ಬುಧವಾರ, ಆಗಸ್ಟ್ 12, 2020
27 °C

ತೆಲಂಗಾಣ: ಸಚಿವಾಲಯ ಕಟ್ಟಡ ಕೆಡಹುವ ಕೆಲಸ ಆರಂಭ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಹೈದರಾಬಾದ್‌: ಹಲವು ಸರ್ಕಾರಗಳು ಹಾಗೂ ನಾಯಕರ ಏಳು ಬೀಳುಗಳನ್ನು ಕಂಡಿರುವ, ತೆಲಂಗಾಣ ಸಚಿವಾಲಯದ ಹಳೆದ ಕಟ್ಟಡವನ್ನು ಕೆಡಹುವ ಕಾರ್ಯಕ್ಕೆ ಮುಖ್ಯಮಂತ್ರಿ ಚಂದ್ರಶೇಖರ ರಾವ್‌ ನೇತೃತ್ವದ ಸರ್ಕಾರವು ಮಂಗಳವಾರ ಮುಂಜಾನೆ ಚಾಲನೆ ನೀಡಿದೆ.

ಕಟ್ಟಡವನ್ನು ಕೆಡಹುವ ಸರ್ಕಾರದ ತೀರ್ಮಾನವನ್ನು ವಿರೋಧಿಸಿ ಹಿಂದೆ ಹಲವರು ತೆಲಂಗಾಣ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಿದ್ದರು. ಇವೆಲ್ಲವನ್ನೂ ಇತ್ತೀಚೆಗೆ ಕೋರ್ಟ್‌ ರದ್ದುಪಡಿಸಿತ್ತು. ಇದಾಗುತ್ತಿದ್ದಂತೆ, ಕಟ್ಟಡವನ್ನು ಕೆಡಹುವ ಕಾರ್ಯಕ್ಕೆ ಸರ್ಕಾರ ಚಾಲನೆ ನೀಡಿದೆ. ಇದೇ ಜಾಗದಲ್ಲಿ ಸುಮಾರು ₹ 400 ಕೋಟಿ ವೆಚ್ಚದಲ್ಲಿ ಒಂದು ಲಕ್ಷ ಚದರ ಅಡಿ ವಿಸ್ತಾರದ ಸುಸಜ್ಜಿತವಾದ ಹೊಸ ಕಟ್ಟಡವನ್ನು ನಿರ್ಮಿಸಲು ಸರ್ಕಾರ ಉದ್ದೇಶಿಸಿದೆ.

ಉದ್ದೇಶಿತ ಹೊಸ ಕಟ್ಟಡದ ನಕ್ಷೆಯನ್ನು ಮುಖ್ಯಮಂತ್ರಿ ಕಚೇರಿಯು ಮಂಗಳವಾರ ಬಿಡುಗಡೆ ಮಾಡಿದೆ. ‘ಮುಖ್ಯಮಂತ್ರಿ ಚಂದ್ರಶೇಖರ ರಾವ್‌ ಅವರು ಈ ನಕ್ಷೆಗೆ ಒಪ್ಪಿಗೆ ನೀಡುತ್ತಾರೆ ಎಂಬ ವಿಶ್ವಾಸವಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ. ಹೊಸ ಕಟ್ಟಡವನ್ನು ಸಂಪೂರ್ಣವಾಗಿ ವಾಸ್ತು ಪ್ರಕಾರ ನಿರ್ಮಿಸಲಾಗುತ್ತದೆ ಎಂದು ಸರ್ಕಾರಿ ಮೂಲಗಳು ಹೇಳಿವೆ.

ಕಳೆದ ವರ್ಷ ಜೂನ್‌ 27ರಂದು ರಾವ್‌ ಅವರು ಹೊಸ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿದ್ದರು. ಕೆಲವರು ಹಳೆಯ ಕಟ್ಟಡ ಕೆಡಹುವುದನ್ನು ವಿರೋಧಿಸಿ ಕೋರ್ಟ್‌ ಮೊರೆ ಹೋಗಿದ್ದರು. ಇದರಿಂದ ಸರ್ಕಾರದ ಮೇಲೆ ಅನಗತ್ಯ ಆರ್ಥಿಕ ಹೊರೆ ಬೀಳುತ್ತದೆ ಎಂದು ಅವರು ವಾದಿಸಿದ್ದರು.

ಈಗಿರುವ ಕಟ್ಟಡವನ್ನು ಕೆಡವಿ, ಹೊಸ ಕಟ್ಟಡ ನಿರ್ಮಿಸುವುದಕ್ಕೆ ವಿರೋಧಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ‘ಟಿಆರ್‌ಎಸ್‌ನ ಈ ‘ದುಷ್ಕೃತ್ಯ’ವನ್ನು ನಾವು ಖಂಡಿಸುತ್ತೇವೆ. ಕೋವಿಡ್‌ ಪಿಡುಗು ಕಾಡುತ್ತಿರುವ ಸಂದರ್ಭದಲ್ಲೂ ಸ್ವಪ್ರತಿಷ್ಠೆಗಾಗಿ ಕೆಸಿಆರ್‌ ಅವರು ಈ ಕಾರ್ಯ ಆರಂಭಿಸಿದ್ದಾರೆ. ದೇಶದ ಇತರ ಮುಖ್ಯಮಂತ್ರಿಗಳು ಕೋವಿಡ್‌ ಪೀಡಿತರ ಚಿಕಿತ್ಸೆಗಾಗಿ ಸೌಲಭ್ಯಗಳನ್ನು ನಿರ್ಮಿಸುತ್ತಿದ್ದರೆ, ತೆಲಂಗಾಣದ ಮುಖ್ಯಮಂತ್ರಿ ಈಗಿರುವ ಸೌಲಭ್ಯವನ್ನು ನಾಶಪಡಿಸುತ್ತಿದ್ದಾರೆ. ಈ ಕಟ್ಟಡವನ್ನು ಸರಳವಾಗಿ ಸಾವಿರಾರು ಹಾಸಿಗೆಗಳ ಕೋವಿಡ್‌ ಚಿಕಿತ್ಸಾ ಕೇಂದ್ರವಾಗಿ ಪರಿವರ್ತಿಸಬಹುದಾಗಿತ್ತು’ ಎಂದು ಬಿಜೆಪಿ ರಾಜ್ಯ ಘಟಕದ ವಕ್ತಾರ ಕೆ. ಕೃಷ್ಣಸಾಗರ ರಾವ್‌ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು