ಅನ್ನ ಹಾಕಿದ್ದ ಅಜ್ಜಿಯನ್ನೇ‌ ಕೊಂದ!

7
ಬೊಮ್ಮನಹಳ್ಳಿ ಪೊಲೀಸರಿಂದ ಆರೋಪಿ ಬಂಧನ

ಅನ್ನ ಹಾಕಿದ್ದ ಅಜ್ಜಿಯನ್ನೇ‌ ಕೊಂದ!

Published:
Updated:
Prajavani

ಬೆಂಗಳೂರು: ಎನ್‌ಜಿಆರ್ ಬಡಾವಣೆಯಲ್ಲಿರುವ ರೂಪೇನ ಅಗ್ರಹಾರ ಸ್ಮಶಾನದಲ್ಲಿ ಕಾವಲು ಕಾಯುತ್ತಿದ್ದ ಯಲ್ಲಮ್ಮ (70) ಎಂಬುವರನ್ನು ಕೊಲೆ ಮಾಡಲಾಗಿದ್ದು, ಆ ಸಂಬಂಧ ಆರೋಪಿ ಹರೀಶ್ ಎಂಬಾತನನ್ನು ಬೊಮ್ಮನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

‘ಸ್ಮಶಾನದಲ್ಲಿದ್ದ ಕೊಠಡಿಯಲ್ಲಿ ಯಲ್ಲಮ್ಮ, ಒಬ್ಬಂಟಿಯಾಗಿ ವಾಸವಿದ್ದರು. ಅದೇ ಕೊಠಡಿಯಲ್ಲೇ ಹರೀಶ್, ಕಟ್ಟಿಗೆಯಿಂದ ಹೊಡೆದು ಅವರನ್ನು ಕೊಲೆ ಮಾಡಿದ್ದಾನೆ. ಆ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ’ ಎಂದು ಪೊಲೀಸರು ಹೇಳಿದರು.

‘ಸ್ಥಳೀಯ ನಿವಾಸಿಯಾದ ಹರೀಶ್‌ ಸಣ್ಣವನಿದ್ದಾಗಲೇ ತಂದೆ–ತಾಯಿಯನ್ನು ಕಳೆದುಕೊಂಡಿದ್ದ. ಸಂಬಂಧಿ ಅಜ್ಜಿಯೇ ಆತನನ್ನು ಸಾಕಿದ್ದಳು. ಆ ಅಜ್ಜಿಯ ಮನೆಯಲ್ಲಿ ವರ್ಷದ ಹಿಂದೆ ಆತ ಕಳ್ಳತನ ಮಾಡಿ ಸಿಕ್ಕಿಬಿದ್ದ. ಹೀಗಾಗಿ, ಆತನನ್ನು ಮನೆಯಿಂದ ಹೊರಗೆ ಹಾಕಲಾಗಿತ್ತು. ಅಂದಿನಿಂದ ಆತ, ಸ್ಮಶಾನಕ್ಕೆ ಬಂದು ಮಲಗಲಾರಂಭಿಸಿದ್ದ.’

‘ಸ್ಮಶಾನದಲ್ಲಿ ಆತನನ್ನು ನೋಡಿದ್ದ ಯಲ್ಲಮ್ಮ, ಹಲವು ಬಾರಿ ಊಟ ಕೊಟ್ಟಿದ್ದಳು. ಆತನನ್ನು ಮೊಮ್ಮಗನಂತೆ ಕಾಣುತ್ತಿದ್ದಳು. ಯಾವುದೇ ಕೆಲಸಕ್ಕೂ ಆತ ಹೋಗುತ್ತಿರಲಿಲ್ಲ’ ಎಂದು ಪೊಲೀಸರು ಹೇಳಿದರು.

‘ಶನಿವಾರ ಸಂಜೆ ಹರೀಶ್‌ನ ಜೊತೆ ಮಾತನಾಡುತ್ತಿದ್ದ ಅಜ್ಜಿ, ಕೆಲಸಕ್ಕೆ ಹೋಗುವಂತೆ ಬುದ್ಧಿವಾದ ಹೇಳಿದ್ದರು. ಅಷ್ಟಕ್ಕೆ ಕೋಪಗೊಂಡ ಆರೋಪಿ, ಅನ್ನ ಹಾಕಿದ್ದ ಅವರ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ’ ಎಂದು ತಿಳಿಸಿದರು.

‘ಸಂಜೆ ಸ್ಮಶಾನಕ್ಕೆ ಕುರಿ ಮೇಯಿಸಲು ಬಂದಿದ್ದ ಮಹಿಳೆಗೆ ಕೊಠಡಿಯಲ್ಲಿ ನರಳಾಟದ ಶಬ್ದ ಕೇಳಿಸಿತ್ತು. ಕೊಠಡಿಯೊಳಗೆ ಹೋಗಿದ್ದ ಮಹಿಳೆ, ಯಲ್ಲಮ್ಮ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಹಾಗೂ ಅದರ ಪಕ್ಕ ಹರೀಶ್‌ ಕುಳಿತುಕೊಂಡಿದ್ದನ್ನು ಕಂಡು ಚೀರಾಡಿದ್ದರು. ಅದನ್ನು ಕೇಳಿಸಿಕೊಂಡು ಕೊಠಡಿಗೆ ಬಂದಿದ್ದ ಸ್ಥಳೀಯರು, ಅಜ್ಜಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಅಜ್ಜಿ ಮೃತಪಟ್ಟರು’ ಎಂದು ಪೊಲೀಸರು ಹೇಳಿದರು.

ಕಾವಲು ಕೆಲಸ: ‘ಯಲ್ಲಮ್ಮ ಅವರ ಪತಿ, ಸ್ಮಶಾನದಲ್ಲಿ ಕಾವಲು ಕೆಲಸ ಮಾಡುತ್ತಿದ್ದರು. ಎರಡು ವರ್ಷಗಳ ಹಿಂದಷ್ಟೇ ಅವರು ತೀರಿಕೊಂಡಿದ್ದರು. ನಂತರ ಯಲ್ಲಮ್ಮ ಅವರು ಸ್ಮಶಾನದಲ್ಲಿದ್ದ ಕೊಠಡಿಯಲ್ಲಿ ಒಬ್ಬಂಟಿಯಾಗಿ ನೆಲೆಸಿ ಕಾವಲು ಕಾಯುವುದನ್ನು ಮುಂದುವರಿಸಿದ್ದರು’ ಎಂದು ಪೊಲೀಸರು ಹೇಳಿದರು. 

ಗಾಂಜಾವ್ಯಸನಿ

‘ಯಲ್ಲಮ್ಮ ಅವರ ಮರ್ಮಾಂಗ ಸೇರಿದಂತೆ ಹಲವು ಭಾಗಗಳಿಗೆ ಗಾಯವಾಗಿದೆ. ಅವರ ಮೇಲೆ ಅತ್ಯಾಚಾರ ನಡೆದಿರುವ ಶಂಕೆ ಇದ್ದು, ವೈದ್ಯರ ವರದಿಯಿಂದ ಅದು ಖಾತ್ರಿಯಾಗಬೇಕಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆರೋಪಿ ಹರೀಶ್‌ ಗಾಂಜಾವ್ಯಸನಿ ಆಗಿದ್ದ. ಸ್ಥಳೀಯ ಯುವಕರ ಜೊತೆ ಸೇರಿ ಸ್ಮಶಾನದಲ್ಲೇ ಗಾಂಜಾ ಸೇದುತ್ತಿದ್ದ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ತನ್ನ ಸ್ನೇಹಿತರ ಜೊತೆ ಸೇರಿ ಕೊಲೆ ಮಾಡಿರುವ ಅನುಮಾನವೂ ಇದೆ. ಆ ಆಯಾಮದಲ್ಲಿ ತನಿಖೆ ನಡೆದಿದೆ’ ಎಂದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !