ಭಾನುವಾರ, ಜೂನ್ 20, 2021
28 °C
ಮೈಸೂರು ರಸ್ತೆಯಲ್ಲಿ ಮತ್ತೆ ಆರಂಭವಾದ ವೈಟ್‌ಟಾಪಿಂಗ್‌ ಕಾಮಗಾರಿ

ವಾಹನ ದಟ್ಟಣೆಯಿಂದ ಸವಾರರು ಹೈರಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮೈಸೂರು ರಸ್ತೆಯಲ್ಲಿ ವೈಟ್‌ಟಾಪಿಂಗ್ ಕಾಮಗಾರಿ ಮತ್ತೆ ಆರಂಭವಾಗಿದ್ದು, ಸಂಚಾರ ದಟ್ಟಣೆ ಕಿರಿಕಿರಿಯಿಂದ ವಾಹನ ಸವಾರರು ಹೈರಾಣಾಗಿದ್ದಾರೆ.

ಮೈಸೂರು ಕಡೆಯಿಂದ ಬರುವ ರಸ್ತೆಯಲ್ಲಿ ನಾಯಂಡಹಳ್ಳಿಯಿಂದ ಸಿಸಿಬಿ ಕಚೇರಿ ತನಕ ವೈಟ್ ಟಾಪಿಂಗ್ ಕೆಲಸ ಪೂರ್ಣಗೊಳಿಸಿರುವ ಬಿಬಿಎಂಪಿ, ಮೈಸೂರು ಕಡೆಗೆ ಹೋಗುವ ಭಾಗದಲ್ಲಿ ಗೋರಿಪಾಳ್ಯ ಜಂಕ್ಷನ್‌ನಿಂದ ಸ್ಯಾಟಲೈಟ್‌ ಬಸ್‌ನಿಲ್ದಾಣದ ತನಕ ಕಾಮಗಾರಿ ಕೈಗೆತ್ತಿಕೊಂಡಿದೆ. 

ರಸ್ತೆಯಲ್ಲಿ ಒಂದು ಬಸ್ ಹೋಗುವಷ್ಟು ಅಗಲದ ಜಾಗವನ್ನು ಮಾತ್ರ ಬಿಟ್ಟು, ಕಾಮಗಾರಿ ನಡೆಸಲಾಗುತ್ತಿದೆ. ಕೆ.ಆರ್‌.ಮಾರುಕಟ್ಟೆಯ ಮೇಲ್ಸೇತುವೆಯಿಂದ ಇಳಿದ ಕೂಡಲೇ ಸಂಚಾರ ದಟ್ಟಣೆ ಕಿರಿಕಿರಿ ಆರಂಭವಾಗುತ್ತದೆ. ಒಂದರ ಹಿಂದೊಂದು ವಾಹನಗಳು ಸಾಲುಗಟ್ಟಿಯೇ ಹೋಗಬೇಕು. ದೊಡ್ಡ ಲಾರಿ ಅಥವಾ ಬಸ್‌ಗಳ ಹಿಂದೆ ಬೈಕ್ ಅಥವಾ ಕಾರುಗಳು ಸಿಲುಕಿಕೊಂಡರೆ ವಾಹನಗಳ ಹೊಗೆ, ಬಿಸಿಲಿನ ಧಗೆ ಮತ್ತು ದೂಳಿನ ನಡುವೆ ಉಸಿರುಗಟ್ಟಿಕೊಂಡು ಗಂಟೆಗಟ್ಟಲೆ ನಿಲ್ಲುವುದು ಅನಿವಾರ್ಯವಾಗಿದೆ.

‘ಬೆಂಗಳೂರು–ಮೈಸೂರು ಸಂಪರ್ಕಿಸುವ ಈ ಪ್ರಮುಖ ರಸ್ತೆಯಲ್ಲಿ ರಾತ್ರಿ–ಹಗಲು ಎನ್ನದೆ ಸಾವಿರಾರು ವಾಹನಗಳು ಸಂಚರಿಸುತ್ತವೆ. ವೈಟ್‌ ಟಾಪಿಂಗ್ ಕಾಮಗಾರಿ ಆರಂಭಿಸುವ ಮುನ್ನ ವಾಹನಗಳ ಸಂಚಾರಕ್ಕೆ ಪರ್ಯಾಯ ರಸ್ತೆಗಳನ್ನು ಬಿಬಿಎಂಪಿ ಮತ್ತು ಸಂಚಾರ ಪೊಲೀಸರು ಕಲ್ಪಿಸಬೇಕಿತ್ತು’ ಎನ್ನುತ್ತಾರೆ ವಾಹನ ಸವಾರರು.

ಈ ರಸ್ತೆಯ ಎಡಭಾಗದಲ್ಲಿ ನಾಲ್ಕು ರಸ್ತೆಗಳು ಸಂಪರ್ಕಿಸುತ್ತವೆ.  ದಟ್ಟಣೆಯಿಂದ ಪಾರಾಗಲು ಆ ರಸ್ತೆಗಳನ್ನು ಬಳಸಬಹುದು. ಆದರೆ, ಅವುಗಳಲ್ಲಿ ಸಾಗಿ ಮತ್ತೆ ಮೈಸೂರು ರಸ್ತೆಯನ್ನು ಸೇರಿಕೊಳ್ಳಲು ಕಿಲೋಮೀಟರ್‌ಗಟ್ಟಲೆ ಸುತ್ತಾಡಬೇಕಾಗುತ್ತದೆ. ಒಂದು ರಸ್ತೆಯು  ಗಿರಿನಗರದ ಮೂಲಕ ಮೈಸೂರು ರಸ್ತೆಯನ್ನು ಸೇರಿಕೊಳ್ಳುತ್ತದೆ. 

ದಟ್ಟಣೆಯ ಕಿರಿಕಿರಿ ತಪ್ಪಿಸಿಕೊಳ್ಳುವ ಉದ್ದೇಶದಿಂದ ಕೆಲ ಬೈಕ್‌ ಸವಾರರು ಸಮಯ ಉಳಿಸಲು ಅಡ್ಡದಾರಿ ಹಿಡಿಯುತ್ತಾರೆ. ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ ಇರುವ ರಸ್ತೆಯಲ್ಲೇ ಸಂಚರಿಸುತ್ತಾರೆ. ಇದರಿಂದಾಗಿ ಮೈಸೂರು ಕಡೆಯಿಂದ ಬರುವ ವಾಹನಗಳು ಸಮಸ್ಯೆ ಎದುರಿಸುವಂತಾಗಿದೆ. 

ಸ್ಥಳೀಯರಿಗೆ ತೊಂದರೆ: ರಸ್ತೆಯ ಬಲಭಾಗದಲ್ಲಿ ಇರುವ ಗುಡ್ಡದಹಳ್ಳಿ ಸೇರಿ ಹಲವು ಬಡಾವಣೆಗಳ ನಿವಾಸಿಗಳು ಕೆಂಗೇರಿ ಅಥವಾ ಸ್ಯಾಟಲೈಟ್ ಬಸ್ ನಿಲ್ದಾಣ ತಲುಪಬೇಕಾದರೆ ಪರದಾಡಬೇಕಾದ ಸ್ಥಿತಿ ಇದೆ.

‘ಕಾಮಗಾರಿ ನಡೆಯುತ್ತಿರುವ ಕಾರಣ ಬಡಾವಣೆಯಿಂದ ಬಂದು ನೇರವಾಗಿ ಮೈಸೂರು ರಸ್ತೆ ಸೇರಿಕೊಳ್ಳಲು ಆಗುವುದಿಲ್ಲ. ಗೋರಿಪಾಳ್ಯ ಜಂಕ್ಷನ್‌ಗೆ ಬಳಿಗೆ ಬಂದು ಯೂ–ಟರ್ನ್ ತೆಗೆದುಕೊಳ್ಳಬೇಕಾಗಿದೆ. ಈ ಕಾಮಗಾರಿ ಯಾವಾಗ ಮುಗಿಯುತ್ತದೋ’ ಎಂದು ಸ್ಥಳೀಯ ಆಟೋ ಚಾಲಕ ಪ್ರಕಾಶ್ ಹೇಳಿದರು.

**

ಮೂರು ತಿಂಗಳು ಕಾಯಬೇಕು

ವೈಟ್‌ ಟಾಪಿಂಗ್ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಕನಿಷ್ಠ ಮೂರು ತಿಂಗಳು ಕಾಲಾವಕಾಶ ಬೇಕು ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದರು.

‘300 ಮೀಟರ್‌ ಉದ್ದದ ಕಾಂಕ್ರೀಟ್ ಕಾಮಗಾರಿ ಮುಗಿದಿದೆ. ಕಾಂಕ್ರಿಟ್ ಹಾಕುವುದಕ್ಕಿಂತ ಅದಕ್ಕೆ ನೀರು ಹಾಕಿ ಕ್ಯೂರಿಂಗ್ ಮಾಡುವುದೇ ದೊಡ್ಡ ಕೆಲಸ. ಇದಕ್ಕೆ ಕಾಲಾವಕಾಶ ಹಿಡಿಯುತ್ತದೆ. ಹಂತ ಹಂತವಾಗಿ 3 ಕಿ.ಮೀ ಕಾಮಗಾರಿ ಮುಗಿಸಲಾಗುತ್ತದೆ’ ಎಂದರು.

ಮೈಸೂರು ರಸ್ತೆಗೆ ಪರ್ಯಾಯ ರಸ್ತೆಗಳಿಲ್ಲದ ಕಾರಣ ಕಾಮಗಾರಿ ಮುಗಿಯುವ ತನಕ ಪ್ರಯಾಣಿಕರು ಈ ತೊಂದರೆ ಸಹಿಸಿಕೊಳ್ಳಬೇಕು ಎಂದರು.

ರಾತ್ರಿ ವೇಳೆ ಹೆಚ್ಚು ಸಮಸ್ಯೆ

‘ಬೆಂಗಳೂರಿನಿಂದ ಮೈಸೂರು ರಸ್ತೆ ಕಡೆಗೆ ರಾತ್ರಿ ವೇಳೆಯೇ ಹೆಚ್ಚು ವಾಹನಗಳು ಸಂಚರಿಸುತ್ತವೆ. ಸಂಜೆಯಿಂದ ರಾತ್ರಿ 1 ಗಂಟೆಯಾದರೂ ವಾಹನಗಳ ಸಂಖ್ಯೆ ಕಡಿಮೆಯಾಗುವುದಿಲ್ಲ. ನಾಯಂಡಹಳ್ಳಿ, ರಾಜರಾಜೇಶ್ವರಿನಗರ, ಕೆಂಗೇರಿ ಹಾಗೂ ಸುತ್ತಮುತ್ತಲ ಬಡಾವಣೆಗಳಿಗೆ ತಲುಪಬೇಕಾದ ಸ್ಥಳೀಯರು ಮಧ್ಯರಾತ್ರಿಯಾದರೂ ಮನೆ ಸೇರಲು ಆಗುತ್ತಿಲ್ಲ’ ಎಂದು ರಾಜರಾಜೇಶ್ವರಿನಗರದ ನಿವಾಸಿ ಸಂತೋಷ್ ಅಳಲು ತೋಡಿಕೊಂಡರು.

**

ಕೆ.ಆರ್‌.ಮಾರುಕಟ್ಟೆ ಕಡೆಗೆ ಹೋಗಿ ಮತ್ತೆ ಮನೆಗೆ ಮರಳುವಷ್ಟರಲ್ಲಿ ಹೈರಾಣಾಗಿರುತ್ತೇವೆ. ಬಿಸಿಲು, ಹೊಗೆ, ದೂಳಿನ ನಡುವೆ ಗಂಟೆಗಟ್ಟಲೆ ಟ್ರಾಫಿಕ್‌ನಲ್ಲಿ ಸಿಲುಕಿ ನಲುಗುತ್ತಿದ್ದೇವೆ
- ಬಿ.ಶಂಕರ್ , ಪ್ರಮೋದ್ ಲೇಔಟ್, ಮೈಸೂರು ರಸ್ತೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು