ಬುಧವಾರ, ಸೆಪ್ಟೆಂಬರ್ 29, 2021
20 °C

ಶಂಕರರ ತತ್ವಾದರ್ಶ ಸ್ಮರಿಸಿದ ನಗರದ ಜನತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅದ್ವೈತ ತತ್ವವನ್ನು ಪ್ರತಿಪಾದಿಸಿದ ಆದಿ ಗುರು ಶಂಕರಾಚಾರ್ಯರ ಜಯಂತಿಯನ್ನು ಭಕ್ತಿ ಭಾವದಿಂದ ನಗರದ ವಿವಿಧೆಡೆ ಗುರುವಾರ ಆಚರಿಸಲಾಯಿತು. 

ಶಂಕರಪುರದ ಶೃಂಗೇರಿ ಶಂಕರಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಶತರುದ್ರಾಭಿಷೇಕದ ಬಳಿಕ ಶಂಕರಾಚಾರ್ಯರ ಪ್ರತಿಮೆಯನ್ನು ಹೊತ್ತ ರಥ ಮಠದ ಆವರಣದಿಂದ ಚಾಮರಾಜಪೇಟೆಯ ಪ್ರಮುಖ ಬೀದಿಗಳಲ್ಲಿ ಸಾಗಿತು. ನಗರದ ವಿವಿಧ ಭಾಗಗಳಿಂದ ಬಂದಿದ್ದ ಮಠದ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡರು.

ಶೃಂಗೇರಿ ಮಠದ ವಿದ್ಯಾಭಿನವ ಶಂಕರಭಾರತೀ ಸ್ವಾಮೀಜಿ, ಓಂಕಾರಾಶ್ರಮದ ಮಧುಸೂದನಾನಂದಪುರಿ ಸ್ವಾಮೀಜಿ, ಪಾವಗಡ ರಾಮಕೃಷ್ಣ ಸೇವಾಶ್ರಮದ ಜಪಾನಂದಜೀ ಮಹಾರಾಜ್, ಶತಾವಧಾನಿ ಆರ್.ಗಣೇಶ್, ಶಾಸಕ ಎಲ್‌.ಎ. ರವಿಸುಬ್ರಹ್ಮಣ್ಯ, ಶಿಕ್ಷಣತಜ್ಞ ಡಾ.ಕೆ.ಪಿ.ಪುತ್ತೂರಾಯ ಭಾಗವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಯನ ಸಭಾಂಗಣದಲ್ಲಿ ಶಂಕರಾಚಾರ್ಯರ ಜಯಂತಿಯನ್ನು ಆಚರಿಸಿತು. 

ವಿದ್ವಾನ್ ಜೆ.ಎಸ್. ಶ್ರೀಕಂಠ ಭಟ್ ಮತ್ತು ತಂಡದವರು ಸಿಂಧೂ ಭೈರವಿ, ಮೋಹನ ಸೇರಿದಂತೆ ವಿವಿಧ ರಾಗಗಳಲ್ಲಿ ಶಂಕರಾಚಾರ್ಯರ ಸ್ತೋತ್ರಗಳನ್ನು ಪ್ರಸ್ತುತಪಡಿಸಿದರು.

‘ಶಂಕರಾಚಾರ್ಯರು ಒಂದು ಸಮುದಾಯಕ್ಕೆ ಸೀಮಿತ ರಾದವರಲ್ಲ. ಅಪಾರ ಜ್ಞಾನ ಭಂಡಾರವನ್ನು ಹೊಂದಿದ್ದ ಅವರು ಅಲ್ಪಾವಧಿಯಲ್ಲೇ ಶ್ರೇಷ್ಠ ಸಾಧನೆ ಮಾಡಿದ್ದರು. ಇಂತಹ ಮಹಾನ್ ಸಾಧಕರು ಹಾಕಿಕೊಟ್ಟ ಹಾದಿಯಲ್ಲಿ ನಾವೆಲ್ಲ ನಡೆಯೋಣ’ ಎಂದು ಇಲಾಖೆಯ ನಿರ್ದೇಶಕಿ ಕೆ.ಎಂ. ಜಾನಕಿ ಹೇಳಿದರು. 

ಇಲಾಖೆಯ ಜಂಟಿ ನಿರ್ದೇಶಕಿ ಬನಶಂಕರಿ ಅಂಗಡಿ, ಜಾನಪದ ಅಕಾಡೆಮಿಯ ರಿಜಿಸ್ಟ್ರಾರ್ ಸಿದ್ರಾಮ ಸಿಂಧೆ ಇದ್ದರು. 

ಜಯನಗರದ 3ನೇ ಬ್ಲಾಕ್‌ನಲ್ಲಿರುವ ಶಂಕರ ಜಯಂತಿ ಮಂಡಳಿಯ ಕೇಂದ್ರದಲ್ಲಿ ಸಾಮೂಹಿಕ ಸ್ತೋತ್ರ ಪಠಣ ಮಾಡಲಾಯಿತು. ಬಳಿಕ ಶಂಕರ ಭಗವತ್ಪಾದರ ಭಾವಚಿತ್ರದ ರಾಜಬೀದಿ ಉತ್ಸವ ನಡೆಸಲಾಯಿತು. ಈ ವೇಳೆ ಭಕ್ತಾಧಿಗಳು ಸಾಮೂಹಿಕವಾಗಿ ಶಂಕರರ ಸ್ತೋತ್ರ ಪಠಿಸಿದರು.

ರಾಜಾಜಿನಗರದಲ್ಲಿ ತ್ಯಾಗರಾಜ ಗಾನಸಭಾ ಬಾಲಮೋಹನ ವಿದ್ಯಾಮಂದಿರದಲ್ಲಿ ನಡೆದ ಸಂಗೀತೋತ್ಸವದಲ್ಲಿ ಡಾ.ಕೆ. ವರದರಂಗನ್ ಹಾಡಿದರು. ಸಂಗೀತ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶ್ರೀರಾಂಪುರದ ರಾಘವೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಶಂಕರ ಜಯಂತಿ ಬ್ರಾಹ್ಮಣ ಸಭಾ, ತ್ಯಾಗರಾಜ ನಗರದ ಆಧ್ಯಾತ್ಮ ಪ್ರಕಾಶನ ಕಾರ್ಯಾಲಯದಲ್ಲಿ ಆಚರಣೆಗಳು ನಡೆದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.