ಗುರುವಾರ , ಸೆಪ್ಟೆಂಬರ್ 23, 2021
24 °C

ಕಾಯಕಲ್ಪಕ್ಕೆ ಕಾದಿರುವ ಉದ್ಯಾನಗಳು

ವಸುಂಧರಾ ಕೆ.ಎಂ. Updated:

ಅಕ್ಷರ ಗಾತ್ರ : | |

Prajavani

ಓ.. ರಜೆ ಬಂತು, ರಜೆ ಬಂತು ಎಂದು ಮಕ್ಕಳು ಸಂಭ್ರಮಿಸಿಕೊಳ್ಳುತ್ತಿರುವಾಗಲೇ ರಜೆ ಹೋಗುವ ಸಮಯವೂ ಬಂದೇ ಬಿಟ್ಟಿದೆ.... ಮಕ್ಕಳಿಂದ ತುಂಬಿ ತೂಗುತ್ತಿದ್ದ ಉದ್ಯಾನವನಗಳಿಗೆ ಇನ್ನೇನು ರಜೆಯ ಆರಂಭ.

ಈಗಾಗಲೆ ಹಲವಾರು ಶಾಲೆಗಳು ಪುನರಾರಂಭಗೊಂಡಿವೆ. ಮತ್ತೆ ಕೆಲವು ಶಾಲೆಗಳು ಮಕ್ಕಳ ಕಲರವ ತುಂಬಿಕೊಳ್ಳಲು ಕಾಯುತ್ತಿವೆ. ಪೋಷಕರಿಗೆ ಶಾಲಾ ಶುಲ್ಕ, ಹೊಸ ಪುಸ್ತಕ ಖರೀದಿ ಶುಲ್ಕ, ಸ್ಕೂಲ್ ವ್ಯಾನ್ ಶುಲ್ಕ ಇತ್ಯಾದಿಗಳಿಗೆ ಹಣ ಹೊಂದಿಸಿಕೊಳ್ಳುವ ತಲೆ ನೋವಿದ್ದರೆ, ಮಕ್ಕಳಿಗೆ ಇದ್ಯಾವುದರ ತಲೆ ಬಿಸಿ ಇಲ್ಲ. ಅವರಿಗೆ ಮುಂದಿನ ತರಗತಿಯ ಪುಸ್ತಕ, ಸಮವಸ್ತ್ರ, ಹೊಸ ಸ್ಕೂಲ್ ಬ್ಯಾಗ್, ಲಂಚ್ ಬ್ಯಾಗ್, ಪೆನ್ನು - ಪೆನ್ಸಿಲ್ ಬಾಕ್ಸು... ಹೀಗೆ ಮೊದಲಾದ ಹೊಸ ಆಕರ್ಷಣೆಗಳಿವೆ. 1980, 1990ರ ದಶಕದಲ್ಲಿ ಜನಿಸಿದ್ದವರಿಗೆ ಶಾಲೆಗೆ ರಜೆ ಬಂತೆಂದರೆ, ಅದರಲ್ಲೂ ಬೇಸಿಗೆ- ದಸರೆ ಎಂಬ ಬರೋಬ್ಬರಿ ಒಂದೆರಡು ತಿಂಗಳ ರಜೆ ಎಂದರೆ ಅಜ್ಜಿ ಮನೆ ಎಂಬುದು ಖಾಯಂ ಡೆಸ್ಚಿನೇಷನ್ನು.

ರಜಾಕಾಲ ಕಳೆಯುವವರೆಗೆ ಶಾಲೆಯಿರಲಿ, ಅಪ್ಪ ಅಮ್ಮನಿರುವ ಊರಿನತ್ತಲೂ ಮುಖಮಾಡಿ ಮಲಗುತ್ತಿರಲಿಲ್ಲವೇನೋ... ಆದರೆ ಈಗ ತಾಯ್ತಂದೆಯರಾಗಿ ರೂಪಾಂತರ ಹೊಂದಿರುವ ಅದೇ 80-90ರ ದಶಕದಲ್ಲಿ ಮಕ್ಕಳಾಗಿದ್ದವರು, ತಮ್ಮ ಮಕ್ಕಳನ್ನು ದುಬಾರಿ ಶುಲ್ಕ ತೆತ್ತು ‘ಬೇಸಿಗೆ ಶಿಬಿರ’ಗಳಿಗೆ ಕಳಿಸುತ್ತಾರೆಯೇ ಹೊರತು, ತಮ್ಮ ಹಳ್ಳಿಗಳಿಗೆ ಕಳಿಸುವುದಿಲ್ಲ. ಇರುವ ಒಂದೋ ಎರಡೋ ಮಕ್ಕಳನ್ನು ಕಣ್ಣ ಬೇಲಿಯೊಳಗೇ ಇಟ್ಟುಕೊಂಡು ಹೈಬ್ರೀಡ್‌ ತಳಿಯಂತೆ ಹುಲುಸಾಗಿ ಬೆಳೆಸುತ್ತಿದ್ದಾರೆ (ಕೆಲವು ಅಪವಾದ ಹೊರತುಪಡಿಸಿ).
ಈಗಿನ ಪೋಷಕರ ಕಣ್ಣಿನ ಬೇಲಿಯೊಳಗೆ ನಗರದ ಉದ್ಯಾನಗಳೂ ಸೇರುತ್ತವೆ.

ತಮ್ಮ ಮಕ್ಕಳನ್ನು ಟಿ ವಿ, ಮೊಬೈಲ್‌ಗಳಿಂದ ದೂರವಿಡಲು ಹಲವಾರು ಪೋಷಕರು ಉದ್ಯಾನವನಗಳ ಮೊರೆ ಹೋಗುತ್ತಿದ್ದಾರೆ. ನಾನಾ ನಮೂನೆಯ ಆಟದ ಪರಿಕರಗಳನ್ನು ಹೊತ್ತಿರುವ ಉದ್ಯಾನಗಳು ಬಣ್ಣಬಣ್ಣವಾಗಿ ಅಲಂಕರಿಸಿಕೊಂಡು ದೊಡ್ಡವರನ್ನೇ ಕೈ ಬೀಸಿ ಕರೆಯುವಾಗ, ಮಕ್ಕಳ ಮನಸ್ಸು ಅದರ ಅಂದಕ್ಕೆ ಮಾರು ಹೋಗದಿರುತ್ತದೆಯೇ..? ಮೊದಲೇ ಬೆಂಗಳೂರಿಗೆ ‘ಉದ್ಯಾನ ನಗರಿ’ ಎಂದು ಹೆಸರು (ಈಗ ಈ ಬಿರುದು ಅರ್ಥ ಕಳೆದು ಕೊಂಡಿರಬಹುದು).

ಬಡಾವಣೆಗೆ ಒಂದಾದರೂ ಉದ್ಯಾನವನವಿರುವುದು ಕಡ್ಡಾಯ. ಇಲ್ಲಿನ ವಾಹನ ದಟ್ಟಣೆ, ಅಪಾರ ವಾಯುಮಾಲಿನ್ಯವನ್ನು ಸಹಿಸಿಕೊಂಡೂ ಇಲ್ಲಿರುವ ಕೋಟಿ ಜನರು, ಪಶು ಪಕ್ಷಿಗಳು ಸರಾಗವಾಗಿ ಉಸಿರಾಡುವುದಕ್ಕೆ ಕಾರಣವಾಗಿರುವುದು ಈ ಉದ್ಯಾನವನಗಳೇ. ದೇಹದ ಸ್ವಾಸ್ಥ್ಯಕ್ಕೆ , ಮನಸ್ಸಿನ ಆರಾಮಿಗೆ ಉದ್ಯಾನಗಳನ್ನು ಆಶ್ರಯಿಸಿರುವ ಸಾವಿರಾರು ಮಂದಿ ನಗರವಾಸಿಗಳಿದ್ದಾರೆ.

ಅದರಲ್ಲೂ ಮೊಮ್ಮಕ್ಕಳನ್ನು ಕರೆತರುವ ಅಜ್ಜ ಅಜ್ಜಿಯರು, ಕಚೇರಿಯ ಒತ್ತಡ, ಟ್ರಾಫಿಕ್ಕಿನ ಕಿರಿಕಿರಿ ದಾಟಿಕೊಂಡು ಮಕ್ಕಳಿಗಾಗಿ ಟೈಂ ಕೊಡಬೇಕೆಂದು ಧಾವಿಸಿ ಬರುವ ನವ ಅಮ್ಮಂದಿರು, ಹೆಂಡತಿಯ ಕೆಲಸದ ಹೊರೆ ಕಡಿಮೆಯಾಗಲಿ ಎಂಬ ಮನೋಭಾವದಿಂದ ಮಕ್ಕಳೊಡನೆ ಬರುವ ಯುವ ತಂದೆಯರು, ಗೆಳೆಯರ ಗುಂಪಿನಲ್ಲಿ ಕಲೆತು ಆಡಲು ಬರುವ ಮಕ್ಕಳು, ವ್ಯಾಯಾಮಕ್ಕೆ, ನಡಿಗೆಗೆ, ಹರಟೆಗೆ, ಆಪ್ತಸಲಹೆಗೆ, ವರದಿ ಒಪ್ಪಿಸಲು, ಏಕಾಂತ ಹರಸಲು ಬರುವವರು ನೂರಾರು ಮಂದಿ. ಹೀಗೆ ‘ಉದ್ಯಾನ ಒಂದು, ಕೆಲಸ ನೂರು..!’

ನಗರದ ಬಹುತೇಕ ಎಲ್ಲಾ ಬಡಾವಣೆಗಳಲ್ಲಿರುವ ಉದ್ಯಾನವನಗಳು ಬಿಬಿಎಂಪಿಯ ಆಡಳಿತ ವಲಯಕ್ಕೆ ಸೇರುತ್ತವೆ. ಸ್ಥಳೀಯ ಕಾರ್ಪೊರೇಟರ್‌ಗಳು ತಮ್ಮ ಉದ್ಯಾನಗಳಲ್ಲಿ ಯಾವ ಯಾವ ಸೌಕರ‍್ಯಗಳನ್ನು ನೀಡಿದ್ದಾರೆ ಎಂಬುದನ್ನು ಗಮನಿಸಿಕೊಂಡೇ ಮತ ಹಾಕುವ ಮತದಾರ ಪ್ರಭುಗಳು ಈ ನಗರದಲ್ಲಿದ್ದಾರೆ. ಮಕ್ಕಳು ಆಡುವ ಸ್ಥಳದಲ್ಲಿ ಮುರಿದ ಜೋಕಾಲಿ, ತೂತುಬಿದ್ದ ಜಾರುಬಂಡಿ, ತಿರುಗದ ಚಕ್ರ, ಏರಿಳಿಯದ ಆಟದ ಚೊಂಯ್ಯಂಪಿಯ್ಯ(ಸೀ ಸಾ), ಲೋಹದಲ್ಲಿ ನಿಲ್ಲಿಸಿದ ಬಣ್ಣ ಮಾಸಿದ ಎ ಬಿ ಸಿ ಡಿ ಗಳು, ಸಾಕಷ್ಟು ಮರಳು ಹಾಕಿರದ ಆಟದ ಅಂಗಳಗಳು ಆಯಾ ಬಡಾವಣೆಯ ಪ್ರಜ್ಞಾವಂತ ಜನರು ತಮ್ಮ ಅಸಡ್ಡಾಳ ಕಾರ್ಪೊರೇಟರ್‌ಗಳನ್ನು ಮುಂದಿನ ಚುನಾವಣೆಯಲ್ಲಿ ಗೆಲ್ಲಿಸದಿರುವುದಕ್ಕೆ ಕಾರಣವಾಗಿರುವ ಹಲವಾರು ಉದಾಹರಣೆಗಳಿವೆ. ಹಾಗೆಯೇ ದುಬಾರಿ ಬೆಲೆ ನೀಡಿ ಜಿಮ್‌ಗಳಿಗೆ ಹೋಗಲಾರದವರಿಗೆ ಉದ್ಯಾನದಲ್ಲಿಯೇ ಹೈಟೆಕ್ ವ್ಯವಸ್ಥೆ ಕಲ್ಪಿಸುವುದು, ಹಿರಿಯ ನಾಗರಿಕರಿಗೆ ಕುಳಿತುಕೊಳ್ಳಲು ಆರಾಮು ಬೆಂಚಿನ ವ್ಯವಸ್ಥೆ, ಆಗಾಗ್ಗೆ ಬೀಳುವ ಮಳೆಯಿಂದ ರಕ್ಷಸಿಕೊಳ್ಳಲು ಕುಟೀರಗಳು, ಕುಡಿಯುವ ನೀರು, ಶೌಚಾಲಯ.. ಹೀಗೆ ಇಂತಹ ಹಲವಾರು ವ್ಯವಸ್ಥೆಗಳ ನಿರೀಕ್ಷೆಯಿದೆ. ಮರ ಗಿಡಗಳನ್ನು ಕಡಿಯದೆ, ಇರುವ ಸ್ಥಳದಲ್ಲಿಯೇ ಸೂಕ್ತ ಬದಲಾವಣೆಗಳನ್ನು ಮಾಡಿಕೊಂಡು ಹೊಸ ಕಾಯಕಲ್ಪಕ್ಕೆ ಕಾಯುತ್ತಿರುವ ನೂರಾರು ಉದ್ಯಾನಗಳು ಈ ನಗರದಲ್ಲಿವೆ. ಇನ್ನೇನು ಶಾಲೆಗಳು ಆರಂಭವಾಗುತ್ತವೆ ಮಕ್ಕಳು ಪುನಃ ಶಾಲೆಯಲ್ಲಿ ನಲಿದು, ಟ್ರಾಫಿಕ್ಕಿನಲ್ಲಿ ನಲುಗಿ ಬರುವಾಗ ಅವರನ್ನು ಪ್ರೀತಿಯಿಂದ ಸ್ವಾಗತಿಸಲು ನಮ್ಮ ಉದ್ಯಾನವನಗಳು ಬೇಗ ಸಿಂಗರಿಸಿಕೊಳ್ಳಲಿ ಎಂದು ಆಶಿಸೋಣ.. ವಿಶ್ವಪ್ರಸಿದ್ಧವಾದ ಲಾಲ್ ಬಾಗ್, ಕಬ್ಬನ್ ಪಾರ್ಕ್‌ಗಳು ನಮ್ಮ ನಗರದಲ್ಲೇ ಇವೆ ಎಂಬುದನ್ನು ಈ ಹೊತ್ತಿನಲ್ಲಿ ನೆನೆದು ಆನಂದಿಸೋಣ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು