ಸೋಮವಾರ, ಏಪ್ರಿಲ್ 19, 2021
31 °C
2 ಗಂಟೆವರೆಗೆ ಪಾರ್ಟಿ ಮಾಡಲು ಅವಕಾಶ

ಹೊಸ ವರ್ಷಾಚರಣೆ, ಪಾರ್ಟಿಗೆ ಪೊಲೀಸ್ ಹದ್ದಿನ ಕಣ್ಣು: ಹಾರಲಿವೆ ಡ್ರೋನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆಗೆ ಹೆಚ್ಚು ಜನ ಸೇರುವ ಪ್ರದೇಶಗಳಲ್ಲಿ ಪುಂಡರ ಮೇಲೆ ನಿಗಾ ಇಡಲು ಪೊಲೀಸರು ಡ್ರೋನ್ ಕ್ಯಾಮೆರಾಗಳನ್ನು ಹಾರಿಸಲು ನಿರ್ಧರಿಸಿದ್ದರೆ, ನಗರ ಹಾಗೂ ಹೊರವಲಯಗಳಲ್ಲಿ ನಡೆಯುವ ರೇವ್ ಪಾರ್ಟಿಗಳ ಕಣ್ಗಾವಲಿಗಾಗಿಯೇ ಸಿಸಿಬಿಯ ಹತ್ತು ತಂಡಗಳು ರಚನೆಯಾಗಿವೆ.

ಬಂದೋಬಸ್ತ್ ಸಿದ್ಧತೆ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್, ‘ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್‌ಸ್ಟ್ರೀಟ್, ಕೋರಮಂಗಲ, ಇಂದಿರಾನಗರ, ವೈಟ್‌ಫೀಲ್ಡ್... ಇನ್ನಿತರೆ ಕೆಲ ಪ್ರದೇಶಗಳಲ್ಲಿ ಡಿ.31ರ ರಾತ್ರಿ ಹೆಚ್ಚು ಜನ ಸೇರುತ್ತಾರೆ. ಅವರ ಸುರಕ್ಷತೆ ದೃಷ್ಟಿಯಿಂದ ಎಷ್ಟು ಬೇಕಾದರೂ ಡ್ರೋನ್ ಕ್ಯಾಮೆರಾಗಳನ್ನು ಬಳಸಿಕೊಳ್ಳುವಂತೆ ಎಲ್ಲ ವಿಭಾಗಗಳ ಡಿಸಿಪಿಗಳಿಗೂ ಸೂಚನೆ ಕೊಟ್ಟಿದ್ದೇನೆ’ ಎಂದು ಹೇಳಿದರು.

‘400 ಗಸ್ತು ಬೈಕ್‌ಗಳ ಜತೆಗೆ, ಬುಧವಾರವಷ್ಟೇ ರಸ್ತೆಗಿಳಿದ 911 ಹೊಸ ಗಸ್ತು ಬೈಕ್‌ಗಳನ್ನೂ ಪೆಟ್ರೋಲಿಂಗ್‌ಗೆ ಬಳಸಲಾಗುತ್ತಿದೆ. ಜತೆಗೆ 272 ಹೊಯ್ಸಳ ವಾಹನಗಳೂ ರಾತ್ರಿಯಿಡೀ ನಗರ ಪ್ರದಕ್ಷಿಣೆ ಹಾಕುತ್ತವೆ. ಯಾರಿಂದಲಾದರೂ ತಮಗೆ ತೊಂದರೆಯಾದರೆ ತಕ್ಷಣ ಹತ್ತಿರದ ಪೊಲೀಸರಿಗೆ ವಿಷಯ ತಿಳಿಸಿ ಅಥವಾ ನಿಯಂತ್ರಣ ಕೊಠಡಿಗೆ (100) ಕರೆ ಮಾಡಿ’ ಎಂದು ಸಾರ್ವಜನಿಕರಿಗೆ ಸೂಚಿಸಿದರು.

‘ಡಿ.31ರ ರಾತ್ರಿ 8 ಗಂಟೆಯಿಂದ ಬೆಳಗಿನವರೆಗೂ ಪಾನಮತ್ತ ಸವಾರರ ವಿರುದ್ಧ ಸಂಚಾರ ಪೊಲೀಸರು ಕಾರ್ಯಾಚರಣೆ ನಡೆಸಲಿದ್ದಾರೆ. ಕುಡಿದು ಚಾಲನೆ ಮಾಡಿದರೆ ವಾಹನ ಜಪ್ತಿ ಮಾಡಿ ಪ್ರಕರಣ ದಾಖಲಿಸಲಾಗುತ್ತದೆ. ದೋಷಪೂರಿತ ಸೈಲೆನ್ಸರ್ ಮೂಲಕ ಕರ್ಕಶ ಶಬ್ದ ಮಾಡಿಕೊಂಡು ತಿರುಗಾಡುವವರ ಮೇಲೆ ನಿಗಾ ಇಡುವಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇವೆ. ಸಾರ್ವಜನಿಕ  ಸ್ಥಳಗಳಲ್ಲಿ ಯಾರೇ ಪಾರ್ಟಿ ಮಾಡುವುದಾದರೂ ಸ್ಥಳೀಯ ಪೊಲೀಸರಿಂದ ಅನುಮತಿ ಪಡೆಯುವುದು ಕಡ್ಡಾಯ’ ಎಂದರು.


ಟಿ.ಸುನೀಲ್ ಕುಮಾರ್

ಮದ್ಯದ ಮೇಲೂ ಕಣ್ಣು: ‘ಸಂಭ್ರಮಾಚರಣೆ ಹಾಗೂ ಮದ್ಯ ವಿತರಣೆಯ ಅವಧಿಯನ್ನು 2 ಗಂಟೆವರೆಗೆ ವಿಸ್ತರಿಸಲಾಗಿದೆ. ಆ ನಂತರವೂ ಮದ್ಯ ಪೂರೈಕೆ ಮಾಡಿದರೆ ಕ್ರಮ ಜರುಗಿಸಲಾಗುವುದು. ಅಬಕಾರಿ ಇಲಾಖೆಯ ಅಧಿಕಾರಿಗಳೂ ಪ್ರತ್ಯೇಕ ತಂಡಗಳನ್ನು ರಚಿಸಿಕೊಂಡಿದ್ದಾರೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಪೂರೈಸುವ ಪಬ್, ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳ ವಿರುದ್ಧ ಆ ತಂಡಗಳು ಕ್ರಮ ಜರುಗಿಸಲಿವೆ’ ಎಂದು ಹೇಳಿದರು.

‘‌ಸಿ.ಸಿ ಟಿ.ವಿ ಕ್ಯಾಮೆರಾಗಳ ಅಳವಡಿಕೆ, ಮಹಿಳಾ ಭದ್ರತಾ ಸಿಬ್ಬಂದಿಯ ನೇಮಕ ಸೇರಿದಂತೆ ಪಬ್ ಹಾಗೂ ಬಾರ್‌ಗಳ ಮಾಲೀಕರು ಮಹಿಳೆಯರ ಸುರಕ್ಷತೆಗೆ ತಾವೇ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಪಬ್ ಹಾಗೂ ಬಾರ್‌ಗಳಲ್ಲಿ ಅಹಿತಕರ ಘಟನೆ ನಡೆದರೆ ಮಾಲೀಕರನ್ನೇ ಹೊಣೆ ಮಾಡಲಾಗುವುದು’ ಎಂದು ಎಚ್ಚರಿಸಿದರು.

ಚಾಲಕರಿಗೆ ಪೊಲೀಸ್ ಪಾಠ: ‘ಓಲಾ, ಉಬರ್, ಮೆರು ಕಂಪನಿಗಳ ಜತೆ ಸಭೆ ನಡೆಸಿದ್ದೇವೆ. ಡಿ.31ರ ರಾತ್ರಿ ಯಾವ್ಯಾವ ಚಾಲಕರು ಕ್ಯಾಬ್ ಓಡಿಸುತ್ತಾರೋ, ಅವರೆಲ್ಲರನ್ನೂ ಕರೆಸಿ ಮಾತುಕತೆ ನಡೆಸಿದ್ದೇವೆ. ಪ್ರಯಾಣಿಕರನ್ನು ಸುರಕ್ಷಿತವಾಗಿ ಮನೆಗಳಿಗೆ ತಲುಪಿಸುವಂತೆ ಅವರಲ್ಲಿ ಮನವಿ ಮಾಡಲಾಗಿದೆ. ಇದೇ ವಿಚಾರವಾಗಿ ಆಟೊ ಚಾಲರ ಸಂಘದ ಪದಾಧಿಕಾರಿಗಳ ಜತೆಗೂ ಚರ್ಚಿಸಲಾಗಿದೆ. ಎಲ್ಲರಿಂದಲೂ ಉತ್ತಮ ಸಹಕಾರ ಸಿಕ್ಕಿದೆ. ಈ ಬಾರಿ ಅಪರಾಧ ಹಾಗೂ ಅಪಘಾತ ರಹಿತ ಫಲಿತಾಂಶದ ಮೂಲಕ ಹೊಸವರ್ಷವನ್ನು ಸ್ವಾಗತಿಸುವ ಭರವಸೆ ದೊರೆತಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಡ್ರಗ್ಸ್ ಮಾರಾಟದ ಮೇಲೂ ನಿಗಾ

‘ಹೊಸಕೋಟೆ, ಆವಲಹಳ್ಳಿ, ಕೆ.ಆರ್.ಪುರ ಸೇರಿದಂತೆ ನಗರದ ಹೊರವಲಯದಲ್ಲಿ ರೇವ್ ಪಾರ್ಟಿಗಳು ನಡೆಯುತ್ತವೆ ಎಂಬ ಮಾಹಿತಿ ಇದೆ. ಸಿಸಿಬಿಯ ಹತ್ತು ತಂಡಗಳು ಆ ಪಾರ್ಟಿಗಳ ಮೇಲೆ ನಿಗಾ ಇಡಲಿವೆ. ಜತೆಗೆ ರೌಡಿ ಚಟುವಟಿಕೆಗಳು, ಡ್ರಗ್ಸ್ ಮಾರಾಟ ಸೇರಿದಂತೆ ಎಲ್ಲ ರೀತಿಯ ಸಮಾಜಘಾತುಕ ಚಟುವಟಿಕೆಗಳ ಮೇಲೂ ಸಿಸಿಬಿ ಹದ್ದಿನ ಕಣ್ಣಿಡಲಿದೆ’ ಎಂದು ಸಿಸಿಬಿ ಹೆಚ್ಚುವರಿ ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ ಹೇಳಿದರು.ಅಂಕಿ ಅಂಶ

ಭದ್ರತೆಗೆ ವಿಶೇಷ ಪಡೆಗಳು

* 1 ತುಕಡಿ ಗರುಡ ಪಡೆ

 * 1 ತುಕಡಿ ಕ್ಯೂಆರ್‌ಟಿ

 * 2 ತುಕಡಿ ವಾಟರ್ ಜೆಟ್

 * 50 ತುಕಡಿ ಕೆಎಸ್‌ಆರ್‌‍ಪಿ

 * 30 ತುಕಡಿ ಸಿಎಆರ್

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು