ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲದಿದ್ದರೆ 'ಚಾಲೆಂಜ್ ವೋಟ್' ಮಾಡಬಹುದಾ? 

Last Updated 4 ಮೇ 2019, 16:02 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭಾ ಚುನಾವಣೆಯ ಮೊದಲನೇ ಹಂತದ ಮತದಾನ ಏಪ್ರಿಲ್ 11 ಕ್ಕೆ ಆರಂಭವಾಗಲಿದೆ. ಈ ಹೊತ್ತಿನಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಮತದಾನದ ಅರಿವು ಮೂಡಿಸುವ ಸಂದೇಶಗಳು ಸಿಕ್ಕಾಪಟ್ಟೆ ಹರಿದಾಡುತ್ತಿವೆ.ಕೆಲವು ದಿನಗಳ ಹಿಂದೆಯಷ್ಟೇ ಚಾಲೆಂಜ್ ವೋಟ್ ಬಗ್ಗೆ ವಾಟ್ಸ್ಆ್ಯಪ್ ಸಂದೇಶವೊಂದು ವೈರಲ್ ಆಗಿತ್ತು.

'ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದೇ ಇದ್ದರೆ ನೀವು ಚಾಲೆಂಜ್ ವೋಟ್ ಮಾಡಬಹುದು' ಎಂಬ ಸಂದೇಶ ಅದಾಗಿತ್ತು. ಆದರೆ ಇದು ಸುಳ್ಳು!. ಅದೇ ಸಂದೇಶದಲ್ಲಿ ಟೆಂಡರ್ ವೋಟ್ ಬಗ್ಗೆಯೂ ಹೇಳಲಾಗಿದೆ.ಏನಿದು ಚಾಲೆಂಜ್ ವೋಟ್ ? ಟೆಂಡರ್ ವೋಟ್ ಅಂದರೆ ಏನು? ವೈರಲ್ ಆಗಿರುವ ಈ ವಾಟ್ಸ್ಆ್ಯಪ್ ಸಂದೇಶದಲ್ಲಿ ನಿಜ ಎಷ್ಟು? ಸುಳ್ಳು ಎಷ್ಟು? ಎಂಬುದರ ಬಗ್ಗೆ ಬೂಮ್‍ಲೈವ್ ಫ್ಯಾಕ್ಟ್‌ಚೆಕ್ ಮಾಡಿದೆ.

ವಾಟ್ಸ್ಆ್ಯಪ್ ಸಂದೇಶದಲ್ಲಿ ಏನಿದೆ?

* ನೀವು ಮತದಾನ ಮಾಡಲು ಮತಗಟ್ಟೆಗೆ ಹೋದಾಗ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದೇ ಇದ್ದರೆ ನಿಮ್ಮ ಆಧಾರ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿ ತೋರಿಸಿ ಸೆಕ್ಷನ್ 49A ಅಡಿಯಲ್ಲಿ ಚಾಲೆಂಜ್ ವೋಟ್ ಮೂಲಕ ನೀವು ಮತ ಚಲಾಯಿಸಬಹುದು.

* ನಿಮ್ಮ ಮತವನ್ನು ಬೇರೆಯವರು ಚಲಾಯಿಸಿದ್ದರೆ ಟೆಂಡರ್ ವೋಟ್ ಮಾಡಲು ಅವಕಾಶ ಕೇಳಿ ನೀವು ಮತದಾನ ಮಾಡಬಹುದು.

* ಯಾವುದೇ ಒಂದು ಮತಗಟ್ಟೆಯಲ್ಲಿ ಶೇ.14ರಷ್ಟು ಟೆಂಡರ್ ವೋಟ್ ಚಲಾವಣೆ ಆದರೆ, ಆ ಮತಗಟ್ಟೆಯಲ್ಲಿ ಮರುಮತದಾನ ನಡೆಸಲಾಗುವುದು.
* ಮತದಾನದ ಹಕ್ಕುಗಳನ್ನು ತಿಳಿಸುವುದಕ್ಕಾಗಿ ಈ ಸಂದೇಶವನ್ನು ಎಲ್ಲ ಗ್ರೂಪ್ ಮತ್ತು ಗೆಳೆಯರಿಗೆ ಹಂಚಿ.

ಫ್ಯಾಕ್ಟ್ ಚೆಕ್
ಈ ಬಗ್ಗೆ ಫ್ಯಾಕ್ಟ್ ಚೆಕ್ ಮಾಡಿದ ಬೂಮ್‍ಲೈವ್ ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳುವುದಕ್ಕಾಗಿ ವಿ ಸಿಟಿಜನ್ ಆ್ಯಕ್ಷನ್ ನೆಟ್ವರ್ಕ್ (VCAN)ನ್ನು ಸಂಪರ್ಕಿಸಿದೆ.VCAN ಭಾರತದ ಚುನಾವಣಾ ಆಯೋಗದ (ECI)ನಾಗರಿಕ ಸಮಾಜ ಸಂಸ್ಥೆಯ ಅಂಗವಾಗಿದೆ.ಈ ಸಂಸ್ಥೆ ಮಹಾರಾಷ್ಟ್ರದ ಮುಖ್ಯ ಚುನಾವಣಾಧಿಕಾರಿಯವರನ್ನು ಸಂಪರ್ಕಿಸಿ ಈ ವೈರಲ್ ಸಂದೇಶದಲ್ಲಿರುವ ಸತ್ಯ ಸಂಗತಿ ಏನೆಂದು ಕೇಳಿದೆ.

VCAN ಕೇಳಿದ ಪ್ರಶ್ನೆಗೆ ಮಹಾರಾಷ್ಟ್ರದ ಮುಖ್ಯಚುನಾವಣಾ ಅಧಿಕಾರಿಯವರ ಕಚೇರಿಯಿಂದ ಉತ್ತರ ಬಂದಿದೆ.

ವಾಟ್ಸ್ಆ್ಯಪ್ ಸಂದೇಶದಲ್ಲಿರುವ ವಿಷಯ 1: ನೀವು ಮತದಾನ ಮಾಡಲು ಮತಗಟ್ಟೆಗೆ ಹೋದಾಗ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದೇ ಇದ್ದರೆ ನಿಮ್ಮ ಆಧಾರ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿ ತೋರಿಸಿ ಸೆಕ್ಷನ್ 49A ಅಡಿಯಲ್ಲಿ ಚಾಲೆಂಜ್ ವೋಟ್ ಮೂಲಕ ನೀವು ಮತ ಚಲಾಯಿಸಬಹುದು.ಆದರೆ ಇದು ಸುಳ್ಳು.

ನಿಜ ಏನು?: ಮುಖ್ಯಚುನಾವಣಾ ಅಧಿಕಾರಿಯವರಿಂದ VCANಗೆ ಸಿಕ್ಕಿದ ಉತ್ತರದ ಪ್ರಕಾರ, ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಯಾರೊಬ್ಬರಿಗೂ ಮತದಾನ ಮಾಡಲು ಸಾಧ್ಯವಿಲ್ಲ.

ಫೆಬ್ರುವರಿ 2019ರಲ್ಲಿ ಚುನಾವಣಾ ಆಯೋಗವು ಪೋಲಿಂಗ್ ಏಜೆಂಟ್‍ಗಳಿಗೆ ನೀಡಿದ ಕೈಪಿಡಿಯನ್ನು ಓದಿದರೆ ಅದರಲ್ಲಿ ಈ ರೀತಿ ಇದೆ.ಮತದಾರರ ಪಟ್ಟಿಯಲ್ಲಿ ಹೆಸರಿರುವ ಮತದಾರರನ್ನು ಮತಗಟ್ಟೆಯ ಅಧಿಕಾರಿ (ಪೋಲಿಂಗ್ ಆಫೀಸರ್) ಗುರುತು ಹಿಡಿಯಬೇಕು.

ಚುನಾವಣಾ ನಿಯಮಗಳ ಸಂಹಿತೆ 1961ರ ಪ್ರಕಾರ, ಸೆಕ್ಷನ್ 49Aಯಲ್ಲಿ ವಿದ್ಯುನ್ಮಾನ ಮತಯಂತ್ರದ ವಿನ್ಯಾಸ ಎಂಬ ಶೀರ್ಷಿಕೆ ಇದೆ.

ವೈರಲ್ ಸಂದೇಶದಲ್ಲಿ ಹೇಳಿದಂತೆ ಈ ಸೆಕ್ಷನ್ 49A ಚಾಲೆಂಜ್ ವೋಟ್ ಬಗ್ಗೆ ಅಲ್ಲ.ಈ ಸೆಕ್ಷನ್‍ನಲ್ಲಿ ಹೇಳಿರುವುದೇನೆಂದರೆ ಎಲ್ಲ ವಿದ್ಯುನ್ಮಾನ ಮತಯಂತ್ರಗಳಿಗೆ ಕಂಟ್ರೋಲ್ ಯುನಿಟ್ ಮತ್ತು ಬ್ಯಾಲೆಂಟಿಗ್ ಯುನಿಟ್ ಇರಬೇಕು. ಇಂಥಾ ವಿನ್ಯಾಸಗಳು ಚುನಾವಣಾ ಆಯೋಗದಿಂದ ಅಂಗೀಕರಿಸಿರಬೇಕು.

ಏನಿದು ಚಾಲೆಂಜ್ ವೋಟ್?

ಅಂದ ಹಾಗೆ ಚಾಲೆಂಜ್ ವೋಟ್ ಎಂದು ಹೇಳುವುದೇ ತಪ್ಪು, ಅದು ಚಾಲೆಂಜ್ಡ್ ವೋಟ್. ಸೆಕ್ಷನ್ 49J ಪ್ರಕಾರ ಮತದಾರರನ್ನು ಗುರುತು ಹಿಡಿಯುವಲ್ಲಿ ಪೊಲೀಂಗ್ ಏಜೆಂಟ್‍ಗೆ ಸಂದೇಹ ಬಂದರೆ, ಆ ವೋಟ್‍ನ್ನು ಚಾಲೆಂಜ್ ಮಾಡಿ ಚುನಾವಣೆಯ ಮತಗಟ್ಟೆ ಅಧಿಕಾರಿ (presiding officer) ಬಳಿ ಕರೆದೊಯ್ಯಬೇಕು.ಅಲ್ಲಿ ಅವರು ಈ ಬಗ್ಗೆ ತನಿಖೆ ನಡೆಸುತ್ತಾರೆ.ಇಲ್ಲಿ ಪೋಲಿಂಗ್ ಏಜೆಂಟ್ ಮತದಾರರ ಗುರುತು ಬಗ್ಗೆ ಸಂದೇಹ ವ್ಯಕ್ತ ಪಡಿಸಿ, ಚಾಲೆಂಜ್ ಮಾಡಿದರೆ ಈ ಬಗ್ಗೆಚುನಾವಣೆಯ ಮತಗಟ್ಟೆ ಅಧಿಕಾರಿ ಈ ಕುರಿತು ತನಿಖೆ ನಡೆಸುತ್ತಾರೆ. ಚಾಲೆಂಜ್ ವೋಟ್ ಮಾಡಿದ ಮತದಾರನ ಹೆಸರು ಮತ್ತು ವಿಳಾಸವನ್ನು Form 14ನಲ್ಲಿರುವ ಚಾಲೆಂಜ್ಡ್ ಮತಗಳ ಪಟ್ಟಿಯಲ್ಲಿರಿಸಲಾಗುವುದು.

ಗಮನಿಸಿ:ಚಾಲೆಂಜ್ಡ್ ವೋಟ್ ಅಂದರೆಮತದಾರರ ಪಟ್ಟಿಯಲ್ಲಿ ಹೆಸರಿಲ್ಲದೇ ಇದ್ದರೆ ಆಧಾರ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿ ತೋರಿಸಿ ಮತದಾನ ಮಾಡಬಹುದು ಎಂದಲ್ಲ.ವಾಟ್ಸ್ಆ್ಯಪ್ ಸಂದೇಶದಲ್ಲಿ ಹೇಳಿರುವಂತೆ 49Aಯಲ್ಲಿ ಚಾಲೆಂಜ್ ವೋಟ್ ಬಗ್ಗೆ ಯಾವುದೇ ಉಲ್ಲೇಖವಿಲ್ಲ

ವಿಷಯ 2: ನಿಮ್ಮ ಮತವನ್ನು ಬೇರೆಯವರು ಚಲಾಯಿಸಿದ್ದರೆ ಟೆಂಡರ್ ವೋಟ್ ಮಾಡಲು ಅವಕಾಶ ಕೇಳಿ ನೀವು ಮತದಾನ ಮಾಡಬಹುದು. ವಾಟ್ಸ್ಆ್ಯಪ್‌ನಲ್ಲಿ ಹೇಳಿರುವ ಈ ವಿಷಯ ನಿಜ.

ಪ್ರಕ್ರಿಯೆ ಹೇಗೆ?

ನಿಮಗಿಂತ ಮುಂಚೆಯೇ ಬೇರೆ ಯಾರಾದರೂ ನಿಮ್ಮ ಮತ ಚಲಾವಣೆ ಮಾಡಿದ್ದರೆ, ಟೆಂಡರ್ ವೋಟ್‍ಗೆ ಅವಕಾಶ ಕೊಡಿ ಎಂದು ಕೇಳುವ ಮೂಲಕ ನೀವು ನಿಮ್ಮ ಮತ ಚಲಾವಣೆ ಮಾಡಬಹುದು. ಚುನಾವಣಾ ಆಯೋಗದ ಕೈಪಿಡಿಯಲ್ಲಿಯೂ ಈ ವಿಷಯ ಇದೆ.ನಿಮ್ಮ ಮತವನ್ನು ನಿಮ್ಮದೇ ಹೆಸರಿನಲ್ಲಿ ಬೇರೊಬ್ಬ ವ್ಯಕ್ತಿ ನಿಮಗಿಂತ ಮುಂಚೆ ಮತ ಚಲಾವಣೆ ಮಾಡಿದ್ದರೆ Presiding officer ನಿಮಗೆ ಬ್ಯಾಲೆಟ್ ಪೇಪರ್ ಮೂಲಕ ಮತ ಚಲಾಯಿಸಲುಅವಕಾಶ ಕೊಡಬೇಕು.

ವಿಷಯ 3: ಯಾವುದೇ ಒಂದು ಮತಗಟ್ಟೆಯಲ್ಲಿ ಶೇ.14ರಷ್ಟು ಟೆಂಡರ್ ವೋಟ್ ಚಲಾವಣೆ ಆದರೆಆ ಮತಗಟ್ಟೆಯಲ್ಲಿ ಮರುಮತದಾನ ನಡೆಸಲಾಗುವುದು. ಇದು ಸುಳ್ಳು!

ಚಾಲೆಂಜ್ ವೋಟ್ ಇಷ್ಟಿದ್ದರೆ ಅಲ್ಲಿ ಮರುಮತದಾನ ನಡೆಸಬಹುದು ಎಂಬ ಯಾವುದೇ ಕಾನೂನು ಇಲ್ಲ.ಇಷ್ಟೊಂದು ಟೆಂಡರ್ ವೋಟ್‍ಗಳು ಬರುವುದೇ ಅಪರೂಪ.ಒಂದೊಮ್ಮೆ ಬಂದರೂ, ಮರುಮತದಾನ ಏರ್ಪಡಿಸುವ ಯಾವುದೇ ಕಾನೂನು ಇಲ್ಲ.
ಆದಾಗ್ಯೂ, ಕೈಪಿಡಿಯಲ್ಲಿ ಇಂಥದೊಂದು ವಿಷಯ ಇಲ್ಲ.

ಚುನಾವಣಾ ಆಯೋಗದ ಕೈ ಪಿಡಿ ಓದಲು ಇಲ್ಲಿ ಕ್ಲಿಕ್ ಮಾಡಿ.

ವಾಟ್ಸ್‌‍ಆ್ಯಪ್ ಸಂದೇಶ ಸುಳ್ಳು
ಚುನಾವಣಾ ಆಯೋಗದ ಅಧಿಕೃತ ವಕ್ತಾರೆ ಶೆಫಾಲಿ ಶರಣ್ ಅವರನ್ನು ಬೂಮ್ ಟೀಂ ಸಂಪರ್ಕಿಸಿದಾಗ ವಾಟ್ಸ್ಆ್ಯಪ್ ಸಂದೇಶ ಸುಳ್ಳು ಎಂದಿದ್ದಾರೆ. ನಿಮ್ಮ ಮತವನ್ನು ಬೇರೆ ಯಾರದಾರೂ ಚಲಾವಣೆ ಮಾಡಿದ್ದರೆ ನೀವು ಟೆಂಡರ್ ವೋಟ್ ಮಾಡಬಹುದು.ಆದರೆ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದೇ ಇದ್ದರೆ ಮತದಾನ ಮಾಡಲು ಸಾಧ್ಯವಿಲ್ಲ ಎಂದು ಶೆಫಾಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT