ಬೆಂಗಳೂರು: 17 ವರ್ಷದ ಬಾಲಕಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ ಅಕಿಲ್ ಎಂಬಾತನಿಗೆ 2 ವರ್ಷಗಳ ಜೈಲು ಶಿಕ್ಷೆ ಹಾಗೂ ₹5 ಸಾವಿರ ದಂಡವನ್ನು ನಗರದ 55ನೇ ಸಿಸಿಎಚ್ ನ್ಯಾಯಾಲಯ ವಿಧಿಸಿದೆ.
ನ್ಯಾಯಾಧೀಶೆ ಶಾರದಾ ಪ್ರಕರಣದ ವಿಚಾರಣೆಯನ್ನುನಡೆಸಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್ ಬಿ. ರಂಗಯ್ಯ ವಾದಿಸಿದ್ದರು.
ಬಾಲಕಿಯು 2015ರ ನ. 2ರಂದು ಸಂಜೆ ದಿನಸಿ ತರಲೆಂದು ಮನೆಯಿಂದ ಹೊರಗಡೆ ಹೋಗಿದ್ದಳು. ರಾತ್ರಿಯಾದರೂ ವಾಪಸ್ ಬಂದಿರಲಿಲ್ಲ. ಗಾಬರಿಗೊಂಡ ಪೋಷಕರು,‘ನಮ್ಮ ಮನೆಯಲ್ಲಿ ನಾಲ್ಕು ತಿಂಗಳಿನಿಂದ ಬಾಡಿಗೆಗೆ ಇದ್ದ ಅಕಿಲ್ ಎಂಬಾತ, ಪ್ರೀತಿಸುವಂತೆ ಮಗಳನ್ನು ಪೀಡಿಸುತ್ತಿದ್ದ. ಆತನೇ ಮಗಳನ್ನು ಅಪಹರಿಸಿಕೊಂಡು ಹೋಗಿರುವ ಅನುಮಾನವಿದೆ’ ಎಂದು ಪೊಲೀಸರಿಗೆ ದೂರು ನೀಡಿದ್ದರು.
ತನಿಖೆ ನಡೆಸಿದ್ದ ಪಶ್ಚಿಮ ವಿಭಾಗದ ಪೊಲೀಸರು, ಆರೋಪಿ ಅಕಿಲ್‍ನನ್ನು ಬಂಧಿಸಿ ಬಾಲಕಿಯನ್ನು ರಕ್ಷಿಸಿದ್ದರು. ‘ಅಪಹರಣ ಮಾಡಿದ್ದ ಅಕಿಲ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ’ ಎಂದು ಬಾಲಕಿ ಸಹ ಹೇಳಿಕೆ ನೀಡಿದ್ದಳು. ಅದನ್ನು ಆಧರಿಸಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ) ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದ ಪೊಲೀಸರು, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.