ಬುಧವಾರ, ಆಗಸ್ಟ್ 12, 2020
22 °C

ಸೇವೆ ಕಾಯಂಗೊಳಿಸಿ: ಬಿಬಿಎಂಪಿ ಗುತ್ತಿಗೆ ವೈದ್ಯರ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಆಸ್ಪತ್ರೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರ ಸೇವೆಯನ್ನು ಕಾಯಂಗೊಳಿಸುವ ಸಂದರ್ಭದಲ್ಲಿ ತಮ್ಮ ಸೇವೆಯನ್ನೂ ಕಾಯಂಗೊಳಿಸಬೇಕು ಎಂದು ಬಿಬಿಎಂಪಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರು ಒತ್ತಾಯಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೂ ಪತ್ರ ಬರೆದಿದ್ದಾರೆ.

ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನದಡಿ (ಎನ್‌ಯುಎಚ್‌ಎಂ) ನಿರ್ವಹಿಸಲಾಗುತ್ತಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ಬಹುತೇಕ ವೈದ್ಯರು ಹಾಗೂ ಬಿಬಿಎಂಪಿಯ ರೆಫರಲ್‌ ಆಸ್ಪತ್ರೆಗಳ ಅನೇಕ ವೈದ್ಯರು ಗುತ್ತಿಗೆ ಆಧಾರದಲ್ಲಿ ನೇಮಕಗೊಂಡವರು.

‘ಎನ್‌ಯುಎಚ್‌ಎಂ ಅಡಿ 60ಕ್ಕೂ ಅಧಿಕ ಹಾಗೂ ಬಿಬಿಎಂಪಿ ಆಸ್ಪತ್ರೆಗಳಲ್ಲಿ 10ಕ್ಕೂ ಅಧಿಕ ವೈದ್ಯರು ವಾರ್ಷಿಕ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ನಮಗೆ ತಿಂಗಳಿಗೆ ₹ 45 ಸಾವಿರ ಗೌರವಧನ ನೀಡಲಾಗುತ್ತಿದೆ. ಕೆಲವರು ಐದು ವರ್ಷಗಳಿಂದ ಬಿಬಿಎಂಪಿಗಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ’ ಎಂದು ಹೆಸರು ಬಹಿರಂಗ ಪಡಿಸಲು ಬಯಸದ ವೈದ್ಯೆಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ನಗರದ ಬಹುತೇಕ ಫಿವರ್‌ ಕ್ಲಿನಿಕ್‌ಗಳನ್ನು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನಿರ್ವಹಿಸುತ್ತಿರುವವರು ಗುತ್ತಿಗೆ ಆಧಾರದಲ್ಲಿ ನೇಮಕವಾದ ವೈದ್ಯರೇ. ಅನೇಕ ವೈದ್ಯರು ಎಂ.ಡಿ ಪದವಿಯನ್ನೂ ಪಡೆದಿದ್ದಾರೆ. ಕೋವಿಡ್‌ ನಿಯಂತ್ರಣದಲ್ಲಿ ಅಪಾಯ ಲೆಕ್ಕಿಸದೇ ಮುಂಚೂಣಿಯಲ್ಲಿ ನಿಂತು ಕಾರ್ಯನಿರ್ವಹಿಸಿದ್ದೇವೆ. ನಮಗೂ ಸೇವಾ ಭದ್ರತೆ ಒದಗಿಸಬೇಕು’ ಎಂದು ಅವರು ಒತ್ತಾಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.