‘ಕೋಟೆ’ ವಶಕ್ಕೆ ಕೈ–ಕಮಲ ಕದನ

ಶುಕ್ರವಾರ, ಏಪ್ರಿಲ್ 26, 2019
35 °C
ಬಿ.ಎನ್‌.ಚಂದ್ರಪ್ಪ– ಎ.ನಾರಾಯಣಸ್ವಾಮಿ ನಡುವೆ ನೇರ ಸ್ಪರ್ಧೆ

‘ಕೋಟೆ’ ವಶಕ್ಕೆ ಕೈ–ಕಮಲ ಕದನ

Published:
Updated:

ಚಿತ್ರದುರ್ಗ: ಪಾಳೆಪಟ್ಟು ರಕ್ಷಣೆ, ವಿಸ್ತರಣೆಗೆ ಕಾದಾಟ ನಡೆಸಿದ ಇತಿಹಾಸವನ್ನು ಬೆನ್ನಿಗೆ ಅಂಟಿಸಿಕೊಂಡಿರುವ ಕೋಟೆನಾಡು ಚಿತ್ರದುರ್ಗದಲ್ಲಿ ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಇಬ್ಬರು ‘ಹೊರಗಿನ’ವರ ಮಧ್ಯೆ ನಡೆಯುತ್ತಿರುವ ಸೆಣೆಸಾಟವನ್ನು ಪ್ರೇಕ್ಷಕರಂತೆ ನೋಡುತ್ತಿರುವ ‘ಸ್ಥಳೀಯರು’ ತೀರ್ಪು ನೀಡಲು ತುದಿಗಾಲ ಮೇಲೆ ಕಾಯುತ್ತಿದ್ದಾರೆ.

ಸಂಸದ ಬಿ.ಎನ್‌. ಚಂದ್ರಪ್ಪ ಪುನರಾಯ್ಕೆ ಬಯಸಿ ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಎ. ನಾರಾಯಣಸ್ವಾಮಿ ಅಖಾಡಕ್ಕೆ ಧುಮುಕಿರುವುದು ಮಿತ್ರ ಪಕ್ಷಗಳ ಗೆಲುವಿನ ಹಾದಿಯನ್ನು ಕಠಿಣಗೊಳಿಸಿದೆ. ಪಕ್ಷದ ಮತಗಳು, ಜಾತಿ, ಮೈತ್ರಿ ಸಮೀಕರಣ, ಒಳಮೀಸಲು ಹೋರಾಟದ ಲೆಕ್ಕಾಚಾರಗಳ ಆಧಾರದ ಮೇಲೆ ಇಬ್ಬರು ಅಭ್ಯರ್ಥಿಗಳು ಗೆಲುವಿನ ವಿಶ್ವಾಸ ಹೊಂದಿದ್ದಾರೆ.

ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಕ್ಷೇತ್ರ, ಮಿತ್ರ ಪಕ್ಷಗಳ ಸೂತ್ರದ ಅನ್ವಯ ಕಾಂಗ್ರೆಸ್‌ಗೆ ದಕ್ಕಿದೆ. ಜೆಡಿಎಸ್‌ನಲ್ಲಿ ಪ್ರಬಲ ಆಕಾಂಕ್ಷಿಗಳು ಇಲ್ಲದಿರುವುದರಿಂದ ವರಿಷ್ಠರ ತೀರ್ಮಾನವನ್ನು ಸ್ಥಳೀಯ ನಾಯಕರು ಸಂತಸದಿಂದಲೇ ಸ್ವಾಗತಿಸಿದರು. ಚಂದ್ರಪ್ಪ ಅವರ ಸೌಮ್ಯ ಹಾಗೂ ಮೃದು ಸ್ವಭಾವ ಆರಂಭದ ವಿಘ್ನಗಳನ್ನು ನಿರಾಯಾಸವಾಗಿ ನಿವಾರಿಸಿದವು.

ಕಾಂಗ್ರೆಸ್‌ ವಶದಲ್ಲಿರುವ ‘ಕೋಟೆ’ಯನ್ನು ಮರಳಿ ಪಡೆಯಲು ಪಣ ತೊಟ್ಟಿರುವ ಬಿಜೆಪಿ, ಎ. ನಾರಾಯಣಸ್ವಾಮಿ ಅವರನ್ನು ಕಣಕ್ಕೆ ಇಳಿಸಿದೆ. ಬೆಂಗಳೂರು ನಗರ ಜಿಲ್ಲೆ ಆನೇಕಲ್‌ನ ಇವರಿಗೆ ಕ್ಷೇತ್ರದಲ್ಲಿ ಐವರು ಶಾಸಕರ ಬಲವಿದೆ. ಕಾಂಗ್ರೆಸ್‌ ಭದ್ರಕೋಟೆಯನ್ನು ವರ್ಷದ ಹಿಂದೆ ಛಿದ್ರಗೊಳಿಸಿ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಸಾಧಿಸಿದ ಗೆಲುವು ಬಿಜೆಪಿಯ ವಿಶ್ವಾಸವನ್ನು ಇಮ್ಮಡಿಗೊಳಿಸಿದೆ. ಸಂಘ ಪರಿವಾರದ ಕಾರ್ಯಕರ್ತರು ಆರು ತಿಂಗಳುಗಳಿಂದ ಹರಿಸಿದ ಬೆವರು, ಬಿಜೆಪಿ ಪ್ರಚಾರ ಬಂಡಿಯ ಕೀಲೆಣ್ಣೆಯಾಗಿದೆ. ಮೋದಿ ಅಲೆ ಕೂಡ ನೆರವಿಗೆ ನಿಂತಿದೆ.

ರಾಜಕಾರಣದಲ್ಲಿ ತುಸು ಭಿನ್ನವಾಗಿ ಗುರುತಿಸಿಕೊಂಡಿರುವ ಚಂದ್ರಪ್ಪ, ‘ಸರಳ ಮತ್ತು ಸಜ್ಜನಿಕೆಯ ವ್ಯಕ್ತಿ’ ಎಂಬ ವಿಶೇಷಣ ಅಂಟಿಸಿಕೊಂಡಿದ್ದಾರೆ. ಐದು ವರ್ಷಗಳಲ್ಲಿ ಕಣ್ಣಿಗೆ ಕಾಣುವಂತಹ ಅಭಿವೃದ್ಧಿ ಮಾಡಿಲ್ಲ ಎಂಬ ಆರೋಪ ಇವರ ಮೇಲಿದೆ. ತುಮಕೂರು–ಚಿತ್ರದುರ್ಗ–ದಾವಣಗೆರೆ ನೇರ ರೈಲು ಮಾರ್ಗ ಯೋಜನೆ ಸಾಕಾರಗೊಳ್ಳದಿರುವುದು ಬಿಜೆಪಿಗೆ ಅಸ್ತ್ರವಾಗಿದೆ.

ತುಮಕೂರು ಜಿಲ್ಲೆಯ ಶಿರಾ ಮತ್ತು ಪಾವಗಡ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪ್ರಬಲವಾಗಿವೆ. ಈ ಕ್ಷೇತ್ರಗಳಲ್ಲಿ ಶಕ್ತಿ ವೃದ್ಧಿಸಿಕೊಳ್ಳಲು ಬಿಜೆಪಿ ಹೆಣಗಾಡುತ್ತಿದೆ. ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ನಾಯಕ ಬಿ. ಶ್ರೀರಾಮುಲು ವಿರುದ್ಧ ಸೋಲು ಕಂಡಿದ್ದ ‍ಪ್ರಮುಖರು ಮಿತ್ರ ಪಕ್ಷದ ತೆಕ್ಕೆಗೆ ಬಂದಿದ್ದಾರೆ. 1999 ರಿಂದ 2014ರವರೆಗೆ ನಡೆದ ಪ್ರತಿ ಚುನಾವಣೆಯಲ್ಲಿ ಮತದಾರರು ಹೊಸಬರ ಕೈಹಿಡಿದಿದ್ದಾರೆ.

ಚಂದ್ರಪ್ಪ ಹಾಗೂ ನಾರಾಯಣಸ್ವಾಮಿ ಇಬ್ಬರೂ ಎಡಗೈ ಸಮುದಾಯಕ್ಕೆ ಸೇರಿದವರು. ಕ್ಷೇತ್ರ ವ್ಯಾಪ್ತಿಯಲ್ಲಿ ತುಸು ಹೆಚ್ಚೇ ಇರುವ ಈ ಸಮುದಾಯದ ಮತಗಳು ವಿಭಜನೆ ನಿಚ್ಚಳವಾಗಿದೆ. ಜಿಲ್ಲೆಯ ರಾಜಕೀಯದಲ್ಲಿ ಪ್ರಬಲವಾಗಿರುವ ಭೋವಿ ಸಮುದಾಯ ಬಿಜೆಪಿ ಜತೆ ಮುನಿಸಿಕೊಂಡಂತಿದೆ. ಸಮುದಾಯದ ನಾಯಕರಿಗೆ ಟಿಕೆಟ್ ನೀಡಿಲ್ಲ ಎಂಬುದಕ್ಕಿಂತ ನಾರಾಯಣಸ್ವಾಮಿ ಅವರಿಗೆ ಅವಕಾಶ ಕಲ್ಪಿಸಿರುವುದು ಅಸಮಾಧಾನಕ್ಕೆ ಎಡೆಮಾಡಿಕೊಟ್ಟಿದೆ.

ಒಳ ಮೀಸಲಿಗೆ ಸಂಬಂಧಿಸಿದ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಜಾರಿಗೆ ಸಮಾಜ ಕಲ್ಯಾಣ ಸಚಿವರಾಗಿದ್ದ ನಾರಾಯಣಸ್ವಾಮಿ ಒಲವು ತೋರಿದ್ದರು ಎಂಬುದು ಪರಿಶಿಷ್ಟ ಜಾತಿಯ ಇತರ ಸಮುದಾಯದಲ್ಲಿ ಆಕ್ರೋಶದ ಕಿಡಿ ಹೊತ್ತಿಸಿದೆ. ಭೋವಿ, ಲಂಬಾಣಿ, ಕೊರಚ, ಕೊರಮ ಸೇರಿ ಇತರ ಸಮುದಾಯಗಳು ಒಗ್ಗೂಡಲು ಉತ್ಸುಕವಾಗಿವೆ. ಸತತ ಬರಗಾಲದಿಂದ ಬೇಸತ್ತಿರುವ ಜನರು ನೀರಾವರಿ ಯೋಜನೆಗೆ ಎದುರು ನೋಡುತ್ತಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆ ಚುನಾವಣೆಯ ವಸ್ತುವಾಗಿದೆ.

***

ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿದ್ದ ಅವಧಿಯಲ್ಲಿ ಕ್ಷೇತ್ರ ಸಾಕಷ್ಟು ಅಭಿವೃದ್ಧಿ ಕಂಡಿದೆ. ಸಂವಿಧಾನ ಉಳಿಸಲು ಕಾಂಗ್ರೆಸ್‌ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಅಗತ್ಯವಿದೆ.

-ಬಿ.ಎನ್.ಚಂದ್ರಪ್ಪ, ಕಾಂಗ್ರೆಸ್‌ ಅಭ್ಯರ್ಥಿ

ಜಿಲ್ಲೆಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ರಾಜಕೀಯ ನಾಯಕರು ವಿಫಲರಾಗಿದ್ದಾರೆ. ಬದ್ಧತೆ ಹೊಂದಿರುವ ಹೋರಾಟಗಾರನನ್ನು ಜನ ಕೈಹಿಡಿಯುವ ವಿಶ್ವಾಸವಿದೆ.

-ಎ.ನಾರಾಯಣಸ್ವಾಮಿ, ಬಿಜೆಪಿ ಅಭ್ಯರ್ಥಿ

ಕೇವಲ ಸ್ವಾರ್ಥ, ಅಧಿಕಾರದ ಆಸೆಗಾಗಿ ಚುನಾವಣೆಗೆ ಸ್ಪರ್ಧಿಸುವ ಸಂಸದರು ಬೇಡ. ಜನಪ್ರತಿನಿಧಿಯಾಗುವ ನಾಯಕ ಸಾಮಾನ್ಯರ ಭಾವನೆ, ಕಷ್ಟಗಳಿಗೆ ಸ್ಪಂದಿಸಬೇಕು.

–ರಂಜಿತಾ, ಹಿರಿಯೂರು

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !