ಬುಧವಾರ, ಮಾರ್ಚ್ 3, 2021
30 °C
ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನೇತೃತ್ವ

ಮಡಿಕೇರಿಯಲ್ಲಿ 5ರಂದು ‘ಮತ್ತೆ ಕಲ್ಯಾಣ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ನಗರದ ಕಾವೇರಿ ಹಾಲ್‌ನಲ್ಲಿ ಸಹಮತ ವೇದಿಕೆ ಕೊಡಗು ಘಟಕದ ವತಿಯಿಂದ ಆ.5ರಂದು ‘ಮತ್ತೆ ಕಲ್ಯಾಣ’ ಕಾರ್ಯಕ್ರಮ ನಡೆಯಲಿದೆ ಎಂದು ಸಹಮತ ವೇದಿಕೆ ಅಧ್ಯಕ್ಷ ಟಿ.ಪಿ.ರಮೇಶ್ ಮಾಹಿತಿ ನೀಡಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘21ನೇ ಶತಮಾನದಲ್ಲಿರುವ ನಾವೆಲ್ಲರೂ ಜಾತಿ, ಧರ್ಮಗಳ ಹೆಸರಿನಲ್ಲಿ ಮನುಷ್ಯ ಕುಲ ತನ್ನದೇ ಸಹಜೀವಿಗಳಿಂದ ದೂರ ಸರಿದು ಒಡೆದು ಹೋಗುತ್ತಿದ್ದೇವೆ. ಈ ಆತಂಕದ ಹೊತ್ತಿನಲ್ಲಿ ನಾವೆಲ್ಲರೂ ಜೊತೆ ಜೊತೆಯಾಗಿಯೇ ಮುನ್ನಡೆಯಲು ತೊಡಗುತ್ತಿರುವ ಹೊಸದೊಂದು ಪ್ರಕ್ರಿಯೆ ಕಲ್ಯಾಣ ದತ್ತ ಕಾರ್ಯಕ್ರಮ’ ಎಂದರು.

ಅನುಭವ ಮಂಟಪದ ಮೂಲಕ ಜಾತ್ಯತೀತ ಸಮಾಜ ನಿರ್ಮಾಣಕ್ಕಾಗಿ ದುಡಿದ ವಿವಿಧ ಶರಣ, ಶರಣೆಯರ ವಚನಗಳು ಸಂದೇಶಗಳನ್ನು ಸಮಾಜದಲ್ಲಿ ಬಿತ್ತರಿಸುವ ಕೆಲಸ ನಡೆಯಲಿದೆ ಎಂದು ತಿಳಿಸಿದರು.

 ಆಗಸ್ಟ್‌ 1ರಂದು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಿಂದ ಆರಂಭಗೊಳ್ಳುವ ‘ಕಲ್ಯಾಣ ದತ್ತ’ ಆಂದೋಲನ ಕಾರ್ಯಕ್ರಮ ರಾಜ್ಯದ 30 ಜಿಲ್ಲೆಗಳಲ್ಲಿ 30 ದಿನಗಳ ಕಾಲ ಸಂಚರಿಸುತ್ತಿದ್ದು, ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿ ನೇತೃತ್ವ ವಹಿಸಿದ್ದಾರೆ ಎಂದು ಹೇಳಿದರು.

ಆ. 5ರ ಸೋಮವಾರ ಹಾಸನದಿಂದ ಮಡಿಕೇರಿಗೆ ಸ್ವಾಮೀಜಿ ಆಗಮಿಸಲಿದ್ದಾರೆ. ಸ್ತಬ್ಧಚಿತ್ರದ ರಥವನ್ನು ಮಹದೇವಪೇಟೆಯ ಬಸವೇಶ್ವರ ದೇವಾಲಯದ ಬಳಿ ಬರಮಾಡಿಕೊಳ್ಳಲಾಗುವುದು ಎಂದು ರಮೇಶ್ ಹೇಳಿದರು.

ಬೆಳಿಗ್ಗೆ 10.30ಕ್ಕೆ ಏರ್ಪಡಿಸಿರುವ ಸಾಮರಸ್ಯ ನಡಿಗೆಯಲ್ಲಿ ವಿವಿಧ ಧರ್ಮಗಳ ಗುರುಗಳು, ಜನಪ್ರತಿನಿಧಿಗಳು, ಸಂಘ– ಸಂಸ್ಥೆ ಸಮಾಜಗಳ ಪ್ರಮುಖರು ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಕಲಾತಂಡಗಳು ಭಾಗವಹಿಸಲಿದ್ದು ಅಲ್ಲಿಂದ ಕಾವೇರಿ ಹಾಲ್‌ ತನಕ ಸಾಮರಸ್ಯ ನಡಿಗೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

12ಕ್ಕೆ ಸಾರ್ವಜನಿಕ ಸಮಾವೇಶ  ಪಂಡಿತಾರಾದ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತೀಯ ವಿದ್ಯಾಭವನದ ಅಧ್ಯಕ್ಷರು ಮತ್ತು ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೆ.ಎಸ್.ದೇವಯ್ಯ ವಹಿಸುವರು. ‘ವಚನ ಚಳವಳಿ ವೈಶಿಷ್ಟ’ ಕುರಿತು ಚಿಂತಕ ಜಿ.ಎನ್. ನಾಗರಾಜ್ ಮತ್ತು ‘ಇಂದಿನ ಅಗತ್ಯ-ಬಸವ ತತ್ವ’ ಕುರಿತು ಚಿಂತಕ ಡಾ.ಕೆ. ಷರೀಫಾ ಉಪನ್ಯಾಸ ನೀಡಲಿದ್ದಾರೆ ಎಂದು ವಿವರಿಸಿದರು.

ಮಧ್ಯಾಹ್ನ 3.30ಕ್ಕೆ ಮೋಳಿಗೆ ಮಾರಯ್ಯ ನಾಟಕ ಪ್ರದರ್ಶನವಿದೆ. ಎಲ್ಲರನ್ನು ಒಗ್ಗೂಡಿಸಿ ಎಲ್ಲರೊಂದಿಗೆ ಸಾಮರಸ್ಯ ಬೆಸೆಯುವ ‘ಕಲ್ಯಾಣ ದತ್ತ’ ಕಾರ್ಯಕ್ರಮಕ್ಕೆ ಎಲ್ಲರೂ ಬಂದು ಯಶಸ್ವಿಗೊಳಿಸಬೇಕು ಎಂದು ಕೋರಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಬೇಬಿ ಮ್ಯಾಥ್ಯು, ಶಿವಪ್ಪ, ಮಹೇಶ್, ಟಿ.ಎಂ. ಮುದ್ದಯ್ಯ, ಮುನೀರ್ ಅಹಮ್ಮದ್ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.