರಕರಣದಲ್ಲಿ ನೀವು ಸಾಕಷ್ಟು ಲೋಪಗಳನ್ನು ಎಸಗಿದ್ದೀರಿ. ನಿಮ್ಮಗಳ ವಿರುದ್ಧ ಕ್ರಿಮಿನಲ್‌ ವಿಚಾರಣೆಗೆ ಆದೇಶಿಸುತ್ತೇನೆ’ ಎಂದು ಮೌಖಿಕವಾಗಿ ಎಚ್ಚರಿಸಿದರು.

 **

ಕೋರ್ಟ್‌ಗೆ ಹಾಜರಾಗುವುದಕ್ಕೆ ಚುನಾವಣೆ ನೆಪ ಹೇಳುತ್ತೀರಿ. ಹಾಗಂತ ನಾನು ಕೋರ್ಟ್‌ ಬಾಗಿಲು ಹಾಕಿಕೊಂಡು ಕೂರಲೇ? (ಬಿಬಿಎಂಪಿ ಆಯುಕ್ತರನ್ನು ಉದ್ದೇಶಿಸಿ ಹೇಳಿದ್ದು)
- ಎಸ್.ಎನ್‌.ಸತ್ಯನಾರಾಯಣ, ನ್ಯಾಯಮೂರ್ತಿ

Tags: 

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !