ಬುಧವಾರ, ನವೆಂಬರ್ 20, 2019
25 °C

‘ಸಿವಿಲ್‌ ಎಂಜಿನಿಯರಿಂಗ್‌ಗೆ ಡ್ರೋನ್‌ ತಂತ್ರಜ್ಞಾನ ವರದಾನ’

Published:
Updated:
Prajavani

ಬೆಂಗಳೂರು: ‘ಸಿವಿಲ್‌ ಎಂಜಿನಿಯರಿಂಗ್‌ನಲ್ಲಿ ಡ್ರೋನ್‌ ಬಳಕೆ ವರದಾನವಾಗಿ ಪರಿಗಣಿಸಿದೆ. ಡ್ರೋನ್‌ ಪೂರೈಸುವ ಡಿಜಿಟಲ್‌ ದತ್ತಾಂಶಗಳು ಸಿವಿಲ್‌ ಎಂಜಿನಿಯರಿಂಗ್‌ ಕಟ್ಟಡ ಸಮೀಕ್ಷೆ, ಪರಿಶೀಲನೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ’ ಎಂದು ಎಂಜಿನಿಯರ್‌ ಜಿ.ಎನ್. ಯುವರಾಜ್‌ ಹೇಳಿದರು. 

ಅಸೋಸಿಯೇಷನ್‌ ಆಫ್‌ ಕನ್ಸಲ್ಟಿಂಗ್‌ ಸಿವಿಲ್‌ ಎಂಜಿನಿಯರ್ಸ್‌ನ (ಎಸಿಸಿಐ) ಬೆಂಗಳೂರು ಘಟಕ ಗುರುವಾರ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಸಿವಿಲ್‌ ಎಂಜಿನಿಯರಿಂಗ್‌ನಲ್ಲಿ ಡ್ರೋನ್‌ ಬಳಕೆ’ ಕುರಿತು ಮಾತನಾಡಿದ ಅವರು, ‘ಕಟ್ಟಡಗಳ ಕಾಮಗಾರಿ ಪರಿಶೀಲನೆ ಅಥವಾ ರಿಯಲ್‌ ಎಸ್ಟೇಟ್‌ ಸಮೀಕ್ಷೆಯಲ್ಲಿ ಇವುಗಳನ್ನು ಬಳಸಬಹುದು. ಡ್ರೋನ್‌ ತೆಗೆಯುವ ಚಿತ್ರಗಳ ಸಹಾಯದಿಂದ ಸ್ಥಳಗಳ ನಡುವಿನ ದೂರ ಮತ್ತು ಆ ಪ್ರದೇಶದ ಅಳತೆಯನ್ನೂ ಮಾಡಬಹುದು’ ಎಂದರು. 

‘ಅತಿ ಎತ್ತರದ ಕಟ್ಟಡಗಳಲ್ಲಿ ಬಿರುಕು ಬಿಟ್ಟಿದ್ದನ್ನು ಪರಿಶೀಲಿಸುವ ವೇಳೆ, ಅಪಾಯಕಾರಿ ಸ್ಥಳಗಳಲ್ಲಿನ ಮಾಹಿತಿ ಪಡೆಯುವ ಸಂದರ್ಭದಲ್ಲಿ ಕಾರ್ಮಿಕರು ಪ್ರಾಣಾಪಾಯಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ಆದರೆ, ಡ್ರೋನ್‌ ಮೂಲಕ ಹೆಚ್ಚು ನಿಖರವಾಗಿ ಅಪಾಯಕಾರಿ ಕಟ್ಟಡಗಳ ಪರಿಶೀಲನೆ ನಡೆಸಬಹುದು’ ಎಂದರು. 

‘ಸುಮಾರು ಐದಾರು ನಿವೇಶನಗಳಿದ್ದವರು, ಅಲ್ಲಿ ನಡೆಯುತ್ತಿರುವ ಚಟುವಟಿಕೆ ಅಥವಾ ಕಾಮಗಾರಿ ಪರಿಶೀಲಿಸಲು ಸಮಯವಿರುವುದಿಲ್ಲ. ಅಂದರೆ, ಎಲ್ಲ ಕಡೆಗೆ ಹೋಗಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ನಿವೇಶನಗಳ ಮಾಹಿತಿಯನ್ನು ಕುಳಿತಲ್ಲಿಯೇ ಪಡೆಯಲು ಈ ಡ್ರೋನ್‌ ಸಹಾಯಕ್ಕೆ ಬರುತ್ತವೆ’ ಎಂದು ಯುವರಾಜ್‌ ತಿಳಿಸಿದರು. 

‘ನಗರ ಯೋಜನೆ ಮತ್ತು ಸ್ಮಾರ್ಟ್‌ ಸಿಟಿಯಂತಹ ಯೋಜನೆಯ ಅನುಷ್ಠಾನದ ವೇಳೆ ಡ್ರೋನ್‌ ಸಾಕಷ್ಟು ಸಹಾಯಕ್ಕೆ ಬರುತ್ತದೆ. ಕಟ್ಟಡಗಳ ಎತ್ತರವನ್ನು ಕೂಡ ಇದರಿಂದ ಅಳೆಯಬಹುದಾಗಿರುವುದರಿಂದ ನಿಯಮ ಉಲ್ಲಂಘನೆ ಮಾಡಿದ್ದರೆ ತಕ್ಷಣವೇ ಗಮನಕ್ಕೆ ಬರುತ್ತದೆ’ ಎಂದರು. 

ಡ್ರೋನ್‌ ಬೆಲೆ ಕನಿಷ್ಠ ₹2ಲಕ್ಷದಿಂದ ಪ್ರಾರಂಭವಾಗುತ್ತದೆ. ಸಿವಿಲ್‌ ಎಂಜಿನಿಯರಿಂಗ್‌ ಕಂಪನಿಗಳು ಕೂಡ ಈಗ ಡ್ರೋನ್‌ ಸಮೀಕ್ಷೆ ನಡೆಸುತ್ತಿದ್ದು, 35 ಎಕರೆ ಪ್ರದೇಶದ ಸಮೀಕ್ಷೆಗೆ ₹30ಸಾವಿರದಿಂದ ₹50 ಸಾವಿರ ಶುಲ್ಕ ನಿಗದಿ ಪಡಿಸಿವೆ. 

ನಗರದಲ್ಲಿ ಡ್ರೋನ್‌ ಮೂಲಕ ಯಾರೇ ಸಮೀಕ್ಷೆ ನಡೆಸಬೇಕೆಂದರೆ ಹತ್ತಿರದ ಪೊಲೀಸ್‌ ಠಾಣೆಗೆ ಮಾಹಿತಿ ನೀಡಬೇಕು. ಭಾರತೀಯ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದಿಂದಲೂ (ಡಿಜಿಸಿಎ) ಅನುಮತಿ ಪಡೆಯಬೇಕು.

ಪ್ರತಿಕ್ರಿಯಿಸಿ (+)