ಭಾನುವಾರ, ಜೂನ್ 7, 2020
24 °C

ಚಿಂಚೋಳಿ: ಸಂಕಷ್ಟದಲ್ಲಿ ಟೇಲರ್‌ ಬದುಕು

ಜಗನ್ನಾಥ ಡಿ. ಶೇರಿಕಾರ Updated:

ಅಕ್ಷರ ಗಾತ್ರ : | |

Prajavani

ಚಿಂಚೋಳಿ: ಬಟ್ಟೆ ಹೊಲಿಯುವ ಕಾಯಕವನ್ನೇ ನಂಬಿರುವ ಟೇಲರ್‌ಗಳು, ಎಂಬ್ರಾಯಿಡರಿ ಕೆಲಸ ಮಾಡುವವರು, ಕಸೂತಿ ಕೆಲಸ ಅವಲಂಬಿಸಿದವರು ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದೂವರೆ ತಿಂಗಳಿನಿಂದ ಕೆಲಸವಿಲ್ಲದೆ ಅವರ ಬದುಕು ಹರಿದುಹೋಗಿದೆ.

ಬಟ್ಟೆ ಹೊಲಿಯುವ ಕಾಯಕದ ಮೂಲಕ ಸ್ವಾವಲಂಬಿ ಜೀವನ ನಡೆಸುತ್ತಿದ್ದ ಸಾವಿರಾರು ಯುವಕ, ಯುವತಿಯರು, ಗೃಹಿಣಿಯರು ತೊಂದರೆಗೆ ಸಿಲುಕಿದ್ದಾರೆ.

ಕೊರೊನಾ ತಡೆಗೆ ಲಾಕ್‌ಡೌನ್ ಜಾರಿ ಮಾಡಿದ್ದರಿಂದ ಬಟ್ಟೆ ಅಂಗಡಿಗಳು ಬಂದ್ ಆಗಿವೆ. ಬಟ್ಟೆ ಹೊಲಿಸಿಕೊಳ್ಳಲು ಯಾರೂ ಬರುತ್ತಿಲ್ಲ. ಈ ಹಿಂದೆ ಕೊಟ್ಟಿರುವ ಬಟ್ಟೆಗಳನ್ನು ಹೊಲಿದು ಕೊಡಬೇಕೆಂದರೂ ನಮಗೆ ಅಂಗಡಿ ತೆರೆಯಲು ಅನುಮತಿ ಸಿಗುತ್ತಿಲ್ಲ ಎಂದು ಟೇಲರ್‌ಗಳು ಅಲವತ್ತುಕೊಂಡಿದ್ದಾರೆ.

ಪ್ರತಿ ವರ್ಷ ರಂಜಾನ್‌ ಬಂದರೆ ಟೇಲರ್‌ಗಳಿಗೆ ಕೈತುಂಬಾ ಕೆಲಸ ಇರುತ್ತಿತ್ತು. ಪ್ರಸಕ್ತ ವರ್ಷ ಕೊರೊನಾ ಟೇಲರ್‌ಗಳ ಬದುಕಿನ ಮೇಲೆ ಗದಾಪ್ರಹಾರ ನಡೆಸಿದೆ. ಅನೇಕರಿಗೆ ಅಂಗಡಿ ಬಾಡಿಗೆ ಕಟ್ಟುವ ಮತ್ತು ವಿದ್ಯುತ್ ಬಿಲ್ ಭರಿಸುವುದಕ್ಕೂ ಸಾಧ್ಯವಾಗುತ್ತಿಲ್ಲ. ‘ಸರ್ಕಾರ ಅಟೊ, ಟ್ಯಾಕ್ಸಿ ಚಾಲಕರಿಗೆ ನೆರವು ಘೋಷಿಸಿದ ರೀತಿಯಲ್ಲಿ ಟೇಲರ್ ವೃತ್ತಿ ಅವಲಂಬಿತರಿಗೂ ನೆರವು ನೀಡಬೇಕು’ ಎಂದು ಭಾರತೀಯ ಮುಕ್ತಿ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾರುತಿ ಗಂಜಗಿರಿ  ಒತ್ತಾಯಿಸಿದ್ದಾರೆ.

‘ತಾಲ್ಲೂಕಿನಲ್ಲಿ 5 ಸಾವಿರಕ್ಕೂ ಹೆಚ್ಚು ಟೇಲರ್ ವೃತ್ತಿ ಅವಲಂಬಿತರಿದ್ದಾರೆ. ನಮ್ಮ ಬಟ್ಟೆ ಹರಿದು ಹೋದರೂ ಹೊಲಿದುಕೊಳ್ಳಲು ಆಗುತ್ತಿಲ್ಲ. ಸರ್ಕಾರ ನೆರವಿಗೆ ಬರಬೇಕು’ ಎಂದು ಕಲ್ಲೂರ್ ರೋಡ್ ಗ್ರಾಮದ ಲಾಲ್‌ಸಾಬ್ ಕಷ್ಟ ಹೇಳಿಕೊಂಡರು. ಟೇಲರ್‌ಗಳು ಲಾಕ್‌ಡೌನ್ ಯಾವಾಗ ಮುಗಿಯುತ್ತೊ ಎಂದು ಕಾತರದಿಂದ ಕಾಯುತ್ತಿದ್ದಾರೆ. ಕೆಲವರು ಕುಟುಂಬಕ್ಕೆ ಬೇಕಾದಷ್ಟು ಮಾಸ್ಕ್ ತಯಾರಿಸಿಕೊಂಡು ಧರಿಸುವ ಮೂಲಕ ಕೊರೊನಾ ಹರಡದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು