ಸೋಮವಾರ, ಏಪ್ರಿಲ್ 19, 2021
23 °C
ನಮ್ಮ ನಗರ ನಮ್ಮ ಧ್ವನಿ | 17 ಕೋಚ್‌ಗಳು ಮತ್ತು 33 ಮಂದಿ ಅಂತರರಾಷ್ಟ್ರೀಯ ಮಟ್ಟದ ಅಥ್ಲೀಟ್‌ಗಳ ಕಾನೂನು ಹೋರಾಟಕ್ಕೆ ಸಂದ ಜಯ

ಕಂಠೀರವದಲ್ಲಿ ಹೊಸ ಹುಮ್ಮಸ್ಸಿನ ತಾಲೀಮು

ಬಿ.ಎಸ್‌.ಷಣ್ಮುಖಪ್ಪ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದ ಕಂಠೀರವ ಕ್ರೀಡಾಂಗಣದ ಸಿಂಥೆಟಿಕ್‌ ಟ್ರ್ಯಾಕ್‌ನಲ್ಲಿ ಐದು ವರ್ಷಗಳಿಂದ ತಮ್ಮ ನಿತ್ಯದ ಅಭ್ಯಾಸ ಹಾಗೂ ತರಬೇತಿಗಾಗಿ ತೊಂದರೆ ಅನುಭವಿಸುತ್ತಿದ್ದ ರಾಜ್ಯದ ಅಥ್ಲೀಟ್‌ಗಳು ಈಗ ನಿರಮ್ಮಳವಾಗಿದ್ದಾರೆ. ಈ ಸಂಬಂಧದ ಕಾನೂನು ಹೋರಾಟದಲ್ಲಿ ಜಯ ಸಾಧಿಸಿರುವ ಕ್ರೀಡಾಪಟುಗಳು ಮತ್ತೊಮ್ಮೆ ಹೊಸ ಹುಮ್ಮಸ್ಸಿನಿಂದ ತಾಲೀಮು ನಡೆಸಲು ಸಿದ್ಧವಾಗಿದ್ದಾರೆ.

ಫುಟ್‌ಬಾಲ್‌ ಪಂದ್ಯಾವಳಿ ಆಯೋಜಿಸಲು ಕ್ರೀಡಾಂಗಣವನ್ನು ಜಿಂದಾಲ್‌ ಕಂಪನಿಗೆ ಗುತ್ತಿಗೆ ನೀಡಿದ್ದ ಕ್ರಮವನ್ನು ಪ್ರಶ್ನಿಸಿ 17 ಕೋಚ್‌ಗಳು, 33 ಅಂತರರಾಷ್ಟ್ರೀಯ ಹಾಗೂ ರಾಷ್ಟ್ರೀಯ ಮಟ್ಟದ ಅಥ್ಲೀಟ್‌ಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್‌.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಕಳೆದ ವಾರವಷ್ಟೇ ವಿಲೇವಾರಿ ಮಾಡಿದೆ.

‘ಕ್ರೀಡಾಂಗಣದಲ್ಲಿ ಫುಟ್‌ಬಾಲ್‌ ಪಂದ್ಯಗಳನ್ನು ಆಯೋಜಿಸಲು ಜಿಂದಾಲ್‌ ಕಂಪನಿ ಒಡೆತನದ ಫುಟ್‌ಬಾಲ್‌ ಕ್ಲಬ್‌ಗೆ ನೀಡಲಾಗಿದ್ದ ಪರವಾನಗಿ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ನ್ಯಾಯಪೀಠವು ಕ್ರೀಡಾಪಟುಗಳ ಪರವಾಗಿ ಮಹತ್ವದ ಆದೇಶ ನೀಡಿದೆ.

‘ರಾಜ್ಯ ಸರ್ಕಾರ ಮತ್ತು ಜಿಂದಾಲ್‌ ಕಂಪನಿ ನಡುವೆ ನಡೆದಿರುವ ಅನೈತಿಕ ಒಪ್ಪಂದ ಪರಿಣಾಮ ಮತ್ತು ಕ್ರೀಡಾಂಗಣದಲ್ಲಿ ಸಿಂಥೆಟಿಕ್‌ ಟ್ರ್ಯಾಕ್‌ಗೆ ಅಥ್ಲೀಟ್‌ಗಳ ಪ್ರವೇಶ ನಿಷೇಧಿಸಲಾಗಿದ್ದು ಅಥ್ಲೀಟ್‌ಗಳ ಹಕ್ಕುಗಳನ್ನು ಕಸಿದುಕೊಂಡಂತಾಗಿದೆ. ಒಪ್ಪಂದದ ಅವಧಿ ಮುಗಿದ ನಂತರವೂ ಕಾನೂನು ಬಾಹಿರವಾಗಿ ಜಿಂದಾಲ್‌ ಬಳಕೆಗೆ ನೀಡಲಾಗಿದೆ. ಇದರಿಂದ, ವಾಣಿಜ್ಯ ಚಟುವಟಿಕೆಗೆ ಆಸ್ಪದ ನೀಡಿದಂತಾಗಿದೆ’ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.

‘ಜಿಂದಾಲ್‌ ಮೂಲಸೌಕರ್ಯ ಅಭಿವೃದ್ಧಿಪಡಿಸಿದೆ’

‘ಜಿಂದಾಲ್‌ ಒಪ್ಪಂದದ ಅವಧಿ ಈಗ ಮುಗಿದಿದೆ. ಹಾಗಾಗಿ ಹೊಸ ಅರ್ಜಿ ಕರೆಯಲು ನಮ್ಮ ಅಭ್ಯಂತರವೇನೂ ಇಲ್ಲ’ ಎಂಬುದು ಜಿಂದಾಲ್‌ ಪರ ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ ಹಿರಿಯ ವಕೀಲ ಅಶೋಕ ಹಾರನಹಳ್ಳಿ ಅವರ ಅಭಿಪ್ರಾಯ.

‘ಕ್ರೀಡಾಂಗಣದಲ್ಲಿ ಫುಟ್‌ಬಾಲ್ ಪಂದ್ಯಾವಳಿ ಆಯೋಜನೆಗೆ ಸರ್ಕಾರದ ಜೊತೆ ಒಪ್ಪಂದ ಮಾಡಿಕೊಂಡೇ ಅನುಮತಿ ಪಡೆಯಲಾಗಿತ್ತು. ಸಿಂಥೆಟಿಕ್ ಟ್ರ್ಯಾಕ್ ಸೇರಿದಂತೆ ಕ್ರೀಡಾಂಗಣವನ್ನು ಅಂತರರಾಷ್ಟ್ರೀಯ ಗುಣಮಟ್ಟದಲ್ಲಿ ಅಭಿವೃದ್ಧಿಪಡಿಸಲು ಜಿಂದಾಲ್ ಕಂಪನಿ ₹ 5 ಕೋಟಿಯಿಂದ ₹ 6 ಕೋಟಿ ಖರ್ಚು ಮಾಡಿದೆ. ಸಾಕಷ್ಟು ಮೂಲಸೌಕರ್ಯ ಅಭಿವೃದ್ಧಿಪಡಿಸಿದೆ’ ಎಂದು ಅವರು ಹೇಳುತ್ತಾರೆ.
ನ್ಯಾಯಪೀಠ ಹೇಳಿರುವುದೇನು?

* ಒಪ್ಪಂದ ಮುಗಿದ ನಂತರವೂ 2017ರ ಆಗಸ್ಟ್‌ನಿಂದ 2018ರ ಮೇ 31ರವರೆಗೆ ಪುನಃ ಕ್ರೀಡಾಂಗಣ ಬಳಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಇದಕ್ಕೆ ಯಾವುದೇ ಷರತ್ತು ಅಥವಾ ನಿಬಂಧನೆಗಳನ್ನೂ ವಿಧಿಸಿಲ್ಲ. ಇದು ಸಂಪೂರ್ಣ ಅಕ್ರಮ.

* ಸರ್ಕಾರ ಈ ವಿಚಾರದಲ್ಲಿ ನ್ಯಾಯಯುತವಾಗಿ ನಡೆದುಕೊಂಡಿಲ್ಲ. ಆದ್ದರಿಂದ ಮೊದಲು ಒಪ್ಪಂದ ಮಾಡಿಕೊಂಡ ಪ್ರಕ್ರಿಯೆ ಮತ್ತು ಒಪ್ಪಂದ ಮುಗಿದ ಬಳಿಕವೂ ಬಳಕೆಗೆ ಅನುಮತಿ ನೀಡಿದ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಬೇಕು. ತಪ್ಪಿತಸ್ಥರೆಂದು ಕಂಡುಬಂದವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಸೆಪ್ಟೆಂಬರ್‌ 23ರ ಒಳಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು.

‘ಸಮರ್ಥನೀಯವಲ್ಲ’

‘ಫುಟ್‌ಬಾಲ್‌ಗೆಂದೇ ಪ್ರತ್ಯೇಕ ಕ್ರೀಡಾಂಗಣ ಅಶೋಕ ನಗರದಲ್ಲಿದೆ. ಬೆಂಗಳೂರು ಜಿಲ್ಲಾ ಫುಟ್‌ಬಾಲ್‌ ಸಂಸ್ಥೆ (ಬಿಡಿಎಫ್‌ಎ) ಆಶ್ರಯದಲ್ಲಿರುವ ಈ ಕ್ರೀಡಾಂಗಣವನ್ನು ಫುಟ್‌ಬಾಲ್‌ ಪಂದ್ಯಗಳಿಗೆ ಬಳಸಿಕೊಳ್ಳುವುದನ್ನು ಬಿಟ್ಟು ಕಂಠೀರವ ಕ್ರೀಡಾಂಗಣವನ್ನು ಬಳಸಿಕೊಳ್ಳುವುದು ಸರ್ವಥಾ ಸಮರ್ಥನೀಯವಲ್ಲ’ ಎನ್ನುತ್ತಾರೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯವ ವಕೀಲೆ ಎಸ್.ಸುಶೀಲಾ.

ವ್ಯಾಜ್ಯದ ಇಣುಕು ನೋಟ

*1997ರಲ್ಲಿ ಕಂಠೀರವ ಕ್ರೀಡಾಂಗಣದ ಮಧ್ಯಭಾಗದಲ್ಲಿ ಸಿಂಥೆಟಿಕ್‌ ಟ್ರ್ಯಾಕ್‌ ನಿರ್ಮಿಸುವ ಮೂಲಕ ರಾಷ್ಟ್ರೀಯ ಅಥ್ಲೆಟಿಕ್‌ ಕ್ರೀಡೆಗಳನ್ನು ಆಯೋಜಿಸುವ ದಿಸೆಯಲ್ಲಿ ಮೇಲ್ದರ್ಜೆಗೆ ಏರಿಸಲಾಯಿತು.

*ಮೇಲ್ದರ್ಜೆಗೆ ಏರಿಸಲಾದ ಎಂಟು ಪಥಗಳ 400 ಮೀಟರ್‌ ಓಟದ ಸಿಂಥೆಟಿಕ್‌ ಟ್ರ್ಯಾಕ್‌ ಹೊಂದಿದ ಈ ಸ್ಟೇಡಿಯಂ ಅನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು 1997ರಿಂದ 2014ರವರೆಗೆ ಉಪಯೋಗಿಸುತ್ತಿದ್ದರು.

* 17 ವರ್ಷದ ಒಳಗಿನ ಕಿರಿಯರ ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ಪಂದ್ಯಗಳಿಗೆ ಆಟಗಾರರನ್ನು ಉತ್ತೇಜಿಸುವ ಸಲುವಾಗಿ ಕ್ರೀಡಾಂಗಣ ಬಳಕೆ ಮಾಡಿಕೊಳ್ಳಲು ಜಿಂದಾಲ್‌ ಕಂಪನಿ ಮುಂದಾಯಿತು. ಈ ಕಾರಣಕ್ಕಾಗಿ ಜಿಂದಾಲ್‌ ಒಡೆತನದ ಫುಟ್‌ಬಾಲ್‌ ಕ್ಲಬ್‌ ಹಾಗೂ ಯುವ ಸಬಲೀಕರಣ ಮ‌ತ್ತು ಕ್ರೀಡಾ ಇಲಾಖೆಯ ನಿರ್ದೇಶಕರ ಜೊತೆ 2014ರ ಮೇ 22ರಂದು ಒಪ್ಪಂದ ಮಾಡಿಕೊಳ್ಳಲಾಯಿತು.

* ಕ್ರೀಡಾಂಗಣವನ್ನು 2014ರ ಮೇ 22ರಿಂದ 2017ರ ಮೇ 31 ವರೆಗೆ ಬಳಕೆ ಮಾಡಿಕೊಳ್ಳುವ ಬಗ್ಗೆ ಜಿಂದಾಲ್‌ ಜೊತೆ ಒಪ್ಪಂದವಾಗಿತ್ತು. ಆದರೆ, ಈ ಒಪ್ಪಂದದ ಅವಧಿ ಮುಕ್ತಾಯವಾಗಿದ್ದರೂ ಅದನ್ನು ಮುಂದುವರಿಸಲಾಗಿದೆ.

* ಜಿಂದಾಲ್‌ ಕ್ಲಬ್‌ ಕ್ರೀಡಾಂಗಣಕ್ಕೆ ಧಕ್ಕೆ ಉಂಟು ಮಾಡುತ್ತಿದೆ. ಇದರಿಂದ ಸಿಂಥೆಟಿಕ್‌ ಟ್ರ್ಯಾಕ್‌ ಹಾಳಾಗುತ್ತಿದೆ. ಕೂಡಲೇ ಇದನ್ನು ತಡೆಯಬೇಕು ಎಂದು ಅರ್ಜಿದಾರರು ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರಿಗೆ 2014ರಿಂದ 2017ರ ನಡುವೆ ಹಲವು ಮನವಿಗಳನ್ನು ಸಲ್ಲಿಸಿದ್ದರು.

* ಈ ಎಲ್ಲ ಮನವಿಗಳೂ ಪ್ರಯೋಜನಕ್ಕೆ ಬಾರದೇ ಹೋದ ಕಾರಣ ಅಂತರರಾಷ್ಟ್ರೀಯ ಅಥ್ಲೆಟಿಕ್ ಕೋಚ್‌ ವಿ.ಆರ್.ಬೀಡು ಮತ್ತು ಅರ್ಜುನ ಪ್ರಶಸ್ತಿ ವಿಜೇತೆ ಅಶ್ವಿನಿ ನಾಚಪ್ಪ ಸೇರಿದಂತೆ ಕೋಚ್‌ಗಳು ಹಾಗೂ ಅಥ್ಲೀಟ್‌ಗಳು 2017ರ ಸೆಪ್ಟೆಂಬರ್‌ 23ರಂದು ಹೈಕೋರ್ಟ್‌ ಮೆಟ್ಟಿಲೇರಿದರು.

* ‘ಸಿಂಥೆಟಿಕ್‌ ಟ್ರ್ಯಾಕ್‌ನಲ್ಲಿ ಫುಟ್‌ಬಾಲ್‌ ಆಡಿದರೆ ಅದರಿಂದ ಟ್ರ್ಯಾಕ್‌ ಹಾಳಾಗುತ್ತದೆ. ಕ್ರೀಡಾಂಗಣದಲ್ಲಿ ಸಿಂಥೆಟಿಕ್‌ ಟ್ರ್ಯಾಕ್‌ ಸುತ್ತ ಬ್ಯಾರಿಕೇಡ್‌ಗಳನ್ನು ಹಾಕಿ ಅಥ್ಲೀಟ್‌ಗಳು ಒಳಪ್ರವೇಶ ಮಾಡದಂತೆ ನಿಷೇಧ ಹೇರಲಾಗಿದೆ. ಕಾರಣ ನಮ್ಮ ನಿತ್ಯದ ಅಭ್ಯಾಸ ಹಾಗೂ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟಕ್ಕೆ ಅಥ್ಲೀಟ್‌ಗಳನ್ನು ಅಣಿಗೊಳಿಸಲು ತೊಂದರೆಯಾಗಿದೆ’ ಎಂದು ದೂರಿದ್ದರು.

ಕ್ರೀಡಾಂಗಣದ ಇತಿಹಾಸದ ಮೆಲುಕು

1965ರ ಸಂದರ್ಭದಲ್ಲಿ ರಷ್ಯನ್‌ ಕ್ರೀಡಾಪಟುಗಳ ಜಿಮ್ನಾಸ್ಟಿಕ್‌ ಪ್ರದರ್ಶನ ಈಗಿನ ಕಂಠೀರವ ಕ್ರೀಡಾಂಗಣದ ಜಾಗದಲ್ಲಿ ನಡೆದಿತ್ತು. 1997ರಲ್ಲಿ ನಗರದಲ್ಲಿ ನಾಲ್ಕನೇ ರಾಷ್ಟ್ರೀಯ ಕ್ರೀಡಾಕೂಟ ಜರುಗಿತ್ತು. ಈ ಸಂದರ್ಭದಲ್ಲಿ ₹ 42 ಕೋಟಿಗೂ ಹೆಚ್ಚಿನ ವೆಚ್ಚದಲ್ಲಿ ಕಂಠೀರವ ಕ್ರೀಡಾಂಗಣ ನಿರ್ಮಿಸಲಾಯಿತು. ಈ ಕ್ರೀಡಾಕೂಟದಲ್ಲಿ 6 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು. ದಕ್ಷಿಣ ಭಾರತದ ಮೊದಲ ಆರೋಹಣ ಗೋಡೆಯನ್ನೂ ಕ್ರೀಡಾಂಗಣದಲ್ಲಿ ನಿರ್ಮಿಸಲಾಗಿದೆ. ಇದಕ್ಕಾಗಿ ಸುಮಾರು ₹ 35 ಲಕ್ಷ ವ್ಯಯಿಸಲಾಗಿದೆ.

ವಾಲಿಬಾಲ್‌, ಬ್ಯಾಸ್ಕೆಟ್‌ಬಾಲ್‌, ಫುಟ್‌ಬಾಲ್‌, ಜಿಮ್ನಾಸ್ಟಿಕ್‌, ಕಬಡ್ಡಿ, ಕೊಕ್ಕೊ, ಟೆನ್ನಿಕಾಯ್ಟ್‌, ಥ್ರೋಬಾಲ್‌, ಬ್ಯಾಡ್ಮಿಂಟನ್‌, ಟೇಬಲ್‌ ಟೆನ್ನಿಸ್‌ ಮುಂತಾದ ಆಟದ ಅಂಕಣಗಳು ಇಲ್ಲಿವೆ. ಬಾಕ್ಸಿಂಗ್‌ ಹಾಲ್‌, ಜೂಡೊ ಹಾಲ್‌ ಕೂಡಾ ಇವೆ. ವಸತಿ ಸೌಲಭ್ಯವೂ ಸೇರಿದಂತೆ ಒಮ್ಮೆಲೇ 8 ಸಾವಿರದಿಂದ 10 ಸಾವಿರ ಮಂದಿ ಕುಳಿತುಕೊಳ್ಳಬಹುದಾದ ಸಭಾಂಗಣವೂ ಇಲ್ಲಿದೆ.

ಕ್ರೀಡಾಳುಗಳು ಸನ್ನದ್ಧಗೊಳಿಸುವ ಎಲ್ಲಾ ವ್ಯವಸ್ಥೆಗಳೂ ಇಲ್ಲಿವೆ. ವಿಜ್ಞಾನ ಪ್ರಯೋಗಾಲಯವೂ ಇದ್ದು, ಅತ್ಯಾಧುನಿಕ ವೈಜ್ಞಾನಿಕ ಉಪಕರಣಗಳೂ ಇವೆ. ಇದರಿಂದ ಕ್ರೀಡಾಳುವಿನ ದೈಹಿಕ ಸಾಮರ್ಥ್ಯ, ದೇಹದ ಕೊಬ್ಬಿನಂಶ ಹಾಗೂ ವಿವಿಧ ರೀತಿಯ ರಕ್ತ ಪರೀಕ್ಷೆಗಳನ್ನು ನಡೆಸಬಹುದಾಗಿದೆ. ಅಲ್ಲದೆ ಫಿಜಿಯೊ ಥೆರಪಿ, ಎಲೆಕ್ಟ್ರೋ ಥೆರಪಿ, ಹೈಡ್ರೋ ಥೆರಪಿ, ಮ್ಯಾನ್ಯುವಲ್‌ ಮಸಾಜ್‌, ಜೆಟ್‌ ಬಾತ್‌ ವ್ಯಾಯಾಮ ಚಿಕಿತ್ಸೆಗಳನ್ನೂ ನೀಡಲಾಗುತ್ತದೆ. ತಜ್ಞರ ಮೂಲಕ ತರಬೇತಿಯೂ ನಡೆಯುತ್ತದೆ.

* ಸಾರ್ವಜನಿಕ ಕ್ರೀಡಾಂಗಣಗಳನ್ನು ಮೂರನೇ ವ್ಯಕ್ತಿ ಅಥವಾ ಖಾಸಗಿಯವರಿಗೆ ಬಳಕೆ ಮಾಡಿಕೊಳ್ಳುವ ಕುರಿತಂತೆ ಪಾರದರ್ಶಕ ರೀತಿಯಲ್ಲಿ ಅವಕಾಶ ಕಲ್ಪಿಸುವ ಬಗ್ಗೆ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ರಾಜ್ಯ ಸರ್ಕಾರ ಸ್ಪಷ್ಟ ನೀತಿ ರೂಪಿಸಬೇಕು.
–ಅಭಯ್‌ ಎಸ್.ಓಕಾ, ಮುಖ್ಯ ನ್ಯಾಯಮೂರ್ತಿ

* ಹೈಕೋರ್ಟ್‌ ಆದೇಶದಿಂದ ನಮಗೆ ತುಂಬಾ ಸಂತೋಷವಾಗಿದೆ. ಕ್ರೀಡಾಪಟುಗಳು ಎಂದಿನಂತೆ ಅಭ್ಯಾಸ ಮಾಡಲು ಇದರಿಂದ ಸಹಕಾರಿಯಾಗಿದೆ. ಇದಕ್ಕಾಗಿ ಕೋರ್ಟ್‌ಗೆ ಕೃತಜ್ಞತೆ ಅರ್ಪಿಸುತ್ತೇವೆ.
–ವಿ.ಆರ್‌.ಬೀಡು, ಅಂತರರಾಷ್ಟ್ರೀಯ ಕೋಚ್‌ ಮತ್ತು ಅರ್ಜಿದಾರರು

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು