ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಾಜೆಕ್ಟ್’ ಹೆಸರಿನಲ್ಲಿ ಲಕ್ಷ ಲಕ್ಷ ಸುಲಿಗೆ!

ಉದ್ಯೋಗಾಕಾಂಕ್ಷಿಗಳಿಗೆ ವಂಚಿಸುತ್ತಿದ್ದ ಕಂಪನಿ ಮಾಲೀಕ, ಕುಖ್ಯಾತ ರೌಡಿ ಪೊಲೀಸ್ ಬಲೆಗೆ
Last Updated 9 ಫೆಬ್ರುವರಿ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪನಿಗಳಲ್ಲಿ ಹೊರಗುತ್ತಿಗೆಯಡಿ ಪ್ರಾಜೆಕ್ಟ್‌ಗಳನ್ನು ಕೊಡಿಸುವುದಾಗಿ ನಂಬಿಸಿ ಉದ್ಯೋಗಾಕಾಂಕ್ಷಿಗಳಿಂದ ಹಣ ಪಡೆದು ವಂಚಿಸುತ್ತಿದ್ದ ಎಂಜಿನಿಯರಿಂಗ್ ಪದವೀಧರ ಹಾಗೂ ಆತನ ರಕ್ಷಣೆಗೆ ನಿಂತಿದ್ದ ರೌಡಿಯೊಬ್ಬನನ್ನು ಸುಬ್ರಹ್ಮಣ್ಯಪುರ ಪೊಲೀಸರು ಬಂಧಿಸಿದ್ದಾರೆ.

‘ಉತ್ತರಹಳ್ಳಿಯ ದರ್ಶನ್ ಅಲಿಯಾಸ್ ಶ್ರೀರಾಮ್ (32) ಹಾಗೂ ಬಿಟಿಎಂಲೇಔಟ್‌ನ ಕುಖ್ಯಾತ ರೌಡಿ ಷಣ್ಮುಗ ಅಲಿಯಾಸ್ ಚನ್ನ (46) ಬಂಧಿತರು. ಆರೋಪಿಗಳಿಂದ ಕಾರು, ಬೈಕ್ ಹಾಗೂ ದಂಧೆಗೆ ಸಂಬಂಧಿಸಿದ ಕೆಲ ದಾಖಲೆಗಳನ್ನು ಜಪ್ತಿ ಮಾಡಿದ್ದೇವೆ. ಇವರ ವಿರುದ್ಧ ಕುಮಾರಸ್ವಾಮಿ ಲೇಔಟ್, ಯಲಹಂಕ ಹಾಗೂ ಸುಬ್ರಹ್ಮಣ್ಯಪುರ ಠಾಣೆಗಳಲ್ಲಿ ದೂರುಗಳು ದಾಖಲಾಗಿದ್ದವು’ ಎಂದು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ತಿಳಿಸಿದರು.

ದಂಪತಿಯಿಂದ ದೋಖಾ: ‘ದರ್ಶನ್ ಹಾಗೂ ಆತನ ಪತ್ನಿ ನಿಖಿತಾ ಗೌಡ, 2015ರಲ್ಲಿ ಆನ್‌ಲೈನ್ ಮೂಲಕ ‘ಡಿಎನ್‌ಎಸ್‌ ಪ್ರೈಮ್’ ಹೆಸರಿನ ಕಂಪನಿಯನ್ನು ಅಮೆರಿಕದಲ್ಲಿ ನೋಂದಣಿ ಮಾಡಿಸಿದ್ದರು. ಆನ್‌ಲೈನ್ ಪೋಟ್ರಲ್ ಕಂಪನಿ ನಡೆಸುತ್ತಿದ್ದ ಸಂಜೀತ್ ಬೋಹಾ ಇದಕ್ಕೆ ಸಹಕರಿಸಿದ್ದ’ ಎಂದು ಪೊಲೀಸರು ಹೇಳಿದ್ದಾರೆ.

‘ವರ್ಷದ ಬಳಿಕ ನಗರದ ಕತ್ರಿಗುಪ್ಪೆ ಹಾಗೂ ಕುಮಾರಸ್ವಾಮಿ ಲೇಔಟ್‌ನಲ್ಲಿ ಕಂಪನಿ ಶಾಖೆಗಳನ್ನು ತೆರೆದ ‌ದರ್ಶನ್, ‘ನಾವು ಇನ್ಫೋಸಿಸ್, ಎಚ್‌ಪಿ, ಒರಾಕಲ್, ಐಬಿಎಂ, ವಿಎಂ ವೇರ್ ಸೇರಿದಂತೆ ಹೆಸರಾಂತ ಕಂಪನಿಗಳ ಜತೆ ಹೊರಗುತ್ತಿಗೆ ಪ್ರಾಜೆಕ್ಟ್‌ಗಳ ನಿರ್ವಹಣೆ ಸಂಬಂಧ ಒಪ್ಪಂದ ಮಾಡಿಕೊಂಡಿದ್ದೇವೆ’ ಎಂದು ಪ್ರಚಾರ ಮಾಡಿಸಿದ್ದ. ಇದನ್ನು ನಂಬಿಸಲು ಆ ಕಂಪನಿಗಳ ಹೆಸರಿನಲ್ಲಿ ನಕಲಿ ಇ–ಮೇಲ್ ಐಡಿ ಸೃಷ್ಟಿಸಿ ದಾಖಲಾತಿಗಳನ್ನು ಸಿದ್ಧಪಡಿಸಿದ್ದ. ಅವುಗಳನ್ನೇ ಜನರಿಗೆ ತೋರಿಸಿ ವಿಶ್ವಾಸ ಗಳಿಸಿದ್ದ.’

‘ಇದನ್ನು ನಂಬಿ ಬರುತ್ತಿದ್ದ ಅಭ್ಯರ್ಥಿಗಳಿಂದ ಮೊದಲು ಹಣ ಪಡೆಯುತ್ತಿದ್ದ ಆರೋಪಿಗಳು, ಅಧಿಕೃತವಲ್ಲದ ನಕಲಿ ಪ್ರಾಜೆಕ್ಟ್‌ಗಳನ್ನು ನೀಡುತ್ತಿದ್ದರು. ಅದರ ಮೇಲೆ ಒಂದೆರಡು ತಿಂಗಳು ಅವರು ಕೆಲಸ ಮಾಡಿದ ಬಳಿಕ, ‘ನಿಮ್ಮ ಕೆಲಸ ಗುಣಮಟ್ಟದಿಂದ ಕೂಡಿಲ್ಲ’ ಎಂದು ಸಬೂಬು ಹೇಳಿ ಗುತ್ತಿಗೆ ರದ್ದು ಮಾಡುತ್ತಿದ್ದ. ಆದರೆ ಹಣವನ್ನು ಮರಳಿಸುತ್ತಿರಲಿಲ್ಲ. ಈ ವಂಚನೆಯನ್ನು ಪ್ರಶ್ನಿಸಿದರೆ ರೌಡಿ ಷಣ್ಮುಗನ ಮೂಲಕ ಬೆದರಿಕೆ ಹಾಕಿಸುತ್ತಿದ್ದ.’

‘ಕಂಪನಿ ವಿರುದ್ಧ ಜನ ಠಾಣೆಗೆ ದೂರು ಕೊಡುತ್ತಿದ್ದಂತೆಯೇ ಎಚ್ಚೆತ್ತ ದರ್ಶನ್, ಇತ್ತೀಚಿಗೆ ಆ ಕಂಪನಿಯನ್ನು ಮುಚ್ಚಿ ‘ಫಾಕ್ಸ್ ರನ್’ ಹೆಸರಿನಲ್ಲಿ ಮತ್ತೊಂದು ನಕಲಿ ಕಂಪನಿ ತೆರೆದಿದ್ದ. ಬೆಂಗಳೂರು ಮಾತ್ರವಲ್ಲದೆ ಆಂಧ್ರಪ್ರದೇಶ, ತಮಿಳುನಾಡು, ಕೇರಳ ಹಾಗೂ ಗೋವಾ ರಾಜ್ಯಗಳಲ್ಲಿ ಹೊಸದಾಗಿ ಸಾಫ್ಟ್‌ವೇರ್ ಕಂಪನಿ, ಕಾಲ್‌ಸೆಂಟರ್, ಹೊರಗುತ್ತಿಗೆ ಪ್ರೊಸೆಸಿಂಗ್ ಕಂಪನಿಗಳನ್ನು ಪ್ರಾರಂಭಿಸಲು ಕನಸು ಕಂಡಿದ್ದ ಯುವಕರಿಗೂ ಟೋಪಿ ಹಾಕಿದ್ದ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬೆದರಿಸಿದರೆ ₹ 5 ಸಾವಿರ: ಮೋಸ ಹೋದವರ ಪೈಕಿ ಕೆಲವರು ದರ್ಶನ್ ಮನೆ ಹತ್ತಿರ ಹೋಗಿ ಗಲಾಟೆ ಮಾಡುತ್ತಿದ್ದರು. ಅವರನ್ನು ಬೆದರಿಸಿ ಕಳುಹಿಸುವುದಕ್ಕಾಗಿಯೇ ರೌಡಿ ಷಣ್ಮುಗನನ್ನು ಪರಿಚಯ ಮಾಡಿಕೊಂಡಿದ್ದ ಆತ, ಜನ ಮನೆ ಹತ್ತಿರ ಬಂದ ಕೂಡಲೇ ರೌಡಿಗೆ ಕರೆ ಮಾಡುತ್ತಿದ್ದ. ಆತ ಸಹಚರರೊಂದಿಗೆ ಬಂದು ಅವರನ್ನು ಬೆದರಿಸಿ ಓಡಿಸುತ್ತಿದ್ದ. ಈ ಕೆಲಸಕ್ಕೆ ದರ್ಶನ್ ಒಂದು ಬಾರಿಗೆ ₹ 5 ಸಾವಿರ ಕೊಡುತ್ತಿದ್ದ.

ರಾಜಕಾರಣಿ ಸೋದರಿಯ ಪುತ್ರಿ

‘ತಿಪಟೂರು ತಾಲ್ಲೂಕಿನ ದರ್ಶನ್, ಎಂಜಿನಿಯರಿಂಗ್ ವ್ಯಾಸಂಗ ಮುಗಿದ ಬಳಿಕ 2010ರಲ್ಲಿ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದ. ಅಲ್ಲಿ ನಿಖಿತಾ ಗೌಡ ಅವರ ಪರಿಚಯವಾಗಿ, ಆ ಸ್ನೇಹ ಕ್ರಮೇಣ ಪ್ರೀತಿಗೆ ತಿರುಗಿತ್ತು. 2012ರಲ್ಲಿ ಕಂಪನಿ ತೊರೆದ ಈ ಜೋಡಿ, 2014ರಲ್ಲಿ ಸ್ವಂತ ಉದ್ಯಮ ಪ್ರಾರಂಭಿಸಲು ಸಿದ್ಧತೆ ನಡೆಸುತ್ತಿತ್ತು’

‘ಬೆಳಗಾವಿ ಜಿಲ್ಲೆ ಕಾಗವಾಡ ಕ್ಷೇತ್ರದ ಬಿಜೆಪಿ ಮುಖಂಡರೊಬ್ಬರ ತಂಗಿ ಮಗಳಾದ ನಿಖಿತಾ, ಕುಟುಂಬದ ವಿರೋಧದ ನಡುವೆಯೂ ದರ್ಶನ್ ಅವರನ್ನು ವಿವಾಹವಾಗಿದ್ದರು. ಬಳಿಕ ಕಂಪನಿ ತೆರೆದು ವಂಚನೆ ಪ್ರಾರಂಭಿಸಿದ್ದರು. ನಿಖಿತಾ ಒಂದೂವರೆ ವರ್ಷದ ಮಗುವಿನ ತಾಯಿ. ಪ್ರೇಮ ವಿವಾಹವಾದ ಕಾರಣ ಪೋಷಕರೂ ದೂರವಾಗಿದ್ದಾರೆ. ಹೀಗಾಗಿ, ಮಗುವಿನ ಆರೈಕೆಯನ್ನು ಅವರೇ ಮಾಡಬೇಕಿದೆ. ಮಾನವೀಯತೆ ದೃಷ್ಟಿಯಿಂದ ಸದ್ಯ ಅವರನ್ನು ಬಂಧಿಸಿಲ್ಲ’ ಎಂದರು.

ಗಂಟೆ ಲೆಕ್ಕದಲ್ಲಿ ಗಳಿಕೆಯ ಆಮಿಷ

‘ಸಾಫ್ಟ್‌ವೇರ್ ಪ್ರಾಜೆಕ್ಟ್‌ಗಳಿಂದ ಪ್ರತಿ ಗಂಟೆಗೆ ₹ 400 ರಿಂದ ₹ 500ರವೆಗೆ ದುಡಿಯಬಹುದು’ ಎಂದು ದರ್ಶನ್ ಪ್ರಚಾರ ಮಾಡಿದ್ದ. ಹೆಚ್ಚು ಗಳಿಕೆಯ ಆಸೆಗೆ ಬಿದ್ದ ನೂರಕ್ಕೂ ಹೆಚ್ಚು ಆಕಾಂಕ್ಷಿಗಳಿಂದ ₹1 ಲಕ್ಷದಿಂದ ₹10 ಲಕ್ಷದವರೆಗೆ ಪ್ರಾಜೆಕ್ಟ್ ಶುಲ್ಕ ಪಡೆದಿದ್ದ. ವಂಚನೆಯ ಹಣದಲ್ಲೇ ದಂಪತಿ ₹ 45 ಲಕ್ಷದ ಫ್ಲ್ಯಾಟ್ ಹಾಗೂ ₹12 ಲಕ್ಷದ ಕಾರು ಖರೀದಿಸಿದ್ದರು. ಜತೆಗೆ ತಿಂಗಳಿಗೊಮ್ಮೆ ವಿದೇಶ ಪ್ರವಾಸ ಹೋಗಿ ಐಷಾರಾಮಿಯಾಗಿ ಬದುಕು ನಡೆಸುತ್ತಿದ್ದರು’ ಎಂದು ಪೊಲೀಸರು ವಿವರಿಸಿದರು.

***

ಆರೋಪಿಗಳು ₹2 ಕೋಟಿವರೆಗೆ ವಂಚನೆ ಮಾಡಿದ್ದಾರೆ. ಇನ್ನೂ ಯಾರಾದರೂ ಇವರಿಂದ ಮೋಸ ಹೋಗಿದ್ದರೆ, ಅಂಜಿಕೆ ಇಲ್ಲದೆ ದೂರು ಕೊಡಬಹುದು.

- ಅಣ್ಣಾಮಲೈ, ಡಿಸಿಪಿ, ದಕ್ಷಿಣ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT