ಅದ್ದೂರಿ ಕೃಷಿ ಮೇಳಕ್ಕೆ ಸಂಭ್ರಮದ ತೆರೆ

7
ಕೃಷಿ ವಿವಿ ಆವರಣದಲ್ಲಿ ನಾಲ್ಕು ದಿನಗಳ ಕಾಲ ನಡೆದ ಹಸಿರು ಜಾತ್ರೆ l ಬರೋಬ್ಬರಿ 13 ಲಕ್ಷ ಜನರ ಭೇಟಿ

ಅದ್ದೂರಿ ಕೃಷಿ ಮೇಳಕ್ಕೆ ಸಂಭ್ರಮದ ತೆರೆ

Published:
Updated:

ಬೆಂಗಳೂರು: ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಾಲ್ಕು ದಿನಗಳ ಕಾಲ ನಡೆದ ಕೃಷಿ ಮೇಳಕ್ಕೆ ಬರೋಬ್ಬರಿ 13 ಲಕ್ಷ ಜನ ಭೇಟಿ ನೀಡಿದರು.

ಕೃಷಿ ಯಂತ್ರಗಳು, ನೀರಾವರಿ ಪರಿಕರ, ಸಸ್ಯ ವೈವಿಧ್ಯ, ಸಮಗ್ರ ಕೃಷಿ, ಪಶು, ಕೋಳಿ ಸಾಕಣೆ, ಕೃಷಿ–ಉದ್ಯಮ ಕ್ಷೇತ್ರಗಳ ಹೊಸ ಬೆಳವಣಿಗೆಗಳ ಕುರಿತು ಕುತೂಹಲಕರ ಮಾಹಿತಿ ವಿನಿಮಯ ಮೇಳದಲ್ಲಿ ನಡೆಯಿತು. ಆಹಾರ ರುಚಿಯ ವೈವಿಧ್ಯ ಜನರ ಬಾಯಿ ತಣಿಸಿತು. ವಿವಿ ಆವರಣದಲ್ಲಿ ಅಕ್ಷರಶಃ ರೈತರ– ಕೃಷಿ ಆಸಕ್ತರ ಜಾತ್ರೆಯೇ ನಡೆಯಿತು.

‘ಈ ಹಿಂದಿನ ವರ್ಷಗಳಲ್ಲಿ ಜನರು ಕೇವಲ ಮಳಿಗೆಗಳಿಗೆ ಭೇಟಿ ನೀಡಿ ವಾಪಸಾಗುತ್ತಿದ್ದರು. ಈ ಬಾರಿ ಬೆಳೆಯ ತಾಕುಗಳಿಗೆ ಭೇಟಿ ನೀಡಿ ಪ್ರತಿ ಬೆಳೆಯ ತಳಿ, ಕೃಷಿ ವಿಧಾನದ ಬಗ್ಗೆ ತಿಳಿದುಕೊಂಡಿದ್ದಾರೆ. ಗೋಷ್ಠಿಗಳಲ್ಲಿ ಆಸಕ್ತಿಯಿಂದ ಭಾಗವಹಿಸಿದ್ದಾರೆ’ ಎಂದು ವಿವಿಯ ಮಾಹಿತಿ ಅಧಿಕಾರಿ ಶಿವರಾಮು ತಿಳಿಸಿದರು.

ರೈತರ ಸಂಕಟಗಳಿಗೆ ಸಮಾಧಾನ, ಹೊಸ ಯೋಜನೆಗಳ ಪರಿಚಯ, ಒಂದಿಷ್ಟು ಭರವಸೆ ಮೂಡಿಸುವ ಕಾರ್ಯಕ್ರಮಗಳು ರೈತರಿಗೆ ಚೈತನ್ಯ ತುಂಬಲು ಯತ್ನಿಸಿದವು.

ಅಚ್ಚುಕಟ್ಟುತನ, ಮಳಿಗೆಗಳ ವೈವಿಧ್ಯ, ಮಾಹಿತಿಪೂರ್ಣ ಗೋಷ್ಠಿಗಳು, ಸಾಧಕ ರೈತರಿಗೆ ಸನ್ಮಾನ, ಗೀತ ಗಾಯನದ ರಂಜನೆ, ಕೃಷಿಯಲ್ಲಿ ಹೊಸ ಸಾಧ್ಯತೆಗಳ ಚಿಂತನೆ ಇತ್ಯಾದಿಗಳ ಅಭಿವ್ಯಕ್ತಿಗೆ ವೇದಿಕೆ ಒದಗಿಸಿದ ಮೇಳ ಭಾನುವಾರ ಸಂಪನ್ನಗೊಂಡಿತು. ಮೇಳದ ಮಳಿಗೆಗಳಲ್ಲಿ ಸುಮಾರು ₹ 5 ಕೋಟಿಯಷ್ಟು ವಹಿವಾಟು ನಡೆದಿದೆ. 

ಸಮಾರೋಪ ಭಾಷಣ ಮಾಡಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ‘ಕೃಷಿಯಲ್ಲಿ ಬದಲಾವಣೆ ತರಬೇಕು. ಅದಕ್ಕೆ ರೈತರು ಮಾನಸಿಕವಾಗಿ ಸಿದ್ಧರಾಗಬೇಕು. ಬದಲಾವಣೆಗೆ ತೆರೆದುಕೊಳ್ಳಬೇಕು. ಮುಂದೆ ಪ್ರದೇಶವಾರು ಸರಾಸರಿ ಮಳೆ ಪ್ರಮಾಣ ಅಂದಾಜಿಸಿ ಅದಕ್ಕನುಗುಣವಾಗಿ ಏನು ಬೆಳೆಯಬೇಕು ಎಂಬ ಬಗ್ಗೆ ರೈತರಿಗೆ ಸಲಹೆ ನೀಡುವ ಕಾರ್ಯಕ್ರಮವೂ ಇದೆ. ಮಾರುಕಟ್ಟೆ ಸೃಷ್ಟಿ, ರಫ್ತು ಇತ್ಯಾದಿ ಸಂಬಂಧಿಸಿದಂತೆ ಪರಿವರ್ತನೆ ಆಗಬೇಕು. ರೈತ ಕೈಚಾಚುವಂತಾಗಬಾರದು. ಆತ ಬೇರೆಯವರಿಗೆ ಹಣ ಕೊಡುವಂತಾಗಬೇಕು’ ಎಂದರು.

ರೈತರಿಗೆ ವಿಮೆ ಜಾರಿ: ರಾಜ್ಯದಲ್ಲಿ ರೈತರಿಗೆ ವಿಮಾ ಸೌಲಭ್ಯ ಜಾರಿಗೆ ತರುವ ಚಿಂತನೆ ಇದೆ. ಬೆಳೆ ಸಮೀಕ್ಷೆ ಮಾಡಿಸಲಾಗುವುದು. ಶೂನ್ಯ ಬಂಡವಾಳದ ಕೃಷಿ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ಕೃಷಿ ಸಚಿವ ಶಿವಶಂಕರ ರೆಡ್ಡಿ ಹೇಳಿದರು. 

ಪ್ರಯೋಗಾಲಯದಿಂದಾಚೆ ಬರಲಿ: ಸಂಸದ ಎಂ.ವೀರಪ್ಪ ಮೊಯಿಲಿ ಮಾತನಾಡಿ, ‘ಸಂಶೋಧನೆಗಳು ವಿಸ್ತರಣೆಗೊಳ್ಳಬೇಕು. ಅವು ವಿಶ್ವವಿದ್ಯಾಲಯಗಳಿಗಷ್ಟೇ ಸೀಮಿತವಾಗಬಾರದು. ಪ್ರಯೋಗಾಲಯದಿಂದ ಭೂಮಿಗೆ ಬರಬೇಕು. ಸಾಲ ಮನ್ನಾ ಸದಾ ಮಾಡಲಾಗದು. ರೈತ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವಂತಾಗಬೇಕು’ ಎಂದು ಹೇಳಿದರು

ಮಧ್ಯವರ್ತಿಗಳ ಕಾಟ ತಪ್ಪಿಸಿ: ಸಿಎಂಗೆ ಮೊರೆ

ಬೆಳೆಗಳ ಬಹುಪಾಲು ದರ ಮಧ್ಯವರ್ತಿಗಳ ಪಾಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು. ಮುಖ್ಯಮಂತ್ರಿ ಕ್ರಮ ಕೈಗೊಳ್ಳಬೇಕು ಎಂದು ರೈತ ಮಂಜುನಾಥ್‌ ಎಂಬುವವರು ಸಭೆಯಲ್ಲಿ ಮುಖ್ಯಮಂತ್ರಿ ಗಮನ ಸೆಳೆದರು.  

ಅವರನ್ನು ತಮ್ಮತ್ತ ಕರೆದ ಕುಮಾರಸ್ವಾಮಿ, ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ ಕೆನ್ನೆ ತಟ್ಟಿದರು. ಬಳಿಕ ಈ ಬಗ್ಗೆ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !