ಬುಧವಾರ, ಆಗಸ್ಟ್ 10, 2022
24 °C

‘ವೈಲ್ಡ್‌ಲೈಫ್‌ ಅವರ್‌ ಲೈಫ್‌ಬ್ಲಡ್‌’: ಪ್ಯಾರಿಸ್‌ ಸಿನಿಮೋತ್ಸವಕ್ಕೆ ನಾಮನಿರ್ದೇಶನ

ಪಿಟಿಐ Updated:

ಅಕ್ಷರ ಗಾತ್ರ : | |

ಇಟಾನಗರ: ಅರುಣಾಚಲ ಪ್ರದೇಶದ ಬುಡಕಟ್ಟು ಸಮುದಾಯವು ಅಪರೂಪದ ಹಕ್ಕಿಯ ಪ್ರಭೇದವೊಂದನ್ನು ಸಂರಕ್ಷಿಸುತ್ತಿರುವುದರ  ಕುರಿತು ನಿರ್ಮಿಸಿರುವ 29 ನಿಮಿಷಗಳ ಸಾಕ್ಷ್ಯಚಿತ್ರವು ಪ್ಯಾರಿಸ್‌ನಲ್ಲಿ ಈ ವರ್ಷದ ಡಿಸೆಂಬರ್‌ 1ರಿಂದ 7ರವರೆಗೆ ನಡೆಯಲಿರುವ ಪರಿಸರ ಸಿನಿಮೋತ್ಸವಕ್ಕೆ ನಾಮನಿರ್ದೇಶನಗೊಂಡಿದೆ. 

‘ವೈಲ್ಡ್‌ಲೈಫ್‌ ಅವರ್‌ ಲೈಫ್‌ಬ್ಲಡ್‌’ ಹೆಸರಿನ ಈ ಸಾಕ್ಷ್ಯಚಿತ್ರವನ್ನು ಮಾಜಿ ಶಾಸಕ, ಚಿತ್ರನಿರ್ಮಾಪಕ ನರೇಶ್‌ ಗ್ಲೊ ನಿರ್ದೇಶಿಸಿದ್ದು 15ನೇ ಅಂತರರಾಷ್ಟ್ರೀಯ ವನ್ಯಜೀವಿ ಸಂರಕ್ಷಣಾ ಸಾಕ್ಷ್ಯಚಿತ್ರೋತ್ಸವಕ್ಕೆ ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶನ ವಿಭಾಗಕ್ಕೆ ನಾಮನಿರ್ದೇಶನಗೊಂಡಿದೆ. ಜೊತೆಗೆ 2020 ಕ್ವಾಲಾಲಂಪುರ ಇಕೊ ಸಿನಿಮೋತ್ಸವದಲ್ಲೂ ಪ್ರದರ್ಶನಕ್ಕೆ ಆಯ್ಕೆಯಾಗಿದೆ. 

‘ಪ್ಯಾರಿಸ್‌ ಸಿನಿಮೋತ್ಸವದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾದ ಭಾರತದ ಏಕೈಕ ಸಾಕ್ಷ್ಯಚಿತ್ರ ಇದಾಗಿದೆ. ಕ್ವಾಲಾಲಂಪುರ ಸಿನಿಮೋತ್ಸವದಲ್ಲಿ ಪ್ರದರ್ಶನ ಕಾಣಲಿರುವ ಭಾರತದ ಮೂರು ಚಿತ್ರಗಳ ಪೈಕಿ ನಮ್ಮ ಚಿತ್ರವೂ ಒಂದಾಗಿದೆ’ ಎಂದು ಗ್ಲೊ ತಿಳಿಸಿದರು. ‘ಸಿಂಗ್‌ಚುಂಗ್‌ ಹಳ್ಳಿಯಲ್ಲಿ ಬುಗುನ್‌ ಬುಡಕಟ್ಟು ಸಮುದಾಯವು ಹೇಗೆ ವನ್ಯಜೀವಿಗಳ ಸಂರಕ್ಷಣೆ ಮಾಡುತ್ತಿದೆ ಎನ್ನುವುದರ ಕುರಿತ ನನ್ನ ಎರಡನೇ ಸಾಕ್ಷ್ಯಚಿತ್ರ ಇದಾಗಿದೆ. ಈ ಸಮುದಾಯ ವಾಸಿಸುವ ‘ಈಗಲ್‌ನೆಸ್ಟ್‌ ವನ್ಯಜೀವಿ ಅಭಯಾರಣ್ಯ’ ಪ್ರದೇಶದಲ್ಲಿ ಅಳಿವಿನಂಚಿನಲ್ಲಿ ಇರುವ ‘ಬುಗುನ್‌ ಲಿಯೊಸಿಚ್ಲ’ ಹಕ್ಕಿಗಳಿವೆ. ಈ ಸಮುದಾಯದಿಂದಲೇ ಹಕ್ಕಿಗಳಿಗೆ ಆ ಹೆಸರು ಬಂದಿದ್ದು, ಸಮುದಾಯ ಅನುಸರಿಸುತ್ತಿರುವ ಸಂರಕ್ಷಣಾ ವಿಧಾನಗಳನ್ನು ಈ ಸಾಕ್ಷ್ಯಚಿತ್ರದಲ್ಲಿ ಸೆರೆಹಿಡಿಯಲಾಗಿದೆ’ ಎಂದರು. 

1995ರಲ್ಲಿ ಪ್ರಾಣಿ ವಿಜ್ಞಾನಿಯಾದ ರಮಣ ಅಥ್ರೇಯ ಈ ಹಕ್ಕಿಗಳನ್ನು ಗುರುತಿಸಿದ್ದರು. ಇವುಗಳು ಈ ಅರುಣಾಚಲ ಪ್ರದೇಶದ ಈ ಅರಣ್ಯದಲ್ಲಷ್ಟೇ ಕಾಣಸಿಗುತ್ತವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು