ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿನ್ನಬೇಕೆನಿಸಿತು ಎಂದು ಚಾಕು ನುಂಗಿದ ಭೂಪ! ತಿಂಗಳ ನಂತರ ಲಿವರ್‌ನಲ್ಲಿ ಪತ್ತೆ

Last Updated 28 ಜುಲೈ 2020, 5:50 IST
ಅಕ್ಷರ ಗಾತ್ರ

ನವದೆಹಲಿ: ಸತತ ಮೂರು ಗಂಟೆ ಕಾಲ ಯಕೃತ್‌ ಶಸ್ತ್ರಚಿಕಿತ್ಸೆ ನಡೆಸಿದ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ ( ಏಮ್ಸ್‌) ಆಸ್ಪತ್ರೆ ವೈದ್ಯರ ತಂಡ, ವ್ಯಕ್ತಿಯೊಬ್ಬರ ಯಕೃತ್‌ನಲ್ಲಿ ಸೇರಿಕೊಂಡಿದ್ದ ಸುಮಾರು 20 ಸೆಂ.ಮೀ ಉದ್ದದ ಚಾಕುವನ್ನು ಹೊರತೆಗೆದಿದ್ದಾರೆ. ‘ಆ ಚಾಕುವನ್ನು ತಿನ್ನಬೇಕೆನಿಸಿದ್ದರಿಂದ ನಾನೇ ನುಂಗಿದೆ’ ಎಂದು ಬಳಿಕ ಆ ವ್ಯಕ್ತಿ ಹೇಳಿಕೊಂಡಿದ್ದು, ಇದು ವೈದ್ಯರನ್ನು ಅಚ್ಚರಿ, ಆಘಾತಕ್ಕೀಡುಮಾಡಿದೆ.

ಹರಿಯಾಣದ ಪಲ್ವಾಲ್‌ನ28 ವರ್ಷದ ವ್ಯಕ್ತಿಯೇ ಚಾಕು ನುಂಗಿದ ಭೂಪ. ಈತ ದಿನಗೂಲಿ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ.ವಿಲಕ್ಷಣ ರೀತಿಯಲ್ಲಿ ಚಾಕು ನುಂಗಿದ ಈತನಿಗೆ ಗಾಂಜಾ ಸೇವಿಸುವ ಅಭ್ಯಾಸವಿತ್ತು ಎಂದಿರುವ ವೈದ್ಯರು, ಈವ್ಯಕ್ತಿಅಷ್ಟು ಹರಿತವಾದ ಚಾಕುವನ್ನುಶಾಸ್ವನಾಳ, ಶ್ವಾಸಕೋಶ, ಹೃದಯ ಮತ್ತು ಇತರ ಅಂಗಗಳಿಗೆ ಯಾವುದೇ ಹಾನಿಯಾಗದಂತೆ ಹೇಗೆ ನುಂಗಿದ ಎಂಬುದು ನಮ್ಮನ್ನು ಚಕಿತಗೊಳಿಸಿದೆ ಎಂದು ಹೇಳಿಕೊಂಡಿದ್ದಾರೆ.

‘ಚಾಕು ಬಾಯಿಯಿಂದ ಯಕೃತ್‌ವರೆಗೆ ಸಾಗುವಾಗ ಅನ್ನನಾಳವನ್ನು ಸುಲಭವಾಗಿ ಹರಿಯಬಹುದಾಗಿತ್ತು ಮತ್ತು ಹೃದಯ, ಶ್ವಾಸನಾಳಗಳಿಗೆ ಹಾನಿ ಮಾಡಬಹುದಿತ್ತು’ ಎಂದು ಏಮ್ಸ್‌ ಆಸ್ಪತ್ರೆಯ ಜಠರ–ಕರುಳು ಶಸ್ತ್ರಚಿಕಿತ್ಸೆ ಮತ್ತು ಯಕೃತ್ತು ಕಸಿ ವಿಭಾಗದ ಪ್ರಾಧ್ಯಾಪಕ ಡಾ. ನಿಹಾರ್‌ ರಂಜನ್‌ ಡ್ಯಾಶ್ ಹೇಳಿದ್ದಾರೆ.

‘ಶಸ್ತ್ರಚಿಕಿತ್ಸೆ ಬಳಿಕ ನಾವು ಸಾಕಷ್ಟು ದಾಖಲೆಗಳನ್ನು ಹುಡುಕಾಡಿದ್ದೇವೆ. ಇಷ್ಟು ದೊಡ್ಡ ಹಾಗೂ ಚೂಪಾದ ಚಾಕು ನುಂಗಿದ ಪ್ರಕರಣಗಳ ಮಾಹಿತಿ ಲಭ್ಯವಾಗಿಲ್ಲ. ಸಣ್ಣ ಸೂಜಿ ಅಥವಾ ಮೀನಿನ ಮೂಳೆಗಳು ಯಕೃತ್‌ವನ್ನು ಸೇರಿಕೊಂಡಿದ್ದ ಉದಾಹರಣೆಗಳಿವೆ.ಈ ಬಗ್ಗೆ ಮತ್ತಷ್ಟು ಅಧ್ಯಯನ ಮುಂದುವರಿಸಿದ್ದೇವೆ’ ಎಂದಿದ್ದಾರೆ.

ಚಾಕು ನುಂಗಿದ್ದ ವ್ಯಕ್ತಿ ಶಸ್ತ್ರಚಿಕಿತ್ಸೆ ಬಳಿಕ ವೈದ್ಯರೊಂದಿಗೆ ಮಾತನಾಡಿದ್ದು,‘ಕೊರೊನಾವೈರಸ್‌ ಲಾಕ್‌ಡೌನ್‌ ಸಂದರ್ಭದಲ್ಲಿ ಅಡುಗೆ ಕೋಣೆಯಲ್ಲಿದ್ದಾಗ (ಒಂದೂವರೆ ತಿಂಗಳ ಹಿಂದೆ) ಚಾಕುವನ್ನು ತಿನ್ನಬೇಕು ಎನಿಸಿತು. ಮೊದಲು ಅಗಿಯಲು ಪ್ರಯತ್ನಿಸಿದೆ. ಬಳಿಕ ನೀರಿನೊಂದಿಗೆ ನುಂಗಿದೆ’ ಎಂದು ತಿಳಿಸಿದ್ದಾನೆ.

ವ್ಯಕ್ತಿಗೆ ಒಂದು ತಿಂಗಳಿನಿಂದ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ, ನಂತರ ನಿಧಾನವಾಗಿ ಸಮಸ್ಯೆಗಳು ಕಾಣಿಸಿಕೊಂಡಿವೆ. ಊಟ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಕ್ರಮೇಣ ತೂಕ ಕಳೆದುಕೊಳ್ಳಲಾರಂಭಿಸಿದ್ದ. ಜ್ವರ, ಹೊಟ್ಟೆನೋವು ಕಾಣಿಸಿಕೊಳ್ಳಲಾರಂಭಿಸಿದ್ದವು. ಹೊಟ್ಟೆನೋವು ಅಸಹನೀಯವಾದಾಗ ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿತ್ತು. ಬಳಿಕ ದೆಹಲಿಯ ಸಫ್ದರ್‌ಜಂಗ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಎಕ್ಸ್‌–ರೇ ತಪಾಸಣೆ ಮಾಡಿದಾಗ ಯಕೃತ್‌ದ ಭಾಗದಲ್ಲಿ ಬ್ಲೇಡ್‌ನಂತಹ ವಸ್ತು ಇರುವುದು ಪತ್ತೆಯಾಗಿತ್ತು. ಸಫ್ದರ್‌ಜಂಗ್‌ ಆಸ್ಪತ್ರೆಯಲ್ಲಿ ಅದನ್ನು ಹೊರತೆಗೆಯುವ ಶಸ್ತ್ರಚಿಕಿತ್ಸೆ ಸಾಧ್ಯವಾಗದ್ದರಿಂದ ಜುಲೈ 12ರಂದು ಏಮ್ಸ್‌ಗೆ ಕರೆತರಲಾಗಿತ್ತು.

ಸಿಟಿ ಸ್ಕ್ಯಾನ್‌ ನಡೆಸಿದಾಗ ಚಾಕುವಿನ ಮುಂಭಾಗ ಸಂಪೂರ್ಣವಾಗಿ ಯಕೃತ್ತಿನೊಳಗೆ ಮತ್ತು ಉಳಿದ ಭಾಗ ಸಣ್ಣಕರುಳಿನಲ್ಲಿ ಉಳಿದಿರುವುದು ಪತ್ತೆಯಾಯಿತು. ಆದರೆ, ಒಳಭಾಗದಲ್ಲಿ ರಕ್ತಸ್ರಾವ ಮತ್ತು ಸೋಂಕು ಕಾಣಿಸಿಕೊಂಡಿತ್ತು ಹಾಗೂ ಬಲ ಎದೆ ಭಾಗದಲ್ಲಿ ನೀರು ತುಂಬಿಕೊಂಡಿತ್ತು. ಹೀಗಾಗಿ ತಕ್ಷಣಕ್ಕೆ ಶಸ್ತ್ರ ಚಿಕಿತ್ಸೆ ಮಾಡಲು ಸಾಧ್ಯವಾಗಿರಲಿಲ್ಲ. ನಾಲ್ಕು–ಐದು ದಿನಗಳ ವರೆಗೆ ಕೀವು ತೆಗೆಯಲು ಯಕೃತ್‌ಗೆಟ್ಯೂಬ್‌ ಹಾಕಲಾಗಿತ್ತು. ಎದೆ ಭಾಗದಲ್ಲಿ ತುಂಬಿಕೊಂಡಿದ್ದ ನೀರು ತೆಗೆಯಲು ಮತ್ತೊಂದು ಟ್ಯೂಬ್‌ ಹಾಕಲಾಗಿತ್ತು ಎಂದು ವಿವರಿಸಿದ್ದಾರೆ ಡಾ.ನಿಹಾರ್‌.

ವ್ಯಕ್ತಿಯು ಅದಾಗಲೇ ನಂಜು ಹಾಗೂ ರಕ್ತಹೀನತೆಯಿಂದ ಬಳಲುತ್ತಿದ್ದ ಕಾರಣ ದೀರ್ಘಕಾಲದವರೆಗೆ ಅರವಳಿಕೆ ನೀಡಿ ಶಸ್ತ್ರಚಿಕಿತ್ಸೆ ನಡೆಸುವುದು ಅಪಾಯಕಾರಿಯಾಗಿತ್ತು. ಆದಾಗ್ಯೂ ಜುಲೈ 19ರಂದು ಸತತ ಮೂರು ಗಂಟೆ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿಯಾಗಿ ಚಾಕುವನ್ನು ಹೊರತೆಗಿದ್ದೇವೆ. ರೋಗಿಯನ್ನು ಏಳು ದಿನಗಳ ವರೆಗೆ ಐಸಿಯುನಲ್ಲಿ ಇರಿಸಲಾ‌‌ಗಿತ್ತು. ಸದ್ಯ ಆತನಿಗೆ ಯಾವುದೇ ಅಪಾಯವಿಲ್ಲ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT