₹346 ಕೋಟಿ ಸೆಸ್‌ ಬಾಕಿ; ಪುಸ್ತಕ ಖರೀದಿಗೂ ಪಡಿಪಾಟಲು

ಶನಿವಾರ, ಮೇ 25, 2019
22 °C
ಹಣ ಬಿಡುಗಡೆ ಮಾಡದ ಪಾಲಿಕೆ

₹346 ಕೋಟಿ ಸೆಸ್‌ ಬಾಕಿ; ಪುಸ್ತಕ ಖರೀದಿಗೂ ಪಡಿಪಾಟಲು

Published:
Updated:
Prajavani

ಬೆಂಗಳೂರು: ಓದುವ ಸಂಸ್ಕೃತಿಯನ್ನು ಹೆಚ್ಚಿಸಬೇಕಾದ ನಗರದ ಗ್ರಂಥಾಲಯಗಳು ಪುಸ್ತಕಗಳ ಹಾಗೂ ಮೂಲ ಸೌಕರ್ಯದ ಕೊರತೆಯಿಂದ ಆಕರ್ಷಣೆ ಕಳೆದುಕೊಂಡಿವೆ. ಬಿಬಿಎಂಪಿ ಕಾಲಕಾಲಕ್ಕೆ ಸಾರ್ವಜನಿಕರಿಂದ ಸಂಗ್ರಹಿಸಿದ ಗ್ರಂಥಾಲಯ ಕರವನ್ನು ಇಲಾಖೆಗೆ ನೀಡದ ಕಾರಣ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ.

ನಗರದಲ್ಲಿ 200 ಸಾರ್ವಜನಿಕ ಗ್ರಂಥಾಲಯಗಳಿವೆ. ಕೊಳಗೇರಿ ಪ್ರದೇಶ, ಜೈಲು, ಶಾಲೆಗಳು ಸೇರಿದಂತೆ ಬೇರೆ ಬೇರೆ ಪ್ರದೇಶಗಳಲ್ಲಿ 250ಕ್ಕೂ ಹೆಚ್ಚು ಇತರ ಗ್ರಂಥಾಲಯಗಳಿವೆ. ಸಾರ್ವಜನಿಕ ಗ್ರಂಥಾಲಯಗಳ ಮೇಲ್ವಿಚಾರಣೆಯ ಹೊಣೆ ಗ್ರಂಥಾಲಯ ಇಲಾಖೆಯದ್ದು. ಉಳಿದವುಗಳನ್ನು ಆಯಾ ಸಂಸ್ಥೆಗಳು (ಕೊಳೆಗೇರಿ ಅಭಿವೃದ್ಧಿ ಮಂಡಳಿ, ಶಾಲಾ ಕಾಲೇಜುಗಳು, ಸಂಘ ಸಂಸ್ಥೆಗಳು) ನೋಡಿಕೊಳ್ಳುತ್ತವೆ.

‘ಸಾರ್ವಜನಿಕ ಗ್ರಂಥಾಲಯ ಕಾಯ್ದೆ–1965’ ನಿಯಮ 30ರ ಪ್ರಕಾರ ಸ್ಥಳೀಯ ಸಂಸ್ಥೆಗಳು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಸಂಗ್ರಹಿಸುವ ಆಸ್ತಿ ತೆರಿಗೆಯ ಶೇ6ರಷ್ಟನ್ನು  ಗ್ರಂಥಾಲಯಗಳ ಅಭಿವೃದ್ಧಿಗೆ ನೀಡಬೇಕು.

‘ಬಿಬಿಎಂಪಿಯು 2014–15ರಲ್ಲಿ ₹240 ಕೋಟಿ, 2017–18ನೇ ಸಾಲಿನಲ್ಲಿ ₹156 ಕೋಟಿ ಹಾಗೂ 2018–19ನೇ ಸಾಲಿನಲ್ಲಿ ₹160 ಕೋಟಿ ಗ್ರಂಥಾಲಯ ಸೆಸ್‌ ಸಂಗ್ರಹಿಸಿದೆ. ಆದರೆ, 5 ವರ್ಷಗಳಿಂದ ₹346 ಕೋಟಿಯನ್ನು ಇಲಾಖೆಗೆ ಪಾವತಿಸದೇ ಬಾಕಿ ಉಳಿಸಿಕೊಂಡಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಗ್ರಂಥಾಲಯ ಇಲಾಖೆಗೆ ಮೀಸಲಿಟ್ಟ ಹಣದಲ್ಲಿ ಶೇ80ರಷ್ಟು ಸಿಬ್ಬಂದಿ ವೇತನಕ್ಕೆ ವಿನಿಯೋಗಿಸಲಾಗುತ್ತಿದೆ. ಉಳಿದ ಶೇ20ರಷ್ಟು ಅನುದಾನದಲ್ಲಿ ಗ್ರಂಥಾಲಯಗಳಿಗೆ ಮೂಲ ಸೌಕರ್ಯ ಒದಗಿಸಬೇಕಾದ ಅನಿವಾರ್ಯ ಇದೆ. ಈ ಎಲ್ಲಾ ಕಾರಣಗಳು ನಗರದ ಸಾರ್ವಜನಿಕ ಗ್ರಂಥಾಲಯಗಳು ಸಮಸ್ಯೆಗಳ ಕೂಪಕ್ಕೆ ತಳ್ಳಿವೆ.

ನಗರದ ಕೆಲ ಸಾರ್ವಜನಿಕ ಗ್ರಂಥಾಲಯಗಳಿಗೆ ಸ್ವಂತ ಕಟ್ಟಡಗಳಿಲ್ಲ. ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿವೆ. ಬಾಡಿಗೆ ಪಾವತಿಸದ ಕಾರಣ ಕೆಲವು ಕಟ್ಟಡಗಳ ಮಾಲೀಕರು ಗ್ರಂಥಪಾಲಕರ ಜೊತೆ ಗಲಾಟೆ ಮಾಡಿದ ಪ್ರಕರಣಗಳೂ ನಡೆದಿವೆ. ಹೊಸ ಪುಸ್ತಕಗಳನ್ನು ಒದಗಿಸದಿರುವ ಕಾರಣ ಇಲ್ಲಿ ಪುಸ್ತಕಗಳ ಕೊರತೆಯೂ ಎದುರಾಗಿದೆ. ಕಾಯಂ ಅಲ್ಲದ ಸಿಬ್ಬಂದಿಗೆ ನಿಯಮಿತವಾಗಿ ಗೌರವಧನವೂ ಪಾವತಿಯಾಗುತ್ತಿಲ್ಲ. ಅವ್ಯವಸ್ಥೆಯ ಕಾರಣಕ್ಕೆ ಜನ, ದಿನನಿತ್ಯದ ಓದಿಗೆ ಸಂಘ–ಸಂಸ್ಥೆಗಳು ಸ್ಥಾಪಿಸಿದ ವಾಚನಾಲಯಗಳ ಕಡೆ ಮುಖ ಹಾಕುತ್ತಿದ್ದಾರೆ.

ಶಾಂತಿನಗರದಲ್ಲಿಯ ಗ್ರಂಥಾಲಯದ ಓದುಗರೊಬ್ಬರನ್ನು ಮಾತನಾಡಿಸಿದಾಗ,‘ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಿದ್ದು, ಗ್ರಂಥಾಲಯಕ್ಕೆ ನಿತ್ಯ ಬರುತ್ತೇನೆ. ಇಲ್ಲಿ ಪುಸ್ತಕಗಳ ಕೊರತೆ ಇದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಕೆಲವು ನಿಯತಕಾಲಿಕೆಗಳು ದೊರೆಯುವುದಿಲ್ಲ. ಮೂಲಸೌಕರ್ಯ ಮರೀಚಿಕೆಯಾಗಿದೆ. ಸಿಬ್ಬಂದಿಯನ್ನು ಕೇಳಿದರೆ, ಅನುದಾನ ಇಲ್ಲ ಎಂದು ಸಬೂಬು ಹೇಳುತ್ತಾರೆ. ಸಾರ್ವಜನಿಕ ಗ್ರಂಥಾಲಯಗಳ ಕಥೆಯೇ ಹೀಗಾದರೆ ಹೇಗೆ’ ಎಂದು ಪ್ರಶ್ನಿಸಿದರು.

ಜಯನಗರದ ಓದುಗರೊಬ್ಬರನ್ನು ಮಾತಿಗೆಳೆದಾಗ, ‘ಪುಸ್ತಕಗಳು ಲಭ್ಯವಾಗದ ಕಾರಣ, ಖಾಸಗಿ ಸಂಸ್ಥೆಗಳು ಸ್ಥಾಪಿಸಿದ ಗ್ರಂಥಾಲಯಗಳಿಗೆ ತೆರಳುತ್ತೇನೆ. ಎಲ್ಲಾ ಕಡೆಯೂ ಇದೇ ಪರಿಸ್ಥಿತಿ ಇದೆ. ಗ್ರಂಥಾಲಯ ಇಲಾಖೆಗೆ ರಾಜ್ಯ ಸರ್ಕಾರ ಹೆಚ್ಚು ಹೆಚ್ಚು ಅನುದಾನ ನೀಡಬೇಕು. ಕೂಡಲೇ ಪಾಲಿಕೆಯು ಬಾಕಿ ತೆರಿಗೆ ಹಣವನ್ನು ಗ್ರಂಥಾಲಯ ಇಲಾಖೆಗೆ ವರ್ಗಾಯಿಸಬೇಕು’ ಎಂದು ಒತ್ತಾಯಿಸಿದರು.

‘ಪಾಲಿಕೆಯು ಒಂದೇ ಸಾರಿ ಹಣ ಬಿಡುಗಡೆ ಮಾಡಿದರೆ, ಗ್ರಂಥಾಲಯಗಳಿಗೆ ಮೂಲ ಸೌಕರ್ಯ ಒದಗಿಸಬಹುದು. ಆಯ್ಕೆ ಸಮಿತಿ ಸೂಚಿಸಿದ ಸಾಹಿತಿಗಳ ಪುಸ್ತಕಗಳನ್ನೂ ಖರೀದಿ ಮಾಡಬಹುದು’ ಎಂದು ಗ್ರಂಥಾಲಯ ಇಲಾಖೆ ಅಧಿಕಾರಿಯೊಬ್ಬರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !