ಮಂಗಳವಾರ, ಆಗಸ್ಟ್ 11, 2020
26 °C

ಸಿಬಿಎಸ್‍ಇ: 12ನೇ ತರಗತಿ ಫಲಿತಾಂಶ ಶೇ 88.78 ವಿದ್ಯಾರ್ಥಿಗಳು ತೇರ್ಗಡೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೇಂದ್ರ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು (ಸಿಬಿಎಸ್‍ಇ) ಸೋಮವಾರ 12ನೇ ತರಗತಿ ಫಲಿತಾಂಶವನ್ನು ಪ್ರಕಟಿಸಿದ್ದು, ಶೇ 88.78ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ತೇರ್ಗಡೆ ಪ್ರಮಾಣ ಕಳೆದ ವರ್ಷಕ್ಕಿಂತ ಶೇ 5.38ರಷ್ಟು ಏರಿಕೆಯಾಗಿದೆ.

ಕೋವಿಡ್‍-19 ಪರಿಸ್ಥಿತಿ ಹಿನ್ನೆಲೆಯಲ್ಲಿ ಬದಲಾದ ಮೌಲ್ಯಮಾಪನ ಕ್ರಮಗಳಿಂದಾಗಿ ಸಿಬಿಎಸ್‍ಇ ಈ ಸಾಲಿನಲ್ಲಿ ಯಾವುದೇ ಮೆರಿಟ್‍ ಪಟ್ಟಿಯನ್ನು ಪ್ರಕಟಿಸಿಲ್ಲ. ಅಲ್ಲದೆ, ‘ಅನುತ್ತೀರ್ಣ’ ಪದಕ್ಕೆ ಬದಲಾಗಿ ‘ಪುನರಾವರ್ತನೆ ಅಗತ್ಯ’ ಎಂಬ ಪದವನ್ನು ಬಳಸಲಿದೆ.

ವಿದ್ಯಾರ್ಥಿಗಳಿಗೆ ನೀಡುವ ಫಲಿತಾಂಶ ಹಾಗೂ ಮಂಡಳಿಯ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಿರುವ ಫಲಿತಾಂಶದಲ್ಲಿ ಈ ಬಾರಿ ಅನುತ್ತೀರ್ಣ ಪದ ಬಳಕೆ ಆಗುವುದಿಲ್ಲ ಎಂದು ಮಂಡಳಿ ತಿಳಿಸಿದೆ.

ಬಾಲಕಿಯರೇ ಮುಂದು: ಬಾಲಕಿಯರ ತೇರ್ಗಡೆ ಪ್ರಮಾಣ ಬಾಲಕರಿಗಿಂತ ಶೇ 5.96ರಷ್ಟು ಹೆಚ್ಚಿದೆ. ಬಾಲಕಿಯರ ಉತ್ತೀರ್ಣ ಪ್ರಮಾಣ ಶೇ 92.15 ಇದ್ದರೆ, ಬಾಲಕರ ಉತ್ತೀರ್ಣ ಪ್ರಮಾಣ ಶೇ 86.19ರಷ್ಟಿದೆ. ತೃತೀಯ ಲಿಂಗಿಗಳ ತೇರ್ಗಡೆ ಪ್ರಮಾಣ ಶೇ 66.67ರಷ್ಟಿದೆ.

ಕಳೆದ ಶೈಕ್ಷಣಿಕ ವರ್ಷದಲ್ಲಿ ಸಿಬಿಎಸ್ಇ ಉತ್ತೀರ್ಣ ಪ್ರಮಾಣ ಶೇ 83.40ರಷ್ಟು ಇದ್ದರೆ, ಈ ವರ್ಷ ಶೇ 88.78 ಆಗಿದೆ. ಶೇ 5.38ರಷ್ಟು ಪ್ರಗತಿ ಕಂಡುಬಂದಿದೆ. 

ತಿರುವನಂತಪುರ ವಲಯ ಅತ್ಯಧಿಕ ಅಂದರೆ ಶೇ 97.67ರಷ್ಟು, ಪಟ್ನಾ ವಲಯವು ಕನಿಷ್ಠ ಅಂದರೆ ಶೇ 74.57ರಷ್ಟು ಫಲಿತಾಂಶ ಪಡೆದಿದೆ. 400 ವಿದ್ಯಾರ್ಥಿಗಳ ಫಲಿತಾಂಶವನ್ನು ನಂತರ ಪ್ರಕಟಿಸಲಾಗುವುದು ಎಂದು ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದರು.

ಕೋವಿಡ್‍ ಹಿನ್ನೆಲೆಯಲ್ಲಿ ಹೊಸ ಮೌಲ್ಯಮಾಪನ ಯೋಜನೆಯಂತೆ ಫಲಿತಾಂಶ ನಿರ್ಧರಿಸಲಾಗಿದೆ. ವಿದ್ಯಾರ್ಥಿಗಳನ್ನು ನಾಲ್ಕು ವರ್ಗಗಳಲ್ಲಿ ಮಂಡಳಿ ಗುರುತಿಸಿದೆ. ಎಲ್ಲ ವಿಷಯಗಳ ಪರೀಕ್ಷೆಗೆ ಹಾಜರಾದವರು, ಮೂರಕ್ಕಿಂತ ಹೆಚ್ಚು ವಿಷಯಗಳಿಗೆ ಹಾಜರಾದವರು, ಮೂರು ವಿಷಯಗಳಿಗಷ್ಟೇ ಹಾಜರಾದವರು, ಗಲಭೆಯಿಂದಾಗಿ ಪರೀಕ್ಷೆ ನಡೆಯದ ದೆಹಲಿಯ ಕೆಲ ಭಾಗದ ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ. ಕೊನೆಯ ಮೂರು ವರ್ಗಗಳಿಗೆ ಅವರು ಹಾಜರಾಗಿದ್ದ ವಿಷಯಗಳು, ಆಂತರಿಕ ಮೌಲ್ಯಮಾಪನ ಮತ್ತು ಪ್ರಾಯೋಗಿಕ ತರಬೇತಿ ಯೋಜನೆಯಲ್ಲಿನ ಸಾಧನೆ ಆಧರಿಸಿ ಫಲಿತಾಂಶವನ್ನು ನಿರ್ಧರಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು