ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಐಎಎಲ್‌ನಲ್ಲಿ ಸೌರ ವಿದ್ಯುತ್‌ ಘಟಕ ಕಾರ್ಯಾರಂಭ

Last Updated 6 ಫೆಬ್ರುವರಿ 2019, 19:27 IST
ಅಕ್ಷರ ಗಾತ್ರ

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲ್ಚಾವಣಿ ಮೇಲೆ 3.35 ಮೆಗಾ ವಾಟ್‌ ಉತ್ಪಾದನೆ ಸಾಮರ್ಥ್ಯದ ಸೌರಶಕ್ತಿ ಘಟಕ ಸ್ಥಾಪಿಸಲಾಗಿದ್ದು, ಇದು ಬುಧವಾರ ಕಾರ್ಯಾರಂಭ ಮಾಡಿತು.

ಈ ಮೂಲಕ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಪರಿಸರಸ್ನೇಹಿ ಮತ್ತು ಶುದ್ಧ ಇಂಧನ ಉತ್ಪಾದನಾ ಘಟಕ ಹೊಂದಿದ ಕೀರ್ತಿಗೆ ಪಾತ್ರವಾಗಿದೆ.

ಈ ಘಟಕ ಪ್ರತಿವರ್ಷ 4.7 ಕೋಟಿ ಯುನಿಟ್‌ ವಿದ್ಯುತ್‌ ಉತ್ಪಾದಿಸಲಿದ್ದು,ವಿಮಾನ ನಿಲ್ದಾಣದ ಕಾರ್ಯ ನಿರ್ವಹಣೆಗೆ ಅದನ್ನು ಬಳಸಲಾಗುವುದು ಎಂದು ಬಿಐಎಎಲ್‌ನ ಎಂಜಿನಿಯರಿಂಗ್‌ ಮತ್ತು ನಿರ್ವಹಣೆ ವಿಭಾಗದ ಉಪಾಧ್ಯಕ್ಷ ಎಸ್‌.ಲಕ್ಷ್ಮಿನಾರಾಯಣ ತಿಳಿಸಿದರು.

ವಿಮಾನ ನಿಲ್ದಾಣದ ಆವರಣದೊಳಗಿನ ಎಂಟು ಮೇಲ್ಚಾವಣಿಗಳ ಮೇಲೆ ಈ ಘಟಕಗಳನ್ನು ಸ್ಥಾಪಿಸಲಾಗಿದೆ. ಇದರಿಂದ 3,800 ಟನ್‌ಗಳಷ್ಟು ಇಂಗಾಲದ ಹೊರಸೂಸುವಿಕೆ ಕಡಿಮೆಯಾಗಲಿದೆ. ಇಲ್ಲಿ ಬಳಸಿರುವ ಸೋಲಾರ್‌ ಪ್ಯಾನಲ್‌ ಆಧುನಿಕ ವಿನ್ಯಾಸದಿಂದ ಕೂಡಿದ್ದು, ಸೂರ್ಯ ಕಿರಣಗಳು ಪ್ರತಿಬಿಂಬಿತಗೊಳ್ಳದಂತೆ ನೋಡಿಕೊಳ್ಳಲಾಗಿದೆ. ಇದರಿಂದ ವಿಮಾನ ಕಾರ್ಯಾಚರಣೆಯಲ್ಲಿ ಅಡಚಣೆ ಆಗುವುದಿಲ್ಲ ಎಂದು ಅವರು ವಿವರಿಸಿದರು.

ಸನ್‌ಶಾಟ್‌ ಸಂಸ್ಥೆ ಈ ಘಟಕ ಸ್ಥಾಪಿಸಿದೆ. 2020ರ ವೇಳೆಗೆ ವಿಮಾನ ನಿಲ್ದಾಣವು ಇಂಗಾಲ ರಸೂಸುವಿಕೆಯನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡಲಿದೆ. ಸೌರಶಕ್ತಿ ಮೂಲದಿಂದ 5 ಕೋಟಿ ಯುನಿಟ್‌ಗಳನ್ನು ಬಳಸಲಾಗುತ್ತಿದ್ದು, ಇದು ವಿಮಾನ ನಿಲ್ದಾಣದ ವಾರ್ಷಿಕ ಅಗತ್ಯದ ಶೇ 67 ರಷ್ಟು ಪ್ರಮಾಣವಾಗಿದೆ ಎಂದು ಹೇಳಿದರು.

ವಿಮಾನ ನಿಲ್ದಾಣದಲ್ಲಿ ಸುಸ್ಥಿರ ಪ್ರಯತ್ನಗಳು: ವಿಮಾನ ನಿಲ್ದಾಣದಲ್ಲಿ ನೀರಿನ ನಿರ್ವಹಣೆ, ಇಂಧನ ನಿರ್ವಹಣೆ, ಪರಿಸರ ನಿರ್ವಹಣೆ, ತ್ಯಾಜ್ಯ ನಿರ್ವಹಣೆ ಮತ್ತು ಪರಿಸರ ನಿರ್ವಹಣೆಗೆ ಆದ್ಯತೆ ನೀಡಲಾಗಿದೆ ಎಂದು ವಿಮಾನ ನಿಲ್ದಾಣದ ವ್ಯವಸ್ಥಾಪಕ ನಿರ್ದೇಶಕ ಹರಿ ಮರಾರ್‌ ತಿಳಿಸಿದರು.

ಪ್ರತಿದಿನ 1 ಲಕ್ಷ ಪ್ರವಾಸಿಗರು ಬಂದು ಹೋಗುತ್ತಾರೆ. ಹಲವು ಕೋಟಿ ಲೀಟರ್‌ಗಳಷ್ಟು ನೀರಿನ ಅಗತ್ಯವಿದೆ. ಇದಕ್ಕಾಗಿ 1.7 ದಶಲಕ್ಷ ಲೀಟರ್‌ ಸಾಮರ್ಥ್ಯದ ಮಳೆ ನೀರು ಸಂಗ್ರಹದ ಟ್ಯಾಂಕ್‌ ನಿರ್ಮಿಸಲಾಗಿದೆ. 70 ಎಕರೆ ಪ್ರದೇಶದಲ್ಲಿ ಅಲ್ಲಲ್ಲಿ ಮಳೆ ನೀರು ಸಂಗ್ರಹದ ಹೊಂಡಗಳನ್ನು ರಚಿಸಲಾಗಿದೆ. ಅಲ್ಲದೆ, ಕೆರೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಇದರಿಂದ 75 ಕೋಟಿ ಲೀಟರ್‌ ಮಳೆ ನೀರು ಸಂಗ್ರಹಿಸಬಹುದು ಎಂದು ಅವರು ಹೇಳಿದರು.

ಪರಿಸರಸ್ನೇಹಿ ಸೌಲಭ್ಯ

* ವಿಮಾನ ನಿಲ್ದಾಣದಲ್ಲಿ ಬೀದಿ ದೀಪ, ಪೆರಿಮೀಟರ್ ದೀಪ ಮತ್ತು ಏರ್‌ಫೀಲ್ಡ್‌ ದೀಪಗಳಿಗೆ ಎಲ್‌ಇಡಿ ವ್ಯವಸ್ಥೆ

* ಪ್ಲಾಸ್ಟಿಕ್‌ ಸ್ಟ್ರಾ, ಪ್ಲಾಸ್ಟಿಕ್‌ ಚೂರಿ, ಚಮಚ, ಫೋರ್ಕ್‌, ಪಾಲಿಥಿನ್ ಚೀಲಗಳ ಬಳಕೆ ನಿಷೇಧಿಸಲಾಗಿದೆ. ವಿಮಾನ ನಿಲ್ದಾಣದ ನಾಲ್ಕೂ ಲಾಂಜ್‌ಗಳಲ್ಲಿರುವ ಹೊಟೇಲ್‌ಗಳಲ್ಲಿ ಪ್ಲಾಸ್ಟಿಕ್‌ಗಳನ್ನು ಬಳಸುವಂತಿಲ್ಲ.

* ಪ್ರತಿನಿತ್ಯ 20 ಟನ್‌ ಘನತ್ಯಾಜ್ಯ ಉತ್ಪಾದನೆ ಆಗುತ್ತಿದ್ದು, ಇದರ ಸಂಸ್ಕರಣೆಗೆ ಘಟಕ ಸ್ಥಾಪಿಸಲಾಗುವುದು. ಆರಂಭದಲ್ಲಿ ದಿನಕ್ಕೆ 20 ಟನ್‌ ಸಂಸ್ಕರಿಸಲಾಗುವುದು. ಆ ಬಳಿಕ ಅದರ ಸಾಮರ್ಥ್ಯವನ್ನು 60 ಟನ್‌ಗೆ
ಹೆಚ್ಚಿಸಲಾಗುವುದು.

* ಗಾರ್ಡ್‌ ಪ್ರದೇಶ 40 ಎಕರೆ ಪ್ರದೇಶದಿಂದ 100 ಎಕರೆಗೆ ಹೆಚ್ಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT