ಸಚಿವಾಲಯ ಸುಪರ್ದಿಯಲ್ಲಿದ್ದ ಕೊಠಡಿ ಬಳಸಿದ ವಂಚಕರು

ಶುಕ್ರವಾರ, ಮೇ 24, 2019
29 °C

ಸಚಿವಾಲಯ ಸುಪರ್ದಿಯಲ್ಲಿದ್ದ ಕೊಠಡಿ ಬಳಸಿದ ವಂಚಕರು

Published:
Updated:

ಬೆಂಗಳೂರು: ಸಚಿವರ ಸೋಗಿನಲ್ಲಿ ಉದ್ಯಮಿಯಿಂದ ₹1.12 ಕೋಟಿ ಕಿತ್ತುಕೊಂಡಿದ್ದ ವಂಚಕರು ವಿಧಾನಸಭೆ ಸಚಿವಾಲಯದ ಉಸ್ತುವಾರಿಯಲ್ಲಿದ್ದ ವಿಧಾನಸೌಧದ ಕೊಠಡಿಯನ್ನು ದುರ್ಬಳಕೆ ಮಾಡಿಕೊಂಡಿದ್ದ ಸಂಗತಿ ಬೆಳಕಿಗೆ ಬಂದಿದೆ.

ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ನೀಡಿದ್ದ ಕೊಠಡಿಯನ್ನೇ ವಂಚಕರು ಬಳಸಿದ್ದರು ಎಂದು ಪೊಲೀಸರು ತಿಳಿಸಿದ್ದರು.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಶ್ರೀನಿವಾಸ ಪೂಜಾರಿ, ‘ಅಧಿವೇಶನ ನಡೆಯದ ವೇಳೆಯಲ್ಲಿ ವಿರೋಧ ಪಕ್ಷದ ನಾಯಕರಿಗೆ ಮೀಸಲಾಗಿರುವ ಕೊಠಡಿಯನ್ನಷ್ಟೇ ಕಚೇರಿಯಾಗಿ ಬಳಸುತ್ತೇನೆ. ಪರಿಷತ್ತಿನ ಅಧಿವೇಶನ ನಡೆಯುವ ಹೊತ್ತಿನಲ್ಲಿ ಕಾರ್ಯಕಲಾಪಗಳಿಗೆ ಹಾಗೂ ಸಂದರ್ಶಕರ ಭೇಟಿಗೆ ಅನುಕೂಲವಾಗುವಂತೆ ವಿಧಾನಸಭಾಧ್ಯಕ್ಷರ ಕಚೇರಿಗೆ ಹೊಂದಿಕೊಂಡಂತೆ ಇರುವ ‘ಸಂದರ್ಶಕರ ಕೊಠಡಿ’ಯನ್ನು ನೀಡಲಾಗಿರುತ್ತದೆ. ಆ ಅವಧಿಯಲ್ಲಿ ಮಾತ್ರ ಅದನ್ನು ಬಳಸಲಾಗುತ್ತದೆ. ಅಧಿವೇಶನ ಮುಗಿದ ಬಳಿಕ ಅದನ್ನು ಸಚಿವಾಲಯದ ಸುಪರ್ದಿಗೆ ನೀಡಲಾಗುತ್ತದೆ. ಅದರ ಬಾಗಿಲಿನ ಕೀ ಕೂಡ ಸಚಿವಾಲಯದ ಸಿಬ್ಬಂದಿ ಬಳಿಯೇ ಇರುತ್ತದೆ’ ಎಂದು ತಿಳಿಸಿದ್ದಾರೆ.

‘ವಂಚಕರು ದುರ್ಬಳಕೆ ಮಾಡಿಕೊಂಡಿರುವುದಕ್ಕೂ ನನಗೂ ಸಂಬಂಧವಿಲ್ಲ. ಈ ಬಗ್ಗೆ ಸಭಾಧ್ಯಕ್ಷರಿಗೆ ಮಾಹಿತಿ ನೀಡಿದ್ದೇನೆ. ಸೂಕ್ತ ತನಿಖೆ ನಡೆಸುವಂತೆ ನಗರ ಪೊಲೀಸ್ ಕಮಿಷನರ್‌ಗೆ ಪತ್ರ ಬರೆದಿದ್ದೇನೆ’ ಎಂದೂ ಅವರು ತಿಳಿಸಿದ್ದಾರೆ.

ಸಚಿವರ ಕಚೇರಿಯಲ್ಲಿ ದಲಾಯತ್: ಈ ಪ್ರಕರಣದಲ್ಲಿ ಬಂಧಿತನಾಗಿರುವ ಪರಿಷತ್ ಸಚಿವಾಲಯದ ಮಾಜಿ ದಲಾಯತ್ ಮಹದೇವಸ್ವಾಮಿ, ಕಾಂಗ್ರೆಸ್ ನೇತೃತ್ವದ ಸರ್ಕಾರ ಇದ್ದಾಗ ಉತ್ತರ ಕರ್ನಾಟಕ ಭಾಗದ ಪ್ರಭಾವಿ ಸಚಿವರೊಬ್ಬರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ. ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ಸೇರಿದ್ದ ಆತನ ಗುತ್ತಿಗೆ ಅವಧಿ ವಿಸ್ತರಣೆ ಆಗಿರಲಿಲ್ಲ. ಹೀಗಾಗಿ ಆತನ ಕೆಲಸ ಹೋಗಿತ್ತು. ‘ವ್ಯವಹಾರ’ ನಡೆಸುವುದನ್ನು ಕಲಿತುಕೊಂಡಿದ್ದ  ಆತ ವಿಧಾನಸೌಧ ಬಿಟ್ಟು ಹೋಗಿರಲಿಲ್ಲ ಎಂದು ಮೂಲಗಳು ಹೇಳಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !