ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ | ದೇಶದ ಶೇ 55.1ರಷ್ಟು ಕುಟುಂಬಗಳಿಗೆ ದಿನಕ್ಕೆ ಎರಡು ಹೊತ್ತು ಊಟವೇ ಗತಿ

‘ವರ್ಲ್ಡ್ ವಿಷನ್ ಏಷ್ಯಾ ಪೆಸಿಫಿಕ್’ ವರದಿಯಲ್ಲಿ ಉಲ್ಲೇಖ: ಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮ
Last Updated 19 ಜುಲೈ 2020, 20:10 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್–19 ಸಾಂಕ್ರಾಮಿಕ ಪಿಡುಗು ವ್ಯಾಪಿಸಿರುವ ವೇಳೆ ದೇಶದ ಶೇ 55.1ರಷ್ಟು ಕುಟುಂಬಗಳು ದಿನದ ಎರಡು ಹೊತ್ತಿನ ಊಟವನ್ನು ಗಳಿಸಲಷ್ಟೇ ಶಕ್ತವಾಗಿದ್ದವು ಎಂದು ಸಮೀಕ್ಷೆಯೊಂದು ತಿಳಿಸಿದೆ. ಆಹಾರ ಪದಾರ್ಥ, ದವಸ ಧಾನ್ಯಗಳು ಎಲ್ಲರಿಗೂ ಸುಲಭವಾಗಿ ಲಭ್ಯವಾಗುತ್ತಿರಲಿಲ್ಲ ಎಂಬುದನ್ನು ಇದು ತೋರಿಸುತ್ತದೆ.

‘ವರ್ಲ್ಡ್ ವಿಷನ್ ಏಷ್ಯಾಪೆಸಿಫಿಕ್’ ಎಂಬಮಕ್ಕಳ ಹಕ್ಕುಗಳ ಕುರಿತಾದ ಸರ್ಕಾರೇತರ ಸಂಸ್ಥೆ ಪ್ರಕಟಿಸಿರುವ ‘ಅನ್‌ಮಾಸ್ಕಿಂಗ್ ದಿ ಇಂಪ್ಯಾಕ್ಟ್‌ ಆಫ್ ಕೋವಿಡ್–19 ಆನ್ ಏಷ್ಯಾಸ್ ಮೋಸ್ಟ್ ವಲ್ನರಬಲ್ ಚಿಲ್ಡ್ರನ್’ ವರದಿಯಲ್ಲಿ ಈ ಅಂಶ ಪ್ರಸ್ತಾಪವಾಗಿದೆ.

‘ಕೋವಿಡ್‌ನಿಂದ ಭಾರತೀಯ ಕುಟುಂಬಗಳ ಮೇಲೆ ಆರ್ಥಿಕ, ಮನೋವೈಜ್ಞಾನಿಕ ಹಾಗೂ ದೈಹಿಕ ಒತ್ತಡ ಉಂಟಾಗಿದ್ದು, ಇದು ಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮವನ್ನೂ ಬೀರಿದೆ. ಮಕ್ಕಳಿಗೆ ಆಹಾರ, ಪೋಷಣೆ, ಆರೋಗ್ಯ ಸೌಲಭ್ಯ, ಅಗತ್ಯ ಔಷಧಿ, ನೈರ್ಮಲ್ಯದ ಸವಲತ್ತು ಸಿಗುವುದುಕಷ್ಟವಾಗಿದೆ’ ಎಂದು ವರದಿ ಅಭಿಪ್ರಾಯಪಟ್ಟಿದೆ. ಮಕ್ಕಳ ರಕ್ಷಣೆ ಮತ್ತು ಸುರಕ್ಷತೆ ದೃಷ್ಟಿಯಿಂದಲೂ ಇದನ್ನು ನೋಡಬೇಕಿದೆ ಎಂದು ವರದಿ ಹೇಳಿದೆ.

ಶೇ 60ರಷ್ಟು ಕುಟುಂಬಗಳ ಜೀವನವು ಕೋವಿಡ್‌ನಿಂದ ತೀವ್ರವಾಗಿ ಬಾಧಿತವಾಗಿದೆ. ಸರ್ಕಾರ ಘೋಷಿಸಿದ್ದ ಲಾಕ್‌ಡೌನ್‌ನಿಂದ ನಗರ ಮತ್ತು ಗ್ರಾಮೀಣ ಪ್ರದೇಶದ ದಿನಗೂಲಿ ಕಾರ್ಮಿಕರ ಜೀವನೋಪಾಯಕ್ಕೆ ತೀವ್ರ ಅಡಚಣೆ ಉಂಟಾಯಿತು ಎಂದು ವರದಿ ಅಭಿಪ್ರಾಯಪಟ್ಟಿದೆ. ಸಮೀಕ್ಷೆಯಲ್ಲಿ ಭಾಗಿಯಾಗಿದ್ದವರ ಪೈಕಿ ಹೆಚ್ಚಿನವರು ದಿನಗೂಲಿ ಕಾರ್ಮಿಕರಾಗಿದ್ದರು.

ಏಷ್ಯಾದ ಇತರ ದೇಶಗಳಾದ ಬಾಂಗ್ಲಾದೇಶ, ಇಂಡೊನೇಷ್ಯಾ, ಮಂಗೋಲಿಯಾ, ಮ್ಯಾನ್ಮಾರ್, ನೇಪಾಳ, ಫಿಲಿಪ್ಪೀನ್ಸ್ ಮತ್ತು ಶ್ರೀಲಂಕಾದ ಪರಿಸ್ಥಿತಿಯನ್ನೂ ವರದಿ ಒಳಗೊಂಡಿದೆ.

ಅಂಕಿ–ಅಂಶಗಳು

67% – ಉದ್ಯೋಗ ನಷ್ಟ ಮತ್ತು ಆದಾಯ ಖೋತಾ ಆಗಿದೆ ಎಂದವರ ಪ್ರಮಾಣ

40% – ಜನರು ನೈರ್ಮಲ್ಯ ಸೌಲಭ್ಯಗಳನ್ನು ಯಾವಾಗಲಾದರೊಮ್ಮೆ ಮಾತ್ರ ಬಳಸುತ್ತಿದ್ದರು

40% – ಮಕ್ಕಳು ಕೋವಿಡ್ ಪರಿಸ್ಥಿತಿಯಿಂದಾಗಿ ಒತ್ತಡಕ್ಕೆ ಒಳಗಾಗಿದ್ದಾರೆ

ಎಲ್ಲೆಲ್ಲಿ ಅಧ್ಯಯನ

* 24 ರಾಜ್ಯಗಳು, 2 ಕೇಂದ್ರಾಡಳಿತ ಪ್ರದೇಶಗಳ119 ಜಿಲ್ಲೆಗಳು (ದೆಹಲಿ, ಜಮ್ಮು ಕಾಶ್ಮೀರ ಸೇರಿ)

*ಅಧ್ಯಯನದ ಅವಧಿ:ಏಪ್ರಿಲ್ 1ರಿಂದ ಮೇ 15

*ಸಂದರ್ಶಿಸಲಾದ ಕುಟುಂಬಗಳ ಸಂಖ್ಯೆ:5,568

ವರದಿಯ ಪ್ರಮುಖ ಅಂಶಗಳು

*ಸಾಕಷ್ಟು ಪ್ರಮಾಣದ ನೀರು ಹಾಗೂ ನೈರ್ಮಲ್ಯ ದೊಡ್ಡ ಸವಾಲಾಗಿಯೇ ಉಳಿದಿವೆ

*ಇದು ಅಪೌಷ್ಟಿಕತೆ ಮತ್ತು ಕೋವಿಡ್ ಸೇರಿದಂತೆ ಇತರೆ ರೋಗ ಹರಡಲು ಕಾರಣ ಆಗಬಹುದು

*ಆದಾಯ ಖೋತಾ, ಶಾಲಾ ಕಲಿಕೆ ನಷ್ಟ, ಮಕ್ಕಳ ವರ್ತನೆಗಳಲ್ಲಿ ಬದಲಾವಣೆ, ಕ್ವಾರಂಟೈನ್ ನಿಯಮಗಳು ಕುಟುಂಬಗಳ ಮೇಲಿನ ಒತ್ತಡ ಹೆಚ್ಚಿಸಿವೆ

*ಪರಿಸ್ಥಿತಿಯು ಮಕ್ಕಳ ಮೇಲಿನ ದೌರ್ಜನ್ಯ ಹಾಗೂ ನಿಂದನೆಗಳಿಗೂ ಕಾರಣವಾಗಿದೆ

ಶಿಫಾರಸುಗಳು

*ಅಲ್ಪಾವಧಿಯಲ್ಲಿ (2020ರ ಕೊನೆವರೆಗೆ), ಆಹಾರ, ಹಣ ಪೂರೈಕೆ ಮೂಲಕ ಸಾಮಾಜಿಕ ಸುರಕ್ಷತಾ ಕ್ರಮಗಳನ್ನು ಹೆಚ್ಚಿಸಬೇಕು.ಸರ್ಕಾರದ ಸಾಮಾಜಿಕ ನೆರವು ಯೋಜನೆಗಳಲ್ಲಿ ಫಲಾನುಭವಿಗಳನ್ನು ಗುರುತಿಸಬೇಕು

*ದೀರ್ಘಾವಧಿಯಲ್ಲಿ (2021–2022), ಸಾಮಾಜಿಕ ನೆರವಿಗಾಗಿ ಸರ್ಕಾರದ ಸಂಪನ್ಮೂಲಗಳನ್ನು ಹೆಚ್ಚಿಸುವುದು, ಮಕ್ಕಳ ಯೋಗಕ್ಷೇಮಕ್ಕಾಗಿ ಬಹುವಲಯದ ಯೋಜನೆ ರೂಪಿಸುವುದು, ಮಹಿಳಾ ಸಬಲೀಕರಣ ಮತ್ತು ದುರ್ಬಲ ವರ್ಗದ ಜನರಿಗೆ ಉತ್ತೇಜನ ಸೇರಿದಂತೆ ಜೀವನೋಪಾಯ ಲಭ್ಯತೆಯನ್ನು ಹೆಚ್ಚಿಸಬೇಕು

ಮಹಿಳೆ–ಮಕ್ಕಳಿಗೆ ಹೆಚ್ಚು ತೊಂದರೆ...

ಯಾವುದೇ ಸಂಕಷ್ಟದ ಸಮಯದಲ್ಲಿ ಮಹಿಳೆ ಮತ್ತು ಮಕ್ಕಳು ಹೆಚ್ಚು ತೊಂದರೆಗೆ ಸಿಲುಕಿಕೊಳ್ಳುತ್ತಾರೆ. ಕೋವಿಡ್ ಇದಕ್ಕೆ ಹೊರತಾಗಿಲ್ಲ. ಬಡವರು ಮತ್ತು ಮಕ್ಕಳಿಗೆ ಇದು ಅತಿ ಹೆಚ್ಚು ಹಾನಿ ಉಂಟುಮಾಡಿದೆ. ಅಸಮರ್ಪಕ ವೈದ್ಯಕೀಯ ಸೌಲಭ್ಯ, ಹಿಂಸೆ–ಶೋಷಣೆಯ ಅಪಾಯ, ಶಿಕ್ಷಣಕ್ಕೆ ಅತ್ಯಂತ ಕಡಿಮೆ ಅವಕಾಶಗಳು, ಕುಟುಂಬಗಳ ಆರ್ಥಿಕ ಸ್ಥಿತಿ ಕುಸಿತದಿಂದಾಗಿ ಪೌಷ್ಟಿಕ ಆಹಾರ ಸೇವನೆಯಲ್ಲಿ ಹಿನ್ನಡೆಯಂತಹ ಸಮಸ್ಯೆಗಳನ್ನು ಮಕ್ಕಳು ಎದುರಿಸಿವೆ

– ಚೆರಿಯನ್ ಥಾಮಸ್,ಪ್ರಾದೇಶಿಕ ಅಧಿಕಾರಿ, ವರ್ಲ್ಡ್ ವಿಷನ್ ಇಂಟರ್‌ನ್ಯಾಷನಲ್, ದಕ್ಷಿಣ ಏಷ್ಯಾ ಪೆಸಿಫಿಕ್ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT