‘ಓಲಾ’ ವ್ಯತ್ಯಯ; ಹೆಚ್ಚಿದ ‘ಉಬರ್’ ಬಳಕೆ

ಗುರುವಾರ , ಏಪ್ರಿಲ್ 25, 2019
27 °C
ಕಂಪನಿ ಪರವಾನಗಿ ಆರು ತಿಂಗಳು ಅಮಾನತು * ಕೆಲವೆಡೆ ಆರ್‌ಟಿಒಗಳಿಂದ ಕ್ಯಾಬ್‌ಗಳ ಜಪ್ತಿ

‘ಓಲಾ’ ವ್ಯತ್ಯಯ; ಹೆಚ್ಚಿದ ‘ಉಬರ್’ ಬಳಕೆ

Published:
Updated:
Prajavani

ಬೆಂಗಳೂರು: ಓಲಾ ಕ್ಯಾಬ್ ಕಂಪನಿಯ ಪರವಾನಗಿಯನ್ನು ಮುಂದಿನ ಆರು ತಿಂಗಳವರೆಗೆ ಅಮಾನತು ಮಾಡಿರುವ ಬೆನ್ನಲ್ಲೇ ನಗರದಲ್ಲಿ ಓಲಾ ಕ್ಯಾಬ್‌ ಸೇವೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಪ್ರತಿಸ್ಪರ್ಧಿ ಕಂಪನಿಗಳ ಕ್ಯಾಬ್‌ ಬಳಕೆ ಹೆಚ್ಚಳವಾಗಿದೆ.

ಪರವಾನಗಿ ಅಮಾನತ್ತಾದ ಬಳಿಕವೂ ಓಲಾ ಕಂಪನಿಯ ಆ್ಯಪ್‌ ಕಾರ್ಯನಿರ್ವಹಿಸುತ್ತಿದೆ. ‘ಆರ್‌ಟಿಒಗಳು ಕ್ಯಾಬ್‌ ಜಪ್ತಿ ಮಾಡುತ್ತಾರೆ’ ಎಂಬ ಭಯದಲ್ಲಿ ಬಹುಪಾಲು ಕ್ಯಾಬ್‌ಗಳು ಶನಿವಾರ ರಸ್ತೆಗೆ ಇಳಿಯಲಿಲ್ಲ. ಪ್ರಯಾಣಿಕರು ಬುಕಿಂಗ್‌ ಮಾಡಿದರೂ ಚಾಲಕರು ಸ್ಥಳಕ್ಕೆ ಬರಲು ಹಿಂದೇಟು ಹಾಕಿದರು.  ಹಲವು ಚಾಲಕರು, ಓಲಾ ಆ್ಯಪ್‌ ಬದಲು ‘ಉಬರ್‌’ ಹಾಗೂ ‘ಹೈ’ ಆ್ಯಪ್‌ ಬಳಸಿಕೊಂಡು ಸೇವೆ
ನೀಡಿದರು.

ವಾರಾಂತ್ಯದಲ್ಲಿ ನಗರದಲ್ಲಿ ಸುತ್ತಾಡುವವರ ಸಂಖ್ಯೆ ಹೆಚ್ಚಿರುತ್ತದೆ. ಬಹುಪಾಲು ಗ್ರಾಹಕರು ಓಲಾ ಕ್ಯಾಬ್ ಬಳಸುತ್ತಾರೆ. ಕಳೆದ ವಾರಾಂತ್ಯಕ್ಕೆ ಹೋಲಿಸಿದರೆ ಈ ಶನಿವಾರ ಗ್ರಾಹಕರ ಸಂಖ್ಯೆಯೊಂದಿಗೆ ಕ್ಯಾಬ್‌ಗಳ ಸಂಖ್ಯೆಯು ಇಳಿಮುಖವಾಗಿದೆ. ಭಾನುವಾರವೂ ಇದೇ ಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ.

‘ಕ್ಯಾಬ್ ಸೇವೆಯನ್ನು ಏಕಾಏಕಿ ಸ್ಥಗಿತಗೊಳಿಸಿದರೆ ಪ್ರಯಾಣಿಕರು ಹಾಗೂ ಚಾಲಕರಿಗೆ ತೊಂದರೆ ಆಗಲಿದೆ.
ನಮ್ಮ ಸೇವೆ ಎಂದಿನಂತೆ ಮುಂದುವರಿದಿದೆ. ದೇಶ ಹಾಗೂ ಹೊರದೇಶಗಳಲ್ಲಿ ಕಂಪನಿಯು ಒಂದೇ ಆ್ಯಪ್‌ ಮೂಲಕ ಕ್ಯಾಬ್‌ ಸೇವೆ ಒದಗಿಸುತ್ತಿದೆ. ಪರವಾನಗಿ ಅಮಾನತ್ತಾಗಿರುವ ಕಾರಣಕ್ಕೆ ಆ್ಯಪ್‌ ನಿಷ್ಕ್ರಿಯಗೊಳಿಸಲು ಆಗುವುದಿಲ್ಲ. ಸದ್ಯ ಎದುರಾಗಿರುವ ಸಮಸ್ಯೆಯನ್ನು ಬಗೆಹರಿಸಲು ಸಂಬಂಧಪಟ್ಟ ಅಧಿಕಾರಿ ಜೊತೆ ಚರ್ಚೆ ನಡೆಸಲಿದ್ದೇವೆ’ ಎಂದು ಓಲಾ ಕಂಪನಿಯ ಮೂಲಗಳು ತಿಳಿಸಿವೆ.‌

ಆದೇಶ ಉಲ್ಲಂಘಿಸಿದ್ದಕ್ಕಾಗಿ ಕೋರಮಂಗಲ ಆರ್‌ಟಿಒ ವ್ಯಾಪ್ತಿಯಲ್ಲಿ ಎರಡು ಕ್ಯಾಬ್‌ಗಳನ್ನು ಜಪ್ತಿ ಮಾಡಲಾಗಿದೆ. ಅದನ್ನು ಹೊರಡುಪಡಿಸಿ ಬೇರೆ ಎಲ್ಲಿಯೂ ಕಾರ್ಯಾಚರಣೆ ನಡೆದಿಲ್ಲ.

ಆ ಬಗ್ಗೆ ಪ್ರತಿಕ್ರಿಯಿಸಿದ ಸಾರಿಗೆ ಇಲಾಖೆಯ ಅಧಿಕಾರಿಯೊಬ್ಬರು, ‘ಪರವಾನಗಿಯನ್ನು ವಾಪಸ್ ನೀಡಲು ಸೋಮವಾರದವರೆಗೆ ಕಂಪನಿಗೆ ಅವಕಾಶವಿದೆ. ಆ ನಂತರವೇ ರಾಜ್ಯದಾದ್ಯಂತ ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಿ ಕಂಪನಿಯ ಕ್ಯಾಬ್‌ಗಳನ್ನು ಜಪ್ತಿ ಮಾಡಲಿದ್ದೇವೆ’ ಎಂದರು. 

ಆ್ಯಪ್‌ ಇದ್ದ ಮೊಬೈಲ್ ಸ್ವಿಚ್‌ ಆಫ್‌: ಪರವಾನಗಿ ಅಮಾನತ್ತಾದ ಬಗ್ಗೆ ಶುಕ್ರವಾರ ಆದೇಶದ ಪ್ರತಿ ಹೊರಬಿದ್ದಿದ್ದು, ಅಂದಿನಿಂದಲೇ ಓಲಾ ಕ್ಯಾಬ್‌ ಪ್ರಯಾಣಿಕರು ಹಾಗೂ ಚಾಲಕರಲ್ಲಿ ಗೊಂದಲ ಸೃಷ್ಟಿಯಾಗಿದೆ. 

ಶನಿವಾರ ಬೆಳಿಗ್ಗೆ ಕೆಲಸಕ್ಕೆ ಹಾಜರಾಗಿದ್ದ ಹಲವು ಚಾಲಕರು, ಓಲಾ ಆ್ಯಪ್‌ ಮೂಲಕ ಬುಕ್ಕಿಂಗ್‌ ಪಡೆದುಕೊಂಡು ಕ್ಯಾಬ್ ಓಡಿಸುತ್ತಿದ್ದರು. ‘ಕ್ಯಾಬ್‌ಗಳನ್ನು ಆರ್‌ಟಿಒ ಜಪ್ತಿ ಮಾಡುತ್ತಿದ್ದಾರೆ’ ಎಂಬ ಸುದ್ದಿ ಎಲ್ಲೆಡೆ ಹರಡಿತ್ತು. ಅದರಿಂದಾಗಿ ಚಾಲಕರು, ಓಲಾ ಆ್ಯಪ್‌ ಇದ್ದ ಮೊಬೈಲ್ ಸ್ವಿಚ್‌ ಆಫ್‌ ಮಾಡಿದರು. 

‘ಎಂದಿನಂತೆ ಕೆಲಸಕ್ಕೆ ಬಂದಿದ್ದೆ. ಹಲವೆಡೆ ಆರ್‌ಟಿಒಗಳು ಕ್ಯಾಬ್‌ಗಳನ್ನು ನಿಲ್ಲಿಸಿ ಜಪ್ತಿ ಮಾಡುತ್ತಿದ್ದ ಬಗ್ಗೆ ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಸಂದೇಶಗಳು ಬಂದವು. ಹೀಗಾಗಿ, ಸೇವೆಯನ್ನು ಅರ್ಧಕ್ಕೆ ನಿಲ್ಲಿಸಿದೆ’ ಎಂದು ಚಾಲಕ ಆಕಾಶ್ ‘ಪ್ರಜಾವಾಣಿ’ಗೆ
ತಿಳಿಸಿದರು.

‘ನಿತ್ಯವೂ ಒಂದು ನಿಗದಿತ ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕ್ಯಾಬ್ ಓಡಿಸುತ್ತಿದ್ದೇನೆ. ಕೆಲ ಪ್ರಯಾಣಿಕರು ನನ್ನ ಮೊಬೈಲ್ ಸಂಖ್ಯೆ ಪಡೆದುಕೊಂಡಿದ್ದಾರೆ. ಶನಿವಾರ ಸಂಜೆ ಅವರೆಲ್ಲ ಕರೆ ಮಾಡಿ ಬುಕ್ಕಿಂಗ್ ಮಾಡಿದ್ದರು. ಅವರಿಗೆ ಖಾಸಗಿಯಾಗಿ ಸೇವೆ ನೀಡಿದೆ’ ಎಂದು
ಹೇಳಿದರು.

ಉಬರ್‌ ಸರ್ಚಾರ್ಜ್‌ ಹೆಚ್ಚಳ: ಓಲಾ ಕ್ಯಾಬ್‌ಗಳು ಸಿಗದಿದ್ದರಿಂದ ಬಹುಪಾಲು ಪ್ರಯಾಣಿಕರು, ಉಬರ್‌ ಕ್ಯಾಬ್‌ಗಳ ಬಳಕೆಗೆ ಆಸಕ್ತಿ ತೋರಿಸುತ್ತಿದ್ದಾರೆ. ಬೇಡಿಕೆ ಹೆಚ್ಚಾಗಿದ್ದರಿಂದಾಗಿ ಉಬರ್ ಕಂಪನಿಯು ಸರ್ಚಾರ್ಜ್‌ ಹೆಚ್ಚಳ ಮಾಡಿದೆ ಎಂದು ಕೆಲ ಪ್ರಯಾಣಿಕರು ಆರೋಪಿಸಿದ್ದಾರೆ.

ಪ್ರಯಾಣಿಕ ವಿಶಾಲ್, ‘ನನ್ನ ಪತ್ನಿ ಶನಿವಾರ ಉಬರ್‌ ಕ್ಯಾಬ್‌ನಲ್ಲಿ ನಗರದಿಂದ ವಿಮಾನನಿಲ್ದಾಣಕ್ಕೆ ಪ್ರಯಾಣಿಸಿದ್ದರು. ಸರ್ಚಾರ್ಜ್‌‌ನ್ನು ಎಂದಿಗಿಂತ ಎರಡು ಪಟ್ಟು ಹೆಚ್ಚಿಸಲಾಗಿದೆ. ಓಲಾದಲ್ಲಿ ಈ ರೀತಿ ಇರಲಿಲ್ಲ. ಮುಂದಿನ ಆರು ತಿಂಗಳು ಓಲಾ ಸೇವೆ ಇರದಿದ್ದರೆ, ಉಬರ್‌ ಕಂಪನಿಯು ಪ್ರಯಾಣಿಕರ ಸುಲಿಗೆ ಮಾಡುವುದರಲ್ಲಿ ಸಂದೇಶಹವಿಲ್ಲ’ ಎಂದು ಟ್ವೀಟ್ ಮಾಡಿದ್ದಾರೆ.

ಗಬ್ಬರ್ ಎಂಬುವರು, ‘ಉಬರ್ ಕಂಪನಿಯು ಎರಡರಿಂದ ಮೂರು ಪಟ್ಟು ಸರ್ಚಾರ್ಜ್‌ ಹೆಚ್ಚಿಸಿದೆ. ಇದಕ್ಕೆ ಯಾರು ಹೊಣೆ’ ಎಂದು ಪ್ರಶ್ನಿಸಿದ್ದಾರೆ. 

ಶ್ರೀಧರ್‌ ರಾವ್, ‘ಈಗ ಓಲಾ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಅದರ ಲಾಭ ಪಡೆಯುವುದಕ್ಕಾಗಿ ಉಬರ್ ಕಂಪನಿಯು ಸರ್ಚಾರ್ಜ್‌ ಹೆಚ್ಚಿಸಿದೆ’ ಎಂದಿದ್ದಾರೆ.

ವಿಡಿಯೊದಲ್ಲಿ ಚಾಲಕರ ಅಳಲು

ಓಲಾ ಕಂಪನಿ ಪರವಾನಗಿ ಅಮಾನತು ಮಾಡಿರುವುದನ್ನು ಖಂಡಿಸಿರುವ ಇಬ್ಬರು ಚಾಲಕರು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೊವನ್ನು ಹರಿಯಬಿಟ್ಟು ಅಳಲು ತೋಡಿಕೊಂಡಿದ್ದಾರೆ.

‘ಆರು ತಿಂಗಳು ಓಲಾ ಸೇವೆ ಸ್ಥಗಿತವಾದರೆ, ನಾವು ಸಾಲದ ಕಂತು ತುಂಬುವುದು ಹೇಗೆ? ಮಕ್ಕಳ ಶೈಕ್ಷಣಿಕ ವೆಚ್ಚ ಭರಿಸುವುದು ಹೇಗೆ? ಕುಟುಂಬ ನಡೆಸುವುದು ಹೇಗೆ?’ ಎಂದು ಚಾಲಕರು ಪ್ರಶ್ನಿಸಿದ್ದಾರೆ.

‘ನಾವೇನು ಶ್ರೀಮಂತರ ಮಕ್ಕಳಲ್ಲ. ಬಡವರ ಮಕ್ಕಳು. ಓಲಾ ಸೇವೆಯಿಂದ ಪ್ರತಿ ತಿಂಗಳು ಹಣ ಬರುತ್ತದೆ ಎಂದು ನಂಬಿ ಸಾಲ ಮಾಡಿ ಕ್ಯಾಬ್‌ ಹಾಗೂ ಆಟೊ ತೆಗೆದುಕೊಂಡಿದ್ದೇವೆ. ಏಕಾಏಕಿ ಸೇವೆ ಸ್ಥಗಿತಗೊಳಿಸಿದರೆ ಚಾಲಕರಿಗೆ ಸಮಸ್ಯೆ ಆಗುತ್ತದೆ. ದಯವಿಟ್ಟು ಅಮಾನತು ಆದೇಶ ಹಿಂಪಡೆಯಿರಿ’ ಎಂದು ಒತ್ತಾಯಿಸಿದ್ದಾರೆ.

ಶಿವಕುಮಾರ್ ಚೆಂಗಲರಾಯ್ ಎಂಬುವರು, ‘ನಿಯಮ ಪಾಲಿಸದ ಓಲಾ ಕಂಪನಿಗೆ ಶಿಕ್ಷೆ ಕೊಟ್ಟರೆ ತಪ್ಪಿಲ್ಲ, ಆದರೆ ಜೀವನ ನಿರ್ವಹಣೆಗಾಗಿ ಸಾಲ ಮಾಡಿ ಕ್ಯಾಬ್ / ಆಟೋ ಖರೀದಿಸಿ ಓಲಾಗೆ ಅಟ್ಯಾಚ್ ಮಾಡಿಸಿಕೊಂಡ ಚಾಲಕರ ಗತಿ ಏನಾಗಬೇಕು? ಬ್ಯಾಂಕ್ ಸಾಲ ಕಟ್ಟುವುದು ಹೇಗೆ? ಪಾಪ ಅವರ ಸಂಸಾರ ನಡೆಯುವುದು ಹೇಗೆ? ಯೋಚನೆ ಮಾಡುವ ಶಕ್ತಿ ನಿಮಗಿದೆಯೇ?’ ಎಂದು ಟ್ವೀಟ್‌ ಮಾಡಿದ್ದಾರೆ.

‘ಜೆಡಿಎಸ್‌ ಜವಾಬ್‌ ದೋ‘ ಅಭಿಯಾನಕ್ಕೆ ಚಾಲನೆ

ಓಲಾ ಕಂಪನಿ ಪರವಾನಗಿ ರದ್ದುಪಡಿಸಿದ್ದನ್ನು ಖಂಡಿಸಿರುವ ಕೆಲ ಚಾಲಕರು ಹಾಗೂ ಪ್ರಯಾಣಿಕರು, #JDSJawabDo ಹ್ಯಾಶ್‌ಟ್ಯಾಗ್‌ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿದ್ದಾರೆ.

ಸಿದ್ಧಾರ್ಥ ಪೈ ಎಂಬುವರು, ‘ಐಟಿ– ಬಿಟಿಯ ಬಹುಪಾಲು ಉದ್ಯೋಗಿಗಳು ಓಲಾ ಕ್ಯಾಬ್‌ ಅವಲಂಬಿಸಿದ್ದಾರೆ. ಏಕಾಏಕಿ ಸೇವೆ ಸ್ಥಗಿತಗೊಳಿಸಿದರೆ ಉದ್ಯೋಗಿಗಳಿಗೆ ತೊಂದರೆ ಆಗಲಿದೆ’ ಎಂದು ಟ್ವೀಟ್ ಮಾಡಿದ್ದಾರೆ.

ನಯನಾ ಎಂಬುವರು, ‘ಬೆಂಗಳೂರಿನಲ್ಲಿ ರ‍್ಯಾಪಿಡೊ ಕಂಪನಿಯು ಬೈಕ್ ಟ್ಯಾಕ್ಸಿ ಸೇವೆ ಒದಗಿಸುತ್ತಿದೆ. ಅದಕ್ಕೆ ಪರವಾನಗಿ ಇದೆಯೇ? ಅದರ ಮೇಲೆ ತೆಗೆದುಕೊಳ್ಳದ ಕ್ರಮ ಓಲಾ ಕಂಪನಿ ಮೇಲೆ ಏಕೆ ತೆಗೆದುಕೊಳ್ಳಲಾಗಿದೆ’ ಎಂದು ಪ‍್ರಶ್ನಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !