ಬೆಂಗಳೂರು: ಅಪಘಾತ ಸಂಭವಿಸಿದ ವಿಚಾರವಾಗಿ ಐಪಿಎಸ್ ಅಧಿಕಾರಿ ಪುತ್ರ ಹಾಗೂ ಬಿಎಂಟಿಸಿ ಬಸ್ ಚಾಲಕನ ನಡುವೆ ಗಲಾಟೆ ಆಗಿದ್ದು, ಆ ಸಂಬಂಧ ಏರ್‌ಪೋರ್ಟ್ ಟ್ಯಾಕ್ಸಿ ಚಾಲಕ ವೆಂಕಟೇಶ್ ಎಂಬುವರನ್ನು ಪೊಲೀಸರು ಗುರುವಾರ ಮಧ್ಯಾಹ್ನ ವಶಕ್ಕೆ ಪಡೆದು ರಾತ್ರಿ ಬಿಟ್ಟು ಕಳುಹಿಸಿದ್ದಾರೆ.
‘ಫೆಬ್ರುವರಿ 16ರಂದು ಹೊರವರ್ತುಲ ರಸ್ತೆಯ ಹೆಬ್ಬಾಳ ವೃತ್ತದಲ್ಲಿಮಂಕರಾನ್ ಸಿಂಗ್ ಸಂಧು ಎಂಬುವರ ಫಾರ್ಚ್ಯೂನರ್ ಕಾರಿಗೂ ಬಿಎಂಟಿಸಿ ಬಸ್ಸಿಗೂ ಅಪಘಾತವಾಗಿತ್ತು. ಅದರಿಂದಾಗಿ ಮಂಕರಾನ್ ಸಿಂಗ್ ಹಾಗೂ ಬಸ್ಸಿನ ಚಾಲಕನ ನಡುವೆ ಗಲಾಟೆ ಶುರುವಾಗಿತ್ತು. ಅದೇ ದಾರಿಯಲ್ಲಿ ಹೊರಟಿದ್ದ ವೆಂಕಟೇಶ್ ಹಾಗೂ ಇತರರು, ಜಗಳ ಬಿಡಿಸಲು ಹೋಗಿದ್ದರು’ ಎಂದು ಕರ್ನಾಟಕ ಸಿಟಿ ಟ್ಯಾಕ್ಸಿ ಒಕ್ಕೂಟದ ಹಮೀದ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಘಟನೆ ನಡೆದು ಹಲವು ದಿನಗಳ ನಂತರ ವೆಂಕಟೇಶ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಒತ್ತಾಯಪೂರ್ವಕವಾಗಿ ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆ ಮಾಡಿದ್ದಾರೆ. ಅಪಘಾತದಲ್ಲಿ ಮಂಕರಾನ್ ಸಿಂಗ್ ಅವರ ತಪ್ಪಿದೆ. ಐಪಿಎಸ್ ಅಧಿಕಾರಿ ಪುತ್ರನೆಂಬ ಕಾರಣಕ್ಕೆ ಪೊಲೀಸರು ಆತನ ಪರ ನಿಂತುಕೊಂಡಿದ್ದಾರೆ. ಅಮಾಯಕ ಚಾಲಕನನ್ನು ವಶಕ್ಕೆ ಪಡೆದು ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ’ ಎಂದು ಅವರು ದೂರಿದರು.
ಪ್ರಧಾನ ಕಚೇರಿಯಲ್ಲಿ ವಶಕ್ಕೆ: ‘ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (ಕೆಎಸ್‌ಟಿಡಿಸಿ) ಟ್ಯಾಕ್ಸಿ ಚಾಲಕರಾದ ವೆಂಕಟೇಶ್, ಗುರುವಾರ ಎಂದಿನಂತೆ ಕೆಲಸಕ್ಕೆ ಬಂದಿದ್ದರು. ಅವರಿಗೆ ಕೆಲಸ ನೀಡದ ಕೆಎಸ್‌ಟಿಡಿಸಿ ಅಧಿಕಾರಿ, ಸಾರಿಗೆ ಇಲಾಖೆಯ ಜಂಟಿ ಆಯುಕ್ತರ ಬಳಿ ಕಳುಹಿಸಿಕೊಟ್ಟಿದ್ದರು. ‘ಎಡಿಜಿಪಿ ಪಿ.ಎಸ್. ಸಂಧು ಅವರ ಪುತ್ರನ ಜೊತೆ ಗಲಾಟೆ ಮಾಡಿಕೊಂಡು ಬೆದರಿಕೆ ಹಾಕಿದ್ದಿಯಲ್ಲ’ ಎಂದು ಬೈದಿದ್ದ ಜಂಟಿ ಆಯುಕ್ತ, ನೃಪತುಂಗ ರಸ್ತೆಯಲ್ಲಿರುವ ಪೊಲೀಸ್ ಪ್ರಧಾನ ಕಚೇರಿಗೆ ಹೋಗಿ ಎಡಿಜಿಪಿ ಅವರನ್ನು ಭೇಟಿಯಾಗು’ ಎಂದು ಹೇಳಿ ಕಳುಹಿಸಿದ್ದರು’.
‘ಪ್ರವೇಶ ದ್ವಾರದ ಪುಸ್ತಕದಲ್ಲಿ ಹೆಸರು ನೋಂದಾಯಿಸಿ ಕಚೇರಿಯೊಳಗೆ ಹೋದಾಗ, ಅಲ್ಲಿಯೇ ಐಪಿಎಸ್ ಅಧಿಕಾರಿಯ ಪುತ್ರ ಇದ್ದ. ಎಡಿಜಿಪಿ ಅವರನ್ನು ಭೇಟಿಯಾಗಲು ಅವಕಾಶವನ್ನೇ ನೀಡಲಿಲ್ಲ. ಸ್ಥಳದಲ್ಲಿದ್ದ ಕಚೇರಿಯ ಅಧಿಕಾರಿಯೊಬ್ಬರು, ವೆಂಕಟೇಶ್ ಅವರನ್ನು ಪೊಲೀಸರಿಗೆ ಹಿಡಿದುಕೊಟ್ಟು ಠಾಣೆಗೆ ಕಳುಹಿಸಿದರು’ ಎಂದು ಹಮೀದ್ ತಿಳಿಸಿದರು.
‘ನಾವೆಲ್ಲರೂ ಠಾಣೆಗೆ ಹೋಗಿ ವಿಚಾರಿಸುವಷ್ಟರಲ್ಲೇ ಮುಚ್ಚಳಿಕೆ ಬರೆಸಿಕೊಂಡು ಅವರನ್ನು ಬಿಟ್ಟು ಕಳುಹಿಸಿದ್ದಾರೆ. ಅವರ ಮೇಲಿನ ಆರೋಪವೇನು ಎಂದು ಕೇಳಿದರೂ ಪೊಲೀಸರು ಪ್ರತಿಕ್ರಿಯಿಸುತ್ತಿಲ್ಲ’ ಎಂದು ದೂರಿದರು.
ಕರ್ನಾಟಕ ಆಟೊ ಮತ್ತು ಟ್ಯಾಕ್ಸಿ ಫೆಡರೇಷನ್ ಅಧ್ಯಕ್ಷ ತನ್ವೀರ್ ಪಾಷಾ, ‘ಮಂಕರಾನ್ ಸಿಂಗ್ ಹಾಗೂ ಬಸ್ಸಿನ ಚಾಲಕನ ನಡುವೆ ಗಲಾಟೆ ಆಗಿದ್ದು, ಆ ಬಗ್ಗೆ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿ. ಅದನ್ನು ಬಿಟ್ಟು ಜಗಳ ಬಿಡಿಸಲು ಹೋಗಿದ್ದ ಅಮಾಯಕ ಚಾಲಕನನ್ನು ವಶಕ್ಕೆ ಪಡೆದಿದ್ದು ಖಂಡನೀಯ’ ಎಂದರು.
‘ನನ್ನಿಂದ ತಪ್ಪಾಗಿದೆ, ಕ್ಷಮೆಯಾಚಿಸುತ್ತೇನೆ’
‘ಅಪಘಾತವಾದ ಸ್ಥಳದಲ್ಲಿ 40 ಜನರನ್ನು ಸೇರಿಸಿ ಫಾರ್ಚ್ಯೂನರ್ ಕಾರಿನ ಚಾಲಕನ ಮೇಲೆ ಗಲಾಟೆ ಮಾಡಿಸಿದೆ. ಕೆಲವರು ಕಾರಿಗೂ ಹಾನಿ ಮಾಡಲು ಮುಂದಾದರು. ನನ್ನಿಂದ ತಪ್ಪಾಗಿದ್ದು, ಮಂಕರಾನ್ ಸಿಂಗ್ ಅವರ ಬಳಿ ಕ್ಷಮೆಯಾಚಿಸುತ್ತೇನೆ’ ಎಂದು ಚಾಲಕ ವೆಂಕಟೇಶ್, ತಪ್ಪೊಪ್ಪಿಗೆ ಮುಚ್ಚಳಿಕೆಯಲ್ಲಿ ಹೇಳಿದ್ದಾರೆ.
‘ನನ್ನ ಪಾಡಿಗೆ ನಾನು ಸುಮ್ಮನಿರದೇ, ಉದ್ವೇಗಗೊಂಡು ಗಲಾಟೆ ಮಾಡಿದೆ. ಇನ್ನು ಮುಂದೆ ಈ ತೆರನಾದ ಗಲಾಟೆಯಲ್ಲಿ ಪಾಲ್ಗೊಂಡರೆ ನನ್ನ ವಿರುದ್ಧ ಕಾನೂನು ಕ್ರಮ ಜರುಗಿಸಬಹುದು’ ಎಂದು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.