ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಂಘಟಿತ ಕಾರ್ಮಿಕರ ಬಗ್ಗೆ ಮೋದಿ ಮೌನ: ಡಿಕೆಶಿ ಅಸಮಾಧಾನ

Last Updated 18 ಏಪ್ರಿಲ್ 2020, 9:19 IST
ಅಕ್ಷರ ಗಾತ್ರ

ಬೆಂಗಳೂರು: ‘ಅಸಂಘಟಿತ ವಲಯದ ಕಾರ್ಮಿಕರು ತೀವ್ರ ಸಂಕಷ್ಟದಲಿದ್ದಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಈ ಕಾರ್ಮಿಕರ ಬಗ್ಗೆ ಚಕಾರ ಎತ್ತಿಲ್ಲ‘ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ರೈತರು, ಹಮಾಲಿ, ಬಡಿಗೇರ, ಕಮ್ಮಾರ, ಕುಂಬಾರ, ಮೀನುಗಾರ, ಸವಿತಾ ಸಮಾಜ, ಬೀಡಿ ಕಟ್ಟುವವರು, ಬೀದಿ ವ್ಯಾಪಾರಿಗಳು, ಆಟೋ, ಟ್ಯಾಕ್ಸಿ ಚಾಲಕರು ಸೇರಿ ಅನೇಕ ಕಾರ್ಮಿಕ ವಲಯಗಳಿವೆ. ಇಂಥ ಸಣ್ಣ ಸಣ್ಣ ಕಾರ್ಮಿಕರ ಬಗ್ಗೆ ಯಾರೂ ಮಾತನಾಡಿಲ್ಲ. ರಾಜ್ಯದ ಸಚಿವರು ಕೂಡಾ ಮಾತನಾಡಿದ್ದು ನೋಡಿಲ್ಲ, ಕಾರ್ಮಿಕ ಸಚಿವರು ಎಲ್ಲಿ ಇದ್ದಾರೊ ಗೊತ್ತಿಲ್ಲ’ ಎಂದು ಕಿಡಿಕಾರಿದರು.

‘ನರೇಗಾ ಯೋಜನೆಯಡಿ ₹ 10 ಸಾವಿರ ಕೋಟಿ ಇದೆ. ಅದನ್ನು ನರೇಗಾ ಕೂಲಿ ಕಾರ್ಮಿಕರಿಗೆ ತಲುಪಿಸಬೇಕು. ಅಸಂಘಟಿತ ಕಾರ್ಮಿಕರಿಗೆ ಕನಿಷ್ಠ ₹ 10 ಸಾವಿರ ರೂಪಾಯಿ ಕೊಡಬೇಕು. ಪ್ರತಿ ಕಾರ್ಮಿಕನಿಗೂ ಪರಿಹಾರ ನೀಡಬೇಕು‘ ಎಂದು ಶಿವಕುಮಾರ್​ ಆಗ್ರಹಿಸಿದರು.

‘ತರಕಾರಿ, ಹೂವು, ಹಣ್ಣು ನಾಶವಾಗುತ್ತಿದೆ. ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈವರೆಗೂ ಅಧಿಕಾರಿಗಳು ಸಮೀಕ್ಷೆ ಮಾಡಿಲ್ಲ. ಸಮಸ್ಯೆಗಳಿದ್ದರೆ ಸರ್ಕಾರದ ಗಮನಕ್ಕೆ ತನ್ನಿ ಎಂದು ಕೃಷಿ ಸಚಿವರು ಹೇಳುತ್ತಾರೆ. ಯಾರಿಗೆ, ಯಾವ ನಂಬರ್‌ಗೆ ಕರೆ ಮಾಡಿ ಸಮಸ್ಯೆಗಳನ್ನು ಹೇಳಬೇಕು‘ ಎಂದು ಪ್ರಶ್ನಿಸಿದರು.

‘ಯಾವ ರೈತನೂ ಮೋಸ ಮಾಡಲು ಸಾಧ್ಯವಿಲ್ಲ. ಅತಂತ್ರ ಸ್ಥಿತಿಯಲ್ಲಿ ರೈತ ಬದುಕುತ್ತಿದ್ದಾನೆ. ರೈತರಿಗೆ ಸಹಾಯ ಮಾಡಲು ಸಾಧ್ಯವಾಗದ ಸರ್ಕಾರ ಯಾಕೆ ಬೇಕು. ಪ್ರತಿ ತಾಲ್ಲೂಕಿನಲ್ಲಿ ನೂರು ಕೋಟಿ ವ್ಯಯ ಆಗುತ್ತಿದೆ. ಪಡಿತರ ವಿತರಣೆಯಲ್ಲಿ ಗೊಂದಲ ಬಗೆಹರಿಯುವುದು ಯಾವಾಗ. ಮಾವು ಬೆಳೆದವರು, ಅಡಿಕೆ ಬೆಳೆಗಾರರ ಕಥೆ ದೇವರೇ ಕಾಪಾಡಬೇಕು‘ ಎಂದೂ ಅವರು ಬೇಸರ ವ್ಯಕ್ತಪಡಿಸಿದರು.

‘ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಆನ್‌ಲೈನ್ ಪಾಠ ಮಾಡಿ ಅಂತಾರೆ. ಗ್ರಾಮೀಣ ಪ್ರದೇಶದಲ್ಲಿ ಯಾವ ಆನ್‌ಲೈನ್‌ ಇದೆ. ಲ್ಯಾಪ್‌ಟಾಪ್‌ ಎಲ್ಲಿದೆ. ನನಗೇ ಆನ್‌ಲೈನ್‌ ವ್ಯವಹಾರ ಗೊತ್ತಿಲ್ಲ’ ಎಂದರು.

‘ನಾನು ಇಂದು ಅತ್ಯಂತ ದುಃಖದಿಂದ ಮಾತನಾಡುತ್ತಿದ್ದೇನೆ. ಕೆಪಿಸಿಸಿ ಅಧ್ಯಕ್ಷನಾಗಿ ಮಾತಾಡುತ್ತಿಲ್ಲ.‘

ಸಾಮಾನ್ಯನಾಗಿ ಮಾತನಾಡುತ್ತಿದ್ದೇನೆ. ಒಂದು ತಿಂಗಳಿನಿಂದ ರಾಜ್ಯ ಲಾಕ್‌ಡೌನ್ ಆಗಿದೆ. ಇವತ್ತಿನವರೆಗೂ ನಾನು ಮಾತನಾಡಬಾರದು ಎಂದುಕೊಂಡಿದ್ದೆ. ಸರ್ಕಾರ ಕಣ್ಣು ತೆರೆಯುತ್ತದೆ, ಜನರನ್ನು ಕಾಪಾಡುತ್ತದೆ ಎಂದುಕೊಂಡಿದ್ದೆ. ಆದರೆ, ಸರ್ಕಾರ ಈ ವಿಷಯದಲ್ಲಿ ವಿಫಲವಾಗಿದೆ’ ಎಂದರು.

‘ಕೇಂದ್ರ– ರಾಜ್ಯ ಸರ್ಕಾರ ತೆಗೆದುಕೊಂಡ ತೀರ್ಮಾನಗಳನ್ನು ನಾವು ಒಪ್ಪಿಕೊಂಡಿದ್ದೇವೆ. ಅದಕ್ಕೆ ಬೆಂಬಲ ಕೂಡಾ ನೀಡಿದ್ದೇವೆ. ಜೀವ ಇದ್ದರೆ ಮಾತ್ರ ವ್ಯವಹಾರ, ರಾಜಕೀಯ. ಇದು ಯಾವುದೇ‌ ಜಾತಿ ಧರ್ಮಕ್ಕೆ ಬಂದಿರುವ ಕಾಯಿಲೆ ಅಲ್ಲ‘ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT