ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಬಾಗಿಲಿಗೆ ಬರುವ ಸಂಜೀವಿನಿ

ಧಾರವಾಡಕ್ಕೆ ಸ್ಥಳಾಂತರವಾಗುತ್ತಿರುವ ಧರ್ಮಸ್ಥಳದ ಎಸ್.ಡಿ.ಎಂ. ಸಂಚಾರಿ ಆಸ್ಪತ್ರೆ
Last Updated 29 ಡಿಸೆಂಬರ್ 2019, 10:18 IST
ಅಕ್ಷರ ಗಾತ್ರ

ಗ್ರಾಮೀಣ ಪ್ರದೇಶದ ಜನರ ಮನೆ ಬಾಗಿಲಿಗೆ ಆರೋಗ್ಯ ಸೇವೆ ನೀಡುವ ಧರ್ಮಸ್ಥಳದ ಎಸ್.ಡಿ.ಎಂ. ಸಂಚಾರಿ ಆಸ್ಪತ್ರೆಗೆ ಈಗ 45ರ ಹರೆಯ.

ರಸ್ತೆ, ವಿದ್ಯುತ್, ದೂರವಾಣಿ, ಆಸ್ಪತ್ರೆ, ಶಾಲೆ- ಮೊದಲಾದ ಮೂಲ ಸೌಕರ್ಯ ವಂಚಿತ ಗ್ರಾಮೀಣ ಪ್ರದೇಶದ ಜನರಿಗೆ ಆರೋಗ್ಯದ ಬಗ್ಗೆ ಅರಿವು, ಜಾಗೃತಿ ಮೂಡಿಸಿ, ಅಗತ್ಯವಿದ್ದವರಿಗೆ ಉಚಿತ ಔಷಧಿ ಮತ್ತು ಶುಶ್ರೂಷೆ ನೀಡುವ ಉದ್ದೇಶದಿಂದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಸಂಚಾರಿ ಆಸ್ಪತ್ರೆಯನ್ನು ಪ್ರಾರಂಭಿಸಿದ್ದರು.1974ರ ಏಪ್ರಿಲ್ 15 ರಂದು ಅಂದಿನ ಆರೋಗ್ಯ ಸಚಿವ ಎಚ್. ಸಿದ್ದವೀರಪ್ಪ ಧರ್ಮಸ್ಥಳದಲ್ಲಿ ಸಂಚಾರಿ ಆಸ್ಪತ್ರೆಯನ್ನು ಉದ್ಘಾಟಿಸಿದ್ದರು.

ಬೆಳ್ತಂಗಡಿ ತಾಲ್ಲೂಕಿನ ದಿಡುಪೆ, ನೆರಿಯಾ, ನಾರಾವಿ, ಪಟ್ರಮೆ, ಶಿಶಿಲ, ಪೆರಾಡಿ ಮೊದಲಾದ ಕುಗ್ರಾಮಗಳ ಜನರ ಪಾಲಿಗೆ ಸಂಚಾರಿ ಆಸ್ಪತ್ರೆ ಸಂಜೀವಿನಿಯಾಗಿದೆ. ಈ ಬಸ್‌ನೊಳಗೆ ಔಷಧಾಲಯ, ತಪಾಸಣೆ ಕೊಠಡಿ, ಪ್ರಯೋಗಾಲಯ ಮೊದಲಾದ ಸೌಲಭ್ಯಗಳಿವೆ. ಒಬ್ಬ ವೈದ್ಯಾಧಿಕಾರಿ, ಕಾಂಪೌಂಡರ್, ಸಹಾಯಕರು, ಪ್ರಯೋಗಾಲಯ ಸಹಾಯಕ ಮತ್ತು ಚಾಲಕ ಇರುತ್ತಾರೆ.

ಸಂಚಾರಿ ಆಸ್ಪತ್ರೆ ಸೇವಾ ವಿಧಾನ: ಗ್ರಾಮೀಣ ಪ್ರದೇಶದಲ್ಲಿ 40 ಕಿ.ಮೀ. ವ್ಯಾಪ್ತಿಯೊಳಗೆ ಮೂರು ಗ್ರಾಮಗಳನ್ನು ಆಯ್ಕೆ ಮಾಡಿ, ಸ್ಥಳೀಯ ಗ್ರಾಮ ಪಂಚಾಯಿತಿ ಮತ್ತು ಸಂಘ-ಸಂಸ್ಥೆಗಳ ಮೂಲಕ ಸಂಚಾರಿ ಆಸ್ಪತ್ರೆ ಶಿಬಿರವನ್ನು ಆಯೋಜಿಸಲಾಗುತ್ತದೆ. ಎರಡು ತಿಂಗಳ ಕಾಲ ಪ್ರತಿ ಮೂರು ದಿನಗಳಿಗೊಮ್ಮೆ ಸಂಚಾರಿ ಆಸ್ಪತ್ರೆ ಗ್ರಾಮಗಳಿಗೆ ಹೋಗಿ ಉಚಿತ ಆರೋಗ್ಯ ತಪಾಸಣೆ ನಡೆಸಿ, ಔಷಧಿಯನ್ನು ನೀಡಲಾಗುತ್ತಿದೆ. ಬೆಳಿಗ್ಗೆ ಗಂಟೆ 9 ರಿಂದ ಸಂಜೆ 4ರ ವರೆಗೆ ತಿಂಗಳಿಗೆ ಸರಾಸರಿ ಐದು ಸಾವಿರಕ್ಕೂ ಅಧಿಕ ಮಂದಿಗೆ ವೈದ್ಯಕೀಯ ಸೌಲಭ್ಯ ನೀಡಲಾಗುತ್ತಿದೆ.

ಕರಪತ್ರ, ಪತ್ರಿಕಾ ಪ್ರಕಟಣೆ ಮತ್ತು ಪ್ರದರ್ಶನದ ಮೂಲಕ ಜನರಲ್ಲಿ ಆರೋಗ್ಯ ರಕ್ಷಣೆ ಬಗ್ಗೆ ಅರಿವು, ಜಾಗೃತಿ ಮೂಡಿಸಲಾಗುತ್ತದೆ. ಇದರಿಂದಾಗಿ ಜನರ ಅಜ್ಞಾನ ಮತ್ತು ಮೂಢನಂಬಿಕೆ ದೂರವಾಗಿ ಆರೋಗ್ಯ ರಕ್ಷಣೆ ಮತ್ತು ಸ್ವಚ್ಛತೆ ಬಗ್ಗೆ ಅರಿವಿನ ಬೆಳಕು ಮೂಡಿ ಬಂದಿದೆ. ಪ್ರಾರಂಭದಲ್ಲಿ ಡಾ.ಕೆ.ಎಸ್.ಜಗದೀಶ್ ಮುಖ್ಯ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರೆ, ಈಗ ಡಾ. ನಾರಾಯಣ ಪ್ರಭು
ಮುಖ್ಯ ವೈದ್ಯಾಧಿಕಾರಿಯಾಗಿದ್ದಾರೆ.

ಎಸ್.ಡಿ.ಎಂ. ಮೆಡಿಕಲ್ ಟ್ರಸ್ಟ್: ವ್ಯವಸ್ಥಿತವಾಗಿ ಆರೋಗ್ಯ ಸೇವೆಯನ್ನು ನೀಡಲು 1978ರಲ್ಲಿ ಡಿ.ವೀರೇಂದ್ರ ಹೆಗ್ಗಡೆ ಅಧ್ಯಕ್ಷರಾಗಿರುವ ಎಸ್.ಡಿ.ಎಂ. ಮೆಡಿಕಲ್ ಟ್ರಸ್ಟ್ ಪ್ರಾರಂಭಿಸಲಾಯಿತು. ಶಿಶುಪಾಲ ಪೂವಣಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸಂಚಾರಿ ಆಸ್ಪತ್ರೆ, ಉಜಿರೆಯಲ್ಲಿ 200 ಹಾಸಿಗೆಗಳ ಸಾಮರ್ಥ್ಯದ ಸುಸಜ್ಜಿತ ಆಸ್ಪತ್ರೆ, ಮುಕ್ತಿ ವಾಹನ (ಶವ ಸಾಗಾಟಕ್ಕೆ ಉಚಿತ ವಾಹನ ಸೌಲಭ್ಯ) ಅಂಬುಲೆನ್ಸ್, ಮಂಗಳೂರಿನ ವೆನ್ಲಾಕ್ ಆಸ್ಪತ್ರೆ ಮತ್ತು ಲೇಡಿಗೋಷನ್ ಆಸ್ಪತ್ರೆಯ ಆವರಣದಲ್ಲಿ ಧರ್ಮಶಾಲೆ ನಿರ್ವಹಣೆ ಇತ್ಯಾದಿ ಕಾರ್ಯಗಳು ಎಸ್.ಡಿ.ಎಂ. ಮೆಡಿಕಲ್ ಟ್ರಸ್ಟ್ ಆಶ್ರಯದಲ್ಲಿನಡೆಯುತ್ತಿವೆ.

1947ರಲ್ಲೂ ಸೇವೆನೀಡಿದ್ದರು...

1947ರಲ್ಲಿ ಬೆಳ್ತಂಗಡಿ ತಾಲ್ಲೂಕಿನಲ್ಲಿ ಮಲೇರಿಯಾ ರೋಗ ಉಲ್ಬಣಗೊಂಡಾಗ ಗ್ರಾಮೀಣ ಪ್ರದೇಶದಲ್ಲಿ ಸಂಚಾರಿ ಆಸ್ಪತ್ರೆ ಸೇವೆಗೆ ಧರ್ಮಸ್ಥಳದ ಅಂದಿನ ಧರ್ಮಾಧಿಕಾರಿ ದಿ.ಮಂಜಯ್ಯ ಹೆಗ್ಗಡೆ ನಾಂದಿ ಹಾಡಿದ್ದರು. ಅಂದು ಸಂಚಾರಿ ಆಸ್ಪತ್ರೆಯ ಪ್ರಥಮ ಸೇವೆ ಬಂಗಾಡಿಯಲ್ಲಿ ನಡೆಯಿತು.ಇದನ್ನು ಡಿ. ವೀರೇಂದ್ರ ಹೆಗ್ಗಡೆ ಪಟ್ಟಕ್ಕೆ ಬಂದ ಬಳಿಕ ನಿರಂತರವಾಗಿ ಆರಂಭಿಸಿದರು.

ಸೇವೆ–ಶುಚಿತ್ವ

‘ಸಂಚಾರಿ ಆಸ್ಪತ್ರೆಯಲ್ಲಿ ಸಿಗುವ ಔಷಧ ಸ್ವೀಕರಿಸಿ ಅನೇಕ ರೋಗಿಗಳು ಗುಣಮುಖರಾಗಿ ಆರೋಗ್ಯ ಭಾಗ್ಯ ಹೊಂದಿದ್ದಾರೆ. ಮೂಢ ನಂಬಿಕೆ ದೂರವಾಗಿ, ಜನರಲ್ಲಿ ಶುಚಿತ್ವ ಹಾಗೂ ಆರೋಗ್ಯ ರಕ್ಷಣೆ ಬಗ್ಗೆ ಕಾಳಜಿ ಉಂಟಾಗಿದೆ’ ಎನ್ನುತ್ತಾರೆ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ನಾರಾಯಣ ಪ್ರಭು.

ಸಂಚಾರಿ ಆಸ್ಪತ್ರೆ ಧಾರವಾಡಕ್ಕೆ ಹಸ್ತಾಂತರ ಇಂದು

1974 ರಿಂದ 2019ರ ವರೆಗೆ 45 ವರ್ಷಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉತ್ತರ ಕನ್ನಡ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಸೇವೆಯೊಂದಿಗೆ ಆರೋಗ್ಯ ಭಾಗ್ಯ ಸಂರಕ್ಷಣೆಗೆ ಕಾಯಕಲ್ಪ ನೀಡಿದ ಎಸ್.ಡಿ.ಎಂ. ಸಂಚಾರಿ ಆಸ್ಪತ್ರೆಯನ್ನು ಧಾರವಾಡದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯಕ್ಕೆ ಹಸ್ತಾಂತರಿಸಲು ನಿರ್ಧರಿಸಲಾಗಿದೆ.

‘ಭಾನುವಾರ (ಡಿ.29) ಸಂಜೆ 5 ಗಂಟೆಗೆ ಧರ್ಮಸ್ಥಳದ ಲಲಿತೋದ್ಯಾನದಲ್ಲಿ ನಡೆಯುವ ಸಮಾರಂಭದಲ್ಲಿ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಧಾರವಾಡದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯದ ಆಡಳಿತ ನಿರ್ದೇಶಕ ಸಾಕೇತ ಶೆಟ್ಟಿ ಅವರಿಗೆ ಹಸ್ತಾಂತರ ಮಾಡುವರು’ ಎಂದು ಎಸ್.ಡಿ.ಎಂ. ಮೆಡಿಕಲ್ ಟ್ರಸ್ಟ್‌ನ ಕಾರ್ಯದರ್ಶಿ ಶಿಶುಪಾಲ ಪೂವಣಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT