ಕೇಸರಿ ಮೈದಾನ... ಜೈ ಶ್ರೀರಾಮ್‌ ಘೋಷಣೆ...

7
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ವಿಶ್ವ ಹಿಂದೂ ಪರಿಷತ್‌ ಏರ್ಪಡಿಸಿದ್ದ ಜನಾಗ್ರಹ ಸಭೆ

ಕೇಸರಿ ಮೈದಾನ... ಜೈ ಶ್ರೀರಾಮ್‌ ಘೋಷಣೆ...

Published:
Updated:

ಬೆಂಗಳೂರು: ಬಸವನಗುಡಿ ನ್ಯಾಷನಲ್‌ ಕಾಲೇಜು ಮೈದಾನ ಭಾನುವಾರ ಸಂಜೆ ಕೇಸರಿಮಯವಾಗಿತ್ತು... ‘ಜೈ ಶ್ರೀರಾಮ್‌’, ‘ಪಣವಿದು ರಾಮನ ಮೇಲಾಣೆ, ಮಂದಿರವಲ್ಲೇ ಕಟ್ಟುವೆವು’ ಎಂಬ ಅಬ್ಬರದ ಘೋಷಣೆಗಳಿಂದ ತುಂಬಿ ಹೋಗಿತ್ತು.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ವಿಶ್ವ ಹಿಂದೂ ಪರಿಷತ್‌ ಏರ್ಪಡಿಸಿದ್ದ ಜನಾಗ್ರಹ ಸಭೆಯಲ್ಲಿ ಕಂಡು ಬಂದ ದೃಶ್ಯಗಳಿವು. ಸಾವಿರ, ಸಾವಿರ ಸಂಖ್ಯೆಯಲ್ಲಿ ಸೇರಿದ್ದ ರಾಮಭಕ್ತರಿಂದ ಮಂದಿರ ನಿರ್ಮಾಣಕ್ಕೆ ಆಗ್ರಹದ ಆವೇಶದ ಘೋಷಣೆಗಳು.

ಜನಾಗ್ರಹ ಸಭೆಗೂ ಮುನ್ನ ನಗರದ ವಿವಿಧ ಭಾಗಗಳಿಂದ ಭವ್ಯ ಮೆರವಣಿಗೆಗಳನ್ನು ಆಯೋಜಿಸಲಾಗಿತ್ತು. ಮೈಸೂರು ಬ್ಯಾಂಕ್‌ ವೃತ್ತ, ಜೆ.ಪಿ.ನಗರ, ದೊಡ್ಡ ಗಣಪತಿ ದೇವಸ್ಥಾನ, ಶಿರಸಿ ವೃತ್ತ ಮತ್ತು ವಿ.ವಿ.ಪುರಂನಿಂದ ಮೆರವಣಿಗೆಗಳು ಆರಂಭಗೊಂಡವು. ಹಾದಿಯುದ್ದಕ್ಕೂ ಕೇಸರಿ ಧ್ವಜ ಹಿಡಿದಿದ್ದ ರಾಮಭಕ್ತರ ಘೋಷಣೆಗಳು ಮುಗಿಲು ಮುಟ್ಟಿದ್ದವು. ಸಾಂಸ್ಕೃತಿಕ ತಂಡಗಳು, ರಾಮ ವೇಷಧಾರಿಗಳು ಸಾರ್ವಜನಿಕರ ಗಮನ ಸೆಳೆದರು, ಕೆಲವು ಕಲಾವಿದರು ರಾಮನ ಮಹಿಮೆ ಹೇಳುವ ಗೀತೆಗಳನ್ನು ಹಾಡುತ್ತಾ ಸಾಗಿದರು.


ರಾಮ,ಸೀತೆ,ಲಕ್ಷಣ ವೇಷಧಾರಿಗಳಿಗೆ ಮಹಿಳೆಯರು ಹೂವು ಹಾಕಿ, ಆರತಿ ಬೆಳಗಿದರು.

ಜೆ.ಪಿ.ನಗರದಿಂದ ಬಂದ ಮೆರವಣಿಗೆಯಲ್ಲಿ 17 ಅಡಿ ಎತ್ತರದ ರಾಮನ ಪ್ರತಿಮೆ ಎಲ್ಲರ ಗಮನ ಸೆಳೆಯಿತು. ಮೈಸೂರು ಬ್ಯಾಂಕ್‌ ವೃತ್ತದಿಂದ 12 ಅಡಿ ಎತ್ತರದ ಆಂಜನೇಯನ ಪ್ರತಿಮೆಯೊಂದಿಗೆ ಮರವಣಿಗೆ ಸಾಗಿ ಬಂದಿತು. ಅಲ್ಲದೆ, ವಿವಿಧ ಕಡೆಗಳಿಂದ ಬೈಕ್‌ ರ್‍ಯಾಲಿಗಳನ್ನೂ ಏರ್ಪಡಿಸಲಾಗಿತ್ತು. ಮೈದಾನದಲ್ಲಿ ‘ರಾಮ ದರ್ಬಾರ್‌’ ಎಂಬ ವೇದಿಕೆಯಲ್ಲಿ ರಾಮ, ಸೀತೆ, ಲಕ್ಷ್ಮಣ ಮತ್ತು ಹನುಮಂತನ ವೇಷ ತೊಟ್ಟವರು ಕುಳಿತು ಸಾರ್ವಜನಿಕರ ಗಮನ ಸೆಳೆದರು. ಇವರ ಬಳಿ ನಿಂತು ಸೆಲ್ಫಿ ತೆಗೆದುಕೊಳ್ಳುವವರ ಸಂಖ್ಯೆಯೂ ಸಾಕಷ್ಟಿತ್ತು.

ಸಭೆಯ ಆರಂಭದಲ್ಲಿ ಇತ್ತೀಚೆಗೆ ನಿಧನರಾದ ಕೇಂದ್ರದ ಮಾಜಿ ಸಚಿವ ಅನಂತಕುಮಾರ್, ಕಾಂಗ್ರೆಸ್‌ ನಾಯಕ ಜಾಫರ್ ಷರೀಫ್‌, ನಟ ಅಂಬರೀಷ್‌ ಮತ್ತು ಮಂಡ್ಯ ಬಸ್‌ ಅಪಘಾತದಲ್ಲಿ ಮೃತರಾದವರಿಗೆ ಸಂತಾಪ ಸೂಚಿಸಲಾಯಿತು.

ಸಂಸದರಾದ ಪಿ.ಸಿ.ಮೋಹನ್, ಪ್ರತಾಪ ಸಿಂಹ, ಶಾಸಕರಾದ ಆರ್‌.ಅಶೋಕ್‌, ಎಸ್‌.ಸುರೇಶ್‌ ಕುಮಾರ್, ಅರವಿಂದ ಲಿಂಬಾವಳಿ, ಉದಯ್‌ ಗರುಡಾಚಾರ್‌, ವಿಧಾನಪರಿಷತ್‌ ಎನ್‌.ರವಿಕುಮಾರ್‌ ಹಾಗೂ ಸಂಘ ಪರಿವಾರದ ಮುಖಂಡರು ಭಾಗವಹಿಸಿದ್ದರು.


ಜನಾಗ್ರಹ ಸಭೆಯಲ್ಲಿ ಮಂದಿರ ನಿರ್ಮಾಣಕ್ಕೆ ಸಂಕಲ್ಪ

 

ಬರಹ ಇಷ್ಟವಾಯಿತೆ?

 • 10

  Happy
 • 2

  Amused
 • 1

  Sad
 • 0

  Frustrated
 • 9

  Angry

Comments:

0 comments

Write the first review for this !