ಸೋಮವಾರ, ಮೇ 17, 2021
23 °C

ಆಮೆಗತಿಯಲ್ಲಿ ಕಾಮಗಾರಿ: ಜನ ಹೈರಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ಒಂಬತ್ತು ತಿಂಗಳ ಹಿಂದೆ ನೀರಿನ ಪೈಪ್‌ಲೈನ್‌ಗಾಗಿ ದಾಸರಹಳ್ಳಿಯ ಎಂಎಚ್‌ಆರ್‌, ಎಂಇಐ, ಕಿರ್ಲೋಸ್ಕರ್‌ ಹಾಗೂ ಎಜಿಬಿ ಬಡಾವಣೆಯಲ್ಲಿ ಅಗೆದ ರಸ್ತೆಗಳನ್ನು ಜಲಮಂಡಳಿ ಮುಚ್ಚಿಲ್ಲ. ಇದರಿಂದ ಬೈಕ್‌ ಸವಾರರು ಹಾಗೂ ಪಾದಚಾರಿಗಳು ತೊಂದರೆ ಅನುಭವಿಸುತ್ತಿದ್ದಾರೆ.

ವಿವಿಧ ಹಂತಗಳಲ್ಲಿ 110 ಗ್ರಾಮಗಳಿಗೆ ಕಾವೇರಿ ನೀರನ್ನು ಪೂರೈಸಲು ಜಲಮಂಡಳಿಯಿಂದ ಪೈಪ್‌ಲೈನ್‌ ಹಾಕಲಾಗುತ್ತಿದೆ. ಮೂರನೇ ಪ್ಯಾಕೇಜ್‌ನ ಭಾಗವಾಗಿ ದಾಸರಹಳ್ಳಿ ಹಾಗೂ ಆರ್‌.ಆರ್‌ ನಗರದ ಈ ಯೋಜನೆಗೆ ₹296.38 ಕೋಟಿ ಅನುದಾನ ಮಂಜೂರಾಗಿದೆ. ಆದರೆ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದ್ದು, ನಿವಾಸಿಗಳು ಬೇಸತ್ತಿದ್ದಾರೆ.

ಸೆ.1ರಂದು ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್‌ಗಳ ಕುಂದುಕೊರತೆಗಳಿಗೆ ಪರಿಹಾರ ಕಂಡುಕೊಳ್ಳಲು ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳ ವತಿಯಿಂದ ಏರ್ಪಡಿಸಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಸ್ಥಳೀಯರು ಈ ವಿಚಾರವನ್ನು ಎತ್ತಿದ್ದರು. ಈ ವೇಳೆ ಜಲಮಂಡಳಿಯ ಅಧಿಕಾರಿಗಳು ಮತ್ತು ಸ್ಥಳೀಯ ಕಾರ್ಪೊರೇಟರ್‌ಗಳು ರಸ್ತೆಯನ್ನು ಮುಚ್ಚಿಸುವ ಭರವಸೆ ನೀಡಿದ್ದರು. ಇದಾಗಿ ಎರಡು ತಿಂಗಳು ಆದರೂ ಕೆಲಸ ಮಾತ್ರ ಆಮೆಗತಿಯಲ್ಲಿ ನಡೆಯುತ್ತಿದೆ.

‘ದಾಸರಹಳ್ಳಿಯಲ್ಲಿ ಒಡಲು ಬಗೆಸಿಕೊಂಡಿರುವ ರಸ್ತೆಗಳೇ ಎದ್ದು ಕಾಣುತ್ತಿದ್ದು, ಇಡೀ ಪ್ರದೇಶದಲ್ಲಿ ದೂಳು ಆವರಿಸಿದೆ. ಇಲ್ಲಿ ನಡೆದಾಡುವುದು ಕೂಡ ಸವಾಲಿನ ಕೆಲಸವಾಗಿ ಪರಿಣಮಿಸಿದೆ. ಹಲವು ತಿಂಗಳಿಂದ ಪೈಪ್‌ಲೈನ್‌ ಅಳವಡಿಸುವ ಕಾರ್ಯ ನಡೆದಿದೆ. ಕೆಲಸ ಮುಗಿಸಲು ಏಕೆ ಅಷ್ಟು ಸಮಯ ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ’ ಎಂದು ಎಜಿಬಿ ಬಡಾವಣೆಯ ಸಂತೋಷ್‌ ಕುಮಾರ್‌ ಅಚ್ಚರಿ ವ್ಯಕ್ತಪಡಿಸುತ್ತಾರೆ.

‘ನಾಗರಿಕ ಸೇವಾ ಸಂಸ್ಥೆಗಳಿಗೆ ಹೊಣೆಗಾರಿಕೆ ಇದ್ದಾಗ ಮಾತ್ರ ಕೆಲಸ ಬೇಗ ಮುಗಿಯುತ್ತದೆ. ಈ ಪ್ರದೇಶದಲ್ಲಿ ನೀರಿನ ಕೊರತೆ ಅತಿದೊಡ್ಡ ಸಮಸ್ಯೆ. ಜಲಮಂಡಳಿ ಕೆಲಸದ ವಿಧಾನವೇ ತಲೆನೋವಾಗಿ ಪರಿಣಮಿಸಿದೆ’ ಎನ್ನುತ್ತಾರೆ ಎಂಎಚ್‌ಆರ್‌ ಬಡಾವಣೆ ನಿವಾಸಿಗಳ ಕಲ್ಯಾಣ ಸಂಸ್ಥೆಯ ಸದಸ್ಯ ಗೋವಿಂದರಾಜು.

‘2017ರ ಏಪ್ರಿಲ್‌ನಿಂದ ಪೈಪ್‌ಲೈನ್‌ ಅಳವಡಿಸುವ ಕಾಮಗಾರಿ ಪ್ರಾರಂಭಿಸಿದೆ. ಕೆಲಸವನ್ನು ಮುಂದಿನ ವರ್ಷದ ಮೇನಲ್ಲಿ ಮುಗಿಸಲು ಯೋಜಿಸಲಾಗಿದೆ. ಈಗಾಗಲೇ ಶೇ 80ರಷ್ಟು ಕಾಮಗಾರಿ ಮುಗಿದಿದ್ದು, ಪೂರ್ಣಗೊಂಡ ಬಳಿಕ ರಸ್ತೆಗಳನ್ನು ಮುಚ್ಚಲಾಗುವುದು’ ಎಂದು ಜಲಮಂಡಳಿಯ ಹಿರಿಯ ಅಧಿಕಾರಿಗಳು ಸಬೂಬು ಹೇಳುತ್ತಾರೆ.

ಶಾಸಕ ಆರ್‌. ಮಂಜುನಾಥ್‌ ಪ್ರತಿಕ್ರಿಯೆಗೆ ಸಿಗಲಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು