ಮಂಗಳವಾರ, ಸೆಪ್ಟೆಂಬರ್ 17, 2019
21 °C

ನಿವೃತ್ತ ಎಎಸ್‌ಐ ಪುತ್ರ ಸೆರೆ

Published:
Updated:
Prajavani

ಬೆಂಗಳೂರು:‌ ಮದ್ಯದ ನಶೆಯಲ್ಲಿ ಪಿಎಸ್‌ಐಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವರ ಹಲ್ಲೆ ನಡೆಸಲು ಯತ್ನಿಸಿದ ಆರೋಪದಡಿ ನಿವೃತ್ತ ಎಎಸ್‌ಐ ಒಬ್ಬರ ಪುತ್ರನನ್ನು ರಾಜಗೋಪಾಲನಗರ ಪೊಲೀಸರು ಬಂಧಿಸಿದ್ದಾರೆ.

ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ಪಾಂಡುರಂಗ ಅಲಿಯಾಸ್ ಪಂಡು, ರಾತ್ರಿ 9.30ರ ಸುಮಾರಿಗೆ ಸ್ನೇಹಿತರ ಜತೆ ರಾಜಗೋಪಾಲನಗರ ಮುಖ್ಯರಸ್ತೆಯ ಸನ್‌ರೈಸ್ ಬಾರ್ ಬಳಿ ಸಿಗರೇಟ್‌ ಸೇದುತ್ತ ನಿಂತಿದ್ದ. ಮದ್ಯದ ನಶೆಯಲ್ಲಿದ್ದ ಎಲ್ಲರೂ, ಕೇಕೆ ಹಾಕಿಕೊಂಡು ಮಾತನಾಡುತ್ತಿದ್ದರು. ಈ ಬಗ್ಗೆ ಸ್ಥಳೀಯರು ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದರು.

‘ಪಿಎಸ್‌ಐ ಶಿವರಾಜ್‌ ಪಾಟೀಲ್ ಹಾಗೂ ಪ್ರೊಬೆಷನರಿ ಪಿಎಸ್‌ಐ ಬಸವ
ರಾಜು ಅವರು ಕೂಡಲೇ ಸ್ಥಳಕ್ಕೆ ತೆರಳಿದ್ದರು. ಮನೆಗೆ ಹೋಗುವಂತೆ ಹೇಳಿದಾಗ, ‘ನನ್ನನ್ನು ಮನೆಗೆ ಕಳ್ಸೋಕೆ ನೀವ್ಯಾರು? ನಮ್ ಅಪ್ಪನೂ ಪೊಲೀಸ್ ಇಲಾಖೆಯಲ್ಲಿ ಕೆಲ್ಸ ಮಾಡಿದಾರೆ. ಅದೇನ್ ಮಾಡ್ಕೋತಿರೋ ಮಾಡ್ಕೊಳಿ. ನಾನು ಇಲ್ಲಿಂದ ಕದಲಲ್ಲ’ ಎಂದ. ಕೊನೆಗೆ ಪ್ರೊಬೆಷನರ್ ಪಿಎಸ್‌ಐ ಅವರ ಸಮವಸ್ತ್ರಕ್ಕೇ ಕೈ ಹಾಕಿದ’ ಎಂದು ಅಧಿಕಾರಿಯೊಬ್ಬರು ವಿವರಿಸಿದರು.

‘ಪಾಂಡುರಂಗನ ವರ್ತನೆಯಿಂದ ಗಾಬರಿಗೊಂಡ ಸ್ನೇಹಿತರು, ಆತನನ್ನು ನಿಯಂತ್ರಿಸಲು ಯತ್ನಿಸಿದರು. ಸ್ಥಳಕ್ಕೆ ಬಂದ ಹೊಯ್ಸಳ ಸಿಬ್ಬಂದಿ, ಆತನನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದರು’ ಎಂದು ಮಾಹಿತಿ ನೀಡಿದರು.

ಉದ್ದೇಶಪೂರ್ವಕವಾಗಿ ಶಾಂತಿ ಕದಡಿದ (ಐಪಿಸಿ 504) ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ (353) ಆರೋಪಗಳಡಿ ಪಾಂಡುರಂಗನನ್ನು ಬಂಧಿಸಲಾಗಿದೆ. ‘ದಯವಿಟ್ಟು ಕ್ಷಮಿಸಿ. ಮದ್ಯದ ನಶೆಯಲ್ಲಿ ಆ ರೀತಿ ವರ್ತಿಸಿಬಿಟ್ಟೆ’ ಎಂದು ಆತ ಕಣ್ಣೀರಿಟ್ಟಿದ್ದಾಗಿ ರಾಜಗೋಪಾಲನಗರ ಪೊಲೀಸರು ಹೇಳಿದರು.

Post Comments (+)