ಗುರುವಾರ , ಆಗಸ್ಟ್ 22, 2019
27 °C
ಜಿಎಸ್‌ಟಿ ಲೆಕ್ಕಪರಿಶೋಧನೆ ಕುರಿತ ವಿಚಾರ ಸಂಕಿರಣದಲ್ಲಿ ಅಶೋಕ್ ಬಿ ನಾವಲ್ ಹೇಳಿಕೆ

ವಹಿವಾಟಿನ ನಿಖರ ಮಾಹಿತಿ ನೀಡಿ

Published:
Updated:
Prajavani

ಹುಬ್ಬಳ್ಳಿ: ಸರಕು ಮತ್ತು ಸೇವಾ ತೆರಿಗೆಗೆ (ಜಿಎಸ್‌ಟಿ) ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಇಲ್ಲಿಯ ವರೆಗೆ 325ಕ್ಕೂ ಅಧಿಕ ಅಧಿಸೂಚನೆಗಳನ್ನು ಹೊರಡಿಸಿದೆ. ಆದ್ದರಿಂದ ಜಿಎಸ್‌ಟಿ ಕಾಯ್ದೆ ಎಂಬುದು ತುಂಬ ಕ್ರಿಯಾತ್ಮಕ ಎನಿಸಿದೆ ಎಂದು ಲೆಕ್ಕ ಪರಿಶೋಧಕ (ಸಿಎಂಎ) ಅಶೋಕ್ ಬಿ ನಾವಲ್ ಹೇಳಿದರು.

‌ಎಸ್‌ಐಆರ್‌ಸಿ ಹುಬ್ಬಳ್ಳಿ ಘಟಕ ಮಂಗಳವಾರ ಆಯೋಜಿಸಿದ್ದ ಜಿಎಸ್‌ಟಿ ಲೆಕ್ಕಪರಿಶೋಧನೆ ವಿಷಯ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು. ಕೇಂದ್ರದ ಸುಂಕ ಹಾಗೂ ರಾಜ್ಯಗಳ ಮೌಲ್ಯವರ್ಧಿತ ತೆರಿಗೆಯ ಬದಲಿಗೆ ಜಿಎಸ್‌ಟಿಯನ್ನು 2017ರಲ್ಲಿ ಜಾರಿಗೊಳಿಸಲಾಯಿತು. ಎಲ್ಲ ಬಗೆಯ ತೆರಿಗೆಗಳನ್ನು ಇದರೊಳಗೆ ಅಡಕಗೊಳಿಸಲಾಯಿತು ಎಂದು ಮಾಹಿತಿ ನೀಡಿದರು.

ಲೆಕ್ಕಪರಿಶೋಧಕರು ಡೀಲರ್‌ಗಳ ಜಿಎಸ್‌ಟಿ ವಹಿವಾಟಿನ ಬಗ್ಗೆ ನಿಖರ ಹಾಗೂ ಖಚಿತ ಮಾಹಿತಿಯನ್ನು ನೀಡುವುದರ ಮೂಲಕ ಸರ್ಕಾರಕ್ಕೆ ನಿರ್ದಿಷ್ಟ ಪ್ರಮಾಣದ ಆದಾಯ ಬರುವಂತೆ ನೋಡಿಕೊಳ್ಳಬೇಕು. ಪೂರೈಕೆ ಹಾಗೂ ಖರೀದಿ ದತ್ತಾಂಶಗಳನ್ನು ಆದಾಯ ತೆರಿಗೆ ಇಲಾಖೆ, ಕಂಪನಿ ವ್ಯವಹಾರಗಳ ಸಚಿವಾಲಯ ಪರಿಶೀಲನೆ ನಡೆಸುತ್ತದೆ ಎಂದು ಅವರು ಹೇಳಿದರು.

ಎಸ್‌ಐಆರ್‌ಸಿ ಮುಖ್ಯಸ್ಥ ಕೆ.ವಿ. ದೇಶಪಾಂಡೆ ಸ್ವಾಗತಿಸಿದರು. ಲೆಕ್ಕಪರಿಶೋಧಕ ಡಾ. ಅನಿಲ್ ಅನಿಖಿಂಡಿ ಅವರು ಜಿಎಸ್‌ಟಿ ಮಹತ್ವವವನ್ನು ವಿವರಿಸಿದರು. ಜಿಎಸ್‌ಟಿ ಕಾಲದಲ್ಲಿ ಲೆಕ್ಕಪರಿಶೋಧನೆ ಮಹತ್ವವನ್ನು ಮನದಟ್ಟು ಮಾಡಿಕೊಟ್ಟರು.

ತೆರಿಗೆ ವಂಚನೆ ಹಾಗೂ ವ್ಯತ್ಯಾಸಗಳನ್ನು ರಾಷ್ಟ್ರೀಯ ವಿತ್ತೀಯ ವರದಿ ಪ್ರಾಧಿಕಾರಿ ಗಂಭೀರವಾಗಿ ಪರಿಗಣಿಸಲಿದೆ. ತಪ್ಪಿತಸ್ಥರು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಅವರು ತಿಳಿಸಿದರು. ಹುಬ್ಬಳ್ಳಿ, ಧಾರವಾಡ, ಗದಗ, ಶಿರಸಿ, ಶಿವಮೊಗ್ಗ, ಗಂಗಾವತಿಯ 160 ಮಂದಿ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದರು.

ಶರತ್ ದೊಡ್ಡಮನಿ ಸಂಯೋಜಿಸಿದರು. ಎಚ್‌.ಎನ್‌. ಅದಿನವರ್ ವಂದಿಸಿದರು.

Post Comments (+)