ಶನಿವಾರ, ಸೆಪ್ಟೆಂಬರ್ 18, 2021
27 °C
ಹೆರಿಗೆ ವೇಳೆ ನಿರ್ಲಕ್ಷ್ಯ ಆರೋಪ: ಬಾಲಕಿಯ ಕೈ ಊನ

ವೈದ್ಯರ ವಿರುದ್ಧ ಮರು ವಿಚಾರಣೆಗೆ ನಿರ್ದೇಶನ

ಬಿ.ಎಸ್‌.ಷಣ್ಮುಖಪ್ಪ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಹೆರಿಗೆ ಮಾಡಿಸುವಾಗ ನಿರ್ಲಕ್ಷ್ಯ ತೋರಿದ ಕಾರಣಕ್ಕೆ ಮಗುವಿನ ಒಂದು ಕೈ ಶಾಶ್ವತ ಊನಕ್ಕೆ ಒಳಗಾಗಿದೆ’ ಎಂಬ ಆರೋಪದಿಂದ ಮುಕ್ತರಾಗಿದ್ದ ಇಬ್ಬರು ವೈದ್ಯರ ವಿರುದ್ಧ ಮರು ವಿಚಾರಣೆ ನಡೆಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ.

‘ನಗರದ ಚಾಮರಾಜಪೇಟೆಯಲ್ಲಿರುವ ಮೆಸರ್ಸ್‌ ಬೃಂದಾವನ ನರ್ಸಿಂಗ್‌ ಹೋಂ ಮಾಲೀಕ ಡಾ. ಪ್ರಕಾಶ್‌ ಮತ್ತು ಪ್ರಸೂತಿ ವೈದ್ಯೆ ಹಾಗೂ ಸ್ತ್ರೀರೋಗ ತಜ್ಞರೂ ಆದ ಡಾ. ರಾಜಲಕ್ಷ್ಮಿ ವಿ.ರಾವ್‌ ವಿರುದ್ಧದ ಆಪಾದನೆಗಳಿಗೆ ಸಂಬಂಧಿಸಿದಂತೆ ಮರು ವಿಚಾರಣೆ ನಡೆಸಬೇಕು’ ಎಂದು ನ್ಯಾಯಮೂರ್ತಿ ಜಾನ್‌ ಮೈಕೆಲ್‌ ಕುನ್ಹ ಅವರಿದ್ದ ಏಕಸದಸ್ಯ ನ್ಯಾಯಪೀಠ ಆದೇಶಿಸಿದೆ.

ಈ ಕುರಿತಂತೆ ಬನಶಂಕರಿ ಮೂರನೇ ಹಂತದ ನಿವಾಸಿಗಳಾದ ಮಗುವಿನ ತಾಯಿ ದೀಪಾ ಪ್ರಶಾಂತ್‌ ಹಾಗೂ ಅವರ ಪತಿ ಎಚ್‌.ಜಿ.ಪ್ರಶಾಂತ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಪೀಠ ಭಾಗಶಃ ಮಾನ್ಯ ಮಾಡಿದ್ದು, ‘ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ)–1860ರ ಕಲಂ 338ರ ಅನುಸಾರ ವಿಚಾರಣಾ ನ್ಯಾಯಾಲಯ ಮರು ವಿಚಾರಣೆ ನಡೆಸಬೇಕು’ ಎಂದು ಆದೇಶಿಸಿದೆ.

ಪ್ರಕರಣವೇನು?: ‘ದೀಪಾ ಅವರು ಬೃಂದಾವನ ನರ್ಸಿಂಗ್‌ ಹೋಂನಲ್ಲಿ 2001ರ ಆಗಸ್ಟ್‌ 5ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಡಾ.ರಾಜಲಕ್ಷ್ಮಿ ವಿ.ರಾವ್‌ ಈ ಹೆರಿಗೆ ಮಾಡಿಸಿದ್ದರು. ಹೆರಿಗೆ ಸಮಯದಲ್ಲಿ ಮಗು 3.2 ಕೆ.ಜಿ. ತೂಕ ಹೊಂದಿತ್ತು ಮತ್ತು ಆರೋಗ್ಯವಾಗಿಯೂ ಇತ್ತು ಆದರೆ ನಂತರದಲ್ಲಿ ಎಡಗೈ ಶಾಶ್ವತ ಊನಕ್ಕೆ ಒಳಗಾಗಿದೆ’ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಹೆರಿಗೆಯಾದ ಸ್ವಲ್ಪ ಸಮಯದ ನಂತರ ರಾಜಲಕ್ಷ್ಮಿ ಅವರು, ‘ಹೆರಿಗೆ ಸಮಯದಲ್ಲಿ ಮಗುವಿನ ಎಡಗೈಗೆ ಕೊಂಚ ಒತ್ತಡ ಬಿದ್ದಿದೆ. 10–15 ದಿನಗಳಲ್ಲಿ ಸರಿ ಹೋಗುತ್ತದೆ ಎಂದು ತಿಳಿಸಿದ್ದರು. ರಾಜಲಕ್ಷ್ಮಿ ಅವರು ತಿಳಿಸಿದ್ದಂತೆ ಕೈ ಸುಧಾರಿಸಲೇ ಇಲ್ಲ. ಇದರಿಂದಾಗಿ ನಾವು ಮಗುವನ್ನು ಜಯನಗರದ ಮಕ್ಕಳ ತಜ್ಞ ಡಾ.ಶಂಕರ ಹೆಗಡೆ ಬಳಿ ಚಿಕಿತ್ಸೆಗೆ ಕರೆದೊಯ್ದಿದ್ದೆವು. ಅಲ್ಲಿಯೂ ಸರಿ ಹೋಗಿರಲಿಲ್ಲ’ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.

‘ಕಡೆಗೆ ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗೆ ಖಾಸಗಿ ದೂರು ಸಲ್ಲಿಸಿದೆವು. ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿತ್ತು. ಏತನ್ಮಧ್ಯೆ ಆರೋಪಿ ವೈದ್ಯರು ತಮ್ಮನ್ನು ಈ ಪ್ರಕರಣದಿಂದ ಕೈಬಿಡುವಂತೆ ಕೋರಿ ಮ್ಯಾಜಿಸ್ಟ್ರೇಟ್‌ ಮುಂದೆ ಅರ್ಜಿ ಸಲ್ಲಿಸಿದ್ದರು. ಆದರೆ, ನ್ಯಾಯಾಧೀಶರು ಈ ಅರ್ಜಿಯನ್ನು ತಿರಸ್ಕರಿಸಿದ್ದರು. ಇದನ್ನು ಪ್ರಶ್ನಿಸಿದ್ದ ವೈದ್ಯರು ಸೆಷನ್ಸ್‌ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಸೆಷನ್ಸ್ ಕೋರ್ಟ್ 2011ರ ಮೇ 18ರಂದು ಈ ಮನವಿಯನ್ನು ಪುರಸ್ಕರಿಸಿ ಆರೋಪಿ ವೈದ್ಯರಿಗೆ ಪ್ರಕರಣದಿಂದ ಮುಕ್ತಿ ನೀಡಿದೆ’ ಎಂದು ಅರ್ಜಿದಾರರು ಹೈಕೋರ್ಟ್‌ಗೆ ಸಲ್ಲಿಸಿದ್ದ ಮೇಲ್ಮನವಿಯಲ್ಲಿ ವಿವರಿಸಿದ್ದರು.

ಐಪಿಸಿ ಕಲಂ 338 ಏನು ಹೇಳುತ್ತದೆ?
‘ಅಲಕ್ಷ್ಯ ಮತ್ತು ಹುಚ್ಚು ಧೈರ್ಯದಿಂದ ಯಾವುದೇ ವ್ಯಕ್ತಿಗೆ ಘೋರ ಗಾಯವೊಂದನ್ನು, ಒಬ್ಬರಿಗಿಂತ ಹೆಚ್ಚು ಜನರು ಸೇರಿ ಸಮಾನ ಉದ್ದೇಶದಿಂದ ಮಾಡಿದ್ದರೆ ಅದು ಶಿಕ್ಷಾರ್ಹ ಅಪರಾಧ’ ಎಂದು ಐಪಿಸಿ ಕಲಂ 338 ವಿವರಿಸುತ್ತದೆ.

ಈ ಅಪರಾಧಕ್ಕೆ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ₹ 1 ಸಾವಿರ ದಂಡ ಇಲ್ಲವೇ ಎರಡರಲ್ಲಿ ಒಂದು ಅಥವಾ ಎರಡನ್ನೂ ವಿಧಿಸಬಹುದಾಗಿದೆ.

ಅರ್ಜಿದಾರರ ಮುಂದಿರುವ ಆಯ್ಕೆಗಳೇನು?
* ಆಗಿರುವ ನಷ್ಟಕ್ಕೆ ನ್ಯಾಯಮಂಡಳಿ ಇಲ್ಲವೇ ಸಿವಿಲ್‌ ದಾವೆ ಹೂಡಬಹುದು.
* ವೈದ್ಯರ ಸನ್ನದು ರದ್ದು ಕೋರಿ ಭಾರತೀಯ ವೈದ್ಯಕೀಯ ಮಂಡಳಿಗೆ ಅರ್ಜಿ ಸಲ್ಲಿಸಬಹುದು.
* ‘ಪ್ರಕರಣದ ಸಮಗ್ರ ತನಿಖೆ ನಡೆಸುವಂತೆ ಪೊಲೀಸರಿಗೆ ದೂರು ಸಲ್ಲಿಸಬಹುದು’ ಎನ್ನುತ್ತಾರೆ ವಕೀಲ ಸಿ.ಎಚ್‌.ಹನುಮಂತರಾಯ ಅವರು.

‘ಎರ್ಬ್‌ ಪಾಲ್ಸಿ’ ತೊಂದರೆ
‘ಸ್ವಾಭಾವಿಕ ಹೆರಿಗೆ ಸಂದರ್ಭದಲ್ಲಿ ಇಕ್ಕಳದಿಂದ ಮಗುವಿನ ತಲೆಯನ್ನು ಹೊರಗೆ ಎಳೆಯುವಾಗ ಎರ್ಬ್‌ ಪಾಲ್ಸಿ ತೊಂದರೆ ಉಂಟಾಗಿದೆ’ ಎಂಬುದು ಪೋಷಕರ ಆರೋಪ.

‘ಇಕ್ಕಳದಿಂದ ಹೊರಗೆಳೆಯುವಾಗ ಮಗುವಿನ ಕೈಗಳ ಮೇಲ್ಭಾಗಕ್ಕೆ (ಭುಜದ ಮೇಲ್ಬಾಗ) ಧಕ್ಕೆ ಉಂಟಾಗುವುದನ್ನು ವೈದ್ಯಕೀಯ ಪರಿಭಾಷೆಯಲ್ಲಿ ಎರ್ಬ್‌ ಪಾಲ್ಸಿ ಎನ್ನುತ್ತಾರೆ. ಇದು ಒಂದು ರೀತಿಯಲ್ಲಿ ಪಾರ್ಶ್ವವಾಯು ತಗುಲಿದಂತೆ’ ಎನ್ನಲಾಗುತ್ತದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು