ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1,500 ವರ್ಷ ಪ್ರಾಚೀನ ಗ್ರಂಥ ಪ್ರದರ್ಶನ!

ಬುದ್ಧನ ಕಾಲದ ವೈದ್ಯ ಪದ್ಧತಿಗೆ ಮರು ಚಾಲನೆ
Last Updated 6 ಡಿಸೆಂಬರ್ 2018, 19:16 IST
ಅಕ್ಷರ ಗಾತ್ರ

ಬೆಂಗಳೂರು: ‘ಸೊವಾ ರಿಗ್‌ಪಾ’ ಎಂಬ ವೈದ್ಯ ಪದ್ಧತಿಗೆ ಸಂಬಂಧಿಸಿದ ಅಪೂರ್ವ ಮಾಹಿತಿಗಳನ್ನು ಒಳಗೊಂಡಿರುವ ಸುಮಾರು 1,500 ವರ್ಷಗಳಷ್ಟು ಹಳೆಯ ಹಸ್ತಪ್ರತಿಯ ಕಡತವನ್ನು ‘ಭಾರತ ವರ್ಷ ಪಾರಂಪರಿಕ ಚಿಕಿತ್ಸಾ ಪದ್ಧತಿಯ ರಾಷ್ಟ್ರೀಯ ಸಮ್ಮೇಳನ’ದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.

ಲಡಾಖ್‌ನಲ್ಲಿರುವ ‘ನ್ಯಾಷನಲ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ ಫಾರ್‌ ಸೊವಾ ರಿಗ್‌ಪಾ’ದ ವಿಜ್ಞಾನಿಗಳು ಈ ಕಡತವನ್ನು ಬೆಂಗಳೂರಿಗೆ ತಂದಿದ್ದಾರೆ. ಸೊವಾ ರಿಗ್‌ಪಾ ಚಿಕಿತ್ಸಾ ಪದ್ಧತಿ ಬುದ್ಧ ಮತ್ತು ಆನಂತರದ ಕಾಲದಲ್ಲಿ ಭಾರತದಲ್ಲಿ ಪ್ರಚಲಿತದಲ್ಲಿತ್ತು. ವಿದೇಶಿ ದಾಳಿಕೋರರು ನಳಂದಾ ವಿಶ್ವವಿದ್ಯಾಲಯದ ಮೇಲೆ ದಾಳಿ ಮಾಡಿ, ಬೆಂಕಿ ಹಚ್ಚಿದಾಗ ಬೌದ್ಧ ಭಿಕ್ಕುಗಳು ಈ ಚಿಕಿತ್ಸಾ ಪದ್ಧತಿಗೆ ಸೇರಿದ ಸಾಕಷ್ಟು ಗ್ರಂಥಗಳನ್ನು ಟಿಬೆಟ್‌ ಮತ್ತು ಚೀನಾಗೆ ಒಯ್ದರು.

‘ಟಿಬೆಟ್‌ನವರು ತಮ್ಮದೇ ಮೂಲದ್ದು ಎಂದು ಹೇಳಿಕೊಳ್ಳುವ ಈ ವೈದ್ಯ ಪದ್ಧತಿಯ ಮೂಲ ಭಾರತದ್ದೇ ಆಗಿದೆ. ಲೇಹ್– ಲಡಾಖ್‌ ಪ್ರಾಂತ್ಯದಲ್ಲಿ ಕೆಲವರು ಇದನ್ನು ಕಾಪಾಡಿಕೊಂಡು ಬಂದಿದ್ದಾರೆ. 2010ರಲ್ಲಿ ಭಾರತ ಸರ್ಕಾರ ಇದಕ್ಕೆ ಮಾನ್ಯತೆ ನೀಡಿದ್ದೂ ಅಲ್ಲದೆ, ಸಂಶೋಧನಾ ಸಂಸ್ಥೆಯನ್ನು ಆರಂಭಿಸಿತು’ ಎಂದು ಸಂಶೋಧನಾ ಸಹಾಯಕಿ ಡಾ. ಸೆವಾಂಗ್‌ ಡೋಲ್ಮಾ ತಿಳಿಸಿದರು.

‘ಸಂಶೋಧನಾ ಸಂಸ್ಥೆ ಆರಂಭವಾದ ಬಳಿಕ ಈ ಚಿಕಿತ್ಸಾ ಪದ್ಧತಿಗೆ ಸಂಬಂಧಿಸಿದ ಪ್ರಾಚೀನ ತಾಳೆ ಪತ್ರಗಳು, ಕೈಯಿಂದ ತಯಾರಿಸಿದ್ದ ಕಾಗದದ ಹಸ್ತಪ್ರತಿಗಳನ್ನು ಸಂಗ್ರಹಿಸಿ, ರಕ್ಷಿಸುವ ಕಾರ್ಯವನ್ನು ಕೈಗೊಂಡಿದ್ದೇವೆ. ಅಲ್ಲದೆ, ಗ್ರಂಥಗಳಲ್ಲಿ ಉಲ್ಲೇಖವಾಗಿರುವ ಮೂಲಿಕೆಗಳು, ಔಷಧೀಯ ಸಸ್ಯಗಳನ್ನು ಪತ್ತೆ ಹಚ್ಚಿ ರಕ್ಷಿಸುವ ಕಾರ್ಯ ನಡೆದಿದೆ’ ಎಂದು ಹೇಳಿದರು.

‘ಆಯುರ್ವೇದಕ್ಕೂ ನಮ್ಮ ಪದ್ಧತಿಗೂ ಹೆಚ್ಚಿನ ವ್ಯತ್ಯಾಸಗಳಿಲ್ಲ. ಈ ವೈದ್ಯ ಪದ್ಧತಿ ನಾಲ್ಕು ತತ್ವಗಳನ್ನು ಆಧರಿಸಿದೆ. ಆಯುರ್ವೇದದಷ್ಟೇ ಪ್ರಾಚೀನ ಪದ್ಧತಿ. ಭಾರತದಲ್ಲಿ ಕೆಲವು ಭಾಗಗಳಲ್ಲದೆ, ಟಿಬೆಟ್‌, ಮಂಗೋಲಿಯಾ, ಭೂತಾನ್‌, ಚೀನಾದ ಕೆಲವು ಭಾಗ, ನೇಪಾಳ ಮತ್ತು ರಷ್ಯಾದ ಕೆಲವು ಪ್ರದೇಶಗಳಲ್ಲಿ ಈ ವೈದ್ಯ ಪದ್ಧತಿ ಚಾಲ್ತಿಯಲ್ಲಿದೆ. ನಳಂದಾದಿಂದ ಈ ಗ್ರಂಥಗಳನ್ನು ಟಿಬೆಟ್‌ ಮತ್ತು ಚೀನಾ ಕಡೆಗೆ ಒಯ್ದ ಸಂದರ್ಭದಲ್ಲಿ ಸಂಸ್ಕೃತ, ಪಾಳಿ ಭಾಷೆಗಳಲ್ಲೇ ಇದ್ದವು. ಬಳಿಕ ಟಿಬೆಟ್‌ ಮತ್ತು ಇತರ ಭಾಷೆಗಳಿಗೆ ತರ್ಜುಮೆ ಮಾಡಲಾಯಿತು ಎಂದು ಅವರು ಹೇಳಿದರು.

ಸಣ್ಣ– ಸಣ್ಣ ಗುಳಿಗೆಗಳು ಮತ್ತು ಚೂರ್ಣದ ರೂಪದಲ್ಲಿ ಔಷಧಗಳನ್ನು ನೀಡುವ ಪದ್ಧತಿ ಲಡಾಖ್‌ನಲ್ಲಿ ಬಹಳ ಕಾಲದಿಂದಲೂ ಇತ್ತು. ಇದನ್ನು ಒಂದಷ್ಟು ಜನ ಕಾಪಾಡಿಕೊಂಡು ಬಂದಿದ್ದರು. ಇದಕ್ಕೆ ಮಾನ್ಯತೆ ಸಿಗುವಾಗ ವಿಳಂಬವಾಯಿತು ಎಂದು ಅವರು ಹೇಳಿದರು.

ರಾಷ್ಟ್ರೀಯ ಆರೋಗ್ಯ ಮೇಳಕ್ಕೆ ಚಾಲನೆ

ಕೇಂದ್ರದ ಆಯುಷ್‌ ಇಲಾಖೆ ಮತ್ತು ‘ಜಿಜ್ಞಾಸ’ ಜಂಟಿಯಾಗಿ ಏರ್ಪಡಿಸಿದ್ದ ಮೂರು ದಿನಗಳ ರಾಷ್ಟ್ರೀಯ ಆರೋಗ್ಯ ಮೇಳಕ್ಕೆ ಗುರುವಾರ ಚಾಲನೆ ನೀಡಲಾಯಿತು.

ಕೇಂದ್ರ ಸರ್ಕಾರದ ಆಯುಷ್‌ ಕಾರ್ಯದರ್ಶಿ ಡಾ. ರಾಜೇಶ್‌ ಕೊಟೇಚಾ ಮಾತನಾಡಿ, ಆಯುಷ್‌ (ಆಯರ್ವೇದ, ಯುನಾನಿ, ಸಿದ್ಧ ಮತ್ತು ನ್ಯಾಚುರೋಪತಿ) ವೈದ್ಯ ಪದ್ಧತಿಯನ್ನೂ ತನ್ನ ವ್ಯಾಪ್ತಿಗೆ ಸೇರಿಸಿಕೊಳ್ಳಬೇಕು ಎಂದುವಿಶ್ವ ಆರೋಗ್ಯ ಸಂಸ್ಥೆಗೆ ಮನವಿ ಮಾಡಲಾಗಿದೆ ಎಂದರು.

ಕೇಂದ್ರ ಸರ್ಕಾರ ಸದ್ಯವೇ ಆಯುಷ್‌ ಕೌಶಲ ಮಂಡಳಿಯನ್ನು ರಚಿಸಲಿದೆ. ಆಯುಷ್‌ ಶಿಕ್ಷಣ ಪಡೆದು ಬರುವವರಿಗೆ ಉದ್ಯೋಗ ಕಂಡುಕೊಳ್ಳಲು ಅನುಕೂಲವಾಗುವಂತೆ ಕೌಶಲ ಶಿಕ್ಷಣವನ್ನು ನೀಡಲು ಸರ್ಕಾರ ಉದ್ದೇಶಿಸಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT