ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಆರ್‌ಆರ್‌ ಪಥ ಬದಲಾವಣೆಗೆ ನಕಾರ

2007ರಲ್ಲಿ ಬಿಡಿಎ ಸೂಚಿಸಿದ ಮಾರ್ಗವೇ ಅಂತಿಮ l ಗ್ರಾಮಸ್ಥರ ಬೇಡಿಕೆಗೆ ಸಿಗದ ಪುರಸ್ಕಾರ
Last Updated 17 ಜನವರಿ 2019, 20:01 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ಬಳಿಕ 2007ರಲ್ಲಿ ಅಂತಿಮಗೊಳಿಸಿದ್ದ ಮಾರ್ಗದಲ್ಲೇ ಪೆರಿಫೆರಲ್‌ ರಿಂಗ್‌ ರಸ್ತೆ (ಪಿಆರ್‌ಆರ್‌) ನಿರ್ಮಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಧರಿಸಿದೆ.

2007ರಲ್ಲಿ ರಸ್ತೆಗೆಂದು ಗುರುತಿಸಿದ್ದ ಜಾಗದಲ್ಲಿ ಕೆಲವೆಡೆ ಮನೆಗಳು ಹಾಗೂ ಅಪಾರ್ಟ್‌ಮೆಂಟ್‌ ಸಮುಚ್ಚಯಗಳು ನಿರ್ಮಾಣಗೊಂಡಿವೆ. ಇಂತಹ ಕಡೆ ಮಾರ್ಗದಲ್ಲಿ ಮಾರ್ಪಾಡು ಮಾಡಬೇಕು ಎಂದು ಕೆಲವು ಗ್ರಾಮಗಳ ನಿವಾಸಿಗಳು ಬಿಡಿಎಗೆ ಮನವಿ ಸಲ್ಲಿಸಿದ್ದರು.

ವೆಂಕಟಾಲ ಗ್ರಾಮದಲ್ಲಿ ಈ ರಸ್ತೆ ಹಾದು ಹೋಗುವ ಜಾಗದಲ್ಲಿ ವಿಶ್ವಪ್ರಕೃತಿ, ಬಾಲಾಜಿ ಹಾಗೂ ವಿಶ್ವೇಶ್ವರಯ್ಯ ಬಡಾವಣೆಗಳಿವೆ. ಕೋಗಿಲು ಗ್ರಾಮದ ಕೋಗಿಲು ಹಾಗೂ ಕಟ್ಟಿಗೇನಹಳ್ಳಿಯಲ್ಲೂ ಕೆಲವು ಮನೆಗಳನ್ನು ಈ ರಸ್ತೆಗಾಗಿ ನೆಲಸಮ ಮಾಡಬೇಕಾಗುತ್ತದೆ.

‘ಮನೆಗಳಿರುವ ಕಡೆ ರಸ್ತೆ ನಿರ್ಮಿಸಬಾರದು. ಈ ಭಾಗದಲ್ಲಿ ಮಾರ್ಗದಲ್ಲಿ ಮಾರ್ಪಾಡು ಮಾಡಬೇಕು’ ಎಂದು ಸ್ಥಳೀಯರು ಒತ್ತಾಯಿಸಿದ್ದರು. ಪಿಆರ್‌ಆರ್‌ ಮಾರ್ಗದ ಭೌಗೋಳಿಕ ಸರ್ವೆ ಕಾರ್ಯದ ಗುತ್ತಿಗೆ ಪಡೆದ ಆಲ್ಕನ್‌ ಸಂಸ್ಥೆಯವರು ಸರ್ವೆ ಕಾರ್ಯಕ್ಕೆ ಇತ್ತೀಚೆಗೆ ವೆಂಕಟಾಲ ಗ್ರಾಮಕ್ಕೆ ಭೇಟಿ ನೀಡಿದಾಗ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಸರ್ವೆ ಕಾರ್ಯ ಮುಂದುವರಿಸುವುದಕ್ಕೇ ಅವಕಾಶ ನೀಡಲಿಲ್ಲ.

‘ಕೆಲವು ಮನೆಗಳನ್ನು ಉಳಿಸುವ ಸಲುವಾಗಿ ಪಿಆರ್‌ಆರ್‌ ಮಾರ್ಗದಲ್ಲಿ ಮಾರ್ಪಾಡು ಮಾಡುವಂತೆ ಒತ್ತಾಯ ಬಂದಿದ್ದು ನಿಜ. ಆದರೆ, ಒಂದು ಕಡೆ ಮಾರ್ಗ ಬದಲಾವಣೆ ಮಾಡಿದರೆ ಇನ್ನೊಂದು ಕಡೆ ಅಂತಹದ್ದೇ ಬೇಡಿಕೆ ಬರುತ್ತದೆ. ಇದು ಇನ್ನೊಂದು ರೀತಿಯ ಗೊಂದಲಕ್ಕೆ ಕಾರಣವಾಗುತ್ತದೆ. ಹಾಗಾಗಿ ಬುಧವಾರ ನಡೆದ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲೂ ಪಿಆರ್‌ಆರ್‌ ಮಾರ್ಗದಲ್ಲಿ ಯಾವುದೇ ಬದಲಾವಣೆ ಮಾಡದಿರಲು ನಿರ್ಧರಿಸಲಾಗಿದೆ’ ಎಂದು ಬಿಡಿಎ ಎಂಜಿನಿಯರಿಂಗ್‌ ಸದಸ್ಯ ಬಿ.ಎಸ್‌.‌ ಶಿವಕುಮಾರ್‌, ‘ಪ್ರಜಾವಾಣಿ’ಗೆ ತಿಳಿಸಿದರು.

ನಿರಾಕ್ಷೇಪಣಾ ಪತ್ರ ನೀಡಿದ್ದ ಬಿಡಿಎ: ಪಿಆರ್‌ಆರ್‌ಗೆ ಗುರುತಿಸಿದ ಜಾಗದಲ್ಲಿ ಕಟ್ಟಡ ನಿರ್ಮಿಸುವುದಕ್ಕೆ ಬಿಡಿಎ ಈ ಯೋಜನೆಗೆ ಪ್ರಾಥಮಿಕ ಅಧಿಸೂಚನೆ ಬಳಿಕವೂ ನಿರಾಕ್ಷೇಪಣಾ ಪತ್ರ ನೀಡಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ವೆಂಕಟಾಲದ ಕೆಲವು ಗ್ರಾಮಸ್ಥರು, ‘ನೀವು ಅನುಮತಿ ನೀಡಿದ್ದರಿಂದಲೇ ಮನೆ ಕಟ್ಟಿಕೊಂಡಿದ್ದೇವೆ’ ಈಗ ಏಕಾಏಕಿ ಇದನ್ನು ಕೆಡಹುತ್ತೇವೆ ಎಂದರೆ ಹೇಗೆ’ ಎಂದು ಪ್ರಶ್ನಿಸಿದ್ದರು.

‘ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ಬಳಿಕ ಯಾವುದೇ ಕಟ್ಟಡ ನಿರ್ಮಿಸಿದರೆ ಅದಕ್ಕೆ ಪರಿಹಾರ ನೀಡುವುದಕ್ಕೆ ಅವಕಾಶ ಇಲ್ಲ. ಆದರೆ, ಕಟ್ಟಡ ನಿರ್ಮಿಸಲು ಬಿಡಿಎಯಿಂದಲೇ ಅನುಮತಿ ನೀಡಿದ್ದರೆ, ಅಂತಹವರಿಗೆ ಪರಿಹಾರ ನೀಡುವ ಬಗ್ಗೆ ಪರಿಶೀಲಿಸಬಹುದು’ ಎಂದು ಶಿವಕುಮಾರ್‌ ತಿಳಿಸಿದರು.

‘ಪಿಆರ್‌ಆರ್‌ಗೆ ಗುರುತಿಸಿದ ಜಾಗದಲ್ಲಿ ಪ್ರಾಥಮಿಕ ಅಧಿಸೂಚನೆ ಬಳಿಕ ಎಷ್ಟು ಕಟ್ಟಡಗಳು ತಲೆ ಎತ್ತಿವೆ ಎನ್ನುವ ಸ್ಪಷ್ಟ ಮಾಹಿತಿ ಇಲ್ಲ. ಈ ಬಗ್ಗೆ ಸರ್ವೆ ನಡೆಯುತ್ತಿದೆ. ಅದು ಪೂರ್ಣಗೊಂಡ ಬಳಿಕವಷ್ಟೇ ಸ್ಪಷ್ಟ ಚಿತ್ರಣ ಸಿಗಲಿದೆ’ ಎಂದು ಭೂಸ್ವಾಧೀನ ವಿಭಾಗದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಪ್ರಭಾವಿಗಳ ಜಾಗ ಉಳಿಸಲು ಮೂಲ ಮಾರ್ಗ ಮಾರ್ಪಾಡು’

‘ಪಿಆರ್‌ಆರ್‌ಗೆ 2005ರಲ್ಲಿ ಗುರುತಿಸಿದ್ದ ಮಾರ್ಗದ ಪ್ರಕಾರ ವೆಂಕಟಾಲದಲ್ಲಿ ಒಂದು ಟ್ರಕ್‌ ಟರ್ಮಿನಲ್‌ ನಿರ್ಮಾಣವಾಗಬೇಕಿತ್ತು. ಆದರೆ ಪ್ರಭಾವಿಗಳ ಕೆಲವು ಜಾಗ ಉಳಿಸುವ ಸಲುವಾಗಿ ಅಧಿಕಾರಿಗಳು ಮಾರ್ಗವನ್ನು ಬದಲಾಯಿಸಿದರು. ಇದರಿಂದಾಗಿ ವೆಂಕಟಾಲದ ಕೆಲವು ಬಡಾವಣೆಗಳ ಮನೆಗಳು ರಸ್ತೆಗಾಗಿ ನೆಲೆ ಕಳೆದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಆರೋಪಿಸುತ್ತಾರೆ ಅಲ್ಲಿನ ವಿಶ್ವಪ್ರಕೃತಿ ಬಡಾವಣೆ ನಿವಾಸಿಗಳು.

‘ನಾವು ವಾಸವಿರುವ ಬಡಾವಣೆಗಳ ಜಾಗ ನಗರ ಮಹಾಯೋಜನೆಯಲ್ಲೂ ವಸತಿ ಉದ್ದೇಶಕ್ಕೆ ಕಾಯ್ದಿರಿಸಲಾಗಿತ್ತು. ಮೂಲ ಮಾರ್ಗವನ್ನು ಬದಲಾಯಿಸಿ ವಸತಿಗೆ ಕಾಯ್ದಿರಿಸಿದ ಜಾಗದಲ್ಲಿ ರಸ್ತೆ ನಿರ್ಮಿಸಲು ನಿರ್ಧರಿಸಿದಾಗಲೇ ನಾವು ಆಕ್ಷೇಪ ವ್ಯಕ್ತಪಡಿಸಿದ್ದೆವು. ಅದನ್ನು ಪರಿಗಣಿಸದೆಯೇ 2007ರಲ್ಲಿ ಮಾರ್ಪಾಡುಗೊಂಡ ಮಾರ್ಗವನ್ನೇ ಅಂತಿಮಗೊಳಿಸಿ ಅಧಿಸೂಚನೆ ಹೊರಡಿಸಿದರು. ಇದನ್ನು ಊರ್ಜಿತಗೊಳಿಸುವ ಸಲುವಾಗಿ ನಗರ ಮಹಾಯೋಜನೆಯಲ್ಲೂ ತಿದ್ದುಪಡಿ ಮಾಡಿದರು’ ಎಂದು ಆರೋಪಿಸುತ್ತಾರೆ ವಿಶ್ವಪ್ರಕೃತಿ ಬಡಾವಣೆ ನಿವೇಶನದಾರರ ಸಂಘದ ಕಾರ್ಯದರ್ಶಿ ಶಂಕರ್‌.

‘ಇದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದೆವು. ಮೂಲ ಮಾರ್ಗದ ಪ್ರಕಾರವೇ ರಸ್ತೆ ನಿರ್ಮಿಸುವಂತೆ ಹೈಕೋರ್ಟ್‌ ಆದೇಶ ಮಾಡಿತ್ತು. ಈ ನಡುವೆ ಈ ಯೋಜನೆಯಡಿ ಟೋಲ್‌ಗೇಟ್‌ ನಿರ್ಮಾಣವೂ ಸೇರಿದಂತೆ ಇತರ ಉದ್ದೇಶಗಳಿಗೆ 320 ಎಕರೆ ಹೆಚ್ಚುವರಿ ಜಾಗ ಸ್ವಾಧೀನಪಡಿಸಿಕೊಳ್ಳಲು ಬಿಡಿಎ ಮುಂದಾಗಿತ್ತು. ಇದನ್ನು ಪ್ರಶ್ನಿಸಿ ಕೆಲವರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ಆಗ ಸುಪ್ರೀಂ ಕೋರ್ಟ್‌ ಅಂತಿಮ ಅಧಿಸೂಚನೆ ಪ್ರಕಾರವೇ ರಸ್ತೆ ನಿರ್ಮಿಸುವಂತೆ ಹೇಳಿದೆ. ಬಿಡಿಎ ಅಧಿಕಾರಿಗಳು ಕೋರ್ಟ್‌ಗೆ ತಪ್ಪು ಮಾಹಿತಿ ನೀಡಿ ತೀರ್ಪು ತಮ್ಮ ಪರ ಬರುವಂತೆ ನೋಡಿಕೊಂಡಿದ್ದಾರೆ’ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.

‘ಹೊಸ ಕಾಯ್ದೆ ಪ್ರಕಾರ ಪರಿಹಾರ ಕೊಡಿ’

‘ನಮಗೆ 2013ರ ಭೂಸ್ವಾಧೀನ ಕಾಯ್ದೆ ಪ್ರಕಾರವೇ ಪರಿಹಾರ ನೀಡುವುದಾದರೆ ಜಾಗ ಬಿಟ್ಟುಕೊಡಲು ಸಿದ್ಧರಿದ್ದೇವೆ’ ಎಂದು ವೆಂಕಟಾಲದ ಕೆಲವು ನಿವಾಸಿಗಳು ತಿಳಿಸಿದ್ದಾರೆ.

‘ಸರ್ಕಾರದ ಮಾರ್ಗಸೂಚಿ ದರದ ಪ್ರಕಾರ ಇಲ್ಲಿ ಪ್ರಸ್ತುತ ಎಕರೆಗೆ ₹ 7.80 ಕೋಟಿ ಬೆಲೆ ಇದೆ. ಅದರ ದುಪ್ಪಟ್ಟು ದರ, ಅದರ ಮೇಲೆ ಶೇ 30ರಷ್ಟು ಸೊಲೇಷಿಯಂ ಹಾಗೂ ಮಾರುಕಟ್ಟೆ ದರದ ಮೇಲೆ ಶೇ 12ರಷ್ಟು ಹೆಚ್ಚುವರಿ ಮೊತ್ತವನ್ನು ಸೇರಿಸಿ ನೀಡಬೇಕು ಎಂಬುದು ನಮ್ಮ ಬೇಡಿಕೆ’ ಎಂದು ಶಂಕರ್‌ ತಿಳಿಸಿದರು.

‘ಬಿಡಿಎ ಅಭಿವೃದ್ಧಿ ಪಡಿಸಿದ ಬಡಾವಣೆಯಲ್ಲಿ ನಮಗೆ ಜಾಗ ನೀಡಬೇಕು’ ಎಂದೂ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT